[ದಿ.13-10-2017 ರಂದು, ಹೊನ್ನಾವರದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದ ಪಂ.ನಾರಾಯಣ ಪಂಡಿತ್ ರವರು, ಹಿಂದೂಸ್ಥಾನಿ ಸಂಗೀತಗಾರರಾಗಿ, ವಯೋಲಿನ ವಾದಕರಾಗಿ, ವಾಗ್ಗೇಯಕಾರರಾಗಿ ಪ್ರಾವೀಣ್ಯತೆ ಹೊಂದಿದವರಾಗಿದ್ದರು. ಅವರ ಶಿಷ್ಯೆಯಾದ ಶ್ರೀಮತಿ ಶ್ರೀಮತಿದೇವಿ ಸಲ್ಲಿಸುವ ಭಾವ ನಮನ ಇದು]

ಶ್ರೀಮತಿ ಶ್ರೀಮತಿದೇವಿ, ಮೈಸೂರು

 

“ಮಾಈ ತೂ ಜಾನತ ಹೋ ಮೇರೋ ಮನ

ದರಸ ಬಿನ ತೋರೆ ಜಿಯಾ ಅಕುಲಾಯರಿ.

ಬೀನ ಬಿರಾಜೆ ಮೇರೆ ಕಂಠಮೆ

ಬಿಜುರಿಸಿ ಮೇರಿ ತಾನ ಸಾಜೆ

ವಿಚಾರ ಕರೂ ನಿತ  ರೈನ ದಿನ ಘನೇರಿ”

[ತಾಯೀ ನೀನು ನನ್ನ ಮನಸ್ಸನ್ನು ಅರಿತಿದ್ದಿ. ನಿನ್ನ ದರುಶನವಿಲ್ಲದೆ ನನ್ನ ಮನಸ್ಸು ಕಳವಳಗೊಂಡಿದೆ.

ನನ್ನ ಕಂಠದಲ್ಲಿ ವೀಣೆಯನ್ನು ಸ್ಥಾಪಿಸು. ಮಿಂಚಿನ ವೇಗದ ತಾನ್‍ನ್ನು ನೀಡು. ಜೊತೆಗೆ ಪ್ರತಿನಿತ್ಯ ‘ಸ್ವರ’ದ ಬಗ್ಗಿನ ಒಳ್ಳೆಯ ವಿಚಾರವನ್ನು ಕೊಡು]

ಹೀಗೆಂದು ತಾಯಿಯನ್ನು ಪ್ರಾರ್ಥಿಸುತ್ತಾ ‘ಬಂದಿಶ್’ (ಹಿಂದೂಸ್ಥಾನಿ ಸಂಗೀತದಲ್ಲಿ ಬರುವ ಸಂಗೀತ ರಚನೆ)ಗಳ ರಚನೆಗೆ ಆರಂಭಿಸಿದವರು, ದಿ.ಪಂ.ನಾರಾಯಣ ಪಂಡಿತರವರು. ರಾಗ ಕಲ್ಯಾಣ ದಲ್ಲಿ, ವಿಲಂಬಿತ ಲಯದಲ್ಲಿ ಬಧ್ಧಗೊಳಿಸಲಾದ ಪಂಡಿತರ ಮೊಟ್ಟಮೊದಲ ಈ ರಚನೆಯಲ್ಲಿ ಅವರು ಬರೆದಂತೆಯೇ ಬದುಕಿ ಸಾಗಿದರು.  ಪಂಡಿತರು ತಮ್ಮ ಜೀವನದುದ್ದಕ್ಕೂ ಹಂಬಲಿಸಿದ್ದುದು, ಈ ‘ಸ್ವರ’ದ ಸಾಂಗತ್ಯಕ್ಕಾಗಿ ಮಾತ್ರ. ಸಂಗೀತವನ್ನು ನೆಚ್ಚಿಕೊಂಡಂತೆ ಅವರು ಇನ್ನು ಏನನ್ನೂ ನೆಚ್ಚಿಕೊಳ್ಳಲಿಲ್ಲ, ಸಂಗೀತವನ್ನು ಒಲಿಸಿಕೊಳ್ಳಲು ಯತ್ನಿಸಿದಂತೆ ಬೇರೆ ಏನನ್ನೂ ಒಲಿಸಹೊರಡಲಿಲ್ಲ.

