January 2015 (Published in Ragadhanashree under “Namma Maatu”)

2015 ಕ್ಕೆ ಕಾಲಿಟ್ಟಿದ್ದೇವೆ. ಸಂಗೀತ ಲೋಕದಿಂದ ಇಂದು ನಾವು ಆರ್. ಕೆ. ಶ್ರೀಕಂಠನ್( 1920- 2014), ಮೆಂಡೊಲಿನ್ ಶ್ರೀನಿವಾಸ್( 1969- 2014), ನೇದುನುರಿ(1927- 2014), ಹಿರಿಯ ಸಂಗೀತ ವಿಮರ್ಶಕ ಎಸ್‍ವಿಕೆ ಎಂದೇ ಖ್ಯಾತರಾದ ಎಸ್.ವಿ.ಕೃಷ್ಣಮೂರ್ತಿ( 1925- 2014) ಇವರನ್ನು ಕಳಕೊಂಡಿದ್ದೇವೆ.
ಸಾಂಪ್ರದಾಯಿಕ ಸಂಗೀತವನ್ನು ಕೇಳಲು ಇನ್ನು ಮೇಲೆ ಅವರುಗಳ ಸಿಡಿ ಯೇ ನಮಗೆ ಆಧಾರ. ಸಂಗೀತ ಪ್ರಪಂಚಕ್ಕೆ ಇವರು ನೀಡಿದ ಕೊಡುಗೆ ಅಪಾರ. ವಯೋ ವೃದ್ಧರಾಗಿ ಸಂಗೀತ ಸೇವೆ ಮಾಡುವಷ್ಟು ಮಾಡಿ ದಣಿದ ಜೀವಗಳೆರಡು- ಶ್ರೀಕಂಠನ್ ಮತ್ತು ನೇದುನುರಿಯವರು. ತಮ್ಮ ಜೀವನದುದ್ದಕ್ಕೂ ಸಾಧನೆ, ಶಿಸ್ತು, ಪರಂಪರಾಗತ ಸಂಗೀತ ಭಕ್ತಿಯನ್ನು ಅನ್ಯಾದೃಶವಾಗಿ ನೀಡಿದ್ದ ಇವರ ತಲೆಮಾರಿನ ಬಳಿಕ ನಮಗೆ ಇಂತಹಾ ಋಷಿಗಳು ಪ್ರಾಯಶಃ ಸಿಗಲಾರವು. ಅವನ್ನು ಸಿಡಿ ಯಲ್ಲಿ ಹಿಡಿದಿಡಲೂ ಸಾಧ್ಯವಾಗದು. ನಮ್ಮ ಸುತ್ತುಮುತ್ತಲಿನ ಈಗಿನ ಯುವ ಕಲಾವಿದರು ಅದ್ಭುತವಾದ ಸಂಗೀತ ಸಾಮರ್ಥ್ಯ, ಚಳಕವನ್ನು ತೋರುತ್ತಿದ್ದಾರೇನೋ ನಿಜ. ಆದರೆ ವಾಣಿಜ್ಯಪ್ರಪಂಚದ ಗೀಳು, ಭಾರತೀಯತೆಯ ಬಗೆಗಿನ ತುಸು ಅಸಡ್ಡೆ, ಜನಾದರಕ್ಕಾಗಿ ನಡೆಸುವ ಪೈಪೆÇೀಟಿಯ ‘ತೊಡು’ವಿನಲ್ಲಿ ವೇಗ, ಕಿವಿಗಡಚಿಕ್ಕುವ ಗಲಾಟೆ, ಸದ್ದು, ಕಣಕ್ಕು (ಲೆಕ್ಕಾಚಾರ) ಎಬ್ಬಿಸಿ ಅದನ್ನೇ ನಮ್ಮ ಸಂಗೀತವೆಂದುಕೊಂಡು ಅಟ್ಟಹಾಸ ಗೈಯ್ಯುತ್ತಿದ್ದಾರೆ. ಗುರು- ಶಿಷ್ಯ ಸಂಬಂಧದಲ್ಲಿದ್ದ ಸಂಗೀತ ಒಡನಾಟವನ್ನು ನಡೆದು ತೋರಿಸಬೇಕಾದ ಅವಶ್ಯಕತೆ ಖಂಡಿತವಾಗಿಯೂ ಇದೆ ಎಂದು ನನಗನಿಸುತ್ತದೆ. ಈ ನಿಟ್ಟಿನಲ್ಲಿ ನಮಗೆ ಶ್ರೀಕಂಠನ್ ಮತ್ತು ನೇದುನುರಿಯಂತಹವರು ಬೇಕಾಗುತ್ತಾರೆ.
