06-09-2019

ಐಶ್ವರ್ಯ ವಿದ್ಯಾ ರಘುನಾಥ್ – ವೈಭವ್ ರಮಣಿ – ಬಿ ಎಸ್ ಪ್ರಶಾಂತ್

1. ತೋಡಿ – ಏರಾನಾಪೈ – ಆದಿ
2. ಶ್ರೀರಂಜನಿ – ಭುವಿನಿದಾಸುಡನೆ (ತ್ಯಾ.) – ಆದಿ
3. ಲಲಿತ – ಹಿರಣ್ಮಯೀಂ (ದೀ.)- ರೂಪಕ
4. ಯದುಕುಲಕಾಂಬೋಧಿ – ಸ್ವಾಮಿಮುಖ್ಯಪ್ರಾಣ (ಪು.ದಾ.) – ಆದಿ
5. ಕೀರವಾಣಿ – ಕಲಿಗಿಯುಂಟೇ (ತ್ಯಾ.) – ಆದಿ
6. ರಾಗಮಾಲಿಕೆ – ದೇವಕಿನಂದನ – ಆದಿ
7. ಯಮನ್ ಕಲ್ಯಾಣಿ – ಕೃಷ್ಣಾ ನೀ ಬೇಗನೆ ಬಾರೋ (ಪು.ದಾ.) – ಮಿ.ಛಾಪು
8. ಕುರುಂಜಿ – ಮಂಗಳ

ವೈಭವದ ನಾದೈಶ್ವರ್ಯದ ಪ್ರಶಾಂತ ಸಂಗೀತ
ಶ್ರುತಿಶುದ್ಧವಾಗಿ ಹಾಡುವವರು ಹಿಂದೂಸ್ತಾನಿ ಗಾಯಕರು ಮತ್ತು ಶ್ರುತಿಯನ್ನು ಪಕ್ಕಕ್ಕೇ ಇಟ್ಟು ಹಾಡುವವರು ಕರ್ನಾಟಕ ಸಂಗೀತದ ಹಾಡುಗಾರರು ಎಂಬುವುದೊಂದು ಅಘೋಷಿತ ಮಹಾವಾಕ್ಯ ಇದೆ. ಬಹ್ವಂಶ ಇದು ಸತ್ಯವೇ ಹೌದು. ಕರ್ನಾಟಕ ಸಂಗೀತದ ಹಾಡುಗಾರರು ವೇದಿಕೆಗಳಲ್ಲಿ ಸಾಮಾನ್ಯವಾಗಿ ತಾನ್‍ಪುರಗಳಿಲ್ಲದೆಯೇ ಹಾಡುತ್ತಾರೆ. ಸಿದ್ಧ ಮಾಡಿಕೊಂಡು ಬಂದ ಹತ್ತಾರು ಕೃತಿಗಳನ್ನು ಹೇಳಿಕೊಟ್ಟಂತೆ ಒಪ್ಪಿಸಿದರಾಯಿತು, ಅದೇ ನಮ್ಮ ಸಂಗೀತ ಎಂದು ಇವರೆಲ್ಲ ತಿಳಿದಂತಿದೆ. ಹಾಗಾಗಿ ಅರಿಯಾಕುಡಿಯವರು ಹಾಡುವ ತೋಡಿ ವರ್ಣವನ್ನು ಮತ್ತು ಈಗ ತಾನೇ ತೊಟ್ಟಿಲಿನಿಂದ ಹೊರಬಂದ ಮಗುವೊಂದು ಹಾಡುವ ತೋಡಿ ವರ್ಣವನ್ನು ಕರ್ನಾಟಕ ಸಂಗೀತ ಶ್ರೋತೃಗಳು ಅಷ್ಟೇ ಭಾವಪೂರ್ಣವಾಗಿ ಕೇಳುತ್ತಾರೆ. ಶ್ರುತಿ ಬಿಟ್ಟರೂ ಅದಕ್ಕೆ ರಿಯಾಯಿತಿ ನೀಡುತ್ತಾರೆ. ಹೀಗೆ ರಿಯಾಯಿತಿ ನೀಡುವುದು ಅಭ್ಯಾಸವಾಗಿ ಹೋಗಿ ರಸಿಕ ವರ್ಗವೂ ಗಿಳಿಪಾಠವನ್ನೇ ಬಯಸುತ್ತದೆ. ಶ್ರುತಿ ಹತವಾದರೂ ಅಡ್ಡಿಯಿಲ್ಲ. ಆದರೆ ತಾಳದ ಘಾತಕ್ಕೆ ಪೆಟ್ಟಾಗಬಾರದು ಎಂಬ ಅಚಲ ನಂಬಿಕೆ ನಮ್ಮ ಬುದ್ಧಿವಂತ ಕರ್ನಾಟಕೀ ರಸಿಕ ವರ್ಗದ ಅಂಬೋಣ. ಇದರಿಂದ ನಮ್ಮ ಹಿಂದೂಸ್ತಾನೀ ಸೋದರ-ಸೋದರಿಯರು ತಾಯಿ ಕಳಕೊಂಡ ಸಂಗೀತವನ್ನು (ಶ್ರುತಿರ್ಮಾತಾ) ಕಣ್ಣೆತ್ತಿಯೂ ನೋಡುವುದಿಲ್ಲ.
ಇತ್ತೀಚಿಗಿನ ಪೀಳಿಗೆಯ ಕರ್ನಾಟಕ ಸಂಗೀತ ಹಾಡುಗಾರರು ಈ ಬಗ್ಗೆ ಬಹಳಷ್ಟು ತಲೆ ಕೆಡಿಸಿಕೊಂಡು ಸಾಧನೆ ಮಾಡುತ್ತಿರುವುದು ಈಗೀಗ ಕಂಡು ಬರುತ್ತಿದೆ. ಕರ್ನಾಟಕ ಸಂಗೀತದ ಕ್ಲಿಷ್ಟ ಗಮಕಗಳನ್ನು ಶ್ರುತಿ ಶುದ್ಧವಾಗಿ ಪ್ರಸ್ತುತಿ ಪಡಿಸುವುದಕ್ಕೆ ಹರ ಸಾಹಸ ಪಡಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಐಶ್ವರ್ಯಾ ವಿದ್ಯಾ ರಘುನಾಥ್ ಅವರ ಸಾಧನೆ ಅನನ್ಯವಾದುದು. ಸ್ವರ ಸ್ವರಗಳು ಜೀರಿನಲ್ಲೇ ಝೇಂಕರಿಸುತ್ತಾ ರಾಗ ಭಾವ ಲಯಗಳು ಅತ್ಯಂತ ಮನೋಜ್ಞವಾಗಿ ಇವರ ಗಂಟಲಿನಲ್ಲಿ ಹೊರಹೊಮ್ಮುತ್ತವೆ. ಇವರ ಕಂಠಶ್ರೀಯೇ ತಂಬೂರದಂತೆ ಮಿಡಿಯುತ್ತದೆ. ಅತಿ ವಿಳಂಬದಲ್ಲಿ ಇವರು ಆಯ್ದುಕೊಂಡ ಲಲಿತದ ಹಿರಣ್ಮಯೀಂ ಈ ಮಾತಿಗೆ ಸಾಕ್ಷಿ. ದೀಕ್ಷಿತರ ರಚನೆಯ ಆಶಯಕ್ಕೆ ತಕ್ಕಂತೆ ಈ ಕೃತಿ ಪ್ರಸ್ತುತಿಯಲ್ಲಿ ಐಶ್ವರ್ಯ ಗೀತ ವಾದ್ಯಗಳನ್ನು ಮೇಳೈಸಿಕೊಂಡಿದ್ದಾರೆ. ಬಿ ಎಸ್ ಪ್ರಶಾಂತ್ ಅವರ ಮೃದಂಗ ನುಡಿಸಾಣಿಕೆಯಲ್ಲಿ ‘ವಾದ್ಯ ವಿನೋದಿನಿ’ ಯ ಹೃದಯಸ್ಪರ್ಶಿ ನಡೆಗಳನ್ನು ಹಿರಣ್ಮಯಿಗೆ ಸಲ್ಲಿಸಿದ್ದಾರೆ. ಅಷ್ಟೇ ಪರಿಣಾಮಕಾರಿಯಾಗಿ ಮತ್ತು ಪೂರಕವಾಗಿ ವಯಲಿನ್ ಸಹಕಾರ ನೀಡಿದವರು ವೈಭವ್ ರಮಣಿ. ಅದೊಂದು ವೈಭವದ ನಾದೈಶ್ವರ್ಯದ ಪ್ರಶಾಂತ ಸಂಗೀತ. ಮುಂದೆ ತಾನದೊಂದಿಗೆ ಕುಣಿಸಿದ ಕೀರವಾಣಿಯ ಕಲಿಗಿಯುಂಟೆಯಲ್ಲೂ ಅದ್ಭುತ ಪ್ರಸಕ್ತಿ. ‘ಸ್ವಾಮಿ ಮುಖ್ಯಪ್ರಾಣ’ ಹಾಡಿನೊಂದಿಗೆ ಮೂಡಿಬಂದ ಯದುಕುಲಕಾಂಬೋಧಿಯ ಮೊರೆ ಮತ್ತು ರಾಗಮಾಲಿಕೆಯಲ್ಲಿ ಮೂಡಿಬಂದ ‘ದೇವಕಿ ನಂದನ’ದ ಭಕ್ತಿಯ ತೊರೆ ಕೇಳುಗರನ್ನು ಮೀಯಿಸಿತ್ತು. ನೂರಾರು ಬಾರಿ ಕೇಳಿದರೂ ನಗುನಗುತ್ತಾ ಆಮಂತ್ರಿಸುವ ‘ಕೃಷ್ಣಾ ನೀ ಬೇಗನೆ ಬಾರೋ’ ಹಾಡನ್ನು ಮತ್ತೂ ಕೇಳುವಂತೆ ಮಾಡಿದ ಗೆಯ್ಮೆ ಐಶ್ವರ್ಯ ಅವರದು. ತಾಳ ಲೆಕ್ಕಾಚಾರಗಳನ್ನೆಲ್ಲ ಬದಿಗೊತ್ತಿ ನಾದಾನುಭವಕ್ಕೇ ಪ್ರಾಧಾನ್ಯತೆ ನೀಡಿ ಸಂಗೀತಕ್ಕೆ ನಿಷ್ಠೆ ತೋರಿಸಿದ ಐಶ್ವರ್ಯಾ ನನ್ನ ಅನಿಸಿಕೆಯಲ್ಲಿ ಒಬ್ಬ ಅಪೂರ್ವ ತಾರಾ ಕಲಾವಿದೆ. ಕರ್ನಾಟಕ ಸಂಗೀತದ ಶ್ರುತಿ ಸಂಪತ್ತಿಯನ್ನು ಎತ್ತಿ ಹಿಡಿಯಬಲ್ಲ ಸಮರ್ಥ ಕಲಾವಿದೆ.

07-09-2019

ದಿವ್ಯಶ್ರೀ ಮಣಿಪಾಲ – ಕಾರ್ತಿಕೇಯ ಹೊಸಹಳ್ಳಿ – ಅಮೃತ್ ನಾರಾಯಣ

1. ಚಾರುಕೇಶಿ – ವರ್ಣ – ಆದಿ
2. ಸಿಂಧುರಾಮಕ್ರಿಯ – ಸುಧಾ ಮಾಧುರ್ಯ ಭಾಷಿಣಿ (ಜಿಎನ್‍ಬಿ) – ಆದಿ
3. ಗೌರಿಮನೋಹರಿ – ಗುರುಲೇಕ ಎಟುವಂಟಿ (ತ್ಯಾ.) – ಖಂಡಛಾಪು
4. ರಾಗಮಾಲಿಕೆ – ಸಾರಂಗನ್ ಮುರುಗನೇ – ಆದಿ
ಚಾರುಕೇಸಿಯ ವರ್ಣದ ಪ್ರಸ್ತುತಿಯೊಂದು ಸಾಕು, ದಿವ್ಯಶ್ರೀ ಏನು ಮಾಡಬಲ್ಲಳು ಎನ್ನುವುದಕ್ಕೆ. ಉತ್ತಮ ಕಂಠ ಸೌಲಭ್ಯ, ಅನಾಯಾಸವಾಗಿ ಹರಿಯಬಲ್ಲ ಆಕೆಯ ಹಾಡುಗಾರಿಕೆಯಲ್ಲಿ ಸ್ವರಗಳ ಜಾಡನ್ನು ಹಿಡಿದುಕೊಂಡು ಹಾಡುವ ಶೈಲಿಯಿದೆ. ಸಿಂಧುರಾಮಕ್ರಿಯದ ಪ್ರಸ್ತುತಿಯಲ್ಲಿ ಸ್ಪಷ್ಟತೆ ಇತ್ತು. ಗೌರಿಮನೋಹರಿಯ ಕಲ್ಪನಾ ಸ್ವರ ಚೆನ್ನಾಗಿತ್ತು. ಮನೋಧರ್ಮದ ಪುಟವಿಕ್ಕಿದರೆ ದಿವ್ಯಶ್ರೀಯ ಸಂಗೀತ ಆಪ್ಯಾಯಮಾನವಾಗುವುದರಲ್ಲಿ ಸಂದೇಹವೇ ಇಲ್ಲ. ಪಕ್ಕವಾದ್ಯ ಹಿತಮಿತವಾಗಿತ್ತು.

ಪ್ರಸನ್ನ ವೆಂಕಟರಾಮನ್ – ಟ್ರಿವೆಂಡ್ರಂ ಸಂಪತ್ – ಸುನಾದಕೃಷ್ಣ ಅಮೈ

1. ಶ್ರೀರಾಗ – ವರ್ಣ – ಆದಿ
2. ಜಯಂತಸೇನ – ವಿನತಸುತದ (ತ್ಯಾ)- ಆದಿ
3. ಲತಾಂಗಿ – ಅಪರಾಧ (ಪಟ್ಣಂ) – ಆದಿ
4. ಮಣಿರಂಗು – ಇಕ್ಕೋ ನಮ್ಮ ಸ್ವಾಮಿ (ಪು.ದಾಸ) – ಆದಿ
5. ದ್ವಿಜಾವಂತಿ – ಚೇತಶ್ರೀ ಬಾಲಕೃಷ್ಣಂ (ದೀ.) – ರೂಪಕ
6. ಮಾರ್ಗ ಹಿಂದೋಳ – ಚಲಮೇಲರಾ (ತ್ಯಾ.) – ಆದಿ
7. ಕಾಂಬೋಧಿ – ಎವರಿಮಾಟ (ತ್ಯಾ.) – ಆದಿ
8. ರಾಗಮಾಲಿಕೆ – ಬಾರೋ ಕೃಷ್ಣಯ್ಯ (ಕನಕದಾಸ) – ಆದಿ
9. ಬೆಹಾಗ್ – ಕಂಡುಧನ್ಯನಾದೆ (ಕಮಲೇಶ ವಿಠಲದಾಸರು) – ಆದಿ
10. ಮಂಗಳ
ಎವರಿಮಾಟ ದ ಮಾಟ
ಇದೊಂದು ತ್ರೀ-ಇನ್-ವನ್ ಕಛೇರಿ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಇನ್ನೊಬ್ಬರನ್ನು ಬಿಟ್ಟು ಮೂರನೆಯವರಿಲ್ಲ. ಮೂವರದೂ ರಂಗುರಂಗಾದ ಮಣಿಗಳ ಹೆಣೆಯುವಿಕೆ. ಜಯಂತಸೇನ ಮತ್ತು ಲತಾಂಗಿಯಲ್ಲಿ ಪ್ರಸನ್ನ ಅವರು ತುಣುಕು ತುಣುಕಾಗಿ ಸಂಗತಿಗಳನ್ನು ಚೆಲ್ಲುತ್ತಾ ಹೊಸೆಯುವ ಬಗೆ ಹೊಸದು. ಅದರಲ್ಲೊಂದು ನಾವೀನ್ಯತೆ ಇದೆ. ಸಂಜಯರಂತೆ ಒಮ್ಮೊಮ್ಮೆ, ಸಂಗತಿಗಳು ಗಕ್ಕನೆ ನಿಂತು, ಮುಂದಿನ ಸಂಗತಿಗೆ ಎಡೆಮಾಡಿಕೊಡುತ್ತವೆ. ಪ್ರಸನ್ನರದು ಕೇವಲ ರಾಗದ ರೂಪವಲ್ಲ. ಅದು ಸ್ವೇಚ್ಛೆಯಿಂದ ಕುಣಿದಾಡುವ ರಾಗಗಳ ಸಂಚಾರೀ ಮಾರ್ಗ. ಇದು ಇನ್ನೂ ಹೆಚ್ಚು ಸ್ಪಷ್ಟವಾಗಿ ಮನ ಮುಟ್ಟುವಂತೆ ತಟ್ಟಿದ್ದು ಕಾಂಬೋಧಿಯ `ಎವರಿಮಾಟ’ದಲ್ಲಿ. ಇಲ್ಲಿಯ ಸಂಗತಿ ಸಂಗತಿಗಳು ಪರಸ್ಪರ ಸಂವಾದದಲ್ಲಿ ತೊಡಗಿದಂತೆ ಸಂಭಾಷಿಸುತ್ತಿದ್ದವು. ಒಮ್ಮೆ ‘ಪ’, ಮತ್ತೊಮ್ಮೆ ‘ದ’ ದಲ್ಲಿ ಮಾಡಿದ ಕುರೈಪ್ಪುಗಳು, ‘ದ್ವಾಸುಪರ್ಣೌ’ ಗಿಳಿಗಳಂತೆ ಭಕ್ತ ಮತ್ತು ಭಕ್ತ-ಪರಾಧೀನನ ನಡುವೆ ತೊಡಗಿಸಿಕೊಂಡ ಪರಸ್ಪರ ವಾದ-ಸಂವಾದದಂತೆ ಮಾಟವಾಗಿ ಮೂಡಿಬಂದಿದ್ದವು. ಹಾಗೆಯೇ ಟ್ರಿವೆಂಡ್ರಂ ಸಂಪತ್ ಮತ್ತು ಪ್ರಸನ್ನ, ಸಂಪತ್ ಮತ್ತು ಸುನಾದ ಹಾಗೂ ಸುನಾದ ಮತ್ತು ಪ್ರಸನ್ನ ಅವರೂ ಪರಸ್ಪರ ಸೌಹಾರ್ದಯುತ ವಾದ ಸಂವಾದಗಳಲ್ಲಿ ಸಂಭಾಷಿಸುತ್ತಿದ್ದುದು ಶ್ರೋತೃಗಳೆಲ್ಲರನ್ನೂ ತೆಕ್ಕೆಗೆ ಸೆಳೆದುಕೊಂಡಿತ್ತು. ಡಿ ಶ್ರುತಿಯಲ್ಲಿ ಹಾಡುವ ಪ್ರಸನ್ನ ಅವರ ಶಾರೀರಕ್ಕೆ ಎ- ಕಾರದ ಮಾರ್ದವತೆಯ ಕಂಪು ಇದೆ. ಅದು ಪೆಡಸಾದ ಧ್ವನಿಯಲ್ಲ. ಅದಕ್ಕೆ ನೇದುನುರಿಯವರ ಶಾರೀರದಲ್ಲಿ ಕಾಣಿಸಿಕೊಳ್ಳುವ ನಾಸಿಕದ ಟಿಸಿಲು ಇದೆ. ಅದು ಕೇಳುಗರ ಕಿವಿಗೆ ಆಯಾಸವನ್ನು ತರುವುದಿಲ್ಲ. ಅವರ ಹಾಡುಗಾರಿಕೆಯಲ್ಲಿ ಭಾವೋತ್ಕಟತೆಯ ಲಹರಿ ಹಿಂಬಾಲಿಸಿಕೊಂಡು ಬರುತ್ತದೆ. ಮಣಿರಂಗು ಮತ್ತು ಮಾರ್ಗ ಹಿಂದೋಳದ ಪ್ರಸ್ತುತಿಗಳಲ್ಲಿ ಅವರು ಮಾಡಿದ ಸವಾಲ್-ಜವಾಬ್ ವರಸೆ ನಿಜಕ್ಕೂ ಮನನೀಯ. ಅವರ ಕನ್ನಡ ಪ್ರಸ್ತುತಿಗಳಲ್ಲಿ ಕೆಲವಾರು ದೋಷಪೂರಿತ ಸಾಹಿತ್ಯಗಳಿದ್ದರೂ ರಾಗ ಲಹರಿಯಲ್ಲಿ ಅವು ತುಸು ಮರೆಯಾದವು ಎನ್ನುವುದಕ್ಕಡ್ಡಿಯಿಲ್ಲ. ಆದರೂ ಅಷ್ಟು ಚೆನ್ನಾಗಿ ಹಾಡುವಾಗ ಸಾಹಿತ್ಯದ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಿಕೊಳ್ಳುವುದು ಅತ್ಯಗತ್ಯವೇ ಆಗಿದೆ. ರವೆಯಷ್ಟು ಅರಳಿಕೊಳ್ಳುವ ನುಡಿಕಾರ ತೋರುವ ಸುನಾದನ ಮೃದಂಗದ ಒಂದೊಂದು ಘಾತವೂ, ಅನುಸರಣೆ ಮತ್ತು ಅತ್ಯುತ್ತಮ ತನಿ, ಕಛೇರಿಗೆ ಹೊನ್ನ ಕಳಸವಿಟ್ಟಂತೆ ಆಗಿತ್ತು. ಬೆಣ್ಣೆಯಿಂದ ರೇಷ್ಮೆ ದಾರವನ್ನು ನುಣುಪಾಗಿ ಎಳೆದಂತೆಯೇ ಇರುವ ಸೂಕ್ಷ್ಮ ಮತ್ತು ಕುಸುರಿ ಸಂಪತ್ತು ಸಂಪತ್ ಅವರ ವಯಲಿನ್‍ನಲ್ಲಿತ್ತು. ಕಣಕ್‍ಗಳ(ಲೆಕ್ಕಾಚಾರಗಳ) ಯಾವ ವ್ಯಾಪಾರಕ್ಕೂ ಇಳಿಯದ ಪ್ರಸನ್ನ ಅವರ ಹಾಡುಗಾರಿಕೆಯಲ್ಲಿ ಸರ್ವ ಲಘುಗಳದ್ದೇ ಆಟ ಮತ್ತುಸಂಗೀತದ ರಸಧಾರೆ ಮಾತ್ರ ಸ್ರವಿಸುತ್ತದೆ. ಕರ್ನಾಟಕ ಸಂಗೀತದ ಹೃದಯ ಭಾಷೆ ಪ್ರಸನ್ನರ ಸಂಗೀತದಲ್ಲಿದೆ.

