ಮದರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಪ್ರಾಯೋಜಿತ ಕಾರ್ಯಕ್ರಮವೊಂದು ಇತ್ತೀಚೆಗೆ ನಡೆದಿದೆ. ಸಾವಿರ ರೂಪಾಯಿ, ಎರಡು ಸಾವಿರ ರೂಪಾಯಿ ಗಳಿಗೂ ಹೆಚ್ಚಿನ ಮೌಲ್ಯದ ಟಿಕೇಟುಗಳು ಪ್ರವೇಶಾತಿಗೆ ! ಕಿಕ್ಕಿರಿದ ಜನ ಸ್ತೋಮ! ಟಿಕೆಟ್ಟಿಲ್ಲದೇ ವಾಪಾಸಾದವರೇ ಸಾವಿರಗಟ್ಟಲೆ! ಕಾರ್ಯಕ್ರಮ ಯಾರದೆಂದು ಗೊತ್ತೇ? ರಂಜನಿ ಗಾಯತ್ರಿ ಮತ್ತು ಹರೀಶ್ ಶಿವರಾಮಕೃಷ್ಣನ್ ಅವರ ಜುಗಲಬಂದಿ! ರಂಜನಿ ಗಾಯತ್ರಿ ಯಾರೆಂದು ನಾನು ನಿಮಗೆ ಹೇಳಬೇಕಿಲ್ಲ. ಕರ್ನಾಟಕ ಸಂಗೀತದ ಅಪ್ಪಟ ಸೊತ್ತು ಎಂದೇ ಹೆಸರು ಮಾಡಿದ ಈ ಇಬ್ಬರು ಸೋದರಿಯರ ಎದುರು ನಿಲ್ಲುವ ತ್ರಾಣ ಸದ್ಯ ಇನ್ಯಾರಿಗೂ ಇಲ್ಲವಾಗಿದೆ. ಅವರ ಸಂಗೀತ ಸಾಮರ್ಥ್ಯ, ಅದರ ಪ್ರಸ್ತುತಿ, ಕೃತಿಗಳ ಆಯ್ಕೆ,ಶ್ರೋತೃಗಳನ್ನು ಸದಾ ಎಚ್ಚರದಲ್ಲಿರುವಂತೆ ಮಾಡುವ ಅವರ ಅದ್ಭುತ ಚಳಕ, ಮುಂದೆ ಇನ್ನೇನು ಬರುತ್ತೋ ಎನ್ನುವ ಕುತೂಹಲ, ಈರ್ವರ ಹಾಡುಗಾರಿಕೆಯ ನಾದಾನುಸಂಧಾನ, ಅಭಂಗ್ ಭಜನ್ಸ್‍ಗಳ, ಹಿಂದೂಸ್ತಾನೀ ರಾಗಗಳ ಮೆಲಿನ ಅಪ್ರತಿಮ ಪ್ರಭುತ್ವ, ಅತ್ಯುತ್ತಮ ವೇದಿಕೆ ನಿರ್ವಹಣೆ, ಗ್ಲಾಮರ್, ಮನೇಜ್ಮೆಂಟ್ ಸ್ಕಿಲ್ಲ್ಸ್..... ಎಲ್ಲಕ್ಕೂ ಅವರಿಗೆ ಅವರೇ ಸಾಟಿ. ಅವರ ಕಚೇರಿಯಲ್ಲಿ ಬೋರೆಂಬುದೇ ಇಲ್ಲ. ಹಾಗೆಂದು ಕರ್ನಾಟಕ ಸಂಗೀತವನ್ನು ತಿಳಿಯಾಗಿಸುವ, ತೇಲಿಸುವ, ಲಘುವಾಗಿಸುವ, ಲೇವಡಿ ಮಾಡುವ ಯಾವ ಪರಿಯೂ ಅವರಲ್ಲಿಲ್ಲ. ಗ್ರಹ ಭೇದ ಕ್ಕೆ ಹೊರಟರೆಂದಾದರೆ ಅದೊಂದು ಅಪೂರ್ವ ಸಾಂಗತ್ಯ ಮತ್ತು ಅಲೌಕಿಕ ಸಾಮರಸ್ಯದ ಸಂವಹನ. ತಲೆ ತೂಗದೆ ಇರಲು ಅಸಾಧ್ಯ. ಕರತಾಡನ ಮಾಡದೆ ವಿಧಿಯೇ ಇಲ್ಲ.
