ರಂಜನಿ ಮೆಮೋರಿಯಲ್ ಟ್ರಸ್ಟ್, ಉಡುಪಿ’ ಇತ್ತೀಚೆಗೆ ಗೂಗಲ್ ಮೀಟ್ ಸಾಮಾಜಿಕ ತಾಣದಲ್ಲಿ ಬಹಳ ಅಪರೂಪದ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಮಂಗಳೂರಿನ ‘ಯೋಗಚೇತನಾ’ ಸಂಸ್ಥೆಯ ಸ್ಥಾಪಕರೂ, ಅಧ್ಯಕ್ಷರೂ ಆದ ಶ್ರೀಮತಿ ಚೇತನ ಬಡೆಕರ್ ಅವರು ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ‘Relevance of Yoga during Covid-19 and Yogic practices for musician’ ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಚೇತನಾ ಅವರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗಾಭ್ಯಾಸದ ಪಾತ್ರದ ಬಗ್ಗೆ ಹೇಳಿ, ಕೋವಿಡ್‍ನ ಈ ಸವಾಲಿನ ಸಂದರ್ಭದಲ್ಲಿ ನಮ್ಮನ್ನು ನಾವು ಹಾನಿಕಾರಕ ಇನ್ಫೆಕ್ಷನ್ ಗಳಿಗೆ ಬಿಟ್ಟುಕೊಳ್ಳದೆ ಇರಲು ನಿಗದಿತ ಪ್ರಾಣಾಯಾಮ ಹಾಗೂ ಆಸನಗಳ ಅಗತ್ಯವಿದೆ ಎಂದರು. ದೀರ್ಘವಾಗಿ ಉಸಿರಾಡುವುದರ ಪ್ರಾಮುಖ್ಯತೆಯನ್ನು ತಿಳಿಸಿದ ಅವರು, ಇದರಿಂದಾಗಿ ಮನಸ್ಸಿನ ಉದ್ವೇಗ, ಅಸ್ಥಿರತೆ ಕಡಿಮೆಯಾಗಿ ಸ್ಥಿರವಾಗುತ್ತದೆ, ಜೀವಿತಾವಧಿ ಹೆಚ್ಚಾಗುತ್ತದೆ. ನಮ್ಮ ಮನಸ್ಸು-ದೇಹ ದೃಢವಾಗಿದ್ದಾಗ ರೋಗಗಳಿಗೆ ತುತ್ತಾಗುವುದು ಕಡಿಮೆಯಾಗುತ್ತದೆ ಎಂದರು.

                              
ಮುಂದೆ ಅವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಗೀತಗಾರನ್ನು ವಿಶೇಷವಾಗಿ ಕೇಂದ್ರೀಕರಿಸಿಕೊಂಡು ಸಂಗೀತಾಭ್ಯಾಸಿಗಳಿಗೆ ಅಗತ್ಯವಾದ ಯೊಗಾಭ್ಯಾಸದ ಬಗ್ಗೆ ವಿಸ್ತಾರವಾಗಿ ತಿಳಿಸಿ ಹೇಳಿದರು. ವೇಗವಾಗಿ ಮುಂದೆ ಹೋಗುತ್ತಿರುವ ಬದುಕನ್ನು ಹಿಡಿದು ನಿಲ್ಲಿಸಲು ಅಗತ್ಯವಾದ ಬ್ರೇಕ್‍ನ ಕೆಲಸವನ್ನು ನಾವು ಮಾಡಿಕೊಂಡ ಯೋಗಾಭ್ಯಾಸ ಸಾಧ್ಯವಾಗಿಸುತ್ತದೆ ಎಂಬುದು ಚೇತನಾ ಅವರ ಮಾತು.
ಸಂಗೀತಗಾರರಾದವರಿಗೆ ದೇಹದ ಕೆಳಗಿನ ಭಾಗವು ಸದೃಢವಾಗಿಯೂ ಮೇಲಿನ ಭಾಗ ಸ್ವತಂತ್ರವಾಗಿಯೂ ಇರಬೇಕು, ಆಗ ಮಾತ್ರ ಬೇಕಾದ ಧ್ವನಿಯು ಹೊರಬರಲು ಸಾಧ್ಯ ಎಂಬುವುದು ಚೇತನಾ ಅವರ ಮಾತು. ಇದನ್ನು ಸಾಧಿಸಲು ಬೇಕಾದ ಆಸನಗಳು ಹಾಗೂ ಪ್ರಾಣಾಯಾಮಗಳ ಬಗ್ಗೆ ಅವರು ತಿಳಿಸಿಕೊಟ್ಟರು.
ಪ್ರತಿನಿತ್ಯವೂ ಸ್ವಲ್ಪ ಹೊತ್ತಿನ ಅಭ್ಯಾಸದ ದಿನಚರಿ ಇಟ್ಟುಕೊಳ್ಳಬೇಕೆಂದು ತಿಳಿಸಿದ ಅವರು, ಆವುಗಳನ್ನು ಈ ರೀತಿ ಪಟ್ಟಿಮಾಡಿ ನೀಡಿದರು-
ಕೈ, ಮುಂಗೈ, ಬೆರಳು, ಭುಜ, ಕುತ್ತಿಗೆ ಇವುಗಳ ಚಲನೆ, ಕಾಲು, ಪಾದ, ಬೆರಳುಗಳ ಚಲನೆ, ಸೊಂಟದ ರೊಟೇಷನ್ ಇವುಗಳ ನಂತರ ಮಲಗಿ ಒಂದೊಂದೇ ಕಾಲನ್ನು 5-5 ಬಾರಿ ಎತ್ತಿ ಇಳಿಸುವುದು, ಎರಡೂ ಕಾಲುಗಳನ್ನು ಎತ್ತಿ ಇಳಿಸುವುದು ಇವಿಷ್ಟು ಅತ್ಯಗತ್ಯವಾದ ವ್ಯಾಯಾಮಗಳು ಎಂದು ಚೇತನಾ ಅವರು ಹೇಳಿದರು.
ಆ ಬಳಿಕ ಪ್ರತಿದಿನ ಕೆಲವು ಪ್ರಾಣಾಯಾಮಗಳನ್ನು ಮಾಡುವುದರಿಂದ ಸಂಗೀತಗಾರರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಉಸಿರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದ ಅವರು, ನಮ್ಮ ಉಸಿರಾಟ ದೀರ್ಘವಾಗಿರಬೇಕು. ನಾವು ಉಸಿರನ್ನು ಒಳಗೆ ಎಳೆದುಕೊಳ್ಳುವುದಕ್ಕಿಂತ ನಿಧಾನವಾಗಿ ಉಸಿರನ್ನು ಹೊರಗೆ ಬಿಡುವುದು ಸಾಧ್ಯವಾಗಬೇಕು. ಈ ಅಭ್ಯಾಸ ಹಾಡುಗಾರರಿಗೆ ಸಹಾಯವಾಗುತ್ತದೆ ಎಂದರು. ಇವುಗಳ ಸಾಧನೆಗಾಗಿ ಚೇತನಾ ಅವರು ನೀಡಿದ ಅಭ್ಯಾಸಗಳೆಂದರೆ-
ಅನುಲೋಮ-ವಿಲೋಮ, ನಾಡಿಶೋಧ, ಹಾಗೂ ಭ್ರಾಮರಿ ಪ್ರಾಣಾಯಾಮಗಳು. ಇವುಗಳ ಬಳಿಕ ಧ್ಯಾನ ಹಾಗೂ ಶವಾಸನಗಳನ್ನು ಮಾಡಿ, ಮುಂದಿನ ಕೆಲಸಗಳು ಆರಂಭಿಸಬಹುದು ಎಂದರು.
ಚೇತನಾ ಅವರ ಮಾತು, ವಿಷಯ ಮಂಡನೆ ಅತ್ಯಂತ ಆಕರ್ಷಕವಾದದ್ದು ಮತ್ತು ಅವರ ಆಳವಾದ ಅಧ್ಯಯನವನ್ನು ಹೇಳುವಂಥದ್ದು. ಆತ್ಮವಿಶ್ವಾಸದಿಂದ ಕೂಡಿದ ಅವರ ಮಾತು-ಭಂಗಿ, ಕೇಳುಗರಲ್ಲೂ ಉತ್ಸಾಹವನ್ನು ಮೂಡಿಸುತ್ತವೆ. ಉತ್ತಮ ಪ್ರತಿಕ್ರಿಯೆ ಪಡೆದ ಈ ಕಾರ್ಯಕ್ರಮ ಇನ್ನೂ ಇಂಥ ಕಾರ್ಯಕ್ರಮಗಳಿಗಾಗಿ ಬೇಡಿಕೆಯನ್ನು ಉಂಟುಮಾಡಿದೆ.

Leave a Reply

Your email address will not be published. Required fields are marked *