On the eve of Pt.Narayan Panditji’s 91st birthday, Ranjani Memorial Trust had organised ‘Guruvandana’ felicitation to Pt.Ravikiran Manipal on 20th of June at Lathangi.
Here is a short review of the program along with few photos
ಪಂ.ರವಿಕಿರಣ್ ಮಣಿಪಾಲ್ ಅವರಿಗೆ ‘ಗುರುವಂದನ’
ಹಿರಿಯ ವಯೋಲಿನ್ ವಾದಕ, ಶ್ರೇಷ್ಠ ವಾಗ್ಗೇಯಕಾರರಾದ ಪಂ.ನಾರಾಯಣ ಪಂಡಿತರ 91ನೆಯ ಜನ್ಮದಿನದ ನಿಮಿತ್ತ ಒಂದು ದಿನದ ಸಂಗೀತ ಕಾರ್ಯಕ್ರಮ, ಅವರು ರಚಿಸಿದ ಬಂದಿಶ್‍ಗಳ ಗಾಯನ, ಪಂಡಿತರು ರಚಿಸಿದ ಬಂದಿಶ್‍ಗಳ ಧ್ವನಿ ಮುದ್ರಣದ ಲೋಕಾರ್ಪಣೆ, ಹಾಗೂ ಪಂಡಿತರ ಹಿರಿಯ ಶಿಷ್ಯರಾದ ಪಂ.ರವಿಕಿರಣ ಮಣಿಪಾಲ ಅವರಿಗೆ ‘ಗುರುವಂದನಾ’ ಸನ್ಮಾನ ಕಾರ್ಯಕ್ರಮಗಳನ್ನು ‘ರಂಜನಿ ಮೆಮೋರಿಯಲ್ ಟ್ರಸ್ಟ್’ ಆಯೋಜಿಸಿತ್ತು. ಕೋವಿಡ್‍ನಿಂದಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗದ ಸಂದರ್ಭದಲ್ಲಿ ‘ಲತಾಂಗಿ’ಯಲ್ಲಿ ಪೂರ್ವ ನಿರ್ಧರಿತವಾದ ಈ ಪುಟ್ಟ ಕಾರ್ಯಕ್ರಮವು ದಿನಾಂಕ ಜೂನ್ 20ರಂದು ಸಂಜೆ 4.30ಗೆ ಹೃದಯಸ್ಪರ್ಶಿಯಾಗಿ ನಡೆಯಿತು.
ರವಿಕಿರಣ ಮಣಿಪಾಲ್ ಹಾಗೂ ಮೃದುಲಾ ದಂಪತಿಗಳನ್ನು ಗೌರವದಿಂದ ಬರಮಾಡಿಕೊಂಡ ಬಳಿಕ ಸಾರಂಗ ಹೆಬ್ಬಾರ್ ಎಲ್ಲರಿಗೂ ಸ್ವಾಗತ ಕೋರಿದರು. ನಂತರ ಅವರ ಶಿಷ್ಯರಾದ ಶ್ರೀಮತಿ ದೇವಿ ಹಾಗೂ ಪತಿ ಸಾರಂಗ ಹೆಬ್ಬಾರ್, ಶಾಲು, ಹಣ್ಣು-ಹೂವು,ಸ್ಮರಣಿಕೆ, ಪಂಡಿತರ ಭಾವಚಿತ್ರ (ವಸಂತಲಕ್ಷ್ಮಿ ಹೆಬ್ಬಾರ್ ಅವರ ರಚನೆ) ಇವುಗಳನ್ನು ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಶ್ರೀಮತಿದೇವಿ, ‘ತಮ್ಮ ಹಾಗೂ ಗುರುಗಳ ನಡುವಿನ ಬಂಧವನ್ನು ಮಾತಿನಲ್ಲಿ ಹಿಡಿದಿಡುವುದು ಕಷ್ಟದ ಕೆಲಸ. ನನ್ನ ಹಾಡಿಕೆಯ ಧ್ವನಿ ಸಂಸ್ಕರಣವನ್ನು ಪರಿಣಾಮಕಾರಿಯಾಗಿ ರೂಪಿಸುವುದರಲ್ಲಿ ಅವರು ಹೆಚ್ಚಿನ ದಾರಿ ತೋರಿಸಿದ್ದಾರೆ. ಹಲವಾರು ಬಾರಿ ನಾನು ಹಾಡಿದ ರೆಕಾರ್ಡಿಂಗ್‍ನ್ನು ಕೇಳಿ, ಮಾಡಿದ ತಪ್ಪುಗಳನ್ನು ಗುರುತಿಸಿ, ಸರಿಪಡಿಸಿಕೊಳ್ಳಲು ಹೇಳುತ್ತಿದ್ದರು. ಪ್ರತಿಯೊಂದು ವಿಚಾರವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ತೋರಿಸುವ ವೈಜ್ಞಾ ನಿಕ, ಸೈದ್ಧಾಂತಿಕ ಮನೋವೃತ್ತಿ ಆಶ್ಚರ್ಯಕರವಾದದ್ದು ಮತ್ತು ಸ್ವಾಗತಾರ್ಹವೇ ಹೌದು. ವಿದ್ಯೆಯನ್ನು ಕೊಡುವಲ್ಲಿ ಅವರು ವಿಶಾಲ ಹೃದಯವುಳ್ಳವರು’ಎಂದು ಹೇಳಿ ಹನಿಗಣ್ಣಾದರು.
ಆ ಬಳಿಕ ಮಾತನಾಡಿದ ಪಂ.ರವಿಕಿರಣ್ ಅವರು, ‘ತಮ್ಮ ಗುರುಗಳಾದ ಮಾಧವ್ ಭಟ್ ಅವರು ತೀರಿಕೊಂಡ ನಂತರ, ತಮ್ಮನ್ನು ನಾರಾಯಣ ಪಂಡಿತರ ಬಳಿ ಕಲಿಯುವಂತೆ ಹೇಳಿದ್ದೇ ಅರವಿಂದ ಹೆಬ್ಬಾರ್ ಅವರು ಎಂದರು. ಆ ಋಣವನ್ನು ನಾನು ಅವರ ಸೊಸೆ ಶ್ರೀಮತಿಗೆ ಹೇಳಿಕೊಡುವ ಮೂಲಕ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂದರು. ಶ್ರೀಮತಿದೇವಿಯ ಶ್ರದ್ಧೆ, ಸೂಕ್ಷ್ಮತೆ, ಚುರುಕುತನ ಅವಳನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ತುಂಬಾ ಜವಾಬ್ದಾರಿಯಿಂದ ಅವಳು ಕಲಿಯುವ ಕಾರಣ, ಅವಳು ನನ್ನ ಪ್ರೀತಿಯ ಶಿಷ್ಯೆ’ ಎಂದರು.
ಆಮೇಲೆ ಮಾತನಾಡಿದವರು, ರಂಜನಿ ಮೆಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷರಾದ ಅರವಿಂದ ಹೆಬ್ಬಾರ್ ಅವರು. ತಮ್ಮ ವಿದ್ಯಾರ್ಥಿ ಮಿತೆ ್ರಡಾ. ಶಾರದಾ ಭಟ್ ಅವರಿಂದಾಗಿ ತಮ್ಮ ಮನೆಗೆ ಬಂದ ಪಂಡಿತರು, ರಂಜನಿ ಹಾಡುವುದನ್ನು ಕೇಳಿ ಇಷ್ಟಪಟ್ಟು, ಆಕೆಗೆ ಹಿಂದೂಸ್ತಾನೀ ಸಂಗೀತವನ್ನೂ ಕಲಿಸಲು ಬಯಸಿದ್ದನ್ನು ನೆನಪಿಸಿಕೊಂಡರು. ಬಳಿಕ ಮನೆಮಂದಿಯವರಂತೆಯೇ ನಡಕೊಂಡ ಪಂಡಿತಜ್ಜರು, ಮುಂದೆ ಶ್ರೀಮತಿದೇವಿ – ಸಾರಂಗ ನ ಮದುವೆಯನ್ನೂ ಸೂಚಿಸಿದರು. ಆ ಸಂದರ್ಭದಲ್ಲಿ ರವಿಕಿರಣ್ ಅವರೂ ಜೊತೆಗಿದ್ದದ್ದನ್ನು ಸ್ಮರಿಸಿದರು. ಶ್ರೀಮತಿದೇವಿಯ ಗಾಯನದ ಧ್ವನಿ ಸಂಸ್ಕರಣಕ್ಕೆ ಬಹಳ ಮುತುವರ್ಜಿಯಿಂದ ಮಾರ್ಗದರ್ಶನ ನೀಡಿದ ರವಿಕಿರಣ್ ಗೆ ಅವರು ಕೃತಜ್ಞತೆ ತಿಳಿಸಿದರು. ಅವರು ರಂಜನಿ ಮೆಮೋರಿಯಲ್ ಟ್ರಸ್ಟ್ ಕೈಗೆತ್ತಿಕೊಂಡ ‘ನಾದಪಿಯಾ ಪ್ರಾಜೆಕ್ಟ್’ನ ಅಡಿಯಲ್ಲಿ ಪಂಡಿತರು ರಚಿಸಿದ 200 ಬಂದಿಶ್‍ಗಳ ಪೈಕಿ ಸಾಧ್ಯವಾದಷ್ಟನ್ನು ಧ್ವನಿ ಮುದ್ರಿಸಿಕೊಂಡು, ಲೋಕಾರ್ಪಣೆ ಮಾಡುವ ವಿಚಾರವನ್ನು ಪ್ರಸ್ತಾಪಿಸಿದರು. ರವಿಕಿರಣ್ ಅವರನ್ನು ಈ ಪ್ರಾಜೆಕ್ಟ್ ಗಾಗಿ ಹಾಡಲು ವಿನಂತಿಸಿತ್ತು, ಅವರು ಅವರ ಸ್ನೇಹಿತರ ಜೊತೆಗೂಡಿ ಈ ಬಂದಿಶ್‍ಗಳನ್ನು ವೀಡಿಯೋ ರೂಪದಲ್ಲಿ ಹೊರತರುತ್ತಿದ್ದಾರೆ. ಪ್ರಸ್ತುತ, ಮೊದಲ ಹಂತವಾಗಿ ಈಗ 50 ಬಂದಿಶ್‍ಗಳನ್ನು ಶ್ರೀಮತಿದೇವಿಯಿಂದ ಹಾಡಿಸಿ ಯೂ ಟ್ಯೂಬ್ ವಾಹಿನಿಯ ಮೂಲಕ ಹೊರತರಲಾಗುತ್ತಿದೆ. ಪಂಡಿತರ ಬಂದಿಶ್‍ಗಳು ಬಹು ಸತ್ವಯುತವಾದವು. ಪಂಡಿತಜೀ ಅವರ ಶಿಷ್ಯಂದಿರೆಲ್ಲಾ ಮನಸ್ಸು ಮಾಡಿ ಪಂಡಿತರ ‘ಅಭಿನವ ಬಂದಿಶ್’ಗಳು ವಿವಿಧ ರೀತಿಯಲ್ಲಿ ತೆರೆದುಕೊಳ್ಳುವಂತೆ, ಹೊರತರುವ ಕೈಂಕರ್ಯಕ್ಕೆ ಕೈಯಿಕ್ಕಬೇಕು ಎಂಬುದೇ ನಮ್ಮ ಆಶಯ. ನಮ್ಮ ಟ್ರಸ್ಟ್ ನೊಂದಿಗೆ ಸಹಾಯ ಹಸ್ತ ಜೋಡಿಸುವವರಿಗೆ ನಾವು ನಿಜಕ್ಕೂ ಆಭಾರಿಗಳಾಗಿದ್ದೇವೆ. ಹಿಂದೂಸ್ತಾನೀ ಕ್ಷೇತ್ರದಲ್ಲಿ ಖ್ಯಾತರಾದ ಡಾ. ಚೈತನ್ಯ ಕುಂಟೆಯವರು ನಮಗಿತ್ತ ಸಹಕಾರವನ್ನು ಈ ಸಂದರ್ಭದಲ್ಲಿ ನಾವು ಕೃತ ಜ್ಞತೆಯಿಂದ ನೆನೆಯುತ್ತೇವೆ. ಪಂಡಿತಜೀ ಅವರ ಒಬ್ಬೊಬ್ಬ ಶಿಷ್ಯನ ಹಣತೆಯೂ ಹಿಂದೂಸ್ತಾನೀ ಹಾಡುಗಾರರಿರುವ ಮನೆಮನೆ ಗಳಿಗೆ ತಲುಪಲಿ. ಎಲ್ಲಾ ದೀಪಗಳ ನಡುವಿನಲ್ಲಿ ನಮ್ಮೀ ಒಂದು ಪುಟ್ಟ ಹಣತೆಯು ಮತ್ತೊಂದು ಹಣತೆಯನ್ನು ಹಚ್ಚಲಿ. ಸಾಧ್ಯವಾದಷ್ಟು ದೂರ ತಲುಪಲಿ’ ಎಂದರು.
ವಸಂತಲಕ್ಷಿ ಹೆಬ್ಬಾರ್ ಅವರು ಧನ್ಯವಾದ ಸಮರ್ಪಿಸಿದರು. ರಂಜನಿ ಮೆಮೋರಿಯಲ್ ಟ್ರಸ್ಟ್‍ನ ಸದಸ್ಯರಾದ ಗೋವಿಂದ ಉಪಾಧ್ಯಾಯ, ರಾಧಿಕಾ ಶಂಕರ್ ಹಾಗೂ ಕೋಶಾಧಿಕಾರಿಗಳಾದ ಸದಾಶಿವ ರಾವ್ ಅವರು ಉಪಸ್ಥಿತರಿದ್ದರು. ಉಪಾಹಾರದ ಬಳಿಕ ಬಂದಿಶ್ ಲೋಕಾರ್ಪಣೆಯ ಕಾರ್ಯಕ್ರಮದ ವೀಡಿಯೋವನ್ನು ರಂಜನಿ ಮೆಮೋರಿಯಲ್ ಟ್ರಸ್ಟ್‍ನ Facebook ಪೇಜ್‍ಲ್ಲಿ ಪ್ರಸಾರ ಮಾಡಲಾಯಿತು. ಈ ವೀಡಿಯೋವು ಅರವಿಂದ ಹೆಬ್ಬಾರ್ ಅವರ ಪರಿಚಯಾತ್ಮಕ ಮಾತು, ಶ್ರೀಮತಿ ದೇವಿ ಅವರಿಂದ ಪ್ರಾಜೆಕ್ಟ್ ಕುರಿತ ಅನಿಸಿಕೆ ಹಾಗೂ ಹಿರಿಯ ಸಂಗೀತಗಾರರಾದ ಪಂ.ರಾಜೀವ್ ತಾರಾನಾಥ್ ಅವರ ಶುಭ ನುಡಿ, ಸಂಗೀತಜ್ಞ- ವಾಗ್ಗೇಯಕಾರ ಡಾ. ಚೈತನ್ಯ ಕುಂಟೆ ಮತ್ತು ಪಂ.ರವಿಕಿರಣ್ ಅವರುಗಳ ವಿದ್ವತ್ಪೂರ್ಣ ಭಾಷಣವನ್ನು ಒಳಗೊಂಡಿತ್ತು.
Video of unveiling of the YouTube Channel : Nadapiya – Narayana Panditji Bandishes