ಅಂತಹ ರಂಜನಿ ಗಾಯತ್ರಿಯರೊಂದಿಗೆ ರಾಕ್ ಸ್ಟಾರ್ ಟೆಕ್ಕಿ ಹರೀಶ್ ಶಿವರಾಮ ಕೃಷ್ಣನ್ ಅವರ ಜುಗಲ್ ಬಂದಿ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದಿದೆ. ಆಗಮ್ ಎಂಬುದು ಹರೀಶ್ ಶಿವರಾಮ ಕೃಷ್ಣನ್ ಅವರ ರಾಕ್ ಬ್ಯಾಂಡ್ ನ ಹೆಸರು. ಬೆಂಗಳೂರು ಮೂಲ ಅದರದು. ಕೀ ಬೋರ್ಡ್, ಲೀಡ್ ಗಿಟಾರ್, ಬಾಸ್ ಗಿಟಾರ್, ರಿದಂ ಗಿಟಾರ್, ಡ್ರಮ್ಮರ್, ಮತ್ತು ಕೆಲವು ಎತ್ನಿಕ್ ತಟ್ಟುವಾದ್ಯ ಪ್ರವೀಣರ ಯುವ ಹುಡುಗರ ತಂಡವದು. ಬಿಟ್ಸ್ ಪಿಲಾನಿಯಲ್ಲಿ ಕಲಿತ ದಕ್ಷಿಣ ಭಾರತದ ಬ್ರಿಲಿಯಂಟ್ ಇಂಜಿನಿಯರರ ಗುಂಪು ಅದರದು. 2007 ರಲ್ಲಿ ಊಹ್ ಲಾಲಾಲಾ ಎಂಬ ಸನ್ ಟಿವಿಯ ಮೂಲಕ ಪ್ರಸಿದ್ಧಿಗೆ ಬಂದ ಬಳಗ ಅದು. ಎಆರ್ ರೆಹಮಾನ್ ರಿಂದ ಉತ್ತೇಜನ ಪಡೆದ ಈ ಯುವ ಟೆಕ್ಕಿಗಳ ಗುಂಪು ಕರ್ನಾಟಕ ಸಂಗೀತದ ರಚನೆಗಳನ್ನು ಹಿಡಿದುಕೊಂಡು ಪಾಶ್ಚಿಮಾತ್ಯ ಸಂಗೀತವನ್ನು ಕೇಳುವ ಒಲವುಳ್ಳ ಶ್ರೋತೃಗಳಿಗೆ ಹೊಸ ರುಚಿಯನ್ನು ಉಣಬಡಿಸಿದ್ದಾರೆ. ಅದೇ ಕರ್ನಾಟಿಕ್ ಪೆÇ್ರೀಗ್ರೆಸ್ಸಿವ್ ರಾಖ್. ಶ್ರೇಯಾ ಗೋಶಲ್ , ಅರುಣಾ ಸಾಯೀರಾಂ ಮೊದಲಾದವರೂ ಈ ರಾಕ್‍ನೊಂದಿಗೆ ಹಾಡಿದ್ದೂ ಇದೆ.
ಹರೀಶ್ ಅವರ ಧ್ವನಿ ಸಾಮರ್ಥ್ಯ ಮತ್ತು ಪ್ರಸ್ತುತಿ ಚಳಕ ಮೈ ನವಿರೇಳಿಸುತ್ತದೆ ಮತ್ತು ಬೆರಗು ಹುಟ್ಟಿಸುತ್ತದೆ. ಅವರ "ಶ್ರೀರಂಗ ಪುರವಿಹಾರ" ವನ್ನು ಇದುವರೆಗೆ 2,806,205 ಜನ ವೀಕ್ಷಿಸಿ ಕೇಳಿ ದಂಗಾಗಿದ್ದಾರೆ ಎಂದು ನೀ-ವಾಹಿನಿ(ಯೂ ಟ್ಯೂಬ್)ಹೇಳುತ್ತದೆ! ನಾನಂತೂ ಅವರ ಈ ಯುವೋತ್ಸಾಹವನ್ನು ನೋಡಿ, ಕೇಳಿ, ಹೆದರಿ ಹೋಗಿದ್ದೇನೆ. ಹರೀಶ್ ಅವರು ಬ್ರೃಂದಾವನ ಸಾರಂಗವನ್ನು ತಮಗೆ ಬೇಕಾದ ಹಾಗೆ ತಿರುಗಿಸಿ(ತಿರುಚಿಯೂ ಕೂಡಾ) ರಂಗ ಪುರವಿಹಾರದ ವರಸೆಯನ್ನು