ಒಂದು ಊರು ಒಳ್ಳೆಯದಾಗಬೇಕಾದರೆ ಆ ಊರಿನಲ್ಲಿ ಒಳ್ಳೆಯವರು ಹೆಚ್ಚಿನ ಸಂಖ್ಯೆಯಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಇದಕ್ಕೆ ಸಾಕ್ಷಿಯಾಗಿ ರಾಮಾಯಣದ ರಾಮರಾಜ್ಯದ ಕಲ್ಪನೆ ನಮ್ಮ ಮುಂದೆ ಬರುತ್ತದೆ. ರಾಮರಾಜ್ಯದಲ್ಲಿ ಎಲ್ಲರೂ ಒಳ್ಳೆಯವರೇ ಆದರೆ ರಾಮನಿಗೆ ರಾಮನ ಆಡಳಿತ ಅದೆಷ್ಟು ಸುಲಭ? ಹೀಗಿದ್ದರೆ ರಾಮನ ಅವಶ್ಯಕತೆಯಿದೆಯೇ? ಎಲ್ಲರೂ ಸುಖಪಟ್ಟುಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳುವುದಾದರೆ ಆಡಳಿತವನ್ನು ಮಾಡುವುದಕ್ಕಾದರೂ ಏನಿದೆ? ಒಂದು ಊರು ಕೆಟ್ಟಿದೆ ಎನ್ನಬೇಕಾದರೆ ಅಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಿದೆ ಎಂದು ಅರ್ಥವೇ? ಇರಲಾರದು. ನನಗೆ ಅನಿಸುವಂತೆ ಒಂದು ಊರು ಕೆಟ್ಟದಾಗುವುದಕ್ಕೆ ‘ಒಳ್ಳೆಯವರೇ’ ಕಾರಣ ಎಂದು. ಯಾಕೆಂದರೆ ಒಳ್ಳೆಯವರು ತಮ್ಮ ‘ಜಾಣ ಮೌನ’ದಿಂದ ಕೆಟ್ಟವರ ಅಥವಾ ಕೆಟ್ಟುಹೋದುದರ ಬಗ್ಗೆ ಟೀಕಿಸದೆ ಅಥವಾ ವಿಮರ್ಶಿಸದೇ ಇದ್ದುದೇ ಕಾರಣ. ಇದರಿಂದ ಕೆಟ್ಟವರ ಕೆಲಸಕ್ಕೆ ವಿರೋಧ ಸಿಗದೇ ಹೋದುದರಿಂದ ಅವರ ಕೆಲಸಕ್ಕೆ ಹೆಚ್ಚು ಇಂಬು ದೊರೆತಂತಾಗುತ್ತದೆ. ನಾವು ಜಾಣರಾಗಬೇಕೆಂಬುದೇನೋ ನಿಜ. ಆದರೆ ತಪ್ಪನ್ನು ಅಥವಾ ಕೆಟ್ಟದ್ದನ್ನು ಅಥವಾ ಒಳ್ಳೆಯದನ್ನು ವಿಮರ್ಶಿಸಿ, ತಿಳಿ ಹೇಳುವ ಬುದ್ಧಿಯನ್ನು ಪ್ರಯೋಗಿಸದೇ ಹೋದರೆ ಅದರ ಪರಿಣಾಮ ಖಂಡಿತವಾಗಿಯೂ ಒಳ್ಳೆಯದಾಗಲಾರದು. ಆದುದರಿಂದ ಊರು ಒಳ್ಳೆಯದಾಗಬೇಕಾದರೆ ವಿಮರ್ಶಾ ವಿವೇಕಶಾಲಿಗಳಾದ ಒಳ್ಳೆಯವರು ಇರಬೇಕು.
ನಾನಿಷ್ಟು ಪೀಠಿಕೆ ಬರೆದದ್ದು ವಿಮರ್ಶೆಯನ್ನು ಮಾಡುವುದು ಅಗತ್ಯ ಎಂಬ ವಿಷಯವನ್ನು ಮುಂದಿಟ್ಟುಕೊಂಡು. ನಮ್ಮ ಊರಿನಲ್ಲಿ ನಿಧಾನವಾಗಿ ಮತ್ತು ಗಟ್ಟಿಮುಟ್ಟಾಗಿ ಬೆಳೆಯುತ್ತಿರುವ ಶಾಸ್ತ್ರೀಯ ಸಂಗೀತದ ವಾತಾವರಣವನ್ನು ನೋಡುತ್ತಿದ್ದೇವೆ. ಈಶ್ವರಯ್ಯನವರ ಪ್ರಯತ್ನದಿಂದ ಉದಯವಾಣಿಯಂತಹ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿಯ ಕಲಾವಿಹಾರ ಪುಟಗಳಲ್ಲಿ ಸಂಗೀತವೇ ಮೊದಲಾದ ಹಲವಾರು ಕಲಾ ಪ್ರಕಾರಗಳ ಬಗ್ಗೆ ವಿಸ್ತತವಾದ ಲೇಖನಗಳು ಬಂದಿವೆ. ಯಕ್ಷಗಾನದ ಬಗ್ಗೆ ಬಂದಂತಹ ಯಾವುದೇ ವರದಿ, ಸಮೀಕ್ಷೆ, ವಿಮರ್ಶೆ ಮತ್ತು ಲೇಖನಗಳಿಗೆ ಈ ಪತ್ರಿಕೆಯ ಪುಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಯಕ್ಷಗಾನ ರಸಿಕ ವರ್ಗದ ಮುಕ್ತ ಚರ್ಚೆ ನಡೆದಿದೆ. ಇದರಿಂದ ಯುಕ್ತಾಯುಕ್ತ ಚಿಂತನೆಗೆ ಅವಕಾಶವಾಗಿದೆ. ಇದರ ಫಲಿತಾಂಶ ಮುಂದಿನ ಪೀಳಿಗಗೇ ಬಿಟ್ಟದ್ದು. ಶಾಸ್ತ್ರೀಯ ಸಂಗೀತದ ಬಗ್ಗೆ ಬಂದ ಲೇಖನಗಳಿಗೆÉ ಮಾತ್ರ ನಮ್ಮ ಊರಿನ ಸಂಗೀತ ರಸಿಕರಿಂದ ಫಲಪ್ರದವಾದ ಯಾವುದೇ ಮುಕ್ತ ಚರ್ಚೆ ನಡೆದಿಲ್ಲ ಎಂದು ನನ್ನ ಗಮನಕ್ಕೆ ಬಂದ ಅಂಶ. ನಮ್ಮ ಊರಿನ ಸಂಗೀತ ರಸಿಕರು ಜಾಣರೋ ಅಥವಾ ‘ಜಾಣ ಮೌನಿ’ಗಳೋ? ಸಂಗೀತಕ್ಕೆ ಸಂಬಂಧಿಸಿದ ಇಷ್ಟೊಂದು ಲೇಖನಗಳು ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪ್ರಾಯಶಃ ಇಷ್ಟೊಂದು ಸಂಖ್ಯೆಯಲ್ಲಿ ಖಂಡಿತಾ ಬಂದಿರಲಾರದು. ಇದು ಶ್ರೀ ಈಶ್ವರಯ್ಯನವರ ವಿಕ್ರಮ ಸಾಹಸವೇ ಸರಿ ಎಂದು ನಾನು ಅಂದುಕೊಳ್ಳುತ್ತೇನೆ.
ಅವರು ಉದಯವಾಣಿಯಿಂದ ನಿವೃತ್ತಿ ಹೊಂದಿದ ಮಾಸದಲ್ಲೇ ರಾಗಧನಶ್ರೀ ಪತ್ರಿಕೆ ಸಂಪಾದಕರಾಗಿ ಏಳು ವರ್ಷಗಳಿಂದ ಶ್ರಮಿಸಿದ್ದಾರೆ. ಪ್ರಸಕ್ತ ವರ್ಷದಿಂದ ನನ್ನ ಬಳಿ ಈ ಜವಾಬ್ದಾರಿಯನ್ನು ಕೊಟ್ಟು ಸಂಗೀತ ಮಾಸಪತ್ರಿಕೆಯ ಯುಕ್ತಾಯುಕ್ತತೆಯನ್ನು ತಿಳಿಯಲು ನನಗೆ ವಹಿಸಿಕೊಟ್ಟಿದ್ದಾರೆ. ಎಷ್ಟು ವಿಧದ ಮನವಿ ಹಾಗೂ ಒತ್ತಾಯವನ್ನು ಹೇರಿದರೂ ನಮ್ಮ ಶ್ರೋತೃವರ್ಗ ಬರೆಯುವ ಅಥವಾ ಪ್ರತಿಕ್ರಿಯೆ ನೀಡದ ಮೌನಕ್ಕೆ ಏಕೆ ಇಳಿದರೋ ನನಗೆ ತಿಳಿಯದಾಗಿದೆ. ಇದು ನಮ್ಮ ಕೀಳರಿಮೆಯೇ? ಅಥವಾ ನನಗೆ ಬರೆಯಲು ಗೊತ್ತಿಲ್ಲ; ಭಾಷೆಯ ಮೇಲೆ ಹಿಡಿತವಿಲ್ಲ ಎಂಬ ನೆಪವೊಡ್ಡಿ ಮಾಡುವ ಪಲಾಯನ ವಾದವೇ? ಸಂಗೀತವನ್ನು ಹಾಡಬಲ್ಲೆವಾದರೆ ಅಥವಾ ನುಡಿಸಬಲ್ಲೆವಾದರೆ ನಮಗೆ ಅದರ ಒಳಗು ಹೊರಗುಗಳು ಗೊತ್ತಿರಲೇಬೇಕಷ್ಟೇ? ನಮ್ಮ ಮನಸ್ಸಿಗಾದ ಈ ಅನುಭವವನ್ನು ಮಾತನಲ್ಲಿ ಇನ್ನೊಬ್ಬರಿಗೆ ತಿಳಿಸಬಲ್ಲೆವಾದರೆ ಬರೆಯಲು ಅಳುಕುವುದು ಏತಕ್ಕೆ? ಬರೆಯದೆ ಹೋದರೆ ಬರವಣಿಗೆಯು ಯಾರಿಗೂ ಸಿದ್ಧಿಸತಕ್ಕದ್ದಲ್ಲ. ತಪ್ಪೋ ಒಪ್ಪೋ, ನಮ್ಮ ಮನಸ್ಸಿನ ವಿಮರ್ಶೆಯನ್ನು ನಾವು ಪ್ರಕಟಿಸದೇ ಹೋದರೆ ಸಾಮಾಜಿಕವಾಗಿ ನಮ್ಮೆಲ್ಲರಿಗೂ ಹಿತವಾಗುವ ಒಳ್ಳೆಯ ಸಂಗೀತವನ್ನು ನಾವು ಹೇಗೆ ಪ್ರಸ್ತುತಪಡಿಸಬಹುದು? ವಿಮರ್ಶೆಯೇ ಇಲ್ಲದಿದ್ದರೆ ಪ್ರಕಾಶಕ್ಕೆ ಬರುವ ವಸ್ತು ಕುಂದಬಹುದು.
ಈ ನಿಟ್ಟಿನಲ್ಲಿ ರಾಗಧನಶ್ರೀ ಸಂಪಾದಕ ಮಂಡಳಿಯ ಪರವಾಗಿ ಇನ್ನೊಮ್ಮೆ ಕಳಕಳಿಯಿಂದ ವಿನಂತಿಸುತ್ತಿದ್ದೇನೆ – ಸಂಗೀತಜ್ಞರಾದ ತಾವೆಲ್ಲಾ, ತಪ್ಪೋ ಒಪ್ಪೋ, ಏನೂ ಕೀಳರಿಮೆ ಮಾಡದೆ, ನಮ್ಮ ಊರಿನಲ್ಲಿ ಒಳ್ಳೆಯ ಸಂಗೀತ ಆಡುವಂತೆ ನೀವೆಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಕಳಕಳಿಯಿಂದ ವಿನಂತಿಸುವೆ. ನಮ್ಮ ಊರಿನಲ್ಲಿ ಈಗ ಮೊಳೆಯುತ್ತಿರುವ ಉತ್ತಮ ಸಂಗೀತ ‘ಒಳ್ಳೆಯವರಿಂದಾಗಿ’ ಕೆಡದಿರಲಿ ಎಂದು ಬಯಸುತ್ತೇನೆ. ನಿಮ್ಮಿಂದ ನಾಲ್ಕು ಸಾಲಿನ ಪ್ರತಿಕ್ರಿಯೆಗಾಗಿ ಅಥವಾ ಸಂಗೀತ ಸಂಬಂಧೀ ಲೇಖನಗಳಿಗಾಗಿ ಆಹ್ವಾನಿಸುತ್ತಿದ್ದೇನೆ. ನಮ್ಮ ಊರಿನ ಸಂಗೀತದ ನಾಡಿ ಮಿಡಿತ ಎಲ್ಲರಿಗೂ ತಿಳಿಯಲಿ ಎಂಬ ವಿಮರ್ಶಾತ್ಮಕ ವಿನಿಮಯಕ್ಕಾಗಿ. ನಮ್ಮ ಊರಿನ ಸಂಗೀತ ‘ಒಳ್ಳೆಯ’ವರಿಂದಾಗಿ ಕೆಡದೆ ಇರಲಿ ಎಂಬ ಕಾರಣಕ್ಕಾಗಿ. ವಶೀಲಿ ನಡೆಸಿ ಕಛೇರಿ ನಡೆಸುವ ಮಂದಿಗಳಿಗೆ ಮಣೆ ಹಾಕುವ ಕೆಲಸವನ್ನು ವಿರೋಧಿಸುವುದಕ್ಕಾಗಿ ನಾವೆಲ್ಲರೂ ಜಾಣ ಮೌನವನ್ನು ಪಾಲಿಸುವುದು ಬೇಡ.

Leave a Reply

Your email address will not be published. Required fields are marked *