ಸೆಪ್ಟೆಂಬರ್ 7, 2014 ಭಾನುವಾರ – ಇಡೀ ದಿನದ ಕಾರ್ಯಕ್ರಮಗಳು :
ಸ್ಥಳ: ಮಣಿಪಾಲದ ಕೌನ್ಸೆಲಿಂಗ್ ಹಾಲ್, ಮಣಿಪಾಲ್ ಎಡ್ಯೂ ಬಿಲ್ಡಿಂಗ್, ಮಣಿಪಾಲ್ ಯೂನಿವರ್ಸಿಟಿ, ಮಣಿಪಾಲ.

ಬೆಳಗ್ಗೆ 9.30 ಕ್ಕೆ ಸರಿಯಾಗಿ ಕಡೈನಲ್ಲೂರ್ ನ ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ಅವರಿಂದ ಸುಶ್ರಾವ್ಯವಾದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಹೆಚ್ಚು ಜನ ಬಂದಿರಲಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿ ಆರಂಭವಾಗಿತ್ತು. ಅತ್ಯಂತ ಸುಮಧುರ ಶಾರೀರ. ಸೂಕ್ಷ್ಮಾತಿಸೂಕ್ಷ್ಮ ಪಲುಕುಗಳು ಮತ್ತು ತುಸು ನೆಗಡಿ ಯಾದವರ ಧ್ವನಿ ಪರಿಣಾಮ ಈಕೆಯದು. ಕೆಳ ಸ್ಥಾಯಿಯಲ್ಲಿ ಧ್ವನಿ ಓಡದು. ಆದರೆ ಮಧ್ಯ -ತಾರಗಳಲ್ಲಿ ಅತ್ಯಂತ ಸುಖ ನೀಡುವ ಗುಣವುಳ್ಳದ್ದು. ರಂಜನಿ ಈಕೆಗೆ ಮದ್ರಾಸಿನಲ್ಲಿದ್ದಾಗ ಸಂಗೀತ ಕಲಿಸಿಕೊಟ್ಟಿದ್ದಳು. ಸುಬ್ಬುಲಕ್ಷ್ಮಿ ರಘುನಾಥ್ ಹಾಡಿದ ಗೋವಿಂದಾಷ್ಟಕ ರಾಗಮಾಲಿಕೆ ಎಂ.ಎಸ್. ಸುಬ್ಬುಲಕ್ಷ್ಮಿಯವರನ್ನೇ ನೆನಪಿಸುತಿತ್ತು. ರಾಮ ಸಿಮರ -ಭಜನ್(ಪೀಲೂ),ತುಕಾರಾಮರ ವಿಠಲ ಮಾಯಾ( ಶುದ್ಧ ಸಾರಂಗ್), ಯೇಗಾ ಯೇಗಾ ವಿಠಭಾಯೀ ಮಾಝ್ಹೇ ಪಂಡರೀಚೇ ಆಯೀ ಅಭಂಗಗಳು, ನಾರಾಯಣಾ ನಿನ್ನ ನಾಮದ ಸ್ಮರಣೆಯ(ಶುದ್ಧ ಧನ್ಯಾಸಿ),ವಿಶ್ವೇಶ್ವರ ದರುಶನಕರ( ಸಿಂಧು ಭೈರವಿ), ಅಪರಾಧಿನಾನಲ್ಲ( ವಲಜಿ), ಮೊದಲಾದ ಹಾಡುಗಳು ಮನ ಸೂರೆಮಾಡಿದ್ದವು.ತಬಲಾದಲ್ಲಿ ಶ್ರೀ ಮಾಧವ ಆಚಾರ್ಯ ಸಹಕರಿಸಿದ್ದರು.