ಶ್ರೀ ನಾರಾಯಣ ಪಂಡಿತರು ಉತ್ತರ ಕನ್ನಡದ ಗೋಕರ್ಣದಲ್ಲಿ  23-06-1930ರಂದು ಜನಿಸಿದರು. ಅವರ ತಂದೆ, ಶ್ರೀ ವಿಘ್ನೇಶ್ವರ ಪಂಡಿತರು ಉತ್ತಮ ವಯೋಲಿನ ವಾದಕರಾಗಿದ್ದವರು. ಒಳ್ಳೆಯ ಅಭ್ಯಾಸ ನಡೆಸಿ, ವಯೋಲಿನ ನಲ್ಲಿ ಗಾಯಕಿ ಅಂಗವನ್ನು ಅಳವಡಿಸಿಕೊಂಡವರು. ಮಂದೆ ಜೀವನೋಪಾಯಕ್ಕಾಗಿ, ಮುಂಬೈ ಗೆ ತೆರಳಿ ಅಲ್ಲಿ, ಪಂ.ದೇವಧರ್ ಅವರು ಸ್ಥಾಪಿಸಿದ ಸಂಗೀತ ಶಾಲೆಯಲ್ಲಿ ಸಂಗೀತ ತರಗತಿಗಳನ್ನು ನಡೆಸಲಾರಂಭಿಸಿದರು. ತಂದೆಯಿಂದ ವಯೋಲಿನ ವಾದನವನ್ನು ಕಲಿತ ನಾರಾಯಣ ಪಂಡಿತರು, ನುರಿತ ಕಲಾವಿದರಾಗಿ ರೂಪುಗೊಂಡಿದ್ದರು. ಜೊತೆಗೆ ಆ ಕಾಲದ ಹಿರಿಯ ಸಂಗೀತಗಾರರಾದ ಉ.ಬಡೆ ಗುಲಾಂ ಆಲಿ ಖಾನ್,  ಸಿದ್ಧೇಶ್ವರಿ ದೇವಿ, ಮೋಗುಬಾಯಿ ಕುರ್ಡೀಕರ್, ಪಂ.ರವಿಶಂಕರ್, ಉ.ಫಯ್ಯಾಜ್ ಖಾನ್ ಮೊದಲಾದವರ ಸಂಗೀತವನ್ನು ಕೇಳಿ, ಪ್ರಭಾವಿತರಾಗಿ, ಅದರಲ್ಲಿನ ಉತ್ತಮಾಂಶಗಳನ್ನು ತಮ್ಮ ಸಂಗೀತದಲ್ಲೂ ಅಳವಡಿಸಿಕೊಂಡರು. ಪಂಡಿತರು, ಮುಂಬೈ ಆಕಾಶವಾಣಿಯ ‘ಎ’ಗ್ರೇಡ ಕಲಾವಿದರೂ ಆಗಿದ್ದರು. ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಸಮಾನವಾಗಿ ಪ್ರಭುತ್ವವನ್ನು ಹೊಂದಿದ್ದ ಪಂಡಿತರು ಮರಾಠಿಯಲ್ಲಿ ವಯೋಲಿನ ಬಗ್ಗೆ ಮೌಲಿಕವಾದ ಪುಸ್ತಕವೊಂದನ್ನು ಬರೆದಿದ್ದಾರೆ.

ಪರಂಪರಾಗತವಾದ ಒಳ್ಳೆಯ ಸಂಗೀತ ಶಿಕ್ಷಣವನ್ನು ಪಡೆದಿದ್ದರೂ ಪಂಡಿತರು ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪುವವರಾಗಿರಲಿಲ್ಲ. ಅವರಿಗಿದ್ದ ಈ ವೈಚಾರಿಕ ಮನೋಭಾವದಿಂದಾಗಿ ಪ್ರತಿಯೊಂದು ರಾಗ ಸಂಚಾರದ ಬಗ್ಗೆ ಹಾಗೂ ಸ್ವರೂಪದ ಬಗ್ಗೆ ಯಾವಾಗಲೂ ಅವರಿಗೆ ಪ್ರಶ್ನೆಗಳು ಕಾಡುತ್ತಿದ್ದವು. ಅವರ ಈ ಮನೋಭಾವವೇ ಅವರನ್ನು ಸಹಜವಾಗಿಯೇ ಹಿಂದೂಸ್ಥಾನಿ ಸಂಗೀತದ ಭಾವಕ್ರಾಂತಿಯ ಹರಿಕಾರ ಪಂ.ಕುಮಾರ ಗಂಧರ್ವರ ಬಳಿ ಕರೆದೊಯ್ಯಿತು. ವೃತ್ತಿಯಲ್ಲಿ ವಕೀಲರಾಗಿದ್ದ ಪಂಡಿತರು, ಬಿಡುವನ್ನು ಪಡೆದುಕೊಂಡು ದೇವಾಸದಲ್ಲಿ ವಾಸವಾಗಿದ್ದ ಕುಮಾರಜೀ ಅವರ ಬಳಿ ಸತತ 35-40ವರ್ಷಗಳ ಕಾಲ ಸಂಗೀತಾಭ್ಯಾಸ ನಡೆಸಿದರು. ತಮ್ಮ ಗುರುಗಳು ತಮ್ಮನ್ನು ಅವರ ಪರಿವಾರದಲ್ಲಿ ಒಬ್ಬನಾಗಿ ಮಾಡಿಕೊಂಡದ್ದು ತಮ್ಮ ಸೌಭಾಗ್ಯವೆಂಬುದನ್ನು ಪಂಡಿತರು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು. ಕುಮಾರ ಗಂಧರ್ವರ ಪ್ರಯೋಗಶೀಲತೆ, ಸೃಜನಾತ್ಮಕತೆ, ಅವರು ಸ್ವರವನ್ನು ಪರಿಭಾವಿಸುವ ರೀತಿ, ಅವರು ರಚಿಸಿದ ಬಂದಿಶ ಗಳಲ್ಲಿನ ತಾಲದ ನಿರೂಪಣೆ, ಸಾಹಿತ್ಯ ಇವೆಲ್ಲವುಗಳಿಂದ ಪಂಡಿತರು ಪಡೆದದ್ದು ಅಪಾರ. ಜೊತೆಗೆ ಕುಮಾರಜೀ ಜೊತೆಗೆ ತಂಬೂರ ಸಹಕಾರ ನೀಡಲು ಹಲವಾರು ಕಡೆಗೆ ಹೋಗಿದ್ದುದರಿಂದ ಅವರ ಬಳಿ ಅನುಭವದ ದೊಡ್ಡ ಭಂಡಾರವೇ ಇತ್ತು.

ನಾರಾಯಣ ಪಂಡಿತರು, ಕುಮಾರಜೀ ಅವರು ಹಾಡುತ್ತಿದ್ದ ಪಾರಂಪಾರಿಕ ಬಂದಿಶ್ ಗಳ ಜೊತೆ ಕುಮಾರಜೀ ರಚಿಸಿದ ಅವರ ಎಲ್ಲಾ ಹೊಸ ರಾಗಗಳು-ಬಂದಿಶ್ ಗಳನ್ನು ಬಲ್ಲವರಾಗಿದ್ದರು. ಕುಮಾರಜೀ ಹಾಡುತ್ತಿದ್ದ ಲೋಕಧುನ್, ಋತುಗೀತೆಗಳು, ನಿರ್ಗುಣಿ ಭಜನ್ ಇವಲ್ಲವುಗಳ ಸಂಗ್ರಹ ಅವರ ಬಳಿ ಇತ್ತು.

ಸಂಗೀತದ ಹುಚ್ಚನ್ನು ಹಿಡಿಸಿಕೊಂಡು, ವೃತ್ತಿ-ಪ್ರವೃತ್ತಿಯನ್ನು, ಪತ್ನಿಯಾದ ಸವಿತಾ ಅವರ ಸಹಕಾರದೊಂದಿಗೆ ಸರಿದೂಗಿಸಿಕೊಂಡು ಹೋಗುತ್ತಿದ್ದ ಪಂಡಿತರು ಹಠಾತ್ತಾಗಿ 1990ರ ಆಸುಪಾಸಿನಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಇದರಿಂದಾಗಿ ವಯೋಲಿನ ನುಡಿಸುವುದೇ ಕಷ್ಟÀವಾದಾಗ, ತಮ್ಮ ಊರಾದ ಗೋಕರ್ಣಕ್ಕೆ ವಾಪಾಸಾದರು. ಇದೇ ಸಮಯದಲ್ಲಿ ಪತ್ನಿಯನ್ನೂ ಕಳೆದುಕೊಂಡರು. ಸಂಗೀತ ಕಲಿಯ ಬಯಸಿದ ಕೆಲವು ವಿದ್ಯಾರ್ಥಿಗಳಿಗೆ ಪಾಠ ಹೇಳಲು ಆರಂಭಿಸಿದರು. ಆಗ ಪಂಡಿತರು, ಹಿಂದೂಸ್ಥಾನಿ ಸಂಗೀತದಲ್ಲಿ ಈಗ ಚಾಲ್ತಿಯಲ್ಲಿರುವ ಬಂದಿಶ್‍ಗಳಲ್ಲಿ ಹೆಚ್ಚಿನವು ಶೃಂಗಾರ ರಸ ಪ್ರಧಾನವಾಗಿದ್ದು, ಅವುಗಳೂ ಮೌಖಿಕ ಪರಂಪರೆಯಲ್ಲಿ ಬರುವಾಗ ಅರ್ಥ ಕಳೆದುಕೊಂಡು ಹಾಡಲಾಗುತ್ತಿದ್ದುದನ್ನು ಗಮನಿಸಿದರು. ವಿದ್ಯಾರ್ಥಿಗಳಿಗೆ ಹೇಳಿಕೊಡಬಹುದಾದ ಅರ್ಥಬದ್ಧ ಬಂದಿಶ್ ಗಳ ಕೊರತೆ ಇರುವುದನ್ನು ಮನಗಂಡು, ರಚನೆಗೆ ಮುಂದಾದರು. ಈ ಒತ್ತಡದಲ್ಲಿ ಮೈದಾಳಿದವು ಪಂಡಿತರ ಚಂದ ಚಂದದ ಬಂದಿಶ್ ಗಳು.

ಬಂದಿಶ್ ಗಳು ‘ರಾಗಸೂಚಿ’ಯಾದವು ಎಂಬುದನ್ನು ಧೃಢವಾಗಿ ನಂಬಿದ ಪಂಡಿತರು ನಾವು ಆಯ್ಕೆ ಮಾಡಿಕೊಂಡ ಬಂದಿಶ್ ನಾವು ರಾಗವನ್ನು ಹೇಗೆ ಹಾಡಹೊರಟಿದ್ದೇವೆ ಎಂಬುದನ್ನು ನಿರ್ಣಯಿಸುತ್ತವೆ ಎನ್ನುತ್ತಾರೆ. ರಾಗದ ವಿವಿಧ ಮೂಲೆಗಳನ್ನು ಶೋಧಿಸುವ ಸುಮಾರು 250ಕ್ಕೂ ಹೆಚ್ಚಿನ ರಚನೆಗಳನ್ನು ಪಂಡಿತರು ಮಾಡಿದ್ದಾರೆ. ಅವುಗಳೆಲ್ಲಾ ಬೇರೆ ಬೇರೆ ತಾಲಗಳಲ್ಲಿ ರಚಿತವಾಗಿವೆ. ಕೇವಲ ಬಡಾಖ್ಯಾಲ್ ಹಾಗೂ ಛೋಟಾಖ್ಯಾಲ್ ಮಾತ್ರವಲ್ಲದೆ ಠುಮ್ರಿ, ಟಪ್ಪಾ, ಟಪ್ ತರಾನಾ, ಗಜಲ್, ದಾದ್ರಾ, ಚತುರಂಗ ಮುಂತಾದ ಹಲವು ಸಂಗೀತ ಪ್ರಕಾರಗಳಲ್ಲೂ ರಚನೆಗಳನ್ನು ಮಾಡಿದ್ದಾರೆ. ಅವರ ಮೊದಲ ಕೆಲವು ರಚನೆಗಳಲ್ಲಿ ಯಾವುದೇ ಅಂಕಿತವನ್ನು ಬಳಸಿಲ್ಲವಾದರೂ ಮುಂದಿನ ರಚನೆಗಳಲ್ಲಿ ಅವರು ‘ನಾದಪಿಯಾ’ ಎಂಬ ಅಂಕಿತವನ್ನು ಉಪಯೋಗಿಸಿದ್ದಾರೆ. ನಿಸರ್ಗದ ವರ್ಣನೆ, ಮನೋಭೂಮಿಕೆಯ ನಿವೇದನೆ, ದಿನನಿತ್ಯದ ಜೀವನದ ಸಣ್ಣ ಸಣ್ಣ ಆನಂzದಾಯಕ ಘಟನೆಗಳುÀ, ಸ್ವರ-ರಾಗಗಳ ಮಹಿಮೆಯನ್ನು ವರ್ಣಿಸುವ ಶಬ್ದಗಳಿಂದ ಕೂಡಿದ ಪಂಡಿತರ ಬಂದಿಶ್ ಗಳು ಅವುಗಳಲ್ಲಿನ ಲಾಲಿತ್ಯ, ಚೈತನ್ಯದಿಂದಾಗಿ, ಅವುಗಳಲ್ಲಿನ ಕಾವ್ಯಾತ್ಮಕತೆಯಿಂದಾಗಿ, ಅವುಗಳಲ್ಲಿನ ಸ್ವರದ ಕಲ್ಪನೆಯಿಂದಾಗಿ, ಸಾಹಿತ್ಯ ಸಮೃದ್ದಿಯಿಂದಾಗಿ ಉಳಿದ ಬಂದಿಶ್ ಗಳಿಂದ ಬೇರೆಯದಾಗಿ ನಿಲ್ಲುತ್ತವೆ, ಅಷ್ಟೇ ಅಲ್ಲದೆ ಎಲ್ಲರ ಮನಮುಟ್ಟುತ್ತವೆ.  ಸಂಗೀತದಲ್ಲಿನ ಅವರ ಈ ಹೊಸತಾದ ಭಾವದ ಆವಿಷ್ಕಾರವನ್ನು ಅವರು ‘ಭಾವಸೌಂದರ್ಯವಾದ’ ಎಂಬ ಹೆಸರಿನಿಂದ ಕರೆದಿದ್ದಾರೆ.

