– ವಸಂತಲಕ್ಷ್ಮೀ ಹೆಬ್ಬಾರ್

2006ರಲ್ಲಿ ಇರಬೇಕು. ಶಾರದಾ ಭಟ್ ನಾರಾಯಣ ಪಂಡಿತರನ್ನು ಉಡುಪಿಗೆ ಕರಕೊಂಡು ಬಂದದ್ದು. ನಮ್ಮಲ್ಲಿ ರಂಜನಿಯನ್ನು ಕಂಡಾಗ ಅವಳ ಸ್ವರವನ್ನು ಕೇಳಿ ಒಂದು ರೀತಿಯ ಪುರಾತನ ನಂಟನ್ನು ಮತ್ತೆ ಪಡೆದಂತೆ ವರ್ತಿಸುತ್ತಿದ್ದರು. ರಂಜನಿ ಹಿಂದುಸ್ಥಾನೀ ಕಲಿಯಲೇ ಬೇಕು ಎಂದು ಬಯಸಿದರೆ “ಛೇ ಛೇ ನಿನಗೆ ಏನು ಸಂಗೀತ ಕಲಿಸಿಕೊಡಲಿ? ನಾನೂ ನೀನೂ ಜೊತೆಯಾಗಿ ಹಾಡೋ” ಎನ್ನುವ ಭಾವನೆ ಹೊಂದಿದ್ದರು. ನನ್ನದು ನಿನ್ನದು 500 ವರ್ಷಹಳೆಯ ನಂಟು! ಎನ್ನುತ್ತಿದ್ದರು.
ನಮ್ಮ ಕುಟುಂಬದ ಸಂಗೀತದ ನೆಚ್ಚುವಿಕೆಯನ್ನು ಕಂಡು ಮಾರುಹೋಗಿದ್ದರು. ಹೆಬ್ಬಾರರ ಹಾಗೂ ನನ್ನ ಮತ್ತು ನಮ್ಮಲ್ಲಿಗೆ ಬಂದು ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ, ಗೆಳೆಯರ ಬಳಗವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ನಮ್ಮಲ್ಲಿ ಕೆಲಕಾಲ ಇದ್ದುಬಿಟ್ಟರು. ನಮ್ಮ ಮನೆಯ ಈ ವ್ಯವಸ್ಥೆಯಲ್ಲಿ ನನ್ನ ಚಲನವಲನಗಳನ್ನು ಗಮನಿಸಿದ ಅವರು ನನಗೆ ‘sಛಿouಣ boಥಿ’ ಎಂದೇ ಸಂಬೋಧಿಸುತ್ತಿದ್ದರು! ನಾನು ಮಾಡಿದ ಪೈಂಟಿಂಗ್ಗಳನ್ನು ವಿಮರ್ಶಿಸಿ, ನನ್ನನ್ನು ಹುರಿದುಂಬಿಸುತ್ತಿದ್ದರು. ಅವರಿಗೆ ಖುಷಿ ಕೊಟ್ಟ ಒಂದು ಚಿಕ್ಕ ಕಲಾಕೃತಿಗೆ ರೂ. 2000 ಕೊಟ್ಟು ನನ್ನ ಮನೆಯ ಗೋಡೆಯಲ್ಲಿಯೇ ಜಾಗ ನಿರ್ದೇಶಿಸಿ ಬೆನ್ನುತಟ್ಟಿದ್ದರು.
