ವೀ. ಅರವಿಂದ ಹೆಬ್ಬಾರ್

ಅನಾಹತ ನಾದವಾದ ನಾದಪಿಯಾ

ನಾರಾಯಣ ಪಂಡಿತ್ ಜೀ ಅವರ ಹೆಸರು ಭಾರತದಲ್ಲಿ ಕೆಲವೇ ಕೆಲವರಿಗೆ ತಿಳಿದಿದೆ. ಹಿಂದುಸ್ಥಾನೀ ಕ್ಷೇತ್ರದಲ್ಲೂ ಅವರದು ಜನಪ್ರಿಯ ಹೆಸರೇನೂ ಅಲ್ಲ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಂತೂ ತಿಳಿದೇ ಇಲ್ಲ. ಹೀಗಿದ್ದೂ ನಾದ, ರಾಗ, ಭಾವ, ಸೌಂದರ್ಯದ ವಿಚಾರಕ್ಕೆ ಬಂದಾಗ ಎದ್ದು ನಿಲ್ಲಬಲ್ಲ ಹೆಸರು ಅಪೂರ್ವರಾದ ಈ ಋಷಿ ಗಂಧರ್ವರದು. ಅವರ ಬಗ್ಗೆ ರಾಗಧನಶ್ರೀಯು ಅವರ ನಿಧನಾ ನಂತರದಲ್ಲಿ ಅವರ ಬಗೆಗಿನ ಪೂರ್ಣ ವಿವರಗಳನ್ನು ಹೊತ್ತಿರುವ 24 ಪುಟಗಳ ಸಂಚಿಕೆಯನ್ನು ಈಗ ಹೊರತರುತ್ತಿದೆ. ಪ್ರಾಯಶಃ ಭಾರತದ ಯಾವುದೇ ಪತ್ರಿಕೆಯಾಗಲೀ, ವ್ಯಕ್ತಿಯಾಗಲೀ ಇಂತಹಾ ಒಬ್ಬಾತ ಪ್ರಗಲ್ಭ ಪಂಡಿತನನ್ನು ಪ್ರಚುರ ಪಡಿಸುವ ಸಾಹಸಕ್ಕೆ ಕೈ ಹಾಕಿರಲಾರದು. ಯಾಕೆಂದರೆ ಅವರಿಗೆ ಯಾವ ಪ್ರಸಿದ್ಧಿಯೂ, ಪ್ರಶಸ್ತಿಯೂ ಬಂದಿರಲಿಲ್ಲ. ಕಾರಣ, ಅವರು ಅವುಗಳನ್ನು ಎಳಸಲೂ ಇಲ್ಲ. ಅಂತರಾತ್ಮದ ತೀವ್ರ ಸಂವಾದದಲ್ಲಿ ಸದಾ ರಾಗ, ಭಾವ, ಸೌಂದರ್ಯದ ಹುಡುಕಾಟ ನಡೆಸುತ್ತಾ ತನ್ನ ಬಂಧು ವರ್ಗದವರನ್ನೂ  ಕಡೆಗಣಿಸುತ್ತಾ ಪ್ರಯಾಣಿಸಿದ ಜೀವ ಅವರದಾಗಿತ್ತು. ಹೆಂಡತಿ ಸವಿತಾಳೊಬ್ಬಳನ್ನು ಬಿಟ್ಟರೆ ಅವರ 70ರ ಹರೆಯದ ನಂತರ ಅವರು ಯಾವ ಸ್ವಂತ ಬಂಧುಗಳನ್ನೂ ನೆನಪಿಸಿದ್ದು ನನಗೆ ತಿಳಿದಿಲ್ಲ.

