ಹಿಂದೆ, ತೋಡಿ ಸೀತಾರಾಮಯ್ಯ ಎಂಬವರೊಬ್ಬರು ಒಂದು ವಾರ ತೋಡಿ ರಾಗ ಹಾಡಿದ್ದರಂತೆ. ಅವರು ತಮ್ಮ ಅಂತರಂಗದಲ್ಲಿದ್ದ ತೋಡಿಯನ್ನು ಮೊಗೆದು ಮೊಗೆದು ತೋಡಿಕೊಂಡಿದ್ದರಂತೆ. ಹಿಂದಿನ ಸಂಗೀತಗಾರರು ತಮ್ಮ ಮನೆಯಲ್ಲೋ, ಜಮೀನ್ದಾರನ ಮನೆಯಲ್ಲೋ ತಮಗೆ ಬೇಕಾದ ಹಾಗೆ ಮನಬಿಚ್ಚಿ ಹಾಡುತ್ತಿದ್ದರಂತೆ. ದಿನಕ್ಕೆ ಇಂತಿಷ್ಟು ಹೊತ್ತು ಎಂದಿಲ್ಲ. ಲಹರಿ ಹಿಡಿದಂತೆ ಆ ದಿನದ ರಾಗ. ಮುಗಿಯದೇ ಹೋದರೆ ಮರುದಿನ ಸಂಧ್ಯಾವಂದನೆಯ ಬಳಿಕ ಮತ್ತೆ ಮುಂದುವರಿಕೆ. ಜಮೀನ್ದಾರನಿಂದ ಬೇಕಾದಷ್ಟು ಸಂಭಾವನೆ, ಖಿಲ್ಲತ್ತು, ಕಡಗ, ಪುರಸ್ಕಾರ, ಆ ಸಂಗೀತಗಾರನಿಗೆ ಇದರಿಂದ ಸಂದದ್ದು ಇದೆ.
“ಶ್ರುತಿ ಎಷ್ಟು? ದುಡ್ಡು ಎಷ್ಟು?”
ಸಂಗೀತವನ್ನು ಸಭಾ ಕಚೇರಿಯ ಚೌಕಟ್ಟಿಗೆ ಒಳಪಡಿಸಿದ ಮೇಲೆ ಇಂತಿಷ್ಟು ಸಮಯವನ್ನು ನಿಗದಿಗೊಳಿಸಿದರಂತೆ. ಆಗ ಇಂತಿಷ್ಟು ಸಂಭಾವನೆಯನ್ನು ಕೊಡುತ್ತಿದ್ದರಂತೆ. ಕೆಲವರು ಸ್ವೀಕರಿಸುತ್ತಿದ್ದರು; ಇನ್ನು ಕೆಲವರು ದೇವರ ಸೇವೆ ಅಂತ ಹೇಳಿ, “ಪಂಚಕಜ್ಜಾಯ” ಮಾತ್ರ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈ ಸೇವೆ, ಹೆಚ್ಚು ಕಾಲ ಉಳಿಯಲಿಲ್ಲ. ಮಿತ್ರ ಕಲಾವಿದನಿಗೆ ಗೌರವ, ಸಂಮಾನ, ಸಂಭಾವನೆ ಕೊಡುವುದನ್ನು ಗಮನಿಸಿದ ಈ ಸನ್ಮಿತ್ರ ಕಲಾವಿದ, “ದೇವರ ಸೇವೆ” ಮಾಡುವ ಮನೋಭಾವವನ್ನು ನಿಧಾನವಾಗಿ ತೊರೆದ. ತನ್ನ ಸಂಗೀತಕ್ಕೆ ಇಂತಿಷ್ಟು ಸಂಭಾವನೆ ಬೇಕೆಂಬುದಾಗಿ ಹಠ ಹಿಡಿಯತೊಡಗಿದ. hi-fidelity ಮೊದಲಾಯಿತು. “ಅವರಿಗೆ ಅಷ್ಟು ಕೊಡುತ್ತೀರಾದರೆ ನಮಗೇಕೆ ಇಷ್ಟು?” ಎಂಬ ಹಕ್ಕು ಸ್ಥಾಪನೆಯ ಪ್ರಶ್ನೆ ಮೊದಲಾಯಿತು. “ಶ್ರುತಿ ಎಷ್ಟು? ದುಡ್ಡು ಎಷ್ಟು?”-ಎಂಬ ಎರಡೇ ಪ್ರಶ್ನೆಯನ್ನು ಕಲಾವಿದರು ಕೇಳುವಂತಾಯಿತು. ಅರಿಯಕುಡಿ, ಜಿಎನ್‍ಬಿ, ಸೆಮ್ಮಂಗುಡಿ, ಮುಸುರಿ, ಮಹಾರಾಜಪುರಂ- ಎಲ್ಲರೂ ಈ ಸೂತ್ರವನ್ನು ಜಾಣ್ಮೆಯಿಂದ ನಿರ್ವಹಿಸಿದರು. ಚೆಂಬೈ, ಮಧುರೈ ಮಣಿ ಮೊದಲಾದ ಕೆಲವರು ಸಂಗೀತ ದೇವರ ಸೇವಾ ಕೈಂಕರ್ಯವನ್ನು ಮತ್ತೂ ಮಾಡುತ್ತಿದ್ದರೆನ್ನಿ. ಕೆಬಿ ಸುಂದರಾಂಬಾಳ್ ಎಂಬವರು ಒಂದು ಸಿನಿಮಾದಲ್ಲಿ ಹಾಡು ಹಾಡಿದ್ದಕ್ಕೆ (1930ರ ಸುಮಾರಿಗೆ) ಸುಮಾರು ಒಂದು ಲಕ್ಷದ ಸಂಭಾವನೆ ಪಡೆದದ್ದು ಕಲಾವಿದರ ವಲಯದಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಕಲಾವಿದರ ರೇಟ್ ಜಾಸ್ತಿಯಾಗತೊಡಗಿತು. ಸಿನೆಮಾದಲ್ಲಿ ನಟಿಸಿದರೆ ಪ್ರಸಿದ್ಧಿಯೂ, ಸಂಭಾವನೆಯೂ ಹೆಚ್ಚು ಸಿಗುವುದೆಂಬುದು, ಜಾಣ ಕಲಾವಿದರಿಗೆ ತಿಳಿದು ಹೋಯಿತು. ಅಲ್ಲಿಂದ ಪ್ರಾರಂಭ. ಎಲ್ಲಾ ಕಲಾವಿದರು ಮತ್ತೆ ಸಿನೆಮಾದಲ್ಲಿ ಮಿಂಚಿದವರೇ. ಎಸ್.ಜಿ. ಕಿಟ್ಟಪ್ಪ, ಎಂ. ಬಾಲಮುರಳಿಕೃಷ್ಣ, ಮೊದಲಾದ ಮಾಯಾಕಂಠ ಉಳ್ಳವರ ಬೇಡಿಕೆ ಜಾಸ್ತಿಯಾದಂತೆ ಕಲಾವಿದರ ರೇಟೂ ಗಗನಕ್ಕೆ ಏರಿತು. ಜನಪ್ರಸಿದ್ಧಿಗೆ ಬರಲು ಸಿನೆಮಾ ಉತ್ತಮ ಮಾಧ್ಯಮವಾಯಿತು. ಎಂ. ಎಸ್ ಅಮ್ಮನಂತಹ ಕೆಲವರು ಸಿನೆಮಾವನ್ನು ವಿವಿಧ ಕಾರಣಗಳಿಗಾಗಿ ಬಳಿಕ ದೂರವಿಟ್ಟರೂ, ಸಿನೆಮಾ ಮಾಯಾಜಾಲ ದಿಂದ ಹಲವರು ಹೊರಬರಲಿಲ್ಲ. ಸಿನೆಮಾ ದಿಂದಾಗಿ ಕಲಾವಿದರೆಲ್ಲ ಜನಮನದಲ್ಲಿ ಬೀಡು ಬಿಟ್ಟಿದ್ದರು ಎನ್ನುವುದು ಸತ್ಯವೇ ಆಗಿತ್ತು. ಚಲನ ಚಿತ್ರ ತಾರಾ ಕಲಾವಿದರ ಜನ ಪ್ರಸಿದ್ಧಿಯಂತೆ, ಸಂಗೀತ ಕಲಾವಿದರೂ ಪ್ರಸಿದ್ಧಿಗಾಗಿ ಹಂಬಲಿ ಸಿದರೆ ಅಥವಾ ಹವಣಿಸಿದರೆ ತಪ್ಪೇನು? ಎಂದು ಕೇಳುವ ಹಕ್ಕೊತ್ತಾಯ ಅದಾಗಲೇ ಬಂದೊದಗಿತ್ತು.
ಆತ್ಮೋನ್ನತಿಗಾಗಿ ಸಂಗೀತ
ಈಗ ನಮ್ಮ ಪ್ರಶ್ನೆ ಇವರೆಲ್ಲಾ ಯಾರಿಗಾಗಿ ಹಾಡಿದರು? ಎಂದು. ತಮ್ಮ ತಮ್ಮ ಸಂತೋಷ ಕ್ಕಾಗಿ ಎನ್ನುವುದಕ್ಕೆ ಎರಡು ಮಾತಿಲ್ಲ. ಯಾವ ಸಂತೋಷಕ್ಕಾಗಿ? ತಾವು ಸಂಪಾದಿಸುವ ದುಡ್ಡಿ ಗಾಗಿಯೋ ಅಥವಾ ತಾವು ಆರ್ಜಿಸಿದ ಸಂಗೀತ ವಿದ್ಯಾ ಸಂಪತ್ತಿಗೋ? ಅವರು ಹಾಡಿದ್ದು ವಿದ್ವಜ್ಜನರನ್ನು ಒಲಿಸಲೋ, ಅಥವಾ ಜನಸಾಮಾನ್ಯ ನನ್ನು ಮೆಚ್ಚಿಸಲೋ? ಚೆಂಬೈ, ವೊಲೆಟ್ಟಿ ವೆಂಕ ಟೇಶ್ವರುಲು ಅವರಂತಹ ಕೆಲವೇ ಕೆಲವು ಬೆರ ಳೆಣಿಕೆಯ ಕಲಾವಿದರನ್ನು ಬಿಟ್ಟರೆ ಯಾರೂ ತಮಗಾಗಿ, ಹಾಡನ್ನು, ಸಮರ್ಪಿಸಿಕೊಳ್ಳಲಿಲ್ಲ. ಅಂತಹವರು ಅಜ್ಞಾತರಾಗಿಯೇ ಉಳಿದು ಯಾರನ್ನೂ ತಲುಪದೆ ಉಳಿದಿದ್ದಾರೆ. ಅವರು ಅವರಿಗಾಗಿಯೇ ಹಾಡಿ, ತಪಸ್ಸಿಗೆ ಕುಳಿತ ಹಿಮಾ ಲಯದ ಸಾಧುವಿನಂತೆ ಆತ್ಮೋನ್ನತಿ ಮಾಡಿಕೊಂಡು ಗತಿಸಿಹೋಗಿದ್ದಾರೆ. ಕಲೆಯ ಇಷ್ಟಸಿದ್ಧಿ ಎಂದರೆ ಇಷ್ಟೆನೆಯೇ?
ಸಂಗೀತ ಬುದ್ಧಿಜೀವಿಗಳಿಗೆ ಹೊಗಳಲು ಜಿಪುಣತನ ಅಥವಾ ಧಾರಾಳತನ !
ನಾನು ಗಮನಿಸಿರುವ ಇನ್ನೊಂದು ವಿಷಾದ ನೀಯ ವಿಷಯವೊಂದಿದೆ-ಕರ್ನಾಟಕ ಸಂಗೀತದ ನಮ್ಮ ವಿದ್ವಜ್ಜನರು ನನ್ನನ್ನು ಕ್ಷಮಿಸಿಯಾರೆಂಬ ನಂಬಿಕೆಯಿಂದ ಬರೆಯುತ್ತಿದ್ದೇನೆ – ನಮ್ಮ ಸಂಗೀತ ವಿದ್ವಾಂಸರು ಮತ್ತು ವಿದುಷಿಗಳು ಸಂಗೀತವನ್ನು ವ್ಯಾಕರಣಕ್ಕಾಗಿ ಕೇಳುತ್ತಾರೆ; ಅವರಿಗೆ ಕಾಣುವುದು ಹಾಡುಗಾರನ ತಪ್ಪು ಮಾತ್ರ! ಚೆನ್ನಾಗಿ ಹಾಡಿದಾಗ ಅವರು ತಲೆ ಆಡಿಸುವುದೇ ಇಲ್ಲ (ತಲೆ ಆಡಿಸುತ್ತಾ ಅತಿಯಾಗಿ ಹೊಗಳುತ್ತಾರಾದರೆ ಅದರಲ್ಲಿ ಏನೋ ಎಜೆಂಡಾ ಇದೆ ಎಂದೇ ಅರ್ಥ!). ಬುದ್ಧಿವಂತರಿಗೆ ಹೊಗಳಲು ಜಿಪುಣತನ!. ನಿಘಂಟುಕಾರರಂತೆ, ವೈಯಾಕರಣಿ ಗಳಂತೆ ತಪ್ಪು-ಸರಿಯಲ್ಲೇ ಅವರ ರಸಗ್ರಹಣ! ಅಷ್ಟರ ಮಟ್ಟಿಗೆ ಅವರು ಸಂಗೀತಕ್ಕೆ ಒಣ ಕಲಾಗಿದ್ದಾರೆ. ಇವರಿಗಾಗಿ ಸಂಗೀತವನ್ನು ಹಾಡ ಬೇಕೇ? ಸಂಗೀತವನ್ನು, ಅದೇನು, ಸ್ಪರ್ಧೆಗೆ ಹಾಡಿದಂತೆಯೇ ಹಾಡುವುದೇ?
ಕಲಾವಿದರಿಗೆ ಭಿಕ್ಷೆ :
ಮತ್ತೊಂದು ವಿಷಾದದ ಸಂಗತಿಯಿದೆ- ಸಂಗೀತವನ್ನು ಅಭಿವೃದ್ಧಿ ಪಥದತ್ತ ಓಡಿಸಲೆಂದು ಪಣತೊಟ್ಟ (!) ಹಲವಾರು ಪ್ರತಿಷ್ಠಿತ ಸಭಾಗಳ ಸಂಘಟನ ಕಾರ್ಯದರ್ಶಿ, ಅಧ್ಯಕ್ಷರ ದೌಲತ್ತು ನೀವು ನೋಡಬೇಕು. ಕಲಾವಿದರ ಮೊಣಗಂಟಿಗೆ ಜೇನು ಸವರಿ ನೆಕ್ಕಿಸುವ ಕಲಾಗಾರಿಕೆ ಅವರದು. ಬಸ್ಸು, ರೈಲು, ವಿಮಾನ ಮೊದಲಾದ ವಾಹನಗಳನ್ನು ಹಿಡಿದು, ಕಲಾವಿದರು ಎದ್ದು ಬಿದ್ದು ಸಭಾಗಳನ್ನು ತಲುಪಿದರೆ, ಅಲ್ಲಿರುವುದು ಹರ ಹರಾ ಎಂದು ಹತ್ತೇ ಜನ! ಭರ್ಜರಿ ಕಚೇರಿ ಮಾಡಿದ ಈ ಬಕರಾನಿ/ಳಿಗೆ ತಕ್ಕ ಶಾಸ್ತಿ-ಕಾರ್ಯ ದರ್ಶಿಯವರಿಂದ ನೀಡಲಾಗುವ, ಹೇಳಲು ನಾಚಿಕೆ ಎನಿಸುವಷ್ಟು ಸಂಭಾವನೆ. ಆಗುವ ಖರ್ಚು ವೆಚ್ಚ ಸಾವಿರಗಟ್ಟಲೆಯಾದರೂ, ಮುಖ್ಯ ಕಲಾವಿದ ರಿಗೆ ಈಗಲೂ ರೂ. 250, 300 ಕೊಡುವ ಸಭಾಗಳಿವೆ ಎಂದರೆ ನಂಬುತ್ತೀರಾ? ಮನೆಯಲ್ಲಿ ದಿನಕೂಲಿ ಕೆಲಸ ಮಾಡುವ ಕಾಲಾಳುವೊಬ್ಬ ರೂ. 750-1000 ಕೊಡದಿದ್ದರೆ ಸ್ಥಳ ಬಿಟ್ಟು ಕದಲದೇ ಇರುವ ಈ ಕಾಲ ಘಟ್ಟದಲ್ಲಿ, ತಾಸು ಗಟ್ಟಲೆ ಹಗಲು ರಾತ್ರಿ ಎನ್ನದೆ ಸಾಧನೆ ಮಾಡುವ, ತಾರಾ ಮಟ್ಟಕ್ಕೆ ಬರದ, ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತ ಕಲಾವಿದರಿಗೆ, ನಮ್ಮ ದೇಶದಲ್ಲಿ ಎಂತಹಾ ದುಃಸ್ಥಿತಿಯಿದೆ ನೋಡಿ !. ಅವರು ಈ ಪ್ರದರ್ಶನ ಕಲೆಯನ್ನು ಯಾರಿಗಾಗಿ ಉಳಿಸಿಕೊಳ್ಳಬೇಕು? ಕರ್ನಾಟಕ ಸಂಗೀತ ಕಲಾವಿದರಲ್ಲನೇಕರು ಟೆಕ್ಕಿ, ಬೀಟಿ, ಐಟಿ, ಸಿಎ ಕ್ಷೇತ್ರ ಗಳಲ್ಲಿ ತಮ್ಮ ಕಾಲನ್ನು ಊರಿ ಸಂಗೀತ ಕಾಯಕ ಮಾಡುವಷ್ಟು ಜಾಣರಾಗಿದ್ದಾರೆ. ಹಿಂದೂಸ್ತಾನಿ ಯವರಲ್ಲಿ ಹಲವರು ಈ ವಿದ್ಯಾರ್ಜನೆಯ ಸಾಹಸಕ್ಕೆ ಇಳಿಯದೇ ಇನ್ನೂ ಸಭಾ ಕಾರ್ಯ ದರ್ಶಿಗಳ ಕೃಪಾಕಟಾಕ್ಷಕ್ಕಾಗಿ ಮಹದಾಶಯದಿಂದ ಕಾಯುತ್ತಾ ಕುಳಿತಿದ್ದಾರೆ!. ಇವರು ಯಾರಿಗಾಗಿ ಯಾದರೂ ಶಾಸ್ತ್ರೀಯ ಸಂಗೀತವನ್ನು ಕಲಿಯ ಬಹುದು, ಹೇಳಿ.
ಧಮಾಕ್ ಶೋ :
ರಿಯಾಲಿಟಿ ಶೋದಂತಹ ಮಾಧ್ಯಮಗಳ ಧಮಾಕ್ ಆಕರ್ಷಣೆಗಳ ಎದುರು ನಮ್ಮ ಶಾಸ್ತ್ರೀಯ ಸಂಗೀತದ ಶಾಸ್ತ್ರಿಗಳಿಗಂತೂ ಹೀನ ಮಾನವಾದ ಅಪಮಾನವನ್ನು ನಾವು ಅಲ್ಲಲ್ಲಿ ನೋಡುತ್ತಿದ್ದೇವೆ. ಧಮಾಕ್ ಸಂಗೀತ ನೃತ್ಯ ಪಟು ಗಳಿಗೆ ಸಿಗುವ ಜಾಹೀರಾತು, ಸಿಂಹಾರವ ಮತ್ತು ಧನಕನಕ ಆಸ್ತಿಪಾಸ್ತಿಗಳ ಆಕರ್ಷಣೆಯ ಈ ಕಾಲದಲ್ಲಿ ನಮ್ಮ ಮಕ್ಕಳನ್ನು ಶಾಸ್ತ್ರೀಯ ಸಂಗೀತಕ್ಕೆ ಹೇಗೆ ಮನವೊಲಿಸೋಣ ನೀವೇ ಹೇಳಿ.
ಕರ್ನಾಟಕ ಸಂಗೀತದ ವೇದಿಕೆಯಲ್ಲಿ ಹೆಚ್ಚಿನ ಕಲಾ ವಿದರು ಸಂಗೀತವನ್ನು ಆಲಿಸುವುದೇ ಇಲ್ಲ :
ಕರ್ನಾಟಕ ಸಂಗೀತಗಾರರನ್ನು ವೇದಿಕೆಯ ಮೇಲೆ ವಿರಾಜಿಸುವ ಕಲಾವಿದರನ್ನು ತುಸು ನೋಡಿ ಗಮನಿಸಿ : ಮೃದಂಗದವರು ಕಾಫಿû, ಚಹ ನೀರು ಕುಡಿಯುವುದಲ್ಲದೆ ಆಗಾಗ ಮೃದಂಗದ ಮೋರೆಗೆ ಮೆಲ್ಲನೆ ಕುಟ್ಟುತ್ತಾ ಶ್ರುತಿ ಸರಿಪಡಿಸುವುದರಲ್ಲೇ ಮಗ್ನರು. ಇಲ್ಲಾ, ತೊಡೆಗೋ, ಮೊಣಗಂಟಿಗೋ ತಟಪಟನೆ ಬೆರಳುಗಳನ್ನು ರಿಂಗಣಿಸುತ್ತಾ ಯಾವುದೋ ಕಣಕ್ಕಿನ ಲೋಕದಲ್ಲಿ ನಿಮಗ್ನರು. ಈಗೀಗ ಮೊಬೈಲ್ ಸೇವೀ ಮೃದಂಗ ಮಿತ್ರರು ಶ್ರುತಿ ಸರಿಯಾಗಿದೆಯೋ ಇಲ್ಲವೋ ಎಂಬುವುದನ್ನು ಆಗಾಗ ಆ್ಯಪ್ ಹಾಕಿ ನೋಡುತ್ತಿರುತ್ತಾರೆ; final