ಪಂಡಿತಜ್ಜ ನಮ್ಮ ಮನೆಯಲ್ಲಿದ್ದಾಗ ರಂಜನಿಯ ಸಂಗೀತವಲ್ಲದೆ ಎಲ್ಲಾ ಕರ್ನಾಟಕ ಸಂಗೀತಗಾರರ ರೆಕಾರ್ಡಿಂಗ್ಗಳನ್ನು ಕೇಳಿಸಿದ್ದರು. ಅಲ್ಲದೆ ಅದರ ಸ್ಥೂಲ, ಸೂಕ್ಷ್ಮಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಯುತ್ತಿತ್ತು. ಅಜ್ಜ ಅದೊಂದು ದಿನ ನಾನೂ (ಊಟೋಪಚಾರಗಳಲ್ಲೇ ಮುಳುಗಿರುವ ನನ್ನ್ನು) ಹಾಡಬೇಕೆಂದು ಒತ್ತಾಯಿಸಿದ್ದರು. ನಾನು ಹಾಡಿದ ಮಧ್ಯಮಾವತಿ ಪ್ರಸ್ತುತಿಯನ್ನು ಕೇಳಿ ನನ್ನ ಚಿಕ್ಕಂದಿನಲ್ಲಿ ನಾನು ಕಛೇರಿ ನೀಡಲಾಗದ ಪರಿತಾಪವನ್ನು ಅದರಲ್ಲಿ ಗುರುತಿಸಿದ್ದರು! ಇದೇ ರೀತಿ ಅನೇಕ ಸಂಗೀತಗಾರರ ಪ್ರಸ್ತುತಿಯನ್ನು ಕೇಳಿ ಅವರ ವ್ಯಕ್ತಿತ್ವವನ್ನು ಹೇಳುವ ಶಕ್ಯತೆ ಪಂಡಿತರಿಗಿದ್ದಿತು. ಮುಂದೆ ಅವರು ನಮ್ಮೊಂದಿಗೆ ದಿನಗಟ್ಟಲೆ ಸಂಗೀತದ ಮಾತುಕತೆ ಮಾಡುತ್ತಾ, ಹಾಡುತ್ತಾ, ಸ್ವರದ ‘ಜೀರು’ ವಿನ ಬಗ್ಗೆ ಮನವರಿಕೆ ಮಾಡಿಸುತ್ತಾ ಬಂದರು. ಮುಂದೆ ನಿರಾಳವಾಗಿ ಹಾಡುತ್ತಾ, ಸ್ವರದ ಅನುಭವ ಪಡೆಯುತ್ತಾ ಹಾಡುವಂತಹ ಪ್ರವೃತ್ತಿ ಬೆಳೆದಂತೆ ನನ್ನ ಶಿಕ್ಷಕ ವೃತ್ತಿಯಲ್ಲಿ ಉಪಯೋಗವಾದದ್ದಂತೂ ನಿಜ. ಕಲಿಯುವ ಮಕ್ಕಳಲ್ಲಿ ಸ್ವರಗಳ ಜೊತೆ ಸಂವಹನ ಮಾಡಿಸುವ ಅಭ್ಯಾಸಗಾನವನ್ನು ಮಾರ್ಪಡಿಸಿ, ಅವರಲ್ಲಿ ಸಂಗೀತದ ಪ್ರೀತಿ ಬೆಳೆಯುವಂತೆ ಮಾಡುವಲ್ಲಿ ಪಂಡಿತಜ್ಜನ ಪ್ರಭಾವ ನನಗಾಗಿರುವುದಂತೂ ನಿಜ. ಯಾವುದೇ ಗಾಯನ ಶೈಲಿಯಾಗಲೀ, ರಾಗವಾಗಲೀ, ಹೃದಯದ ಬಾಗಿಲು ತಟ್ಟಲು ಸ್ವರಗಳನ್ನು ಜೀವಂತವಾಗಿಡಿಸುವುದೇ ಮುಖ್ಯ ಎನ್ನುವುದನ್ನು ಕಲಿಸಿದ್ದು ಅವರೇ. ಈ ನಿಟ್ಟಿನಲ್ಲಿ ನನಗೆ ಧನ್ಯತೆಯನ್ನು ತಂದುಕೊಟ್ಟ ಪಂಡಿತರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ ಇದು.
ಅಜ್ಜ ಕುಮಾರ್ಜೀ ಅವರ ಉತ್ಸಾಹ ಭರಿತ ಶಕ್ತಿಯುತ ಶೈಲಿಯ ಕಟ್ಟಾ ಅಭಿಮಾನಿಗಳಾಗಿದ್ದರೂ ತಮ್ಮ ಬಂದಿಶ್ಗಳು ನಯ, ನವಿರುಗಳ ಬೆಚ್ಚಗಿನ ಸೌಖ್ಯವನ್ನೇ ಪ್ರತಿನಿಧಿಸುತ್ತವೆ ಎನ್ನುತ್ತಿದ್ದರು. ರಂಜನಿಯ ಸ್ವರವನ್ನು ಅರಸಿಕೊಂಡು ಬಂದವರು ಶ್ರೀಮತಿಯನ್ನು ಸೊಸೆಯಾಗಿ ನಮ್ಮ ಮನೆ ತುಂಬಿಸಲೂ ಸಹಕಾರಿಯಾದರು. ಅವರಂತೂ ಸಂಗೀತದ ಯಾವ ಬಿರುದು ಬಾವಲಿಗಳ ಗೊಡವೆಯಲ್ಲಿರಲಿಲ್ಲ. ಅವರ ಸಂಗೀತದಲ್ಲಿ ಭಾವಪ್ರತಿಪಾದನೆಯನ್ನು ನಾವು ಕರ್ನಾಟಕ ಸಂಗೀತದವರು ಅರಿತುಕೊಂಡು ಅಳವಡಿಸಿದಲ್ಲಿ ಸಂಗೀತ ಕ್ಷೇತ್ರವು ಶ್ರೀಮತಂತವಾಗುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *