ಶ್ರೀಮತಿದೇವಿ, ಮೈಸೂರು
(ಈ ಲೇಖನಕ್ಕೆ ಕೊಟ್ಟಿರುವ ಶೀರ್ಷಿಕೆ, ಪಂ. ಕುಮಾರ ಗಂಧರ್ವರು ಹಾಡಿ ಪ್ರಸಿದ್ಧಗೊಳಿಸಿದ ದೇವನಾಥರ ನಿರ್ಗುಣಿ ಭಜನ್‍ನ ಸಾಲು. ಇಲ್ಲಿ ಶಿಷ್ಯನೊಬ್ಬನು, ತಾನು ಹೋದಲ್ಲೆಲ್ಲಾ ಗುರುವಿನ ನೆರಳು ಬಿಡದೆ ಹಿಂಬಾಲಿಸುತ್ತಿದ್ದೆ ಎಂಬುದನ್ನು ಕೃತಜ್ಞತೆಯಿಂದ ಹೇಳುತ್ತಿದ್ದಾನೆ.)
ನಾನು ನಾರಾಯಣ ಪಂಡಿತರನ್ನು ಗುರುವಾಗಿ ಪಡೆದ ರೀತಿ, ಆ ಸನ್ನಿವೇಶಗಳೆಲ್ಲಾ ತುಂಬಾ ನಾಟಕೀಯವಾದದ್ದು. 2004ರಲ್ಲಿ ಪಿಯುಸಿ ಮುಗಿಸಿ, ಕಾರ್ಕಳದಿಂದ ಸಂಗೀತ ಕಲಿಕೆಯ ಸಲುವಾಗಿ ಧಾರವಾಡಕ್ಕೆ ಹೋದ ನಾನು ಅಲ್ಲಿ ಜೆ ಎಸ್ ಎಸ್ ಕಾಲೇಜಿನಲ್ಲಿ ಬಿ ಎ ಸೇರಿ, ಪಂ. ಚಂದ್ರಶೇಖರ ಪುರಾಣಿಕ ಮಠ ಅವರ ಬಳಿ ಸಂಗೀತವನ್ನು ಕಲಿಯಲಾರಂಭಿಸಿದ್ದೆ. ಅತ್ಯಂತ ಪ್ರೀತಿಯಿಂದ ಪುರಾಣಿಕಮಠ ಸರ್ ಹೇಳಿಕೊಟ್ಟ ಪಾಠವನ್ನು ಆಸ್ಥೆಯಿಂದ, ಶ್ರದ್ಧೆಯಿಂದ ಕಲಿಯುತ್ತಿದ್ದ ನಾನು ಮೊದಲ ಬಾರಿಗೆ ನಮ್ಮ ಸಂಗೀತ ತರಗತಿಯಲ್ಲೇ ಪಂಡಿತರ ಬಂದಿಶ್‍ಗಳನ್ನು ನನ್ನ ಗುರು ಬಂಧುವಾದ ಶಾರದಕ್ಕನ ಬಾಯಿಯಲ್ಲಿ ಕೇಳಿದೆ. ಕೂಡಲೇ ನಾನು ಆ ಬಂದಿಶ್‍ಗಳಿಂದ ಪ್ರಭಾವಿತಳಾದೆ. ಆದರೆ, ಹೋಗಿ ಪಂಡಿತರನ್ನು ಮಾತನಾಡಿಸುವಷ್ಟು, ಇನ್ನೊಬ್ಬ ಗುರುಗಳ ಬಳಿ ಕಲಿಯುವಷ್ಟು ಧೈರ್ಯ ನನಗಿರಲಿಲ್ಲ. ಆದರೆ. ನಾಟಕೀಯ ರೀತಿಯಲ್ಲಿ ಆ ವರ್ಷದ ನಮ್ಮ ಸಂಗೀತ ತರಗತಿಯ ಗುರುಪೂರ್ಣಿಮೆಗೆ ಪಂಡಿತರೇ ಮುಖ್ಯ ಅಭ್ಯಾಗತರಾಗಿ ಬಂದರು. ಪಂಡಿತರು ತುಂಬಾ ಹೊತ್ತು ನಮ್ಮೊಂದಿಗೆ ಇದ್ದರಷ್ಟೇ ಅಲ್ಲದೆ. ‘ಸಂಗೀತವು ದ್ರುಪದ್‍ನಿಂದ ಖ್ಯಾಲ್, ಠುಮ್ರಿ, ಟಪ್ಪಾ ತನಕ ವಿಕಾಸವಾದ ಬಗೆಯನ್ನು ಹೇಳುವ ವಿವರವಾದ ಕಾರ್ಯಕ್ರಮವೊಂದನ್ನು ನೀಡಿದರು. ಈ ಕಾರ್ಯಕ್ರಮದ ಮೂಲಕ ಸಂಗೀತದಲ್ಲಿನ ಪಂಡಿತರ ಸಮಗ್ರವಾದ ಜ್ಞಾನ, ಸೂಕ್ಷ್ಮತೆ, ಅಪರೂಪದ ಬಂದಿಶ್‍ಗಳ ಸಂಗ್ರಹ, ಅವರಲ್ಲಿದ್ದ ವಿಶೇಷವಾದ ವಿಶ್ಲೇಷಣಾ ಶಕ್ತಿ ಇವೆಲ್ಲವುಗಳ ವಿರಾಟ್ ದರ್ಶನವಾಯಿತು. ಆಗ ನಾನು ಇವರ ಬಳಿ ಕಲಿಯಲೇಬೇಕೆಂದು ಮನಸ್ಸಿನಲ್ಲೇ ನಿರ್ಣಯಿಸಿದೆ. ಪುರಾಣಿಕಮಠ ಸರ್ ಬಳಿ ಈ ಬಗ್ಗೆ ಕೇಳಿದಾಗ, ಅಷ್ಟೇ ಮುಕ್ತ ಮನಸ್ಸಿನಿಂದ ‘ನೀನು ಕಲಿ, ಅವರಲ್ಲಿನ ಸಂಗ್ರಹವನ್ನು ಪಡೆಯುವ ಸಾಮಥ್ರ್ಯ, ನೆನಪಿನ ಶಕ್ತಿ ಎಲ್ಲವೂ ನಿನಗಿದೆ’ ಎಂದು ಹೇಳಿ ಹಸಿರು ನಿಶಾನೆ ತೋರಿದರು. ಮುಂದೆ ಫೋನ್ ಮೂಲಕ ಪಂಡಿತರ ಬಳಿ ಇದನ್ನು ನಿವೇದಿಸಿಕೊಂಡೆ.
ಇದರ ಮಧ್ಯೆ ಗಂಧರ್ವ ಮಹಾ ಮಂಡಲ ನಡೆಸುವ ‘ಸಂಗೀತ ವಿಶಾರದಾ ಪೂರ್ಣ’ ಪರೀಕ್ಷೆ ಪಡೆದಿದ್ದ ನನಗೆ ಸಂಗೀತ ಪರೀಕ್ಷಕರಾಗಿ ಮಣಿಪಾಲದ ಶ್ರೀ ರವಿಕಿರಣ್ ಅವರು ಧಾರವಾಡಕ್ಕೆ ಬಂದಿದ್ದರು. ನಾನು ಹಾಡುವುದು ಕೇಳಿ ಖುಷಿಪಟ್ಟ ಅವರು, ನಾನು ದಕ್ಷಿಣ ಕನ್ನಡದವಳು ಎಂದು ತಿಳಿದಾಗ ನನ್ನ ಬಗ್ಗೆ ಯಾರಿಗೂ ತಿಳಿದಿಲ್ಲದಿರುವುದರ ಬಗ್ಗೆ ಆಶ್ಚರ್ಯಪಟ್ಟಿದ್ದರು.
ಎರಡು ದಿನಗಳ ಬಳಿಕ, ನಾನು ಪರೀಕ್ಷೆ ಮುಗಿಸಿ ಹೊನ್ನಾವರದ ‘ಸ್ನೇಹಕುಂಜ’ ಪ್ರವೇಶಿಸಿದಾಗ ರವಿಕಿರಣ್ ಅವರು ಅಜ್ಜನ ಮುಂದೆ ಕುಳಿತಿದ್ದರು. ಹೀಗೆ ಆಶ್ಚರ್ಯಕರ ರೀತಿಯ ನಾನು ಹಾಗೂ ರವಿಕಿರಣ್ ಅವರು ಒಂದೇ ದಿನ ಪಂಡಿತರ ಶಿಷ್ಯರಾದೆವು.
ಮುಂದೆ ಅವಕಾಶವಾದಗೆಲ್ಲ ಧಾರವಾಡದಿಂಧ ಹೊನ್ನಾವರಕ್ಕೆ ಹೋಗಿ, ಒಂದೊಂದು ವಾರ ಅಜ್ಜನ ಜೊತೆಗಿದ್ದು, ದಿನವಿಡೀ ಚಂದಚಂದದ ಬಂದಿಷ್‍ಗಳನ್ನು ಕಲಿಯುವುದು, ಮಾತನಾಡುವುದು ಇವೆಲ್ಲವೂ ನಡೆಯುತ್ತಿತ್ತು. ಸ್ನೇಹಕುಂಜದ ಊಟ, ಅಲ್ಲಿನ ಜನರ ಪ್ರೀತಿ, ಹಿಂದಿರುವ ಸಮುದ್ರದಂಚಿನ ವಾಕ್, ಇವೆಲ್ಲವೂ ನನ್ನ ಇಷ್ಟದ ವಿಷಯಗಳಾಗಿದ್ದವು.
ಪಂಡಿತರು ಬೇರೆ ಬೇರೆ ರಾಗಗಳಲ್ಲಿ, ತಾಳಗಳಲ್ಲಿ, ಒಂದೇ ರಾಗದ ಬೇರೆಬೇರೆ ಮುಖಗಳಲ್ಲಿ ರಚಿಸಿದ ಬಂದಿಷ್‍ಗಳನ್ನು ಕಲಿಯುವುದೇ ಒಂದು ಖುಷಿಯಾಗಿತ್ತು. ಅದರ ಜೊತೆಗೆ ಪಾರಂಪರಿಕ ಬಂದಿಷ್‍ಗಳು, ಹಾಗೂ ಕುಮಾರ್‍ಜೀ ರಚಿಸಿದ ಬಂದಿಶ್‍ಗಳು, ಲೋಕ ಸಂಗೀತ, ನಿರ್ಗುಣಿ ಭಜನ್ ಇವೆಲ್ಲವುಗಳನ್ನು ಪ್ರೀತಿಯಿಂದ ಕಲಿಸಿದ್ದಾರೆ.
ನಾವು ಯಾರಾದರೂ ಶಿಷ್ಯರು ಬರುತ್ತೇವೆಂದರೆ, ಯಾರ ಬಳಿಯಾದರೂ ಹೇಳಿ ಬಗೆ ಬಗೆಯ ತಿಂಡಿಗಳನ್ನು ತರಿಸಿ ಇಟ್ಟುಕೊಳ್ಳುತ್ತಿದ್ದರು. ಕನ್ನಡ ಸಂಸ್ಕøತಿ ಇಲಾಖೆಯ ಪ್ರಾಯೋಜಕತ್ವ ಪಡೆದು ಸ್ನೇಹಕುಂಜದಲ್ಲಿ ನನ್ನದೊಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ನನ್ನ ತಂದೆಯವರು ಮಾಡುವ ಹರಿಕಥೆಯನ್ನು ಕೇಳಿ, ಬಹುವಾಗಿ ಮೆಚ್ಚಿದ್ದ ಪಂಡಿತರು, ಅವರ ಧ್ವನಿಯಲ್ಲಿ ಒಂದು ರೀತಿಯ ‘ಚಿಮ್ಮುವಿಕೆ’ ಇದೆ ಎಂದು ಗುರುತಿಸಿದ್ದರು. ಅಪ್ಪನ ಹರಿಕಥಾ ಕಾರ್ಯಕ್ರಮವನ್ನೂ ಸ್ನೇಹಕುಂಜದಲ್ಲಿ ಆಯೋಜಿಸಿದ್ದರು. ನನ್ನ ತವರು ಮನೆಗೂ ಬಂದು ಒಂದು ವಾರ ನಮ್ಮ ಜೊತೆ ಇದ್ದರು. ಈ ಸಂದರ್ಭದಲ್ಲೇ ಅವರು ನನ್ನ ಅಮ್ಮನ ಬಳಿ ನನ್ನ ಮದುವೆಯ ಬಗ್ಗೆ ಮಾತಾಡಿ, ಇವಳಿಗೆ ಸಂಗೀತದ ಮನೆಯೇ ಬೇಕು ಎಂದು ಬಯಸಿ, ನನ್ನ ಜಾತಕ ಪಡೆದುಕೊಂಡು ಈಗ ನನ್ನ ಮಾವನವರಾದ ಶ್ರೀ ಅರವಿಂದ ಹೆಬ್ಬಾರರ ಬಳಿ ಕೊಟ್ಟು ನನ್ನನ್ನು ಈ ಮನೆಯವಳನ್ನಾಗಿ ಮಾಡಿದರು. ಹೀಗೆ ನನ್ನ ಜೀವನದಲ್ಲಿ ಅವರ ಪಾತ್ರ ಕೇವಲ ಸಂಗೀತ ಕಲಿಸುವ ಗುರುವಿನದ್ದು ಮಾತ್ರವಾಗಿರಲಿಲ್ಲ.
ಸಂಗೀತದ ನನ್ನ ಹುಡುಕಾಟದ ಯಾತ್ರೆಯಲ್ಲಿ ‘ಸ್ವರಪ್ರೀತಿ’ಯ ದಾರಿ ತೋರಿದವರು ಪಂಡಿತಜ್ಜ. ಸಂಗೀತವನ್ನು ನೋಡುವ, ಕೇಳುವ ನನ್ನ ಕ್ರಮವನ್ನೇ ಬದಲಿಸಿದ್ದಾರೆ. ಹೊಸತಾದೊಂದು ದೃಷ್ಟಿಯನ್ನು ಕೊಟ್ಟಿದ್ದಾರೆ. ಅವರ ಸಂಗೀತದಲ್ಲಿ ಸೂಕ್ಷ್ಮತೆ ಇತ್ತು. ಅವರ ಧ್ವನಿಯಲ್ಲಿ ಸಣ್ಣ ಸಣ್ಣ ಕುಸುರಿ ಕೆಲಸಗಳೂ ಸ್ಫುಟವಾಗಿ ಮೂಡಿಬರುತ್ತಿದ್ದವು. ತಾನ್‍ಗಳ ವಿನ್ಯಾಸ, ಸ್ವರದಲ್ಲಿನ ಖಚಿತತೆ, ಧ್ವನಿಯ ಏರಿಳಿತ, ಬುದ್ಧಿವಂತಿಕೆಯ ಬಳಕೆ, ಹಾಡುಗಾರಿಕೆಯಲ್ಲಿದ್ದ ಜೀವಂತಿಕೆ ಇವುಗಳೆಲ್ಲವೂ ಅನನ್ಯವಾದದ್ದು. ಹಾಡುವಾಗ ಕೇವಲ ಧ್ವನಿಯ ಮೇಲಿನ (ಠಿಡಿessuಡಿe) ಒತ್ತಡವನ್ನು ಹೆಚ್ಚು-ಕಡಿಮೆ ಉಪಯೋಗಿಸುವ ಮೂಲಕ ಹೊಬರುವ ಧ್ವನಿ ಹೇಗೆ ದಪ್ಪ-ತೆಳುವಾಗಿ ಕೇಳುತ್ತದೆ ಹಾಗೂ ಇದರಿಂದ ಗಾಯನದಲ್ಲಿ ಹೇಗೆ ನಾಟಕೀಯತೆಯನ್ನು (ಜಡಿಚಿmಚಿಣiziಟಿg) ತರಬಹುದು ಎಂಬುದನ್ನು ತಿಳಿಸಿಕೊಟ್ಟವರು ಅಜ್ಜ. ಅವರು ಸ್ವರಹಚ್ಚುವ ಕ್ರಮವೇ ಅಪೂರ್ವವಾದದ್ದು. ಯಾವುದೇ ರಾಗದಲ್ಲಿ ಬಂದಿಶ್‍ನ ಶಬ್ದಗಳನ್ನು ಲಯದ ಚೌಕಟ್ಟಿನ ಒಳಗೇ ಬೇರೆ ಬೇರೆ ರೀತಿಯಾಗಿ ಇಡುವುದರಿಂದ ಹೇಗೆ ವಿವಿಧ ಭಾವಗಳು ಹುಟ್ಟುತ್ತವೆ ಎಂಬುವುದನ್ನು ತುಂಬಾ ಸಮರ್ಥವಾಗಿ ತೋರಿಸಬಲ್ಲವರಾಗಿದ್ದರು. ತಮ್ಮ ಈ ಆವಿಷ್ಕಾರವನ್ನು ಅವರು ‘ಭಾವ ಸೌಂದರ್ಯವಾದ’ ಎಂಬ ಹೆಸರಿನಿಂದ ಕರೆದಿದ್ದಾರೆ.
ಅವರ ತಾನ್‍ನ ವಿನ್ಯಾಸಗಳು ತುಂಬಾ ಸುಂದರವಾದವು. ಇವು ಪಂ.ದೇವಧರ್ ಅವರ ಮಾದರಿಯ ತಾನ್‍ಗಳು ಎಂಬುದನ್ನು ನಾನು ಕೇಳಿ ಬಲ್ಲೆ. ಕುಮಾರ್‍ಜೀ ಅವರೂ ಇಂಥಹಾ ತಾನ್‍ಗಳನ್ನು ಹಾಡುತ್ತಿದ್ದರು. ಇವನ್ನು ಇರುವ ಬಂದಿಶ್‍ನ ಲಯದ 2 ಪಟ್ಟು ವೇಗದಲ್ಲಿ ಹಾಡಲಾಗುತ್ತದೆ. ಉದಾಹರಣೆಗೆ ರಾಗ ಬಿಲಾವಲ್‍ನಲ್ಲಿ ದನಿ ದನಿನಿ ಪದ ಪದದ ಮಪ ಮಪಪ ಗಮಗರೆಸಾ
ಶಾಸ್ತ್ರೀಯ ಸಂಗೀತಕ್ಕೆ ಶಾಸ್ತ್ರ ಹಾಗೂ ಅದು ಹೇಳುವ ವ್ಯಾಕರಣವೇ ಮುಖ್ಯ ಎಂದು ಸಾಧಾರಣವಾಗಿ ಎಲ್ಲೆಡೆ ಇರುವ ನಂಬಿಕೆಗೆ ಎದುರಾಗಿ, ಪಂಡಿತರು, ವ್ಯಾಕರಣವನ್ನು ಅರಿತ ಮೇಲೆ ಅದೇ ವ್ಯಾಕರಣವನ್ನು ಮೀರಬೇಕು ಎನ್ನುತ್ತಿದ್ದರು. ಹಾಗಾದಾಗ ಮಾತ್ರ ಭಾವ ಸ್ಫುರಿಸಬಲ್ಲುದು ಎಂಬುವುದು ಅವರ ನಂಬಿಕೆಯಾಗಿತ್ತು.
ಪ್ರತಿಯೊಂದು ರಾಗದ ಬಗ್ಗೆ, ತಾಳದ ಬಗ್ಗೆ ಅವರ ಸಮಶೋಧನಾಶೀಲ ಮನಸ್ಸಿನಿಂದ ಹುಟ್ಟಿದ ಒಂದೊಂದು ಹೊಸ ವಿಚಾರಗಳಿರುತ್ತಿದ್ದವು. ಅಂದರೆ
* ಭೈರವದಲ್ಲಿ ರಿ ಹಾಗೂ ದ ಗಳ ಆಂದೋಲನದ ಬದಲಿಗೆ ‘ಗ’ದಲ್ಲಿ ನ್ಯಾಸ ಮಾಡುವುದರಿಂದ, ವೈರಾಗ್ಯ ಭಾವ ಹುಟ್ಟುತ್ತದೆ.
* ಶುದ್ಧಸಾರಂಗದ ಶುದ್ಧ ‘ಮ’ ದಲ್ಲಿ ಹಗಲಿನ ಬಿಸಿಲಿನ ಭಾವವಿದೆ.
* ದುರ್ಗಾದಲ್ಲಿ ‘ಸ-ಧ’ ಸಂಗತಿ ಸುಂದರವಾದದ್ದು.
* ಬಿಹಾಗ್‍ನಲ್ಲಿ ತೀವ್ರ ‘ಮ’ ದ ಅನಿವಾರ್ಯತೆ ಏನಿಲ್ಲ.
* ಮಿಯಾಕಿ ತೋಡಿ ಉತ್ತರಾಂಗ ಪ್ರಧಾನವಾದರೆ, ಗುಜರಿ ತೋಡಿ ಪೂರ್ವಾಂಗ ಪ್ರಧಾನವಾದದ್ದು.
* ಮಾರವಾ ಗಂಭೀರ ರಾಗವಾದರೆ, ಪೂರಿಯಾ ಚಂಚಲವಾದ ನಾಜೂಕಿನ ಸ್ತ್ರೀಯಂತೆ.
ಇತ್ಯಾದಿ.
ಮುಂಬೈಯಲ್ಲಿ ವಕೀಲರಾಗಿದ್ದು ತಮಗೆ ಅವಕಾಶವಾದಾಗೆಲ್ಲ ಬಿಡುವು ಮಾಡಿಕೊಂಡು ಸಂಗೀತಕ್ಕಾಗಿ ಓಡಾಟ ನಡೆಸುತ್ತಿದ್ದ ಪಂಡಿತರು, ತಮ್ಮ ಅನಾರೋಗ್ಯ ಕಾರಣದಿಂದ ತಮ್ಮ 65ನೇ ವಯಸ್ಸಿನ ಬಳಿಕ ಮೂಲ ಊರಾದ ಗೋಕರ್ಣಕ್ಕೆ ವಾಪಾಸಾದರು. ಅನಾರೋಗ್ಯದಿಂದ ಅವರು ವಯಲಿನ್ ವಾದನವನ್ನು ಸಂಪೂರ್ಣವಾಗಿ ಬಿಡಬೇಕಾಗಿ ಬಂತು. ಸಂಗೀತ ಕಲಿಯಬಯಸಿ ಬಂದ ಮಕ್ಕಳಿಗೆ ಸಂಗೀತ ಪಾಠ ಹೇಳಲು ಆರಂಭಿಸಿದಾಗ ಅವರಿಗೆ, ಅರ್ಥಬದ್ಧವಾದ ಹೊಸ ಬಂದಿಶ್‍ಗಳ ಅಗತ್ಯತೆಯ ಅರಿವಾಯಿತು. ಆಗ ಅವರು ಬಂದಿಶ್ ರಚನೆಗೆ ಮನ ಮಾಡಿ ಸುಮಾರು 250 ರಂದ 300ರಷ್ಟು ರಚನೆಗಳನ್ನು ಮಾಡಿದ್ದಾರೆ. ಅವರ ಮೊದಲ ರಚನೆಯಾದ ಯಮನ್ (ಕಲ್ಯಾಣ್) ನಲ್ಲಿನ ‘ಮಾಯಿ ತೂ ಜಾನತ ಹೋ’ ಎಂಬ ಬಂದಿಶ್‍ನಲ್ಲಿ ತಾಯಿ ಸರಸ್ವತಿಯ ಪ್ರಾರ್ಥನೆ ಇದ್ದರೆ, ಅವರ ಉಳಿದ ಬಂದಿಶ್‍ಗಳಲ್ಲೆಲ್ಲಾ