08-09-2019

ಮಲ್ಲಾಡಿ ಸಹೋದರರು – ನಿಶಾಂತ್ ಚಂದ್ರನ್ – ಮನ್ನಾರ್‍ಗುಡಿ ಎ. ಈಶ್ವರನ್

1. ಆನಂದಭೈರವಿ – ವರ್ಣ
2. ತೋಡಿ – ಗಜಾನನ ಯನುಚು ಸದಾ( ) ರೂಪಕ
3. ಶ್ರೀರಂಜನಿ – ಭುವಿನಿದಾಸು (ತ್ಯಾ.) – ಆದಿ
4. ಬಹುದಾರಿ – ಬ್ರೋವಭಾರಮಾ (ತ್ಯಾ.) – ಆದಿ
5. ಜನರಂಜನಿ – ನಾಡಾಡಿನ (ತ್ಯಾ.) – ಆದಿ
6. ಸಾರಂಗ – ಅರುಣಾಚಲನಾಥಂ (ದೀ.) – ರೂಪಕ
7. ಭೈರವಿ – ಉಪಚಾರಮುಲನು (ತ್ಯಾ.) – ಆದಿ
8. ನಾಟಕುರಿಂಜಿ – ರಾತಾಪ -ತಿಶ್ರ ಝಂಪೆ (ಖಂಡನಡೆ)
9. ಸಾಂತರ ಮಾಳವ ಕೌಶಿಕ – ಮುರಹರ ನಗಧರ ( ) – ಆದಿ
10. ರಾಗೇಶ್ರೀ – ತಿಲ್ಲಾನ – ಆದಿ
ಮೈಕೂ~~~ ಸಂಗೀತವೂ …
ಬಹು ನಿರೀಕ್ಷೆಯಿಂದ ಕಾದುಕೊಂಡಿದ್ದ ಮಲ್ಲಾಡಿಯವರ ಕಚೇರಿಗೆ ಮೈಕಾಸುರನ ಕಾಟ ಬಂದೊದಗಿ ಇಡೀ ಯಜ್ಞ ಹಾಳಾಗಿ ಹೋಯಿತು. ಶ್ರೋತೃ ವರ್ಗಕ್ಕೆ ನಿರಾಸೆಯಾದರೂ ಸಂಘಟನಕಾರರ ಮೇಲಿನ ಅನುಕಂಪೆಯಿಂದ, ಬಂದವರು ಕೊನೆಯವರೆಗೂ ಕುಳಿತು ಆಲಿಸಿದರು. ಆಗಾಗ ಕೂ~~~ ಎಂದು ಗುಕ್ಕೆನುತ್ತಿದ್ದ ಮೈಕ್‍ನ ಎಡೆಯಿಂದ ತೂರಿ ಬಂದ ಒಂದಿಷ್ಟು ಸಂಗೀತವನ್ನು ಕೇಳಿ ಸಂಘಟಕರನ್ನು ಸಂತೈಸಿದರು. ವೇದಿಕೆಯಲ್ಲಿದ್ದ ಹಿರಿಯ ಸಹೃದಯ ಕಲಾಕಾರರೂ ಎಲ್ಲವನ್ನೂ ನುಂಗಿಕೊಳ್ಳುತ್ತಾ ಸಂಘಟನಕಾರರ ಸಂಕಟವನ್ನು ಅರಿತು ಚೆನ್ನಾಗಿಯೇ ಹಾಡಿದರು. ಮನ್ನಾರ್ಗುಡಿಯವರ ಲವಲವಿಕೆಯ ಮೃದಂಗ ಲೀಲೆ ಮಾತ್ರ ಸಭಾಂಗಣದ ಕೊನೆಯವರೆಗೂ ಗುನುಗುನಿಸಿದ್ದರಿಂದ ಕಚೇರಿಯು ತುಸು ಜೀವದಿಂದ ತೊನೆದಾಡುತ್ತಿತ್ತು. ಈ ಕಚೇರಿಯ ವಿಮರ್ಶೆಯನ್ನು ಮೈಕ್‍ಗೇ ಸಮರ್ಪಿಸಿ ನನ್ನ ಲೇಖನಿಯನ್ನು ಕೆಳಗಿಡುವೆ.

09-09-2019

ದೇಹಾಲಯ-ದೇವಾಲಯ, ಭಿಕ್ಷುಕ ಸಂಗೀತ ಗುರು… -ಕಣ್ಣನ್ ಕಣ್ಣಲ್ಲಿ…

ಡಾ|ಶಿವರಾಮ ಕಾರಂತರು, ರಾಳ್ಲಪಳ್ಳಿ ಅನಂತಕೃಷ್ಣ ಶರ್ಮ, ಚೌಡಯ್ಯ, ಡಿವಿಜಿ, ವೀಣೆ ಶೇಷಣ್ಣ, ವಾಸುದೇವ ಆಚಾರ್, ಬಿಡಾರಂ ಕೃಷ್ಣಪ್ಪ … ಹೀಗೆ ಒಂದೇ ಎರಡೇ…
ಇವರೆಲ್ಲರ ಜೀವನ ಘಟನಾವಳಿಗಳನ್ನು ಒಂದೊಂದನ್ನಾಗಿ ಬಿಚ್ಚಿಟ್ಟವರು ಕನ್ನಡದ ಪೂಜಾರಿ ಎಂದು ಪ್ರಸಿದ್ಧರಾದ ಹಿರೇಮಗಳೂರು ಕಣ್ಣನ್. ಸಂದರ್ಭ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ (ಸೆ. 9) ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ನಡೆದ ರಂಜನಿ ಸಂಸ್ಮರಣಾ ಕಾರ್ಯಕ್ರಮ.
ವಿದ್ವಾನ್ ರಾಳ್ಲಪಳ್ಳಿ ಅನಂತಕೃಷ್ಣ ಶರ್ಮರಿಗೆ ಒಂದು ಹಾಡಿನ ರಾಗ ಗೋಚರಿಸಿರಲಿಲ್ಲ. ಮನೆಯಲ್ಲಿರುವಾಗ ಒಬ್ಬ ಭಿಕ್ಷುಕ ಹಾಡುವ ರಾಗ ಕೇಳಿಸಿತು. ಆತ ಬೇಡಲು ಬಂದವ. ಶರ್ಮರಿಗೆ ಮೆಚ್ಚುಗೆಯಾಗಿ ಇನ್ನೊಮ್ಮೆ ಹಾಡಲು ಹೇಳಿದರು. ‘ಇನ್ನೊಮ್ಮೆ ಹಾಡಿದರೆ ನನ್ನ ಆದಾಯಕ್ಕೆ ಕೊರತೆ ಬರತ್ತೆ’ ಎಂದು ಭಿಕ್ಷುಕ ಹೇಳಿದ. ಆ ಮನೆಯ ಭಿಕ್ಷೆಯನ್ನೂ ನಾನೇ ನೀಡುತ್ತೇನೆಂದರು ಶರ್ಮ. ಆತ ಹಾಡಿದ. ಆತನಿಗೆ ಸಮ್ಮಾನ ಮಾಡಿದ ಬಳಿಕ ಪಾಠ ಮಾಡು ಎಂದು ಕೇಳಿದರು. ಏಕ ಪಾಠಿಯಾದ ಶರ್ಮರಿಗೆ ಇದು ಕಷ್ಟವಾಗಿರಲಿಲ್ಲ. ಇದೆಲ್ಲ ಹೇಗೆ ಕಲಿತೆ ಎಂದಾಗ ದನ ಮೇಯಿಸುವಾಗ ತಾಯಿ ಕಲಿಸಿದ್ದು ಎಂದ. ಶರ್ಮರು ಅದೇ ಹಾಡನ್ನು ಹಾಡಿದಾಗ ‘ಪರವಾಗಿಲ್ಲ’ ಎಂದ. ನಿನ್ನ ಹಾಗೇ ಹಾಡಬೇಕಾದರೆ ಏನು ಮಾಡಬೇಕೆಂದಾಗ ‘ನನ್ನ ಹಾಗೆ ಮನೆಮನೆ ಭಿಕ್ಷೆ ಬೇಡಬೇಕು’ ಎಂದಾತ ಉತ್ತರಿಸಿದ. ಒಬ್ಬ ಭಿಕ್ಷುಕನಿಂದ ತಾನು ಹೇಗೆ ಪಾಠವನ್ನು ಕಲಿತೆ ಎಂದು ಶರ್ಮರು ಜೀವನ ಕಥನದಲ್ಲಿ ತಿಳಿಸಿದ್ದಾರೆ.
ಡಾ|ಶಿವರಾಮ ಕಾರಂತರನ್ನು ಮನೆಗೆ ಕರೆದಿದ್ದೆ. ಹೆಂಡತಿಗೆ ನಮಸ್ಕಾರ ಮಾಡಲು ಹೇಳಿದೆ. ‘ಯಾರಿಗೂ ಯಾವುದೇ ಕಾರಣಕ್ಕೂ ಬಲಾತ್ಕಾರವಾಗಿ ಹಕ್ಕೊತ್ತಾಯ ಮಾಡಬಾರದು’ ಎಂದು ಕಾರಂತರು ಹುಕುಂ ನೀಡಿದರು. ‘ನಿಮಗೆ ಏನು ಕುಡಿಯಲು ಕೊಡಲಿ? ನಿಮ್ಮ ಇಚ್ಛೆ ಏನು?’ ಎಂದು ಕೇಳಿದಾಗ ‘ದೂರದಿಂದ ಬಂದಿನಪ್ಪಾ. ಮೊದಲು ದೇಹಬಾಧೆ ನಿವಾರಿಸಲು ದೇಹಾಲಯ ತೋರಿಸು. ಅನಂತರ ದೇವಾಲಯ. ದೇಹದ ಬಾಧೆ ತೀರಿಸದೆ ರಾಧೆಯ ಭಜನೆ ಏನಪ್ಪಾ?’ ಎಂದರು ಎಂದು ಕಣ್ಣನ್ ಸ್ಮರಿಸಿದರು.
ಚೌಡಯ್ಯನವರ ಪಿಟೀಲು ವಾದನದ ರೆಕಾರ್ಡಿಂಗ್ ಆಕಾಶವಾಣಿಯಲ್ಲಿ ನಟೇಶನ್ ಮಾಡಿಸುತ್ತಿದ್ದರು. ನಟೇಶನ್ ಹೊರಗೆ ಬಂದಾಗ ಇಬ್ಬರು ‘ಅರಸಿಕರು’ ‘ಚೌಡಯ್ಯ ಸಕತ್ತಾಗಿ ಬಾರಿಸ್ತಿದ್ದಾನೆ’ ಎಂದರು. ನಟೇಶನ್ ‘ಬಾರಿಸುವುದಲ್ಲ, ನುಡಿಸುವುದು’ ಎಂದರು. ‘ಚೌಡಯ್ಯ ಯಾವ ಕಾಸ್ಟ್’ ಎಂದಾಗ ‘ಬ್ರಾಡ್‍ಕಾಸ್ಟ್’ ಎಂದರು.
ಬಿಡಾರಂ ಕೃಷ್ಣಪ್ಪನವರು ಧರ್ಮಸ್ಥಳ ಮೇಳದಲ್ಲಿ ಕಲಾವಿದರಾಗಿದ್ದವರು. ಅನಂತರ ಮೈಸೂರಿಗೆ ಹೋಗಿ ರಾಜಾಶ್ರಯದಲ್ಲಿ ಬಿಡಾರ ಹೂಡಿದ್ದರಿಂದ ‘ಬಿಡಾರಂ ಕೃಷ್ಣಪ್ಪ’ ಎನಿಸಿಕೊಂಡರು. ಒಮ್ಮೆ ಎಲ್ಲ ಆಸ್ಥಾನ ವಿದ್ವಾಂಸರ ಛಾಯಾಚಿತ್ರ ತೆಗೆಸಲು ರಾಜರು ಆದೇಶ ನೀಡಿದರು. ವೀಣೆ ಶೇಷಣ್ಣ ಅವರು ಕ್ಷೌರಿಕನನ್ನು ಮರು ದಿನ ಕರೆದು ಕ್ಷೌರ ಮಾಡಲು ಹೇಳಿದರು. ಕ್ಷೌರ ಮಾಡುವಾಗ ಮಾತನಾಡುವಂತಿಲ್ಲ. ಕೈಸನ್ನೆ ಮಾಡಿ ಹೇಳಿದರು, ಪಾರಾಯಣ ಮಾಡುತ್ತ ಕುಳಿತರು. ಕ್ಷೌರಿಕ ಹುಬ್ಬೂ ಸಹಿತ ಒಂದೇ ಒಂದು ಕೂದಲನ್ನೂ ಬಿಡಲಿಲ್ಲ. ಕೊನೆಯಲ್ಲಿ ಕನ್ನಡಿ ನೋಡುವಾಗ ಹುಬ್ಬೂ ಇದ್ದಿರಲಿಲ್ಲ. ಆದ ಘಟನೆಯನ್ನು ರಾಜರಿಗೆ ತಿಳಿಸಿದಾಗ ‘ಮುಂದೆ ಶೇಷಣ್ಣನವರಿಗೆ ಕೂದಲು ಹುಟ್ಟುವವರೆಗೆ ಫೋಟೋ ಸೆಶನ್ ಮುಂದೂಡಿ’ ಹುಕುಂ ಆಯಿತು.
ಇದೆಲ್ಲವನ್ನೂ ಹೇಳಿದ ಬಳಿಕ ಕಣ್ಣನ್ ನೀಡಿದ ಸಂದೇಶ: ‘ಸುಮ್ಮನೆ ಕಾಲಹರಣ ಮಾಡಬೇಡಿ, ಕಾಲವನ್ನು ಹೂರಣ ಮಾಡಿ. ಸಂಗೀತ, ಕಲೆ. ‘ಭಾವನೆಗಳಿಗೆ ತಕ್ಕಂತೆ ಅಭಿವ್ಯಕ್ತಿಗೊಳಿಸದೆ ಇದ್ದರೆ ಬದುಕು ವ್ಯರ್ಥ. ಸಂಗೀತ, ಸಾಹಿತ್ಯ ಸಮಾಜ ಮುಖಿ. ಇಲ್ಲಿ ಜಾತಿ ಇಲ್ಲ. ಮಂತ್ರಗಳೂ ಸಾಹಿತ್ಯವೇ. ಇಂತಹ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ ಮಹನೀಯರ ಸ್ಮರಣೀಯ ಘಟನೆಗಳನ್ನು ಅರವಿಂದ ಹೆಬ್ಬಾರ್ ಅವರಂತಹವರ ಬಳಿ ಮೆಲುಕು ಹಾಕಿ’.
ಟ್ರಸ್ಟ್ ಮುಖ್ಯಸ್ಥ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ಅವರನ್ನು ಕಣ್ಣನ್ ಸಮ್ಮಾನಿಸಿದರು. ಇದಕ್ಕೂ ಮುನ್ನ ಹೆಬ್ಬಾರ್ ದಂಪತಿ ಕಣ್ಣನ್ ಅವರನ್ನು ಅಭಿನಂದಿಸಿದರು. ಸಮನ್ವಿ ಕಾರ್ಯಕ್ರಮ ನಿರ್ವಹಿಸಿ, ಕಣ್ಣನ್ ಅವರನ್ನು ಗಿರಿಜಾ ಬಾಯಿ ಪರಿಚಯಿಸಿದರು.