ಕೊಟ್ಟು ವಿಹರಿಸಿದ್ದಾರೆ. ಅದ್ಭುತ ಧ್ವನಿ ಸೌಕರ್ಯ. ಆತ್ಮ ವಿಶ್ವಾಸ. ಭಾವ ಲೋಕಕ್ಕೆ ಒಯ್ಯುವ ಅಸಾಧಾರಣ ಸಾಮರ್ಥ್ಯ. ಅವರ ಹಾಡುಗಾರಿಕೆಗೆ ತಲೆದೂಗದೆ ಇರಬೇಕಾದರೆ ನಮ್ಮಲ್ಲಿ ಅಡಗಿರುವ ಪೂರ್ವ ಗ್ರಹದ ಮಡಿವಂತಿಕೆಯೇ ಅಡ್ಡಿ ಬರಬೇಕು ಅಷ್ಟೆ. ನಮ್ಮ ಕರ್ನಾಟಕ ಸಂಗೀತದ ಹಾಡುಗಾರರು ಯಾರೂ ಅಷ್ಟೊಂದು ಧೈರ್ಯವಾಗಿ, ಭಾವ ಪೂರ್ಣವಾಗಿ, ಅಷ್ಟೊಂದು ಪರಿಣಾಮಕಾರಿಯಾಗಿ ಹಾಡಲಾರರು. ಹರೀಶ್ ಅವರು ಹಾಡಿದ ಮನವ್ಯಾಲಕಿಂಚರಾ, ಬಂಟುರೀತಿ ಕೊಲುವು ಕೂಡಾ ಮಿಲಿಯ ಶ್ರೋತೃಗಳ ಕಿವಿಗೆ ಬಿದ್ದು ರೋಮಾಂಚನ ಮೂಡಿಸಿದ್ದಲ್ಲದೇ ಶಾಸ್ತ್ರೀಯ ಸಂಗೀತದ ಶಾಸ್ತ್ರಿಗಳಿಗೂ ಸವಾಲಾಗಿ ನಿಂತಿದೆ. ಇವರು ಹೀಗೆ ಹಾಡಿದ್ದಾದರೆ ನಮ್ಮ ಯುವಕ ಯುವತಿಯರು ಇದರ ಮಾಯೆಗೆ ಬೀಳುವುದು ಖಂಡಿತ ಎಂದು ನನಗನಿಸುತ್ತದೆ. ವ್ಯಾಕರಣ, ಶಾಸ್ತ್ರಗಳು ಮೂಲೆ ಪಾಲಾಗುವ ದಿನಗಳು ದೂರವಿರಲಾರದು. ಬೀಸು ಧ್ವನಿ, ನಾಟಕೀಯ ಏರಿಳಿತ, ಇಂಪು, ಸೊಗಸು, ಭಾವುಕತೆ, ಅಲ್ಟ್ರಾ ಮಾಡರ್ನ್ ವೇಷ ಭೂಷಣ- ಇವೆಲ್ಲಾ ಹೊಸ ಬಿಸಿ ರಕ್ತದವರಿಗೆ ಬೇಕೇ ಬೇಕಾದ ಸರಕು ಸರಂಜಾಮು.
ರಂಜನಿ ಗಾಯತ್ರಿಯವರೊಂದಿಗೆ ಹರೀಶ್ ಹಾಡಿದರೆಂದರೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯಿಂದ ಅಂಗೀಕಾರಕ್ಕೆ ಹೊರ ಬಂದ ಮಸೂದೆಯಂತೆ. ಮ್ಯೂಸಿಕ್ ಅಕಾಡೆಮಿಯಲ್ಲಿ ಇದು ನಡೆಯಿತು ಎಂದರೆ ಮತ್ತೆ ರಾಷ್ಟ್ರಪತಿಯವರ ಮುದ್ರೆ ಬಿದ್ದಂತೆ. ಆ ದಿನ ನೆರೆದಿದ್ದ ಜನಕೂಟದ ಅಪಾರ ರಸಿಕ ಸ್ತೋಮವರ್ಗ ಯಾವ ಸಂಘಟಕನನ್ನು ಮರುಳುಮಾಡೀತು. ಅದಾಗಿ ಹರೀಶ್ ಅವರ ತನಿ ಕಚೇರಿಗಳು ಕೇರಳವೇ ಮೊದಲಾದೆಡೆ ಕಿಕ್ಕಿರಿದ ಶ್ರೋತೃ ವರ್ಗದ ಮುಂದೆ ನಡೆದಿವೆ ಎಂಬುದು ಗಮನಾರ್ಹ ಸಂಗತಿ.
ಕರ್ನಾಟಕ ