– ಎ. ಈಶ್ವರಯ್ಯ

ಒಂದು ಮಾತು. ಒಂದು ವಾರದಿಂದ ಪ್ರವಚನ, ಸತ್ಸಂಗ, ವೀಣಾ ವಾದನ, ರಂಜನಿ ಗಾಯತ್ರಿ,ಅರ್ಚನ ಸಮನ್ವಿ ಯರ ದ್ವಂದ್ವ ಹಾಡುಗಾರಿಕೆ, ಗಾರ್ಗಿ ಮತ್ತು ಉದಯೋನ್ಮುಖ ಲತಾಂಗಿ ಮಕ್ಕಳ ಪ್ರಸ್ತುತಿ, ವಿಠಲ್‍ವಯಲಿನ್- ಮುರಾರಿವಯೊಲ ದ್ವಂದ್ವ, ‘ಕಿರಣ್’ ದ್ವಯರ ಗಾಯನ-ಬಾನ್ಸುರಿ ದ್ವಂದ್ವ , ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿದ್ದಕ್ಕಾಗಿ ರಂಜನಿ ಮೆಮೋರಿಯಲ್ ಟ್ರಸ್ಟ್ ಅನ್ನು ಮೊದಲಾಗಿ ಅಭಿನಂದಿಸುತ್ತೇನೆ.

36 ವರ್ಷಗಳ ಹಿಂದೆ ಒಂದು ಉಜ್ವಲವಾದ ನಕ್ಷತ್ರ ಹುಟ್ಟಿ, 29 ವರ್ಷಗಳ ಕಾಲ ಬೆಳಗಿ ಮಾಯವಾಯಿತು. ಈ ಘಟನೆ ಕೊಡುವ ಸಂದೇಶ ಏನು? ಪ್ರತಿಭೆಗೆ ಸೀಮೆ ಇಲ್ಲ ಅದು ನಿರಂತರವಾಗಿ ಬೆಳೆಯುವಂತದ್ದು ಅಂತ ಆಕೆ ತೋರಿಸಿಕೊಟ್ಟಿದ್ದಾಳೆ. ಪ್ರಾಯಕ್ಕೆ ಮೀರಿದ ಜ್ಞಾನ ಅವಳದು. ಯಾಕೆ 30 ವರ್ಷದೊಳಗೆ ಅವಳು ಎಲ್ಲಾ ಮುಗಿಸಿಕೊಂಡು ಹೋಗಿಬಿಟ್ಟಳು? ಈ ಪ್ರಶ್ನೆಗೆ ಉತ್ತರ ಇಲ್ಲ. ಇದನ್ನು ವಿಧಿಯ ಆಟ ಅಂತ ಹೇಳುತ್ತೇವೆ; ಯಾವ ತರ್ಕಗಳಿಗೂ ನಿಲುಕುವಂತಾದ್ದು ಅಲ್ಲ ಅದು.

ಹೈಜಂಪ್‍ನಲ್ಲಿ ಒಂದು ಅಡ್ಡ ಕೋಲು ಇಡುತ್ತಾರಲ್ಲ, ಅದು ಅಷ್ಟೇ ಇತ್ತು ಎಷ್ಟೋ ಕಾಲದಿಂದಲೂ. ಎಲ್ಲರೂ ಅಷ್ಟೇ ಎತ್ತರ ಜಿಗಿಯುತ್ತಿದ್ದರು(ಇನ್ನು ಮುಗಿಯಿತು ಎಂದುಕೊಳ್ಳುತ್ತಿದ್ದರು). ಭಗವಂತ ಆಡಿದ ಆಟ ಅಂದರೆ ಹೈಜಂಪ್‍ನ ಅಡ್ಡ ಕೋಲನ್ನು ಮೆಲ್ಲನೆ ಮೇಲೆ ಎತ್ತಿ ಇಟ್ಟು ಹೋದದ್ದು(ಎತ್ತರದ ಕುಣಿಕೆಯಲ್ಲಿ). ಎಲ್ಲರೂ ಮೊದಲಿನಿಂದಲೂ ಒಂದೇ ಎತ್ತರಕ್ಕೆ ಹಾರುತ್ತಾ ಇದ್ದರಲ್ಲ- ಒಂದೇ ಸಲಕ್ಕೆ ಜಿಗಿಯಬೇಕಾದ ಎತ್ತರವನ್ನು ಹೆಚ್ಚು ಮಾಡಿದಾಗ ಎಲ್ಲರೂ ಸುಮ್ಮನೆ ಮೇಲೆ ಕೆಳಗೆ ನೋಡಿದರು. ಭಗವಂತ ಅದನ್ನು ದಾಟಲು ರಂಜನಿ ಎನ್ನುವ ಮಗುವನ್ನೂ ಕಳಿಸಿಕೊಟ್ಟ. ಹೀಗೆ ಬಂದ ರಂಜನಿ ಬೇಗನೆ ಬಹಳ ಸಲೀಸಾಗಿ ಎತ್ತರವನ್ನು ದಾಟಿದಳು. ನಾವು ದಾಟುತ್ತಾ ಹೋದಹಾಗೆಯೇ ದಾಟಬೇಕಾಗಿರುವ ಕೋಲನ್ನು ಎತ್ತರೆತ್ತರದ ಕುಣಿಕೆಯಲ್ಲಿ ಇಡುತ್ತಾರೆ. ರಂಜನಿ ಹೀಗೆ ಬಹಳಷ್ಟು ಎತ್ತರದ ವರೆಗೆ ಸಾಧಿಸಿ ಹೋಗಿಬಿಟ್ಟಳು ಮತ್ತು ಈಗಿನ ಮಕ್ಕಳಿಗೆ ಜಿಗಿದು ದಾಟಬೇಕಾಗಿರುವ ಎತ್ತರದ ಸವಾಲನ್ನು ತೋರಿಸಿಕೊಟ್ಟಳು. ಇನ್ನೂ ಬದುಕಿ ಉಳಿದಿದ್ದರೆ ಇನ್ನೂ ಹೆಚ್ಚು ಎತ್ತರವನ್ನು ದಾಟಿ ತೋರಿಸುತ್ತಿದ್ದಳು. ಆ ರೀತಿಯ ಸವಾಲನ್ನು ಕೊಡದೇ ಹೋದರೆ ಮಕ್ಕಳು ಇದ್ದ ಅದೇ ಎತ್ತರವನ್ನು ಜಿಗಿದು ಹೋಗಿಬಿಡುತ್ತಾರೆ. ಆದರೆ 30ರ ವಯಸ್ಸಿಗೇ ಅವಳು ಹೋಗಿಬಿಟ್ಟಳೆಂದರೆ – ಪ್ರಾಯಶಃ ದೇವರು ಅಷ್ಟೇ ಹೇಳಿದ್ದು ಅವಳಿಗೆ- You become the beacon for the elders to show and youngsters to follow. ಹಾಗೆ ಈ ಪ್ರದೇಶದ ಜನರಿಗೆ, ‘ಮಕ್ಕಳಿಗೆ ಹೇಗೆ ಹೈಜಂಪ್ ನ ಅಡ್ಡ ಬಡಿಗೆಯನ್ನು ದಾಟಿ ಮುಂದೆ ಹೋಗುವುದು ಅಂತ ತೋರಿಸಿಕೊಟ್ಟು ಬಾ’ ಅಂತ ಭಗವಂತ ಹೇಳಿದ. ಸ್ವಾಮೀ ವಿವೇಕಾನಂದರಿಗೆ, ಶಂಕರಾಚಾರ್ಯರಿಗೆ ಎಲ್ಲ ಹಾಗೆ ಬಹಳ ಸಣ್ಣ ಅವಧಿ ಇದ್ದದ್ದು. ನೀನು ಎಳೆಯರಿಗೆ ಅನುಸರಿಸಲು ಒಂದು ಬೀಕನ್ ಆಗಿ ಉಳಿಯಬೇಕು ಎಂಬುದೇ ಇದರ ಸಂದೇಶ.

ರಂಜನಿಗೆ ಹೀಗೆ ಅಡ್ಡ ಬಡಿಗೆಯನ್ನು ದಾಟಲು ಅನಕೂಲವಾಗುವಂತೆ ಸಿಕ್ಕಿದ ಅನುಕೂಲತೆಗಳು ಏನು ಎಂಬುದನ್ನೂ ಒಂದು ಪಾಠವಾಗಿ ನಾವು ತೆಗೆದುಕೊಳ್ಳಬೇಕು. ರಂಜನಿಗೆ ಒಂದು ಪ್ರತಿಭೆಯ ಪೋಷಣೆಗೆ ಬೇಕಾದ ಎಲ್ಲವೂ ಅಚ್ಚುಕಟ್ಟಾಗಿ ಸಿಕ್ಕಿದೆ. ಪ್ರತಿಭೆಯ ಪೋಷಣೆಗೆ ಬೇಕಾದದ್ದು ನಾಲ್ಕು – Identify, educate, promote and show

ಪ್ರತಿಭೆಯನ್ನು ಮುಂದಕ್ಕೆ ತರುವುದು ಬಹಳ ಕಷ್ಟದ ಕೆಲಸ. ಒಂದೋ ಅದು Hyberbole ಆಗಿ ಬಿಡುತ್ತದೆ ಅಥವಾ under-buy ಆಗಿ ಬಿಡುತ್ತದೆ. ಅದರ ಸಹಜ ಸ್ಥಿತಿಯನ್ನು ಇಟ್ಟುಕೊಂಡು ಬೆಳೆಸುವುದು ಬಹಳ ಸ್ಥಿತಿಸ್ಥಾಪಕತ್ವ ಇರುವ ಮನಸ್ಸಿನ ಹೆಬ್ಬಾರರಂತಹವರಿಗೆ ಮಾತ್ರ ಸಾಧ್ಯ ಇದೆ. ಎಷ್ಟೋ ಜನ ಪ್ರತಿಭಾವಂತ ಎಳೆಯರಿದ್ದರು. ಅವರೆಲ್ಲಾ ಎಲ್ಲಿ ಹೋದರು ? ಬೆಳೆದು ದೊಡ್ಡ ಕಲಾವಿದನಾದರೂ ತನ್ನನ್ನೇ ಬೆಳೆಸಿದ ತಂದೆಯನ್ನು ಸಭೆಯಿಂದ ಹೊರಗೆ ಹೋಗಲು ಹೇಳಿದ ಮಾಲಿ(ಟಿ ಆರ್ ಮಹಾಲಿಂಗಂ) ಯಾಕೆ ಹಾಗಾದ?

ಇಂತಹ ಕಠಿಣ ಸವಾಲನ್ನು ದಾಟಿಹೋದ ಹೆಬ್ಬಾರರಿಗೆ ಕೂಡ ಬಳಿಕ ತನ್ನಿಂದ ತಪ್ಪಾಯಿತೇನೋ ಅಂತ ಪಶ್ಚಾತ್ತಾಪ ಆದದ್ದಿದೆ. ನಾನಾಗಿದ್ದರೂ ಅದನ್ನೇ ಪಡುತ್ತಾ ಇದ್ದೆ. ಯಾಕೆಂದರೆ ನಾವು ಯೋಚನೆ ಮಾಡುವುದು ಹೇಗೆ ಅಂದರೆ Art is Art. Art is bound by the theory of Art. ಬೇರೆ ಯಾವ Religious matters, morality ಅದಕ್ಕೆ apply ಆಗುವುದಿಲ್ಲ. ಯಾಕೆಂದರೆ ಇದು ಕಲೆ ಅಂದರೆ ಕಲೆ ಮಾತ್ರ ಹೊರತು ಇದು ದೈವ ಸಾಕ್ಷಾತ್ಕಾರಕ್ಕೋ, ಪ್ರಚಾರಕ್ಕೋ ಆಗಲಿಕ್ಕೆ ಸಾಧ್ಯವೇ ಇಲ್ಲ. ಕಲೆಯನ್ನು ಬೇರೆ ಯಾವುದರ ಜೊತೆ ಕೂಡ ಲಿಂಕ್ ಮಾಡಿ ನೋಡಲು ಸಾಧ್ಯ ಇಲ್ಲ.

ಆದರೆ ಎಲ್ಲ ಮನಸ್ಸುಗಳು ಹಾಗೆ ಇರುವುದಿಲ್ಲ. ಯಾಕೆಂದರೆ ಸಂಗೀತದ ಮೂಲಪಾಠದಲ್ಲಿ ನಮಗೆ ಸಿಕ್ಕಿದ ಪಾಠ ಅಂದರೆ ಅದು ದೈವಸಾಕ್ಷಾತ್ಕಾರಕ್ಕೆ ಇರುವ ಮಾರ್ಗ ಅಂತ ! ಇದು ಗಟ್ಟಿಯಾಗಿ ತಲೆಯಲ್ಲಿ ಕುಳಿತುಕೊಂಡಿರುತ್ತದೆ; ಅದರಿಂದ ಹೊರಗೆ ಬರಲು ಆಗುವುದಿಲ್ಲ; ಯಾವ TMK ಬರಲಿ, ಯಾರೇ ಬರಲಿ. ರಂಜನಿ ಧರ್ಮದ ಜೊತೆ ಅದನ್ನು ಲಿಂಕ್ ಮಾಡದಿದ್ದರೂ ಕೂಡ ಅದನ್ನು ಅಧ್ಯಾತ್ಮದ ಜೊತೆ ಸೇರಿಸಿ “ಸಂಗೀತ ಮಾಡಬೇಕಾದದ್ದು ಇಷ್ಟೇ ಅಲ್ಲ ಅಪ್ಪ, ಹಾಡುವುದು ಮಾತ್ರ ಅಲ್ಲ, ಇನ್ನೂ, ನಾಲ್ಕನೆಯ ಆಯಾಮ ಇದೆ ಅದಕ್ಕೆ….” ಅಂತ ಹೇಳಿದಳು. ಇಂತಹಾ ಒಳ ಸಂಘರ್ಷಕ್ಕೆ ಹೆಬ್ಬಾರರು ಬಹಳ ದುಃಖಪಟ್ಟರು. I failed to think about spiritual side ಅಂತ. ಇಷ್ಟು ಜಾಗ್ರತೆ ಮಾಡಿ, ಒಂದು ಅದ್ಭುತವಾದ ಪ್ರತಿಭೆಯನ್ನು ಬೆಳೆಸುವ ಸಾಮಥ್ರ್ಯ ಇರುವ ಹೆಬ್ಬಾರರು ಕೊನೆಗೆ, ತಾನು ತಪ್ಪು ಮಾಡಿದೆನೋ ಅಂತ ಬೇಜಾರಪಟ್ಟರು. ತನ್ನ ನಿರೀಕ್ಷೆ, ಮುಕ್ತವಾಗಿ ಸಾಗಬೇಕಾಗಿದ್ದ ಮನೋಧರ್ಮವನ್ನು ತಡೆಯಿತೇನೋ ಎಂದು ಮರುಕಪಟ್ಟರು. ಇದೆಲ್ಲ ಇರುವಂತಹದೇ. ಆದರೆ ಒಂದು ಪ್ರತಿಭೆ ಚಿಗುರಿ ಫಲಕೊಡಬೇಕಾದರೆ ಮೊದಲೇ ಹೇಳಿದ ನಾಲ್ಕು ಅಂಶಗಳನ್ನೂ ಇವರು ಪ್ರಾಮಾಣಿಕವಾಗಿ ಕೊಟ್ಟಿದ್ದಾರೆ. ಅದು ಕೊಡದೆಹೋದರೆ ಯಾವ ಪ್ರತಿಭೆಯೂ ಮೇಲೆ ಬರಲು ಸಾಧ್ಯವೇ ಇಲ್ಲ. ಪ್ರಾಮಾಣಿಕವೂ, ಕಠಿಣವೂ ಆದ ನಿಲುವುಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಆದ್ದರಿಂದಲೇ ಪ್ರತಿಭೆಯನ್ನು ಬೆಳೆಸುವುದು ಬಹಳ ಕಷ್ಟದ ಕೆಲಸ.