10.30ಕ್ಕೆಸರಿಯಾಗಿ ಬೆಂಗಳೂರಿನ ಪ್ರಿಯಾಂಕ ಸಿ. ಪ್ರಕಾಶ್ ಅವರ ಹಾಡುಗಾರಿಕೆ. ಗಂಡಸು ಹಾಡುಗಾರಿಕೆಯ ರೀತಿ ನೀತಿ ಈಕೆಯದು. ತಾರ ಸ್ಥಾಯಿಯಲ್ಲಿ ರವಾ ಶಾರೀರ ಚೆನ್ನಾಗಿ ನುಡಿದರೂ, ಧ್ವನಿ ಪರಿಣಾಮವನ್ನು ಪರಿಣಾಮಕಾರಿಯಾಗಿ ನುಡಿಸದೇ ಹೋದುದು ದೊಡ್ಡ ಕೊರತೆಯೆನಿಸಿತು. ವಿದ್ವತ್ತು ಇದೆ. ಆದರೆ ಧ್ವನಿಯ ವಾಲ್ಯೂಮ್ ತೀರಾ ಹೆಚ್ಚುಕಡಿಮೆಯಾಗಿ ನಾಟಕೀಯ ಕಚೇರಿಯೆನಿಸುತ್ತದೆ. ಚೆನ್ನಾದ ವಿಮರ್ಶಕರ ವಿಮರ್ಶೆಗೆ ತುತ್ತಾದರೆ, ಮತ್ತು ಹಾಗೇ ಸ್ವಸಾಮಾರ್ಥ್ಯದಿಂದ ಅಳವಡಿಸಿಕೊಂಡರೆ ಉತ್ತಮ ಕಲಾವಿದೆಯಾಗುವ ಭರವಸೆ ಯನ್ನು ಪ್ರಿಯಾಂಕ ತೋರಿದ್ದಾರೆ.ಅವರು ಆಯ್ದುಕೊಂಡ ರಂಜನಿ, ಶ್ರೀರಂಜನಿ, ಲತಾಂಗಿ ಮತ್ತು ಕಾಂಭೋಜಿಯ ಓ ರಂಗ ಶಾಯಿ – ಗಳು ಸಹಿಸೆಬ್‍ಲ್. ರಾಗದ ಅಂದವನ್ನು ಹೊರಗೆಡಹಲು ತಾಳದ ಲೆಕ್ಕಾಚ್ಹಾರದ ಕಣಕ್ಕುಗಳಿಂದ ಅವರು ಹೊರಬರಬೇಕು. ನಿಜವಾದ ಸಂಗೀತದ ಗುಟ್ಟನ್ನು ತಿಳಿಯಲು ಬಹಳ ಪ್ರಯತ್ನ ಪಡಬೇಕು.
ಮಧ್ಯಾಹ್ನ ಕಲಾವಿದರೆಲ್ಲರಿಗೆ ಲತಾಂಗಿಯಲ್ಲಿ ಊಟ. ಸುಬ್ಬುಲಕ್ಷ್ಮಿ – ರಘುನಾಥ್, ಪ್ರಿಯಾಂಕ ಪ್ರಕಾಶ್ ಮತ್ತವರ ಅಮ್ಮ ಹಾಗೂ ಸುನಿಲ್ ಸುಬ್ರಹ್ಮಣ್ಯ (ಮೃದಂಗ) ಸೇರಿದಂತೆ 40 ಜನ ಲತಾಂಗಿ ಮನೆಯವರು ಗಮ್ಮತ್ತಿನ ಭೋಜನ ವನ್ನೇ ಸಿದ್ಧಪಡಿಸಿದ್ದರು. ರಾಧಿಕ, ಶಾರದ, ರಾಜಶ್ರೀಯವರ ಅಡುಗೆ ಮತ್ತು ವಿಲೆವಾರಿಗಳಿಂದ ಊಟದ ಸವಿ ಜಾಸ್ತಿಯಾಗಿತ್ತು ಎಂದರೆ ಅತಿಶಯೋಕ್ತಿ ಅಲ್ಲ. ಶಂಕರನಾರಾಯಣ, ಗೋವಿಂದ ಉಪಾಧ್ಯಾಯ, ಸಲ್ಮಾ, ಸಾರಂಗನವರ ಕಾರಿನಲ್ಲಿ ಎಲ್ಲರೂ ಮತ್ತೊಮ್ಮೆ ಮಣಿಪಾಲದ ಕೌನ್ಸೆಲಿಂಗ್ ಹಾಲಿನಲ್ಲಿ ಸಂಜೆ 3.00 ಗಂಟೆಗೆ ಸೇರುವಂತಾಯಿತು.
ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ಕು. ಗಾರ್ಗಿ ಶಬರಾಯ ಅವಳ ಹಾಡುಗಾರಿಕೆಯಿತ್ತು. ಕೇದಾರಗೌಳದಿಂದ ತೊಡಗಿ ವರಾಳಿಯಲ್ಲಿ ವಿಸ್ತಾರವಾಗಿ ಹಾಡಿ ಜನರನ್ನು ಮಂತ್ರಮುಗ್ಧರನ್ನಾಗಿಸಿದ್ದು ಗಾರ್ಗಿಯೇ. ಖರಹರಪ್ರಿಯದ ‘ಸಮಾನಮೆವರು’ ತುಂಬ ಮೆಚ್ಚುಗೆ ಸಾಧಿಸಿತು. ವರಾಳಿಯ ‘ಏಟಿ ಜನ್ಮ ‘ವಂತೂ ಭಾರೀ ಪ್ರಶಂಸೆ ಪಡೆಯಿತು. ಜೀರು ಪಡೆದ ಉತ್ತಮ ಕಂಠ ಸೌಕರ್ಯ ಪಡೆದ ಗಾರ್ಗಿ, ‘ರಂಜನಿಯೇ ಮರುಹುಟ್ಟುಪಡೆದಂತೆ’ ಎಂಬ ಮಾತಿಗೆ ಪಾತ್ರಳಾದಳು. ವರಾಳಿಯ ಗಾಂಧಾರ -ಮಧ್ಯಮಗಳನ್ನು ಬಹು ಸಮರ್ಥ ವಾಗಿ ದುಡಿಸಿಕೊಂಡ ಗಾರ್ಗಿಗೆ ಲಘು ಸಂಗೀತವಷ್ಟೇ ಅಲ್ಲದೆ ಘನ ಸಂಗೀತವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲೆ ಎಂಬ ಆತ್ಮ ವಿಶ್ವಾಸ ಬಂದುದು ಸತ್ಯವೇ ಸರಿ. ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ಹರಿಭಜನೆ ಮಾಡೊ’- ರಂಜನಿಯನ್ನು ಅನುರಣಿಸುತ್ತಿದ್ದವು. ತಾಳದ ಅನುಸರಣೆಗೆ, ತುಸು ಹೆಚ್ಚಿನ ಗಮನ ಅಪೇಕ್ಷಣೀಯ. ಅಶ್ವಿನ್ ಕಲ್ಯಾಣ್ ಮತ್ತು ಬಾಲಚಂದ್ರ ಭಾಗವತರು ಪಕ್ಕ ವಾದ್ಯ ಸಹಕಾರವಿತ್ತಿದ್ದರು.
ಸಂಜೆ 5.00ಕ್ಕೆ ರಂಜನಿ ಮೆಮೋರಿಯಲ್ ಟ್ರಸ್ಟ್ ನ ಉದ್ಘಾಟನಾ ಸಮಾರಂಭವನ್ನು ಕಡೈನೆಲ್ಲೂರಿನ ಶ್ರೀ ರಘುನಾಥ್ ದಾಸ್ ಮಹಾರಾಜ್ ಮತ್ತು ಮಣಿಪಾಲದ ಡಾ. ಮುರಳೀಧರ ಪೈ ಅವರು ನೆರವೇರಿಸಿಕೊಟ್ಟರು. ಇನ್ನೊಬ್ಬ ಅಭ್ಯಾಗತರು ಶ್ರೀ ನಾರಾಯಣ ಪಂಡಿತಜೀ ಅವರು ದೇಹಾಲಸ್ಯದಿಂದ ಬಂದಿರಲಿಲ್ಲ. ಡಾ. ಮುರಳೀಧರ ಪೈ ಟ್ರಸ್ಟ್ ಗೆ ಶುಭ ಹಾರೈಸಿ ಒಳ್ಳೆಯ ಮಾತುಗಳನ್ನಾಡಿದರು. ಅಪ್ಪಟ ಸಂಸ್ಕೃತದಲ್ಲಿ ತಿಳಿಯಾಗಿ, ನವಿರಾಗಿ ಮಾತನಾಡಿ , ಅಚ್ಚರಿಹುಟ್ಟಿಸಿದ ಕಡೈನೆಲ್ಲೂರಿನ ಶ್ರೀ ರಘುನಾಥ್ ದಾಸ್ ಮಹಾರಾಜ್ ಟ್ರಸ್ಟ್ ಗೆ ಕಾರಣೀಭೂತರಾದವರನ್ನು ಅಭಿನಂದಿಸಿ ತಮ್ಮಿಂದಾದ ಸಹಕಾರವನ್ನು ಕೊಡುವುದಾಗಿ ಹೇಳಿ ರಂಜನಿಯ ಸ್ಮರಣೆಯನ್ನೂ ಮಾಡಿ ಶುಭ ಹಾರೈಸಿದರು.ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಅರವಿಂದ ಹೆಬ್ಬಾರರು ಟ್ರಸ್ಟ್ ನ ಆಶೋತ್ತರಗಳನ್ನು ತಿಳಿಸುತ್ತಾ ಈ ಸಂಘಟನೆಯು ಮೈಕ್ರೋ ಲೆವೆಲ್ ನಲ್ಲಿ, ಗ್ರಾಸ್ ರೂಟ್ ಲೆವೆಲ್ ನಲ್ಲಿ ಕೆಲಸ ಮಾಡುವುದಾಗಿಯೂ, ಸಂಗೀತವನ್ನು ಗಂಭೀರವಾಗಿ ಪರಿಗಣಿಸಿದವರ ಸಂಗೀತದ ಅಭಿವñದ್ಧಿಯ ಸಹಾಯಕ್ಕಾಗಿ ಶ್ರಮಿಸುವುದನ್ನೂ ಸ್ಪಷ್ಟಮಾತುಗಳಲ್ಲಿ ತಿಳಿಸಿ ಹಾಗೆ ಸಭೆಯ ಮುಂದೆ ಪ್ರತಿಜ್ಞೆಮಾಡಿ ಹೇಳಿದರು. ಸಭೆಯನ್ನು ಶ್ರೀಮತಿ ವಸಂತಲಕ್ಷ್ಮೀ ಹೆಬ್ಬಾರರು ಟ್ರಸ್ಟ್ ನ ಕಾರ್ಯದರ್ಶಿಯ ನೆಲೆಯಲ್ಲಿ ಎಲ್ಲರನ್ನೂ ಸ್ವಾಗತಿಸಿದರೆ,ಕೊನೆಯಲ್ಲಿ ಶ್ರೀ ಸಾರಂಗ ಹೆಬ್ಬಾರರು ವಂದಿಸಿದರು. ಪೆÇ್ರ.ಕೆ. ಸದಾಶಿವ ರಾವ್ ಅವರು ಟ್ರಸ್ಟ್ ನ ಕೋಶಾಧಿಕಾರಿಯಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿನದ ಕೊನೆಯ ಕಚೇರಿ ಶ್ರೀಮತಿ ಶ್ರೀಮತಿ ದೇವಿಯವರದು. ಸಂಜೆ 6.15ರಿಂದ 8.00 ರವರೆಗೆ. ಶಿರ್ಸಿಯ ಭರತ್ ಹೆಗಡೆ ಮತ್ತು ಬೆಂಗಳೂರಿನ ಶ್ರೀ ಗುರುಮೂರ್ತಿ ವೈದ್ಯರ ಸಾಥಿಯೊಂದಿಗೆ. ಬೇಹಾಗ್ ರಾಗದಲ್ಲಿ ಬಡಾ ಖ್ಯಾಲ್ ನ್ನು ವಿದ್ವತ್ಪೂರ್ಣವಾಗಿ ನಿರೂಪಿಸಿದ ಬಳಿಕ ದುರ್ಗಾ ರಾಗದಲ್ಲಿ ಚೋಟಾ ಖ್ಯಾಲ್ ನ ಅಂದವಾದ ಸಮರ್ಪಣೆ. ಜಿಂಜೂಟಿಯಲ್ಲಿ ಶ್ರೀ ನಾರಾಯಣ ಪಂಡಿತಜೀಯವರ ‘ರೇಷಮ್ ಕಿ ಡೋರ ಸುರಕೀ’ ಯವರ ಬಂದಿಶ್‍ನ ಪ್ರಸ್ತುತಿಯಂತೂ ಎಲ್ಲರ ಗಮನ ಸೆಳೆಯಿತು. ಧ್ವನಿಯೂ ರೇಷ್ಮೆಯ ಎಳೆಯಂತೆ ನುಡಿಯುತ್ತಿದ್ದುದು ಅದಕ್ಕೆ ಪೆÇೀಷಕವಾಗಿತ್ತು. ಮತ್ತೊಂದು ಪ್ರಸ್ತುತಿ ಜೂಲಾ. ಬಳಿಕ ತುಂಬ ಚೊಕ್ಕವಾದ ನಿರೂಪಣೆಯಲ್ಲಿ ಗೋರಖ್ ಕಲ್ಯಾಣ್ ನಲ್ಲಿ ‘ಪುಷ್ಪವ ತಂದು ಸಮರ್ಪಿಸುವೆನೆಂದರೆ’ ಎಂಬ ಪುರಂದರ ದಾಸರ ಕೀರ್ತನೆ. ಕಬೀರರ ನಿರ್ಗುಣೀ ಭಜನ್ ನಲ್ಲಿ ‘ಹೀರನ್ನಾ’ ಎಂಬ ಪ್ರಸ್ತುತಿಯಲ್ಲಿ ಶ್ರೀಮತಿ, ತಮ್ಮ ಹಾಡಿನ ಶ್ರೀಮಂತಿಕೆಯನ್ನು ಮೆರೆದರು.ಸಾಥೀಗಳು ನೀಡಿದ ಸಮರ್ಥ ಸಹಕಾರ ಕಚೇರಿಗೆ ಅರ್ಥಪೂರ್ಣ ಸೊಬಗು ನೀಡಿದ್ದಂತೂ ನಿಜ.

ಸೆಪ್ಟೆಂಬರ್ 8, 2014 ಸೋಮವಾರ
ಅಂದು ಸಂಜೆ ಲತಾಂಗಿಯಲ್ಲಿ ಭಜನಾ ಸತ್ಸಂಗ ಏರ್ಪಾಡಾಗಿತ್ತು. ಶ್ರೀ ಅರವಿಂದ ಹೆಬ್ಬಾರ್, ವಸಂತಲಕ್ಷ್ಮೀ ಹೆಬ್ಬಾರ್ ಮತ್ತವರ ಅವರ ಶಿಷ್ಯೆಯರು ಕು. ಗಾರ್ಗಿ , ಅರ್ಚನಾ, ಸಮನ್ವಿ ಮತ್ತು ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ಅವರು ಹಾಡಿದ್ದರು. ಕೀ ಬೋರ್ಡಿನಲ್ಲಿ ಶ್ರೀ ಮುರಳೀಧರ್ ಮತ್ತು ತಬಲಾದಲ್ಲಿ ಶ್ರೀ ಅಶೋಕ್ ಪೈ ಸಹಕರಿಸಿದ್ದರು. ಸತ್ಸಂಗಕ್ಕೆ ಬಂದವರೆಲ್ಲಾ ಹಾಡುತ್ತಾ ಸಂತೋಷಿಸಿದರು.ಕೊನೆಯಲ್ಲಿ ಪ್ರಸಾದ ಭೋಜನವಿತ್ತು.

ಸೆಪ್ಟೆಂಬರ್ 9, 2014 ಮಂಗಳವಾರ
ಕೊನೆಯ ದಿನ 9-9-2014 ರಂಜನಿಯ 32 ನೆಯ ಜನ್ಮ ದಿನದ ಕಾರ್ಯಕ್ರಮವಾಗಿ ಲತಾಂಗಿ ಸಿಸ್ಟರ್ಸ್ ಎಂಬುದಾಗಿ ನಾಮಾಂಕಿತರಾದ ಕು. ಅರ್ಚನಾ- ಸಮನ್ವಿಯವರಿಂದ ಯುಗಳಹಾಡುಗಾರಿಕೆ ಕಚೇರಿ ಸಂಜೆ 5.45ರಿಂದ 7.45ರವರೆಗೆ ನಡೆಯಿತು. ಸ್ಥಳ: ಮಣಿಪಾಲದ ಕೌನ್ಸೆಲಿಂಗ್ ಹಾಲ್, ಮಣಿಪಾಲ್ ಎಡ್ಯೂ ಬಿಲ್ಡಿಂಗ್, ಮಣಿಪಾಲ್ ಯೂನಿವರ್ಸಿಟಿ, ಮಣಿಪಾಲ.ಕ್ರಮವಾಗಿ 9 ನೆಯ ಹಾಗೂ 7ನೆಯ ತರಗತಿಗಳಲ್ಲಿ ಓದುತ್ತಿರುವ ಈ ಮಕ್ಕಳು ಭೈರವಿಯ ವಿರಿಬೋಣಿ ವರ್ಣದೊಂದಿಗೆ ಆರಂಭಿಸಿದರು. ಒಂದೂ ಎಡವಟ್ಟಿಲ್ಲದೆ ಗಂಭೀರವಾಗಿ ಸಾಗಿದ ಈ ಅಟ ತಾಳ ವರ್ಣದ ಬಳಿಕ ನಾಟದ ಮಹಾಗಣಪತಿಂ ಮನಸಾ ಸ್ಮರಾಮಿ. ನಾಟ ರಾಗದ ಷಟ್ಶ್ರುತಿ ರಿಷಭದ ಅಪ್ಪಟ ಸ್ವರೂಪವನ್ನು ಪ್ರಕಟಿಸುವಲ್ಲಿ ಈ ಬಾಲಕಿಯರು ಯಶಸ್ವಿಯಾದರು. ಬಳಿಕ ರಾಗ ಜಗನ್ಮೋಹಿನಿಯ ಶೋಭಿಲ್ಲು ಸಪ್ತಸ್ವರ. ಅರ್ಚನ ಆಲಾಪಿಸಿದ ಧನ್ಯಾಸಿಯಲ್ಲಿ ದೊಡ್ಡವರ ವರಸೆಗಳೇ ಬಂದು ಕಚೇರಿ ಘನವೆತ್ತಿತು. ವೀಣಾ ಕುಪ್ಪೈಯ್ಯರರ ನಾ ಮೊರಾಲಗಿಂಚಿ ದಲ್ಲಿ ಒಳ್ಳೆಯ ವರಸೆಗಳನ್ನು ಪ್ರಯೋಗಿಸಿದ ಮಕ್ಕಳಿಗೆ ಶಹಭಾಸ್ ಗಿರಿ ಆಗಾಗ ಒದಗಿ ಬರುತ್ತಿತ್ತು. ಕರ್ಣ ರಂಜನಿಯಲ್ಲಿ ಮುತ್ತಯ್ಯ ಭಾಗವತರರ ವಾಂಛತೋನುನಾ ದ ಅಂದವಾದ ಪ್ರಸ್ತುತಿ ಹಾಗೂ ಚಿಟ್ಟೆ ಸ್ವರದಲ್ಲಿ ಮಕ್ಕಳಿಬ್ಬರೂ ಮಾಡಿದ ವಿವಿಧ ವರಸೆ, ಶ್ರೋತೃ ವರ್ಗವಿಡೀ ಹುಬ್ಬೇರಿಸುವಂತೆ ಮಾಡಿತು.ಕಲ್ಯಾಣಿ ರಾಗ ಆಲಾಪನೆಯನ್ನು ಮಕ್ಕಳಿಬ್ಬರೂ ಬಹು ಸಮರ್ಥವಾಗಿ ಮಾಡುತ್ತಿದ್ದಂತೇ ಚಪ್ಪಾಳೆ. ತಾನಂ ಆರಂಭಿಸುತ್ತಿದ್ದಂತೇ ಶ್ರೋತೃ ವರ್ಗ ಅವಾಕ್ಕಾಗಿ ಹೋದರು! ಈ ಎಳೆಯರಿಂದ ರಾಗಂ-ತಾನಂ-ಪಲ್ಲವಿಯೇ? ಎಂದು. ಕಮಲಾಸನೆ ಸುಂದರೀ ಕಮಲವದನೆ ಕರುಣಾರಸ ವಿಲೋಚನೆ ಎಂಬ ಪಲ್ಲವಿಯನ್ನು ಏನೇನೂ ಟೆನ್ಶನ್ ಇಲ್ಲದೇ ಸಲೀಸಾಗಿ ಹಾಡುತ್ತಾ,ನೆರವಲ್, 1,2,3 ಕಾಲಗಳಲ್ಲಿ ನಡೆಯಿಸುತ್ತಾ, ತಿಶ್ರ, ಚತುರಶ್ರ-ತಿಶ್ರ ನಡೆಗಳಲ್ಲೂ ತಾಳ ಹಾಕುತ್ತಾ ಮೆರೆದರು. ತನಿಯಾವರ್ತನಕ್ಕೂ ಅವಕಾಶ ನೀಡಿದರು. ಮೊಹರ-ಮುಕ್ತಾಯಗಳನ್ನು ಅಷ್ಟಾಗಿ ಅಭ್ಯಸಿಸದ ಮಕ್ಕಳಿಗೆ ತನಿಯ ಕೊನೆಯಲ್ಲಿ ಎಡುಪ್ಪಿನಲ್ಲಿ ಪಲ್ಲವಿಯನ್ನು ತೆಗೆದುಕೊಳ್ಳುವುದು ಸ್ವಲ್ಪ ತ್ರಾಸವಾಯಿತು. ಅದಕ್ಕೆ ಅವರು ತೋರಿದ ನಾಚಿಕೆಯ ನಗುವೇ ಅವರನ್ನು ಕ್ಷಮಿಸಿತ್ತು. ಪಲ್ಲವಿ ಕಚೇರಿ ಮುಗಿತೆನ್ನುವಷ್ಟರಲ್ಲಿ ಕು. ಸಮನ್ವಿ, ಪೂರ್ವಿಕಲ್ಯಾಣಿಯಲ್ಲಿ ರಾಗ ಮಾಲಿಕೆಯ ಸರಣಿಯನ್ನು ಆರಂಭಿಸಿದ್ದಳು. ಅದ್ಭುತ ನಿರ್ವಹಣೆ ಅದು ! ಬಳಿಕ ಅರ್ಚನಾಳ ಮೋಹನ ಕಲ್ಯಾಣಿ ! ನಂತರದ ಹಮೀರ್ ಕಲ್ಯಾಣಿ ಸಮನ್ವಿಯದು. ಗೋರಖ್ ಕಲ್ಯಾಣ್ ಅರ್ಚನಾಳದು ! ಒಂದಕ್ಕೆ ಒಂದು ಫಿû್ರೀ! ಎರಡೂ ಮಧ್ಯಮಗಳನ್ನು ಯುಕ್ತಿಯಿಂದ ಬಳಸಿ ತೆಗೆದ ಈ ಹಿಂದೂಸ್ತಾನೀ ರಾಗಗಳ ಪೂರ್ಣ ಸೊಬಗನ್ನು ಹಿಂಡಿ ತೆಗೆದಂತಿತ್ತು ಮಕ್ಕಳ ಸಾಧನೆ. ಶ್ರೀ ಅಶ್ವಿನ್ ಕಲ್ಯಾಣ್ ಅವರು ವಯಲಿನ್ ನಲ್ಲಿ ಸಹಕಾರ ನೀಡಿದ್ದರು. ಹಮೀರ್ ಕಲ್ಯಾಣಿಗೆ ಅವರು ಸಾವೇರಿಯ ಜವಾಬ್ ನೀಡಿದ್ದರು. ಆಕಾಶವಾಣಿಯ ಎ-ಗ್ರೇಡ್ ಕಲಾವಿದರಾದ ಬೆಂಗಳೂರಿನ ಶ್ರೀ ಕೆ.ವಿ. ರವಿಶಂಕರ ಶರ್ಮಾ ಅವರು ಮೃದಂಗ ಸಾಥಿ ನೀಡಿ ಮಕ್ಕಳಿಗೆ ಹೆಜ್ಜೆ ಹೆಜ್ಜೆಗೆ ಪೆÇ್ರೀತ್ಸಾಹ ನೀಡುತ್ತಿದ್ದದ್ದು ಒಂದು ಗಮನೀಯ ಅಂಶ. ಅತ್ಯಂತ ಅನುಭವೀ ಕಲಾವಿದರು ಮಾತ್ರ ಪ್ರಯೋಗಿಸುವ ಅತ್ಯಂತ ಕರಾರುವಾಕ್ಕಾದ ಕಾಲಪ್ರಮಾಣದ ವಿವೇಚನೆ, ಕಾರ್ವೈ ನಿಲುಗಡೆಗಳು, ರಾಗಾಲಾಪನೆ, ನೆರವಲ್, ಬೇಕಾದಲ್ಲಿ ಮಾತ್ರ ಪ್ರಯೋಗಿಸುವ ಬೌದ್ಧಿಕ ಲೆಕ್ಕಾಚಾರಗಳು, ಭಾವನೆಗೆ ಮತ್ತು ಸಾಹಿತ್ಯಕ್ಕೆ ನೀಡುವ ಸಮರ್ಥ ಒತ್ತು, ಕಚೇರಿಯನ್ನು ಕೇಳುವ ಕೇಳುಗನನ್ನೂ ಸಂಗೀತಾನಂದದ ಸಾಗರಕ್ಕೆ ಎಳೆದುಕೊಂಡೊಯ್ಯುವ ಪ್ರಬುದ್ಧ ಶಕ್ತಿ, ಈ ಮಕ್ಕಳ ಸಾಧನೆ.ಅರ್ಚನಾಳಿಗೆ ಉತ್ತಮ ಶಾರೀರಸಂಪತ್ತು ಒದಗಿದರೆ, 12ರ ಸಮನ್ವಿಗೆ ಸಂಗೀತದ ಒಳನೋಟದ ವಿದ್ವತ್ತಿರುವುದು ಈ ಕಚೇರಿಯಲ್ಲಿ ವ್ಯಕ್ತವಾದ ಅಂಶ. ಶ್ರೋತೃಗಳೆಲ್ಲರೂ ಮಕ್ಕಳನ್ನು ಮತ್ತು ಅವರ ಪೆÇೀಷಕರನ್ನು ಹಾಗೂ ಗುರುಗಳನ್ನು ಸುತ್ತುವರೆದು ಶುಭ ಹಾರೈಸಿದ ನೋಟ ಅಪರೂಪದ್ದಾಗಿತ್ತು.