ತಮ್ಮೆಲ್ಲಾ ಬಂದಿಶ್ ಗಳನ್ನು ಅತ್ಯಂತ ಸ್ಫುಟವಾಗಿ, ನಾಜೂಕಾಗಿ ಪುಸ್ತಕಗಳಲ್ಲಿ ಸ್ವರಲಿಪಿಬದ್ಧಗೊಳಿಸಿ ಇಡುವ ತುಂಬಾ ಅಪರೂಪದ ಅಭ್ಯಾಸ ಅವರಿಗಿತ್ತು. ಪಂಡಿತರ ನೆಚ್ಚಿನ ಶಿಷ್ಯೆಯಾದ ಡಾ.ಶಾರದಾ ಭಟ್ ಅವರು, ಗುರುಗಳು 82ರಾಗಗಳಲ್ಲಿ ರಚಿಸಿದ 150 ಬಂದಿಶ್ ಗಳನ್ನು ಸಂಕಲಿಸಿ, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ ‘ಅಭಿನವ-ಭಾವ ಬಂದಿಶ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.  ತಮ್ಮ ಶಿಷ್ಯರನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಿದ್ದ ಪಂಡಿತರಿಗೆ ಡಾ.ಶಾರದಾ ಭಟ್, ಲಲಿತಾ ಹೀರೆಗಂಗೆ, ಅರ್ಪಿತ ಶಾನುಭೋಗ್, ಅನ್ನಪೂರ್ಣ ಶಾನುಭೋಗ್, ಶ್ರೀ ರವಿಕಿರಣ ಮಣಿಪಾಲ, ಶ್ರೀಮತಿದೇವಿ, ಗಜಾನನ ಹೆಬ್ಬಾರ್ ಇವುರುಗಳಷ್ಟೇ ಅಲ್ಲದೇ, ಕರ್ನಾಟಕಿ ಸಂಗೀತದ ಬಹುದೊಡ್ಡ ಪ್ರತಿಭೆಯಾಗಿ ಮೆರೆದ ಉಡುಪಿಯ ರಂಜನಿ ಹೆಬ್ಬಾರ್ ಮುಂತಾದ ಶಿಷ್ಯರಿದ್ದರು.

ಅನಾರೋಗ್ಯಪೀಡಿತರಾದ ನಂತರ ತಮ್ಮ ಕೊನೆಗಾಲದ ವರೆಗೂ ಹೊನ್ನಾವರದ ಕಾಸರಕೋಡಿನ ‘ಸ್ನೇಹಕುಂಜ’ ಆರೋಗ್ಯಧಾಮದಲ್ಲಿ  ವಾಸವಾಗಿದ್ದ ಪಂಡಿತರು ಕೆಲವು ಕಾಲ ಡಾ.ಶಾರದಾ ಭಟ್ ಅವರ ನಿವಾಸದಲ್ಲಿ, ಹಾಗೂ ರವಿಕಿರಣ್ ಹಾಗೂ ಶ್ರೀ ಅರವಿಂದ ಹೆಬ್ಬಾರ ಅವರ ಮನೆಯಲ್ಲೂ ಇದ್ದು, ಅಲ್ಲಿ ತಮ್ಮ ಭಾವನಿಷ್ಠವಾದ ಸಂಗೀತ ನೆಲೆಯೂರಲು ಕಾರಣರಾಗಿದ್ದಾರೆ.

‘ಸಂಗೀತವೆಂಬುದೊಂದು ಆನಂದ ಯಾತ್ರೆ’ ಎನ್ನುತ್ತಿದ್ದ ಪಂಡಿತರ ಸಂಗೀತ ಯಾತ್ರೆ ಏಕಾಂಕಿಯಾಗೇ ಸಾಗಿ, ಏಕಾಂಗಿಯಾಗೇ ಮುಗಿದದ್ದು ಮಾತ್ರ ನಮ್ಮ ಕಾಲದ ದುರಂತ ಅನ್ನಬಹುದೇನೋ… ಸ್ವರದ ಆನಂದವನ್ನೇ ಉಸಿರಾಗಿಸಿಕೊಂಡು ಬದುಕಿದ ಪಂಡಿತಜ್ಜನ ಉಸಿರು ನಿಸ್ತೇಜಗೊಂಡರೂ, ಅವರನ್ನು ಆರಾಧಿಸಿದ ಹಲವರಲ್ಲಿ ಅವರು ಹಚ್ಚಿದ ‘ಸ್ವರದ ಪ್ರೀತಿ’ ಇನ್ನೂ ಉಸಿರಾಡುತ್ತಿದೆ.

Leave a Reply

Your email address will not be published. Required fields are marked *