ಪ್ರತಿಭೆ ಬೆಳೆಯಲು ಅವಕಾಶಬೇಕು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಹರಿಪ್ರಸಾದ್ ಚೌರಾಸಿಯಾ. ಅವರ ಪ್ರತಿಭೆಯನ್ನು ಗುರುತಿಸಿದ್ದು ದೇವಾಲಯದ ಓರ್ವ ಪೂಜಾರಿ ! ಚೌರಾಸಿಯಾರ ತಂದೆ ಒಬ್ಬ ಪೈಲ್ವಾನ. ಮಗನನ್ನೂ ಪೈಲ್ವಾನನನ್ನಾಗಿಯೇ ಬೆಳೆಸಿದ್ದರು. ಇವನಿಗೆ ಅದರಲ್ಲಿ ಪ್ರಶಸ್ತಿಗಳೂ ಬಂದಿದ್ದವು. ಆದರೆ ಪೂಜಾರಿ ಇವನ ಸಂಗೀತದ ಪ್ರತಿಭೆಯನ್ನು ಗುರುತಿಸಿದ, ಸಂಗೀತದ ಗುರುಗಳ ಹತ್ತಿರ ಕಳಿಸಿದ. ಆ ಗುರುಗಳು ಕೂಡ ಇವನ ಪ್ರತಿಭೆಯನ್ನು ಗುರುತಿಸಿ ಹೆಚ್ಚಿನ ಕಲಿಕೆಗಾಗಿ ಮುಂಬಯಿಗೆ ಕಳಿಸಿದರು. ತನ್ನ 17ನೇ ವಯಸ್ಸಿಗೆ ಆಕಾಶವಾಣಿಯಲ್ಲಿ ಆಯ್ಕೆಯಾದ. ಅಲ್ಲಿಂದ ಅವನಿಗೆ ಒಡಿಸ್ಸಾಗೆ ವರ್ಗಾವಣೆ ಆಯಿತು. ಅಲ್ಲಿ ಕೃಷ್ಣಮೂರ್ತಿ ಅಂತ ಒಬ್ಬರು ಇದ್ದರು. ಅವರು ಸಂಗೀತ ಕಲಿಯಲು ಎಲ್ಲ ಅನುಕೂಲ ಮಾಡಿಕೊಟ್ಟರು…..ಹೀಗೆ ಅವನಿಗೆ ಎಲ್ಲ ಕಡೆ ಅವಕಾಶಗಳು ಸಿಗುತ್ತಾ ಹೋದವು. ಇದು ಅವನ ಸೌಭಾಗ್ಯ. ಬೆಳೆಯುವ ಪ್ರತಿಭೆಗೆ ಸಿಗಬೇಕಾದದ್ದು ಇದು.

ರಂಜನಿ ಹೈಜಂಪ್‍ನ ಎತ್ತರವನ್ನು ದಾಟಿ ಹೋಗಲು ತನಗೆ ಈ ರೀತಿ ಸಿಕ್ಕಿರುವ ಅನುಕೂಲತೆಗಳು ಕಾರಣವಾಯಿತು ಅಂತ ಮಾಡಿತೋರಿಸಿದ್ದಾಳೆ. ಮೊದಲಿದ್ದ ಒಂದು ಮಿತಿ ಇತ್ತಲ್ಲ, ಅದು ಕಳಚಿ ಬಿತ್ತು. ಆಮೇಲೆ ಬಂದ ಎಲ್ಲ ಮಕ್ಕಳೂ ಆರಂಭಿಸಿದ್ದೇ ಮುಂದಿನ ಎತ್ತರದಿಂದ. ನಿನ್ನೆ ಹಾಡಿದ ಅವಳ ವಿದ್ಯಾರ್ಥಿನಿಯರನ್ನು(ಅರ್ಚನ ಸಮನ್ವಿ) ಕೇಳಿದ್ದೇವೆ. ರಂಜನಿ 5 ಅಂಗುಲ ಎತ್ತರಕ್ಕೆ ಬಡಿಗೆಯನ್ನು ಏರಿಸಿ ಇಟ್ಟಿದ್ದರೆ ಇವರು ಈಗಾಗಲೇ 4 ಅಂಗುಲ ದಾಟಿ ಆಗಿದೆ. ಸ್ವಲ್ಪ ಸಮಯಲ್ಲಿ ಅವರು ಆ ಎತ್ತರವನ್ನೂ ದಾಟುತ್ತಾರೆ. ಹೀಗೆ ರಂಜನಿಯ ನೇರ ಪ್ರಭಾವ ಇಲ್ಲಿನ ಎಳೆಯರ ಮೇಲೆ ಆಗಿದೆ. ಅವಳು ಒಂದು ಮಾದರಿಯಾಗಿದ್ದಾಳೆ. ಒಂದು ಶಾಸ್ತ್ರೀಯ ಕ್ರೃತಿಯನ್ನಾಗಲೀ, ಭಾವಗೀತೆಯನ್ನಾಗಲೀ, ಭಕ್ತಿಗೀತೆಯನ್ನಾಗಲಿ ಹೇಗೆ ಹಾಡಬಹುದು ಅಂತ ಒಂದು ಮಾದರಿಯಾಗಿ ಅವಳು ಇದ್ದಾಳೆ.

ನಮ್ಮ ಸಮಾಜ ಸಂಗೀತದ ಪ್ರತಿಭೆಯನ್ನು ಗುರುತಿಸಿದರೂ ಅದನ್ನು ಎಜುಕೇಟ್ ಮಾಡಿ ಬೆಳೆಸುವುದು ವಿರಳ. ಇಂಜಿನಿಯರ್/ಡಾಕ್ಟರ್ ಓದುವುದನ್ನೇ ಹಿರಿಯರು ಪ್ರೋತ್ಸಾಹಿಸುತ್ತಾರೆ. ನಾವು ಹಿರಿಯರ ಮನಸ್ಸನ್ನು ಬದಲಾಯಿಸಬೇಕು. ಕಲೆಯಲ್ಲಿ ಉಳಿದು ಜೀವನ ನಿರ್ವಹಣೆ ಕಷ್ಟ ಎಂಬ ಮಾತಿದೆ. ಆದರೆ ಎಷ್ಟೋ ಜನ ಐಟಿ ಬಿಟಿ ಉದ್ಯೋಗ ಬಿಟ್ಟು ಚೆನ್ನೈಯಲ್ಲಿ ಸಂಗೀತಕ್ಕಾಗಿ ನೆಲೆಸಿದ್ದಾರೆ. ಆದರೆ ಅದು ಸುಲಭದ ದಾರಿ ಅಲ್ಲ. ನಾನು ಮಾಡಬಲ್ಲೆ ಅಂತ ಮಾಡಿ ತೋರಿಸುವ ಛಲ ಇರಬೇಕು. ಆಗ ಕಲೆ ಒಂದು ಸುಂದರ ಮಾಧ್ಯಮ. ರಾತ್ರಿ ಇಡೀ ಕೆಲಸಮಾಡಿ ಸಂಪಾದಿಸುವ ಐಟಿ ಉದ್ಯೋಗ, ಅದರಲ್ಲಿ ಸಂತೋಷವೂ ಇಲ್ಲ. ಸುಂದರತೆಯೂ ಒಲ್ಲ. ಕಲೆಯಲ್ಲಿ ಸಂತೋಷವನ್ನು ಹರಡಿಸುತ್ತೇವೆ. ಸಂತೋಷವನ್ನು ಹರಡಿದ್ದಕ್ಕಾಗಿ ದುಡ್ಡು ಸಂಪಾದಿಸುತ್ತೇವೆ. ಅಂದರೆ ಎಲ್ಲರೂ ಸಂಗೀತಗಾರರೇ ಆಗಬೇಕು, ಉಳಿದ ಉದ್ಯೋಗಗಳು ಕಡಿಮೆಯವು ಅಂತ ಹೇಳುತ್ತಿಲ್ಲ. ವ್ಯತ್ಯಾಸವನ್ನು ಹೇಳುತ್ತಿದ್ದೇನೆ ಅಷ್ಟೆ. ಹೇಗೆ ನಾವು ಬೇರೆ ಎಲ್ಲವನ್ನೂ ಬಿಟ್ಟು ಐಟಿ ಬಿಟಿ ಎಂಬ ಒಂದೇ ದಾರಿಯಲ್ಲಿ ಹೋಗುತ್ತಾ ಇರುವ ಬದಲಿಗೆ ಇದನ್ನು ಕೂಡ ಮಾಡಲು ಸಾಧ್ಯ ಇದೆ ಅಂತ ಹೇಳಿದೆ. ಅದಕ್ಕೆ ರಂಜನಿ ಮೆಮೋರಿಯಲ್ ಟ್ರಸ್ಟ್‍ನ ಇಂತಹ ಕಾರ್ಯಕ್ರಮಗಳೂ ಪ್ರೇರಕ.

ಒಂದು ಅಪ್ರತಿಮ ಪ್ರತಿಭೆಯನ್ನು ಕಳೆದುಕೊಂಡ ಕುಟುಂಬ ಮತ್ತೆ ಮೇಲೆ ಏಳಲು ಸಾಧ್ಯವಿಲ್ಲ; ಇನ್ನು ಏನೂ ಮಾಡಲಿಕ್ಕೆ ಇಲ್ಲವೆಂದು ಆ ತರಹದ ಆಲೋಚneಗಳು ಬರುವುದು ಸಹಜ. ಅದರಿಂದ ಜೀವ ಆಸಕ್ತಿಯನ್ನು ಕಳೆದುಕೊಳ್ಳುತ್ತದೆ. ಆದರೆ ಹೆಬ್ಬಾರರ ವಿಷಯದಲ್ಲಿ ಅದು ಬೇರೆ. ಸಣ್ಣ ಸಮಯದ ವರೆಗೆ ಮಾತ್ರ ಹೆಬ್ಬಾರ ದಂಪತಿಗಳನ್ನು ಅದು ಕಾಡಿದೆ. ಮತ್ತೆ ಅವರು ಅದನ್ನು ಬಿಟ್ಟರು. ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದರು; ಸುಟ್ಟರೂ ಅದು ಬೂದಿಯಿಂದ ಎದ್ದು ಬಂದು ಮತ್ತೆ ಹಾರುತ್ತದಂತೆ. ಅದಕ್ಕೆ ಬೇರೆ ಮಾರ್ಗ ಇದೆ; ತನಗೆ ಶಕ್ತಿ ಇದೆ, ಮನಸ್ಸಿದೆ, ಸಮಾಜಕ್ಕೆ ಅದು ತಲುಪಬೇಕು ಎಂಬ ದೃಷ್ಟಿಯಿಟ್ಟುಕೊಂಡು ರಂಜನಿಯ ಹೆಸರಿನಲ್ಲಿ ಒಂದು ಚಾರಿಟಿ ಟ್ರಸ್ಟ್ ಮಾಡಿದರು. ಎಲ್ಲರಿಗಿಂತ ಭಿನ್ನವಾಗಿ ಯಾವ ಗುರುವೂ ಮಾಡದೆ ಇರುವಷ್ಟು ತನ್ನ ವಿದ್ಯಾರ್ಥಿಗಳಿಗಾಗಿ ಮಾಡಿದರು. ತಂದೆತಾಯಿಗೆ ಕೂಡ ಮಾಡಲು ಸಾಧ್ಯ ಇಲ್ಲ. ತನ್ನ ವಿದ್ಯಾರ್ಥಿಗಳನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಕಲಿಯಲು ಅವಕಾಶ ಮಾಡಿಕೊಟ್ಟು, exposure ಕೊಟ್ಟು, ಅಲ್ಲಿಂದಲೇ ಹತ್ತಾರು ಕಡೆ ಕಾರ್ಯಕ್ರಮ ಸಿಗುವ ಹಾಗೆ ಮಾಡಿ…, ಯಾರು ಮಾಡುತ್ತಾರೆ ಇಷ್ಟೆಲ್ಲ ! ಆದರೆ ಇವರು ಮಾಡಿದ್ದಾರೆ. ಎಲ್ಲಿಯೋ ಯಾವುದೋ ಊರಿನಲ್ಲಿರುವ ಹಾರ್ಮೋನಿಯಂ ಕಲಿಯುವ ಓರ್ವ ಪ್ರತಿಭಾನ್ವಿತನಿಗೂ ಇವರು ವಿದ್ಯಾರ್ಥಿವೇತನ ಕೊಟ್ಟಿದ್ದಾರೆ. ಪ್ರತಿಭೆಯನ್ನು ಹುಡುಕಿ ಹುಡುಕಿ ಗುರುತಿಸಿದ್ದಾರೆ. ಇದು ಬಹಳ ದೊಡ್ಡ ವಿಚಾರ. ಈ ರೀತಿಯ ತ್ಸಾಹ ತನ್ನ ಮಗಳಿಗೆ ಸಿಗದಿದ್ದರೂ, ಸಾಂಸ್ಕತಿಕವಾದ, ಸಂಗೀತಮಯವಾದ ಒಂದು ಸಮಾಜವನ್ನು ನಿರ್ಮಾಣ ಮಾಡುತ್ತೇನೆ ಅಂತ ತೋರಿಸುತ್ತಿದ್ದಾರೆ.ಈ ಪ್ರದೇಶದಲ್ಲಿ ಕಲಾಸಕ್ತಿ ಬೆಳೆಯಲಿ, ಒಳ್ಳೆಯ ಕಲಾವಿದರು ಹುಟ್ಟಿ ಬರಲಿ ಎಂದು ಹಾರೈಸುತ್ತೇನೆ. ಇಂತಹಾ ಆಶೋತ್ತರಗಳನ್ನು ಗುಣಾತ್ಮಕವಾಗಿ ಕಾರ್ಯಗತಗೊಳಿಸುತ್ತಿರುವ ರಂಜನಿ ಮೆಮೋರಿಯಲ್ ಟ್ರಸ್ಟ್ಟ್‍ನ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.

( ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ಟ್ ನ ಏಳು ದಿನಗಳ( ಸೆ.3 ರಿಂದ 9 ರವರೆಗೆ) ವೈವಿಧ್ಯಮಯ ಕಾರ್ಯಕ್ರಮಗಳ ಕೊನೆಯದಿನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಬಂದು ನುಡಿದ ಹಿರಿಯ ಕಲಾ ವಿಮರ್ಶಕ ಶ್ರೀ ಎ ಈಶ್ವರಯ್ಯನವರ ಮಾತುಗಳ ಸಾರಾಂಶ. ಸಂಗ್ರಹಿಸಿದವರು: ಶಾರದಾ ಉಪಾಧ್ಯಾಯ)

Leave a Reply

Your email address will not be published. Required fields are marked *