* ಕಾಸರಗೋಡು ಕುಂಬಳೆಯವರು (ಹೆಸರು ಪ್ರಾಯಃ ಸುಬ್ರಹ್ಮಣ್ಯ ಇರಬೇಕು) ನನಗಿಂತ ಮೊದಲೇ ವೇದ ಮಂತ್ರಗಳು, ಪುರುಷಸೂಕ್ತ, ಶ್ರೀಸೂಕ್ತ, ರುದ್ರ ಚಮಕ ಇತ್ಯಾದಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.
* ಒಬ್ಬರು ಬಂದು ‘ಕಣ್ಣನ್’ ಇದ್ದಾರಾ? ಎಂದು ಕೇಳಿದರು. ಹೆಂಡತಿ ‘ಹೋಗ್ ಬಿಟ್ರು’ ಎಂದರು. ‘ಚೆನ್ನಾಗೇ ಇದ್ರಲ್ಲ, ಏನಾಯ್ತು?’ ಎಂದಾಗ ‘ಟೈಮ್ ಆಯ್ತು’ ಎಂದರು. ದೇವರ ಪೂಜೆಗೆ ಸಮಯವಾದ ಕಾರಣ ಪೂಜೆಗೆ ಹೋದರೆನ್ನುವುದಕ್ಕೆ ಆದ ಅಧ್ವಾನವಿದು.
* ‘ಗಂಡ ಸೌಖ್ಯಾನಾ?’ ಎಂದು ಕೇಳಿದೆ. ಏಕ ವಚನ ಪ್ರಯೋಗದಿಂದ ಆಕೆಗೆ ಸಿಟ್ಟು ಬಂತು. ‘ಗಂಡಂದಿರು ಸೌಖ್ಯಾನಾ?’ ಎಂದೆ.
* ಕನ್ನಡದಲ್ಲಿ ಹೆಂಡತಿಯನ್ನು ‘ಲೇ’ ಎಂದೂ, ತಮಿಳಿನಲ್ಲಿ ‘ಡೀ’ ಎಂದೂ, ಅಮೆರಿಕದಲ್ಲಿ ಎರಡನ್ನೂ ಸೇರಿಸಿ ‘ಲೇಡಿ’ ಎಂದೂ ಕರೆಯುತ್ತಾರೆ.
* ಸ್ನೇಹಿತ ತೀರಿ ಹೋದದ್ದು ಗೊತ್ತಿಲ್ಲದೆ ಊಟಕ್ಕಾಗಿ ವಿದ್ವಾಂಸರೊಬ್ಬರು ಮನೆಗೆ ಹೋದರು. ಹೆಂಡತಿ ಕೋಣೆಯೊಳಗೆ ಇದ್ದು ತನ್ನ ಸ್ಥಿತಿ ಹೇಳಿದಾಗ ತತ್‍ಕ್ಷಣ ‘ಪೂರ್ವಸುಮಂಗಲಿ’ ಎಂದು ಹೇಳಿದರು. ‘ವಿಧವೆ’ ಎಂಬ ಶಬ್ದದ ಬದಲಿಯಾದ ಈ ಶಬ್ದ ಎಷ್ಟು ಜನರಿಗೆ ಗೊತ್ತಿದೆ?
* ಆಕ್ಸ್‍ಫರ್ಡ್ ನಿಘಂಟಿನವರು ‘ಅಯ್ಯಂಗಾರ್’ ಶಬ್ದಕ್ಕೆ ಹಗ್ಗ, ಇಟ್ಟಿಗೆ, ಕಲ್ಲು ಎಂದು ಅರ್ಥ ಕೊಟ್ಟಿದ್ದಾರೆ. ಇದೇಕೆಂದರೆ ಬಿ.ಕೆ.ಎಸ್.ಅಯ್ಯಂಗಾರರು ವಿದೇಶಕ್ಕೆ ಹೋಗಿ ಯೋಗ ಕಲಿಸುವಾಗ ಯೋಗ ಮಾಡಲು ಆಗದವರಿಗೆ ಇಟ್ಟಿಗೆ, ಹಗ್ಗ, ಕಲ್ಲು ಇತ್ಯಾದಿ ಉಪಕರಣಗಳ ಸಹಾಯದಿಂದ ಯೋಗ ಮಾಡಿಸಿದ್ದರು.

ಶ್ರೀಮಂತಿಕೆಯಲ್ಲಿ ಮೆರೆದ ಶ್ರೀಮತಿ ದೇವಿಯವರ ಮುಲ್ತಾನಿ, ಝಿಂಝೋಟಿ

ಹಿಂದೂಸ್ಥಾನೀ ಹಾಡುಗಾರಿಕೆಯವರು ಧ್ವನಿ ಸೌಕರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರು ಹೊರಸೂಸುವ ಧ್ವನಿ ಪರಿಣಾಮದ ಮೇಲೆ ಅವರ ಯಶಸ್ಸಿನ ಬಹು ಪಾಲು ಅಡಗಿದೆ ಎನ್ನುವುದು ಸತ್ಯ. ಎಷ್ಟೇ ವಿದ್ವತ್ತಿದ್ದರೂ, ಪ್ರೌಢತೆಯಿದ್ದರೂ ಧ್ವನಿ ಸಂಪತ್ತು ಕರಕಲಾಗಿದ್ದರೆ ಅವರು ಜಯಿಸಲಾರರು. ಹಾಗಾಗಿ ವಾಯ್ಸ್ ಕಲ್ಚರ್‍ನ್ನು ನಿಷ್ಠೆಯಿಂದ ಕೃಷಿಮಾಡುವವರು ಜನಮಾನ್ಯರಾಗುತ್ತಾರೆ. ಶ್ರೀಮತಿದೇವಿಯವರ ಗಾಯನ ಕಛೇರಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಶ್ರುತಿ ಶುದ್ಧತೆಯಿಂದೊಡಗೂಡಿದ ತ್ರಿಸ್ಥಾಯಿಯಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಉತ್ಕೃಷ್ಟ ಮಟ್ಟದ ನಾಜೂಕಾಗಿ ಪಳಗಿಸಿದ ಧ್ವನಿ ಸೌಕರ್ಯ. ಮುಲ್ತಾನಿಯ ಆವರೋಹದ ಗರಿಸಾ ದಲ್ಲಿ ಅವರು ವಹಿಸುವ ಎಚ್ಚರ ಶ್ಲಾಘನೀಯ. ಇದರ ರಿಷಭಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ತೋಡಿಯ ಛಾಯೆ ಬಾರದಂತೆ ಅವರು ವಹಿಸಿದ ಎಚ್ಚರ ಗಮನಾರ್ಹ. ಹಾಗಾದಾಗಲೇ, ತೀವ್ರ ಮ ಮತ್ತು ನಿ ಗಳ ಜಾತಿಗೆ ಸೇರಿದ ಮುಲ್ತಾನಿಗೆ ಸ್ವಂತಿಕೆ ಬರುವುದು. ಈ ರಾಗದಲ್ಲಿ ಹೆಣೆದ ವಿವಿಧ ಗತಿಯ ಸುಂದರ ತಾನ್‍ಗಳು ಮತ್ತು ವರಸೆಗಳು ಮುಲ್ತಾನಿಯ ಗಾಂಭೀರ್ಯವನ್ನು ಎತ್ತಿಹಿಡಿದಿವೆ. ಝಿಂಝೋಟಿಯ ಬಂದಿಶ್‍ನಲ್ಲಂತೂ ಅವರು ನೇಯ್ದ ರಕ್ತಿಭಾವ ಮನನೀಯ. ಮಧ್ಯ ಲಯದ ಬಂದಿಶ್ ಮತ್ತು ತರಾನಾವು ಒಂದಕ್ಕೊಂದು ಹೊಂದಿಕೆಯಾಗುವ ಮುಂದುವರಿಕೆಯ ಭಾಗವೋ ಎನ್ನುವಂತಿದ್ದವು. ಸತೀಶ್ ಅವರು ಶ್ರೀಮತಿಯ ಗಾಯನದ ಎಡೆ ಎಡೆಗಳಲ್ಲಿ ಎಚ್ಚರದಿಂದ ಪೂರಕವಾದ ಹಿತವಾದ ಸಾಥಿಯನ್ನು ಹಾರ್ಮೋನಿಯಂನಲ್ಲಿ ನೀಡಿದ್ದಾರೆ. ಗಾಯನದ ಪ್ರತಿ ಅಂಶವನ್ನು ಮೆಲ್ಲುತ್ತಾ ಮುಗುಳುನಗೆಯೊಂದಿಗೆ ಜಾಣ್ಮೆಯ ಉಠಾವ್ ಕೊಡುವ ತಬಲಾಜೀ ಭೀಮಾ ಶಂಕರ್ ಅವರು ನಿಜಕ್ಕೂ ಅಭಿನಂದನೀಯರು. ‘ಅವ ಧೂತಾ’ ನಿರ್ಗುಣಿ ಭಜನ್ ಅಂತೂ ಎಲ್ಲರೂ ಗುನುಗುನಿಸುವ ಧ್ವನಿಯಾಗಿ ಹೊರ ಹೊಮ್ಮಿತು. ಪ್ರಬುದ್ಧ ಕಲಾವಿದೆಯಾಗುತ್ತಿರುವ ಶ್ರೀಮತಿದೇವಿ ಬಹಳ ಎತ್ತರಕ್ಕೆ ಏರುತ್ತಿರುವ ಸೂಚನೆಯಿತ್ತಿದ್ದಾರೆ.

10-09-2019

ಸೆ. 10 ರಂದು ಶ್ರೀ ಶ್ರೀ ಛಾಯಾಪತಿ ಗುರೂಜಿ ಅವರ ನೇತೃತ್ವದಲ್ಲಿ ಸತ್ಸಂಗ ಭಜನೆ ನಡೆಯಿತು. ಈ ಬಾರಿಯ ಭಜನಾ ಕಾರ್ಯಕ್ರಮದಲ್ಲಿ ತನಿ ತನಿಯಾಗಿ ಹಾಡಿದ್ದು ವಿಶೇಷ ಎನಿಸಿತು. ಸತ್ಸಂಗ ಭಜನೆಯಲ್ಲಿ ಒಬ್ಬರು ಹಾಡಿದ ಬಳಿಕ ಅದನ್ನೇ ಎಲ್ಲರೂ ಜೊತೆಯಾಗಿ ಹಾಡುವುದು ಎಂಬುವುದು ನನ್ನ ಭಾವನೆಯಾಗಿತ್ತು.
ಮಧ್ಯಾಹ್ನ ಭೋಜನದ ಬಳಿಕ ಉಡುಪಿಯ ಪ್ರಸಿದ್ಧ ಕಲಾವಿದರಿಂದ ಗಾನ ಸೌರಭ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಅರವಿಂದ ಹೆಬ್ಬಾರರೇ ಸಂಯೋಜಿಸಿದ ಹಾಡುಗಳನ್ನು ಅವರದೇ ನಿರ್ದೇಶನದ ಮೇರೆಗೆ ಕಿರಿ-ಹಿರಿಯ ಕಲಾವಿದರು ಹಾಡಿಕೆಯನ್ನು ಪ್ರಸ್ತುತಪಡಿಸಿದರು. ಶ್ರೇಯಾ, ಉಮಾಶಂಕರಿ-ರೇಖಾ ಸಾಮಗ, ವಾರಿಜಾಕ್ಷಿ-ವಸಂತಲಕ್ಷ್ಮೀ-ಲತಾ ತಂತ್ರಿ, ಶ್ರುತಿ ಗುರುಪ್ರಸಾದ್, ಅರ್ಚನಾ ಉಪಾಧ್ಯಾಯ ಮತ್ತು ರಾಘವೇಂದ್ರ ಆಚಾರ್ಯ ಅವರ ತನಿ, ಯುಗಳ, ತ್ರಿವಳಿ ಗಾಯನಗಳಾದವು. ಪಕ್ಕವಾದ್ಯದಲ್ಲಿ ವಸಂತಿ ರಾಮ ಭಟ್, ಬಾಲಚಂದ್ರ ಭಾಗವತ್, ನಿಕ್ಷಿತ್ ಮತ್ತು ಶಶಿಕಿರಣ್ ಸಹಕರಿಸಿದ್ದರು. ಕೊನೆಯಲ್ಲಿ ಸಮನ್ವಿ ಮತ್ತು ಶ್ರೀಮತಿದೇವಿಯವರ ಕರ್ನಾಟಕೀ-ಹಿಂದೂಸ್ಥಾನೀ ಜುಗಲಬಂದಿಯು ಚೊಕ್ಕದಾಗಿ ಅಚ್ಚುಕಟ್ಟಾಗಿ ಮೂಡಿಬಂತು.
ತದ ನಂತರ ಮೈಸೂರಿನ ಹರೀಶ್ ಪಾಂಡವ್ ಅವರ ಸ್ಯಾಕ್ಸೋಫೋನ್ ವಾದನವಿತ್ತು. ಎಂ ಕೇಶವ್ ವಯಲಿನ್‍ನಲ್ಲಿ ಹಾಗೂ ನಿತ್ಯಾನಂದ ಹಿರಿಯಡ್ಕ ತವಿಲಿನಲ್ಲಿ ಉತ್ತಮ ಪಕ್ಕವಾದ್ಯ ನೀಡಿದರು. ವಿಪುಲವಾದ ಮನೋಧರ್ಮ, ರಾಗಲಯ ಶುದ್ಧಿಗಳನ್ನು ಹರೀಶ್ ಕರಗತ ಮಾಡಿಕೊಂಡಿದ್ದಾರೆ.
ಸಮಾರೋಪದಲ್ಲಿ ಎಂಐಟಿ ಯ ಸಹನಿರ್ದೇಶಕರಾದ ಡಾ. ಬಿ ಎಚ್ ವಿ ಪೈ ಮತ್ತು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಜಿ ವಿಜಯ್ ಅವರು ಶುಭ ನುಡಿದರು. ಡಾ. ಸಲ್ಮಾತಾಜ್ ರಂಜನಿಯ ಬಗ್ಗೆ ಮನದಾಳದ ಮಾತನ್ನು ತನ್ನ ಅನುಭವದ ಬುತ್ತಿಯಿಂದ ಮನ ಮುಟ್ಟುವಂತೆ ಬಿಚ್ಚಿಟ್ಟರು. ಅರ್ಚನಾ, ಸಮನ್ವಿ, ಹರೀಶ್ ಪಾಂಡವ್ ಮತ್ತು ಅನಿರುದ್ಧ ಐತಾಳ್ ಅವರು ಪ್ರೋತ್ಸಾಹಕ ಶಿಷ್ಯವೇತನ ಪಡೆದರು. ಶ್ರೀ ಅರವಿಂದ ಹೆಬ್ಬಾರರು ಧನ್ಯವಾದವಿತ್ತರು.

 

ಹೇಮಂತ-ಹೇರಂಭ (ಕೊಳಲು) – ಮತ್ತೂರು ಶ್ರೀನಿಧಿ – ನಿಕ್ಷಿತ್ – ಶರತ್ ಕೌಶಿಕ್
ಖಮಾಚ್ – ಸೀತಾಪತಿ – ಆದಿ
ರಂಜನಿ – ದುರ್ಮಾರ್ಗಚರಾ (ತ್ಯಾ.) – ರೂಪಕ
ಮನೋರಂಜನಿ – ಆದಿ
4. ಕಾಂಬೋಧಿ – ಓ ರಂಗಶಾಯಿ (ತ್ಯಾ) – ಆದಿ
ಕಾನಡ – ಗೋವರ್ಧನ ಗಿರಿಧಾರ
ಕೊಳಲು ಮಾಂತ್ರಿಕ ಸೋದರರ ಉಚ್ಛ್ರಾಯ
ಹಿಂದೆ, ಟಿ ಆರ್ ಮಹಾಲಿಂಗಮ್ ಅವರ ಕಚೇರಿ ಅನಿಶ್ಚಿತತೆಯ ಝಳಕಿನಲ್ಲಿಯೇ ನಡೆಯುತ್ತಿರುತ್ತಿತ್ತು. ಯಾವಾಗ ಅದು ಉಲ್ಕೆಯಂತೆ ಗಗನಕ್ಕೆ ನೆಗೆಯುತ್ತೋ, ಅದನ್ನು ಊಹಿಸುವಂತಿರಲಿಲ್ಲ. ನಿರೀಕ್ಷೆಯ ನೋಂಪಿನಲ್ಲೇ ಅವರ ಕಚೇರಿಯ ಮಾಟ. ಅವರ ಶಿಷ್ಯ ಎನ್. ರಮಣಿ ಅವರ ಕಛೇರಿ ನಿಶ್ಚಿತತೆಯಲ್ಲೇ ಯಶಸ್ಸು ಕಾಣುತ್ತಿತ್ತು. ಶಶಾಂಕ್ ಅವರ ಕಛೇರಿಯಲ್ಲಿ ಹೊರಹೊಮ್ಮುತ್ತಿದ್ದ ನಾದಲೀನತೆ, ಗತಿ ವಿನ್ಯಾಸ, ಜಾಣ್ಮೆ ಮತ್ತು ತಂತ್ರಗಾರಿಕೆಗಳಿಂದ ಜನ ಮರುಳಾಗುತ್ತಿದ್ದರು. ಇವೆಲ್ಲವುಗಳ ಲಾಭಾಂಶಗಳನ್ನು ಹೇಮಂತ-ಹೇರಂಭ ಸೋದರರು ಸಕಾರಾತ್ಮಕವಾಗಿ ಬಳಸಿಕೊಂಡದ್ದು ಕಾಣುತ್ತದೆ. ಇವರ ತುತ್ತುಕಾರಗಳು ಕೊಳಲಿನ ಬಿದಿರಿನ ಮೇಲೆ ತುಟಿಗಳುಜ್ಜುವ ಸದ್ದು ಮಾಡುವುದಿಲ್ಲ. ಹೊರ ಬರುವುದು ನಾದ ಮಾತ್ರ. ಮೂಗಿನ ಉಸಿರೂ ಹೊರಬಾರದು! ಖಮಾಚ್, ರಂಜನಿ, ಮನೋರಂಜನಿಗಳಲ್ಲೆಲ್ಲಾ ಗಾಯಕೀ ಅಂಶಗಳು, ತಂತ್ರಗಾರಿಕೆಯ ಉತ್ತಮ ಸ್ವರೂಪಗಳು, ಅದ್ಭುತ ಎಂದೆನಿಸುವ ಮನೋಧರ್ಮ, ಪ್ರತಿಬಾರಿಯೂ ಮುಂದೇನು ಎನ್ನುವ ಕುತೂಹಲವನ್ನು ಹುಟ್ಟಿಸುವ ಕಲ್ಪನಾ ಸ್ವರವಿನ್ಯಾಸ -ಈ ಈರ್ವರ ವಿಲಾಸ. ಕಾಂಬೋಧಿಯ ರಾಗರೂಪಕ್ಕೆ ಹೇಮಂತ-ಹೇರಂಭ ಅವರು ಹೊಸ ಹೊಸ ವರಸೆಗಳನ್ನು ನೀಡುತ್ತಾ `ಓ ರಂಗಶಾಯಿ’ಯನ್ನು ಹೊಸೆದರು. ಚಿಕ್ಕ ಗಾತ್ರದ, ಮಧ್ಯಗಾತ್ರದ ಮತ್ತು ಮಾರು ಗಾತ್ರದ ಬಾನ್ಸುರಿ ಕೊಳಲಿನಲ್ಲಿ ಇವರೀರ್ವರ ಕಾಂಬೋಧಿಯು ಲಾಲಿತ್ಯಪೂರ್ಣವಾಗಿ ಸರಸವಾಡಿತು.ಪ್ರೌಢತೆಯಿಂದ ಮೆರೆಯಿತು.ಪರಸ್ಪರ ಹೊಂದಾಣಿಕೆಯಿಂದ ಅಪ್ಯಾಯಮಾನವಾಗಿ ಬೆಳಗಿತು.ಒಂದೊಮ್ಮೆ ಇಬ್ಬರು ಸೋದರರು ಪಾಶ್ಚಾತ್ಯ ಮಾದರಿಯ ಕಾರ್ಡ್ ಸ್ವರಗಳನ್ನು ಬಳಸಿಕೊಂಡು ಒಂದಿಷ್ಟೂ ಚ್ಯುತಿ ಇಲ್ಲದೆ ಪರಿಪೂರ್ಣ ಹೊಂದಾಣಿಕೆಯೊಂದಿಗೆ ಉಸಿರು ಬಿಗಿಹಿಡಿದಂತೆ ನೀಡಿದ ಕಾಂಬೋಧಿಯನ್ನು ಯಾರೂ ಮರೆಯುವಂತಿಲ್ಲ. ವ್ಯಾಕರಣ ಶುದ್ಧತೆ, ರಾಗರೂಪದ ಸುಂದರತೆ, ಭಾವೋತ್ಕಟತೆಯನ್ನು ಮೇಳಯಿಸಿಕೊಂಡು ಪ್ರೌಢತೆಯನ್ನು ಪ್ರದರ್ಶಿಸುತ್ತಾ, ಚಮತ್ಕಾರಗಳ ಸರ್ಕಸ್ಸುಗಳಿಲ್ಲದೆ ಸಾಮಾನ್ಯ ಶ್ರೋತೃವಿಗೂ ಸಂಗೀತವನ್ನು ತಲುಪಿಸಬಲ್ಲ ಅಸಾಮಾನ್ಯ ಬಲ ಈ ಸೋದರರಲ್ಲಿದೆ. ಉಲ್ಕೆಯಂತೆ ಇಷ್ಟು ಸಣ್ಣ ವಯಸ್ಸಿನಲ್ಲೇ ಗಗನಕ್ಕೆ ಇವರು ನೆಗೆದಿದ್ದಾರೆ. ಮುಂದಿನ ದಿನಗಳು ಇವರಿಗೆ ಸವಾಲೇ ಸರಿ. ಅತ್ಯಂತ ಸುಶ್ರಾವ್ಯವಾಗಿ ಮೂಡುತ್ತಿರುವ ಈ ಶ್ರಾವ್ಯ ಕಛೇರಿ, ಮುಂದೆ, ಅಚ್ಚರಿ ಮೂಡಿಸಬಲ್ಲ ಸರ್ಕಸ್ ಚಮತ್ಕಾರಗಳ ದೃಶ್ಯ ಕಛೇರಿಯಾಗದಂತೆ ನೋಡಿಕೊಳ್ಳುವ ಎಚ್ಚರವನ್ನು ಕಲಾವಿದರು ಕಾಯ್ದುಕೊಳ್ಳಬೇಕು ಎನ್ನುವ ಕಾಳಜಿ ಈ ಲೇಖಕನದು. ಕೊಳಲಿನಲ್ಲಿ ಸಕಾರಾತ್ಮಕವಾಗಿ ಏರಬಲ್ಲ ಜಾಗತಿಕ ದಾಖಲೆ ಕೊಡಗಿನ ಈ ಕಲಿವೀರರದಾಗಲಿ ಎಂಬ ಮನದಾಳದ ಆಶಯದೊಂದಿಗೆ ಹೇಮಂತ-ಹೇರಂಭರನ್ನು ಮನಸಾರೆ ಅಭಿನಂದಿಸುವೆ ಮತ್ತು ಹರಸುವೆ.
ಮತ್ತೂರು ಶ್ರೀನಿಧಿಯವರ ವಯಲಿನ್ ಸಹಕಾರದಲ್ಲಿ ಹೇಮಂತ-ಹೇರಂಭರ ಪಡಿಯಚ್ಚೇ ಅನುರಣಿಸಿದೆ. ಅವರ ಹೆಜ್ಜೆ ಹೆಜ್ಜೆಗೂ ಇವರದು ಸಹ ಹೆಜ್ಜೆ. ನಿಕ್ಷಿತ್ ಅವರ ಎಚ್ಚರದ ನಡೆ ನುಡಿಕಾರಗಳು ಸೋದರರಿಬ್ಬರ ವರಸೆಗಳಿಗೆ ಹೇಳಿಮಾಡಿಸಿದಂತಿತ್ತು.ಸಂಗತಿ ಸಂಗತಿಗಳಿಗೆ ನಿಕ್ಷಿತ್ ನೀಡುವ ಅನುಸರಣೆ ಉಳಿದವರಿಗೆ ಮಾದರಿ. ತನಿ ಆವರ್ತನ ಅತ್ಯಂತ ಪ್ರೌಢ. ಶರತ್ ಕೌಶಿಕರದು ಹಿತ ಮಿತ ಸಹಕಾರ.

Leave a Reply

Your email address will not be published. Required fields are marked *