ಅದೇ ದಿನ ರಾತ್ರಿ 8.30 ಕ್ಕೆ ಶ್ರೀ ಶ್ರೀ ಛಾಯಾಪತಿ ಗುರೂಜೀಯವರು ಲತಾಂಗಿಗೇ ನೇರವಾಗಿ ಬಂದು ಲತಾಂಗಿಯ ಪರಿವಾರದವರನ್ನೆಲ್ಲಾ ಹರಸಿದರು.ರಂಜನಿಯ ನೆನಪಿಗೆ ಗುರು ಪೂಜೆ ನಡೆಸಿ, ಮಕ್ಕಳನ್ನೆಲ್ಲ ಮತ್ತೊಮ್ಮೆ ಹಾಡಿಸಿ ಆಶೀರ್ವದಿಸಿದರು. ಅಗಲಿದ ಶ್ರೀಮತಿ ರಂಜನಿಯ ಪತಿ ಶ್ರೀ ಗುರುಪ್ರಸಾದ ಅವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಡೈನೆಲ್ಲೂರಿನ ಶ್ರೀಮತಿ ಸುಬ್ಬುಲಕ್ಷ್ಮಿ ರಘುನಾಥ್ ಮತ್ತು ಶ್ರೀ ರಘುನಾಥ್ ದಾಸ್ ಮಹಾರಾಜ್ ದಂಪತಿಗಳು ಲತಾಂಗಿಯಲ್ಲಿ ಸಪ್ಟೆಂಬರ್ 5ರಿಂದ 10 ರ ವರೆಗೆ ಇದ್ದು, ಟ್ರಸ್ಟ್ ನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷಪಟ್ಟದ್ದು ಮಾತ್ರವಲ್ಲ , ಮನಸಾರೆ ಶುಭ ಹಾರೈಸಿ, ಲತಾಂಗಿ ಪರಿವಾರದವರಿಗಾಗಿರಬಹುದಾದ ‘ಕೆಟ್ಟ ದೃಷ್ಟಿ’ಗಳನ್ನು ನಿವಾರಿಸಲು ಅವರು ಕೈಗೊಂಡ ಕ್ರಮ, ಎಲ್ಲರ ಮನದಲ್ಲಿ ಸಂತೃಪ್ತಿಯ ಛಾಯೆ ತುಂಬುವಲ್ಲಿ ಸಹಕಾರಿಯಾಯಿತು.

ರಂಜನಿಯ ಸ್ಮರಣೆ ಸಮಾಧಾನ ತಂದಿತೇ ಅಥವಾ ಮನಸ್ಸಿಗೆ ಅಸಮಾಧಾನ ತಂದಿತೇ ; ಸಂತೋಷ ನೀಡಿತೇ, ಅಥವಾ ದುಃಖವನ್ನು ಮರುಕಳಿಸಿತೇ, ಅಥವಾ ಮಕ್ಕಳನ್ನು ನೆನೆಸಿ ದುಃಖವನ್ನು ಮರೆಯಿಸಿತೇ , ಒಂದೂ ತಿಳಿಯುವುದಿಲ್ಲ. ಕೊನೆಗೆ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ – ರಂಜನಿ ಇಲ್ಲವಲ್ಲಾ ಅಂತ.

Leave a Reply

Your email address will not be published. Required fields are marked *