ಪರಿಸರ, ಋತು ವರ್ಣನೆ, ಮನೋಗಾಥೆ ಅಭಿವ್ಯಕ್ತಿ, ಪ್ರೇಮ ನಿವೇದನೆ, ಮಾತ್ರವಲ್ಲದೆ ಜೀವನದ ಸಣ್ಣ ಪುಟ್ಟ ಘಟನೆಗಳನ್ನು ಸಂಭ್ರಮಿಸುವ ಅರ್ಥದ ಶಬ್ದಗಳಿವೆ. ಬಂದಿಶ್‍ಗಳ ಜೊತೆಗೆ ಪಂಡಿತರು ಠುಮ್ರಿ ತರಾನಾಗಳು, ಗಜಲ್, ಟಪ್ಪಾಗಳನ್ನೂ ರಚಿಸಿದ್ದಾರೆ. ಪಂಡಿತರು 82 ರಾಗಗಳಲ್ಲಿ ಮಾಡಿದ 150 ಬಂದಿಶ್‍ಗಳನ್ನು ಡಾ. ಶಾರದಾ ಭಟ್ ಅವರು ಕರ್ನಾಟಕ ವಿಶ್ವ ವಿದ್ಯಾಲಯದ ಮೂಲಕ ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.
ಬೆಳಗ್ಗೆ ಎದ್ದ ಕೂಡಲೇ ಮೊದಲಿಗೆ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದು ಸ್ವರ ಹಚ್ಚುವ ನನ್ನ ಸ್ವಭಾವ ಅಜ್ಜನಿಗೆ ತುಂಬಾ ಇಷ್ಟದ್ದಾಗಿತ್ತು. ನಾನು ತಂಬೂರಿ ಕೂಡಿಸುವುದು, ತಂತಿ ಹರಿದಾಗ ಹೊಸ ತಂತಿ ಜೋಡಿಸುವುದು ಇವನ್ನೆಲ್ಲಾ ಮೆಚ್ಚಿ ‘ತುಂಬಾ ಕಡಿಮೆ ಗಾಯಕಿಯರಿಗೆ ಇದೆಲ್ಲಾ ಗೊತ್ತಿರುವುದು’ ಎನ್ನುತ್ತಿದ್ದರು. ನಾನು ‘ಸಂಗೀತ ಅಲಂಕಾರ’ ಪರೀಕ್ಷೆ ಕಟ್ಟಿದಾಗ, ಮಾಲಗುಂಜಿ, ದೇವಗಾಂಧಾರ, ಝಿಂಝೋಟಿ, ನಟÀಮಲ್ಹಾರ್, ರಾಮದಾಸಿ ಮಲ್ಹಾರ್ ಮುಂತಾದ ರಾಗಗಳಲ್ಲಿ ತಾವೇ ರಚಿಸಿದ ಬಂದಿಶ್‍ಗಳನ್ನು ಕಲಿಸಿದ್ದಾರೆ.