ಜೀನ್ಸ್,ಬರ್ಮುಡ, ಒಂಟಿ ಕಿವಿಗೆ ಒಂಟಿ ಟಿಕ್ಕಿಯ ಲೇಪ, ಅಶ್ಲೀಲವಲ್ಲದ ವಾಕ್ಯಗಳ ಶಾಸನಗಳನ್ನು ಹೊತ್ತ ಸ್ಲೀವ್ಲೆಸ್ ಟೀ ಶರ್ಟ್‍ಗಳನ್ನು ಧರಿಸಿ ಪಾಶ್ಚಿಮಾತ್ಯ ಸಮಕಾಲೀನತೆಯನ್ನು ಪ್ರದರ್ಶಿಸುವುದು ಪುರುಷ ಸಂಪ್ರದಾಯವಾಗಿದೆ. ‘ನೀರದ ಚಿಕುರೆ’ಯಂತಹ ಕೇಶ ರಾಶಿಯನ್ನು ಹೊರಬೇಕಾದ ಮರ್ಯಾದಾ ಮಹಿಳಾ ಕಲಾವಿದರು, ಸ್ನಾನ ಗೃಹದಿಂದ ಈಗ ತಾನೇ ಬಂದವರಂತೆ ತಲೆಕೂದಲು ಬಿಚ್ಚಿಹಾಕಿದಂತೆ ಕಾಣುವ ದ್ರೃಶ್ಯ, ತುಟಿಗೆದರಿದ ಮಾದರಿಗಳು,ನೆನೆಸದ ಜಾಗಗಳಲ್ಲಿ ನೇತಾಡುವ ವಿವಿಧ ಅಪನ್ಯಾಸಗಳ ಜೋತು ಆಭರಣಗಳನ್ನು ಪ್ರದರ್ಶಿಸುವ ಪರಿ- ಸ್ತ್ರೀ ವರ್ಗಕ್ಕೆ ಸಾಮಾನ್ಯವಾಗಿದೆ. ಶಾಂಪಾಯ್ನ್ ಮೊದಲಾದ ಪೇಯಗಳ ಜಾಹೀರಾತುಗಳಿಗೂ ಏನೂ ಕಸಿವಿಸಿಗೊಳ್ಳದೇ ‘ಎದೆ ತೋರುವ’ ¥sóÁ್ಯಶನ್ನಿನ ನಡುವೆ ಭಾರತಿಯ ಸಂಗೀತವನ್ನು ಉಳಿಸುವ ಬಗೆಯನ್ನು ಕಂಡು ಹಿಡಿಯಬೇಕಾಗಿದೆ. ಯುವಕ ಯುವತಿಯರಿಗೆ ಹಾಗೂ ಮಕ್ಕಳಿಗೆ ಮಾಧ್ಯಮಗಳಲ್ಲಿ ರಿಯಾಲಿಟಿ ಶೋ ಗಳಂತಹಾ ನೀರೂರಿಸುವ ಮರೀಚಿಕೆಗಳ ಜಾಡು ಹಿಡಿಯಲು ಕಲಿಸುವ ಪ್ರವೃತ್ತಿಯನ್ನು ನೆನೆದಾಗ ನನ್ನಂತಹಾ 1954ರ ಮೋಡೆಲ್ಲಿನ ವ್ಯಕ್ತಿಗಳಿಗೆ ಕಸಿವಿಸಿಯಾಗುತ್ತದೆ. ಇದನ್ನು ಹೇಗೆ ನಿರ್ವಹಿಸಬಹುದು?
ತ್ಯಾಗರಾಜರ ಕಾಲದಲ್ಲಿ ಎಲ್ಲರೂ ರಾಮ ಕೀರ್ತನೆ, ಸಂಕೀರ್ತನೆ ಕೃತಿಗಳನ್ನು ಕಲಿತು ಹಾಡುವುದನ್ನು ಕೇಳಿ ಸಂತೋಷ ಪಟ್ಟ ತ್ಯಾಗರಾಜರು ಒಂದು ಕೃತಿ ರಚನೆ ಮಾಡಿದ್ದು ನೆನಪಿಸಿಕೊಳ್ಳುತ್ತೇನೆ- ‘ಚಿಂತಿಸ್ತುನ್ನಾಡೆ ಯಮುಡು’ ಎಂಬುದನ್ನು. ಯಮನಿಗೆ ಚಿಂತೆಯಂತೆ- ಎಲ್ಲರೂ ಹೀಗೆ ಭಕ್ತಿಯಿಂದ ಹಾಡಲು ತೊಡಗಿದರೆ ನನ್ನ ಬಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತದಲ್ಲಾ ಎಂಬ ಚಿಂತೆಯಂತೆ ! ನಮ್ಮ ಸಂಗೀತದ ಪ್ರಸ್ತುತ ವಿದ್ಯಮಾನಗಳ ಸಮೀಕ್ಷೆಮಾಡಿದರೆ, ಯಮನಿಗೆ ಸಂತಸದ ದಿನವಿರುವುದು ಖಂಡಿತ!. ಶ್ರೀಕಂಠನ್ ಮತ್ತು ನೇದುನುರಿ ಗುರುಗಳೇ ,ದಯವಿಟ್ಟು ಮಹಾವಿಷ್ಣುವಿಗೆ ಹೇಳಿ ಯಾರಾದರೂ ಒಬ್ಬ ಅವತಾರ ಪುರುಷನನ್ನು ಈ ಕಡೆ ಕಳಿಸಿ ಗ್ಲಾನಿಯನ್ನು ಕಳೆಯಲು ಸಹಾಯ ಮಾಡಿ.

Leave a Reply

Your email address will not be published. Required fields are marked *