ಈ ಹಿಂದುಸ್ಥಾನೀ ಗಾಯಕ, ವಯಲಿನ್ ವಾದಕ ಮತ್ತು ಏಕಮೇವಾದ್ವಿತೀಯ ವಾಗ್ಗೇಯಕಾರ ಉತ್ತರ ಹಿಂದುಸ್ಥಾನದ ಎಲ್ಲಾ ನೆಲದ ನೀರನ್ನು ಸವಿದು ಕೊನೆಗೆ ತನ್ನ ತವರು ನೆಲವಾದ ಗೋಕರ್ಣವನ್ನು ಬಂದು ಸೇರಿದರು. ಅವರ ಚಲನವಲನ ಯಾರಿಗೂ ತಿಳಿಯದೇ ಹೋಯಿತು. ಮುಂಬೈ ಆಕಾಶವಾಣಿ ಕಲಾವಿದರಾಗಿದ್ದರೂ ಬಡೇ ಗುಲಾಂ ಆಲೀ, ಪಂ. ರವಿಶಂಕರ್, ಪಂ. ಕುಮಾರ ಗಂಧರ್ವಜೀ ಮೊದಲಾದವರ ಜತೆ ನಿಕಟ ಒಡನಾಟವಿದ್ದೂ ಯಾರಿಗೂ ಕಾಣದಾದರು. ಸಿನಿಮಾ ಸಂಗೀತಗಳಲ್ಲಿ ಹಿನ್ನೆಲೆ ವಾದಕರಾಗಿ ಹಾಗೂ ನಿರ್ದೇಶಕರಾಗಿ ಮಿಂಚಿದರೂ ಎಲ್ಲರೂ ಅವರನ್ನು ಮರೆಯುವ ಹಾಗಾಯಿತು. ಕಾರಣ ಅವರಾಯಿತು ಮತ್ತು ಅವರ ಸಂಗೀತವಾಯಿತು ಮತ್ತು ಅವರಿಗೆ ಏನೂ ಬೇಡವಾಯಿತು.

2006ರಲ್ಲಿ ನನ್ನ ಶಿಷ್ಯೆ ಡಾ. ಶಾರದಾ ಭಟ್ ಧಾರವಾಡ ಇವಳ ಮೂಲಕವಾಗಿ ಪಂಡಿತರು ನಮಗೆ ಪರಿಚಿತರಾಗಿ ಉಡುಪಿಗೆ ಬರುವಂತಾಯಿತು. ತುಸು ವೈಕಲ್ಯದ ಡೊಂಕು ದೇಹವಿದ್ದರೂ ಅಪ್ರತಿಮ ಆತ್ಮವಿಶ್ವಾಸವನ್ನು ಹೊತ್ತುಕೊಂಡು ನಮ್ಮ ಲತಾಂಗಿ ಮನೆಯಲ್ಲಿ ರಾಗ ಧನದ ಆಶ್ರಯದಲ್ಲಿ ರಾಗ ಕಲ್ಯಾಣದ ವಿಚಾರವಾಗಿ ಒಂದು ಸೋದಾಹರಣ ಉಪನ್ಯಾಸವನ್ನು ಅವರು ನಡೆಸಿಕೊಟ್ಟರು. ಅದ್ಭುತ ಪಾಂಡಿತ್ಯ, ಅನುಭವದ ಪಾಕ, ಅಂಗೈಯಲ್ಲಿ ನೆಲ್ಲಿಕಾಯಿಯನ್ನು ಆಡಿಸಿದಂತೆ ಸಂಗೀತ ವ್ಯಾಕರಣವನ್ನು ಚೆಲ್ಲಾಡುವ ಸಾಮಥ್ರ್ಯವನ್ನು ಹೊಂದಿದ ಅವರ ಈ ಪ್ರಖರ ವೈಖರಿಗೆ ನಾನಂತೂ ಮೂಕನಾಗಿ ಹೋಗಿದ್ದೆ. ಅಲ್ಲಿಂದ ನಮ್ಮಿಬ್ಬರ ಸಂಗೀತ ಪ್ರಯಾಣ ಪ್ರಾರಂಭ. ಗಂಟೆಗಟ್ಟಲೆ, ದಿನಗಟ್ಟಲೆ, ತಿಂಗಳುಗಟ್ಟಲೆ ನಾವಿಬ್ಬರೂ ಸಂಗೀತದ ವಿಚಾರವಾಗಿ ವಿನಿಮಯ ಮಾಡಿಕೊಂಡಿದ್ದೇವೆ. ಅವರಿಗಿಂತ 25 ವರ್ಷಗಳಿಗೆ ಕಿರಿಯನಾದರೂ ಅವರು ನನ್ನೊಂದಿಗೆ ಹಂಚಿಕೊಂಡ ಮಾತು, ಗೀತ ಮತ್ತು ಭಾವಕ್ಕೆ ಎಣೆಯೇ ಇಲ್ಲ. ಅವರ ಬಂದಿಶ್‍ಗಳ ಅಥವಾ ಮೂಲಭೂತ ಸಂಗೀತ ತತ್ವಚಿಂತನೆಗಳ ರಾಶಿ ನನ್ನ ಮೇಲೆ ತೀವ್ರ ಪ್ರಭಾವ ಬೀರಿದೆ.

ಕರ್ನಾಟಕ ಸಂಗೀತವನ್ನು ಸುಮಾರಾಗಿ ಕೇಳಿಯೇ ಇರದ ಪಂಡಿತಜ್ಜನಿಗೆ ನಮ್ಮ ಮನೆಯಲ್ಲಿ ಸುಮಾರು 500 ವರ್ಷಗಳ ಹಿಂದಿನ ಪುರಾತನ ಧ್ವನಿ ನನ್ನ ಮಗಳು ರಂಜನಿಯಿಂದ ಒದಗಿಬಂತೆಂದು ಅವರೇ ಹೇಳಿಕೊಂಡಿದ್ದಾರೆ. ಹತ್ತು ವರ್ಷದ ರಂಜನಿ ಹಾಡಿದ್ದ ಖರಹರಪ್ರಿಯ ರಾಗದ ಆಲಾಪನೆಯನ್ನು ಕ್ಯಾಸೆಟ್ ಮೂಲಕ ಕೇಳಿದ ಪಂಡಿತಜ್ಜ ಒಂದು ದಿನವಿಡೀ ಅಸ್ವಸ್ಥರಾಗಿ ಕುಳಿತರು. ತಾನು ಹುಡುಕುತ್ತಿದ್ದ ಪುರಾತನ ಜೀರಿನ ಸ್ವರ ಈಗ ಮತ್ತೊಮ್ಮೆ ಇಲ್ಲಿ ಸಿಕ್ಕಿತೆಂದು ಸಂಭ್ರಮಿಸಿದರು. (ಅವರಿಗೆ ಅದಾಗಲೇ ಗುರುಗಳಾದ ಕುಮಾರ್‍ಜೀ ಅವರಿಂದ ಲಭ್ಯವಾಗಿತ್ತು). ಆದರೆ ಈ ಧ್ವನಿ ಕರ್ನಾಟಕ ಸಂಗೀತದ ಒಳಗೆ ಸಿಲುಕಿ ನಲುಗುತ್ತಿದೆ ಎಂದೂ ದುಃಖಿಸಿದ್ದರು. ಅವರ ಈ ಸುಖ-ದುಃಖದ ಬೇವು-ಬೆಲ್ಲ ರಂಜನಿಯೊಂದಿಗೆ ಪ್ರಾರಂಭದಾದದ್ದು ಹೀಗೆ. ಆಕೆಯನ್ನು ಅವರು ಆರಾಧಿಸುತ್ತಿದ್ದರು ಎಂದರೆ ಉತ್ಪ್ರೇಕ್ಷೆಯ ಮಾತಲ್ಲ. ಆಕೆಗೆ ಸಂಗೀತದ ಮೂಲತತ್ವದ ರಹಸ್ಯವನ್ನು ಹೇಳಿಕೊಟ್ಟು, ಅವಳ ಬಾಯಿಯಿಂದ ಅದನ್ನು ಅನುರಣಿಸುವಂತೆ ಮಾಡಿ ಅತೀವ ಆನಂದ ಪಟ್ಟರು. ಆಕೆಯೊಂದಿಗೆ ಮದ್ರಾಸಿಗೂ ಹೋಗಿ ಅವಳ ಮನೆಯಲ್ಲಿದ್ದುಕೊಂಡು ಹಲವಾರು ಬಂದಿಶ್‍ಗಳ ರುಚಿ ಹತ್ತಿಸಿದರು. ‘ಸಂಗೀತ ಇರುವುದು ತನ್ನ ಸಂತೋಷಕ್ಕಾಗಿ’ ಎನ್ನುವ ಅಲೌಕಿಕ ಸತ್ಯವನ್ನು ಆಕೆಗೆ ತಿಳಿಸಿ ಪ್ರಾಪಂಚಿಕ ಸಂಗೀತದಿಂದ ಆಕೆಯನ್ನು ತನ್ನೆಡೆಗೆ ಸೆಳೆದುಕೊಂಡರು. ಆಕೆಯ ಸಂಗೀತ ದೈವೀಕವಾಗಿ ಮೆರೆಯಿತು. ಆಕೆಯ ಅಕಾಲ ಮೃತ್ಯು (2013) ಅಜ್ಜನನ್ನು ನಲುಗಿಸಿದ್ದಂತೂ ನಿಜ.

ಪಂಡಿತಜ್ಜ ಹೊನ್ನಾವರದ ಸ್ನೇಹಕುಂಜದಲ್ಲಿ ಶ್ರೀ ಎಂ ಆರ್ ಹೆಗಡೆ, ಡಾ. ಮಹೇಶ ಪಂಡಿತ ಮುಂತಾದವರ ಸ್ನೇಹಮಯೀ ಆರೈಕೆಯ ತೆಕ್ಕೆಯಲ್ಲಿ ಕೊನೆಯ ದಿನಗಳನ್ನು ಕಳೆದಾಗ ಅವರು ತುಸು ಸಿನಿಕರಂತಾಗಿದ್ದರು. ಅವರಲ್ಲಿ ಸಂಗೀತ ಕಲಿತ ಎಲ್ಲಾ ಶಿಷ್ಯರ ಬಗೆಗೆ ಅವರು ತೀವ್ರ ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದರು. ಏಕೆಂದರೆ ‘ತಾನೇರಿದೆತ್ತರಕೆ ನೀನೇರಬಲ್ಲೆಯಾ’ ಎಂಬ ಸವಾಲಿನ ಸಾಲು ಅವರನ್ನು ಪದೇ ಪದೇ ಬೆಂಬತ್ತುತ್ತಿತ್ತು. ಆದರೂ ಅವರಿಗೆ ಅವರ ಶಿಷ್ಯವರ್ಗ ತೋರಿದ ಗೌರವ, ಆದರ, ಅಪಾರ. ಏಕಾಂಗಿಯಾಗಿ ಒಂಟಿ ಸಲಗನಂತೆ ನಡೆದ ನಾರಾಯಣ ಪಂಡಿತ್‍ಜೀ ಅವರ ಈ ಆತ್ಮನಿರೂಪಣಾ ಸಂಚಿಕೆಯು ಅವರ ಪಾದಗಳಿಗೆ ಅರ್ಪಿತ. ಯಾರೂ ಗುರುತಿಸದೆ ಹೋದ ಈ ವನಸುಮಕ್ಕೆ ನಮ್ಮ ಗೌರವದ ಬಾಷ್ಪಾಂಜಲಿ ಇದು.

Leave a Reply

Your email address will not be published. Required fields are marked *