ಪ್ರತಿದಿನ ಜಪ, ದೇವರಪೂಜೆ ಮಾಡುವ ಸಾರಂಗನ ಬಗ್ಗೆ ಪ್ರೀತಿಯಿಂದ ಆಶೀರ್ವಾದ ಪೂರ್ವಕ ನಮ್ಮ ಮದುವೆಯಲ್ಲಿ ನಮಗೆ ಸುಂದರವಾದ ದೇವರ ಮಂಟಪವೊಂದನ್ನು ಕೊಡುಗೆಯಾಗಿ ನೀಡಿದ್ದರು. ಕೆಲವು ಕಾಲ ಧಾರವಾಡದ ಶಾರದಕ್ಕನ ಮನೆಯಲ್ಲಿ, ಉಡುಪಿಯ ನಮ್ಮ ಮನೆ ‘ಲತಾಂಗಿ’ಯಲ್ಲಿ, ಮಣಿಪಾಲದ ರವಿಕಿರಣ್ ಅವರ ಮನೆಯಲ್ಲಿ ಇದ್ದ ಪಂಡಿತರನ್ನು ಅವರ ಕೊನೆಯವರೆಗೂ ನೋಡಿಕೊಂಡವರು, ಹೊನ್ನಾವರದ ರಾಮಕೃಷ್ಣ ಶಾನುಭೋಗರು ಹಾಗೂ ‘ಸ್ನೇಹಕುಂಜ’ ದ ಡಾ. ಮಹೇಶ್ ಪಂಡಿತರ ನೇತೃತ್ವದ ತಂಡ.
ಪಂಡಿತರು ಹೇಳಿದ ಸಂಗೀತ ತತ್ತ್ವಗಳು ಹಾಗೂ ಸಿದ್ಧಾಂತಗಳು ಇನ್ನೂ ಬಹುಪಾಲು ಸಂಗೀತ ಲೋಕವನ್ನು ತಲುಪಲು ಬಾಕಿ ಉಳಿದಿದೆಯಾದರೂ ಅವರನ್ನು ಒಪ್ಪಿದ ಕೆಲವರಲ್ಲಾದರೂ ಈ ಭಾವಾತ್ಮಕತೆಯ ಬೀಜ ಮೊಳೆತಿರುವುದನ್ನು ಕಾಣಬಹುದು.
ಕುಮಾರ್‍ಜೀ ಹೇಳುತ್ತಿದ್ದ ‘ಸ್ವರದ ಮಧ್ಯಬಿಂದುವನ್ನು ಹುಡುಕುವುದೇ ನಿಜವಾದ ಸಂಗೀತ’ ಎಂಬ ಮಾತನ್ನು ಉಲ್ಲೇಖಿಸುತ್ತಿದ್ದ ಅಜ್ಜ, ಇದನ್ನೇ ‘ಜೀರು’ ಎನ್ನುತ್ತಿದ್ದರು.
ನಮ್ಮನ್ನೆಲ್ಲಾ ನಮ್ಮ ನಮ್ಮ ಸಂಗೀತದ ಹಾಗೂ ಬದುಕಿನ ‘ಜೀರನ್ನು’ ಕಂಡುಕೊಳ್ಳುವ ದಾರಿಗೆ ಹಚ್ಚಿ, ಅಜ್ಜ ತಮ್ಮ ಆನಂದಯಾತ್ರೆಯನ್ನು ಮುಗಿಸಿದ್ದಾರೆ. ನಾವು ಮುಂದುವರಿಯಬೇಕಾದ ದಾರಿ ಕೇವಲ ‘ರಾಗದೊಳಗಿನ ರಾಗತನ’ದ ಶೋಧದ ದಾರಿ ಮಾತ್ರವಲ್ಲ, ನಮ್ಮ ನಮ್ಮ ಅಂತರಂಗದೊಳಗಿನ ಶೋಧದ ದಾರಿ ಹಾಗೂ ಬದುಕಿನ ಸತ್ವದ ಶೋಧದ ದಾರಿ.