ಕೋರ್ವೆಯ ಕಣಕ್ಕುಗಳನ್ನು ಆ್ಯಪ್ ಹಾಕಿ ಲೆಕ್ಕಿಸುತ್ತಿರುತ್ತಾರೆ!. ಹಾಡುಗಾರನ ಕೃತಿಗೆ ಇವರ ಹಾಕುವ ಸೀಲು-ಮೊಹರು ಬಿದ್ದರಾಯಿತು ಎನ್ನುವ ದಿವ್ಯ ನಿರ್ಲಕ್ಷ್ಯ ಧೋರಣೆ ಈಗಿನ ಹೆಚ್ಚಿನ ಮೃದಂಗಿಸ್ಟ್‍ಗಳದ್ದು. ಹಾಡುಗಾರನೂ ಅವನ ಸರದಿ ಮುಗಿದ ಬಳಿಕ ವಯಲಿನ್‍ನವನ ಸಂಗೀತವನ್ನು ಆಲಿಸುವುದೇ ಇಲ್ಲ. ಅವರು ಮುಂದಿನ ಕಣಕ್ಕು ಲೆಕ್ಕಾಚಾರದ ಮೆಲುಕಿನಲ್ಲೇ ಮಗ್ನರು. ಬೇಡವಾದ ಕಡೆ, ಒಮ್ಮೊಮ್ಮೆ ಗಕ್ಕನೆ ಶಹಭಾಸ್ ಎಂದು ಉದ್ಗರಿಸಿ ಪರಿಸ್ಥಿತಿಯನ್ನು ಇನ್ನೂ ಬಿಗಡಾಯಿಸುತ್ತಾರೆ. ಈಗ ಹೇಳಿ, ಯಾರು, ಯಾರ ಸಂಗೀತವನ್ನು ಕೇಳುತ್ತಿರುತ್ತಾರೆ?
ಸಾಮಾನ್ಯ ಶ್ರೋತೃ ವರ್ಗ :
ಸಾಮಾನ್ಯ ಶ್ರೋತೃ ವರ್ಗವೊಂದಿದೆಯಲ್ಲಾ (ಅದು ಯಾರು ಹೇಗೆ ಎಂಬ ಡೆಫಿನಿಶನ್‍ನ್ನು ನಾನು ಕೊಡಲಾರೆ) – ಅದು ಮಾತ್ರ ಸಂಗೀತದ ಪಕಳೆ ಪಕಳೆಗಳ ಮಾಧುರ್ಯ, ಮಾತೃಕೆಯನ್ನು ಅಗಿದು ಅಗಿದು ತಲೆದೂಗುತ್ತಿರುತ್ತದೆ. ಮುಂದಣ ಕುರ್ಚಿಗಳಲ್ಲಿ ಕುಳಿತ ಸಂಗೀತ ಪ್ರಭೃತಿಗಳಂತೂ ಸಂಗೀತ ಕೇಳುವುದೇ ಇಲ್ಲ. ಕೇಳಲು ಬಂದರೂ ತಡವಾಗಿ ಬಂದು ಬಹು ಬೇಗನೆ ಜಾಗ ಖಾಲಿ ಮಾಡಿ ಪ್ರತಿಷ್ಠೆಯನ್ನು ಮೆರೆದು ಹೋಗುವವರೇ ಜಾಸ್ತಿ. ತಾನ ಪಲ್ಲವಿಗಾಗುವಾಗ, ಪಾಪ!, ಎದುರಿನಲ್ಲಿ ಸಾಮಾನ್ಯ ಶ್ರೋತೃವರ್ಗ ಮಾತ್ರ! ಅವನಿಗೋ, ಪಲ್ಲವಿ ಎಂದರೆ ಅರ್ಥವಾಗದ ಕಗ್ಗಂಟು. ಹಾಡುಗಾರ ಈಗ ಯಾರಿಗಾಗಿ ತನ್ನ 4-ಕಳೆ, 8 ಕಳೆ ಪಲ್ಲವಿ ಹಾಡಬೇಕು? ನಿಜ ಹೇಳಬೇಕೆಂದರೆ, ಸಾಮಾನ್ಯ ಕೇಳುಗನಂತೂ ತಾಳ್ಮೆಯಿಂದ, ಕಾದು ಕುಳಿತುಕೊಳ್ಳುವುದು ಕಚೇರಿಯ ಉತ್ತರ ಭಾಗಕ್ಕಾಗಿ. ತನಿಯಾಗುವಾಗ ಆತ ಹೊರ ನಡೆದು, ಕಾಫಿ ಹೀರಿ, ವಾಶ್ ರೂಮಿಗೆ ಹೋಗಿ ವಿಶ್ರಮಿಸುತ್ತಾನೆ. ಮೃದಂಗ, ಘಟ, ಮೋರ್ಸಿಂಗು, ಖಂಜೀರದವರು, ಎಲ್ಲರೂ ಕೊನೆಯಲ್ಲಿ ಬಜಾಯಿಸುವ ಗೌಜಿ ಗಲಾಟೆಯ ಖಂಡ ಕೊರಪ್ಪು ಮಿಶ್ರಣದ ಯುದ್ಧದ ಸಮಯ ಕ್ಕಾಗುವಾಗ ‘ಯಾರು ಗೆದ್ದರು?’ ಎನ್ನುವುದನ್ನು ನೋಡುವುದಕ್ಕೆ ಆತ ಕುತೂಹಲದಿಂದ ಒಮ್ಮೆ ಒಳಗೆ ಬಂದು ವೀಕ್ಷಿಸುತ್ತಾನೆ ! ಗೆದ್ದವರಿಗೂ, ಸೋತವರಿಗೂ ಕಿವಿಗಡಚಿಕ್ಕುವ ಚಪ್ಪಾಳೆ ಬಡಿದು ಮತ್ತೆ ಟುಕುಡಾಗಳಿಗಾಗಿ ಕಾಯುತ್ತಿರುತ್ತಾನೆ. ಸಾಮಾನ್ಯನಿಗೆ fusion ಸಂಗೀತವೇ ಇಷ್ಟವೆಂದು ಕೊಂಡು ಇದೀಗ ಕನ್ಫ್ಯೂಶನ್ ಮಾಡಹೊರಟ ನವ್ಯ ಸಂಗೀತ ಶಾಸ್ತ್ರಿಗಳು ಯಾರಿಗಾಗಿ ಸಂಗೀತ ಮಾಡುತ್ತಿದ್ದಾರೆ? ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಇದೇನು ಸಂಗೀತವೇ, ಶಬ್ದ ಮಾಲಿನ್ಯವೇ? fusion ಸರ್ಕಸ್ಸೇ? ಇದು ಯಾರಿಗಾಗಿ ಮಾಡಲ್ಪಟ್ಟದ್ದು? ಇದರ ಸ್ಟೇಕ್ ಹೋಲ್ಡರ್ಸ್‍ಗಳು (stakeholders) ಯಾರು?! ಈ ವರೆಗಿನ ನಮ್ಮ ಶಾಸ್ತ್ರೀಯ ಸಂಗೀತಗಾರರು ಯಾರಿಗಾಗಿ ಹಾಡಿದ್ದಾರೆ? ಈಗಿನ ಮೇರು ಕಲಾ ವಿದರಾದಿಯಾಗಿ ಎಲ್ಲರೂ, ಯಾರನ್ನು ಉದ್ದೇಶವಿಟ್ಟು ನಮ್ಮ ಶಾಸ್ತ್ರೀಯ ಸಂಗೀತವನ್ನು ಉಣಿಸುತ್ತಿದ್ದಾರೆ? ಶಾಸ್ತ್ರೀಯ ಸಂಗೀತವನ್ನು ಕಲಿಯಿರೆಂದು ಹೇಳುವ ಮೊದಲು, “ನಾವು ಯಾರಿಗಾಗಿ ಹಾಡಬೇಕು ?” ಎಂದು ಪ್ರಶ್ನಿಸಿದರೆ ನಮ್ಮ ನಿಷ್ಕಪಟಿ ಮಕ್ಕಳ ಈ ಗೊಂದಲಕ್ಕೆ ನಾವು ಏನೆಂದು ಉತ್ತರಿಸೋಣ ?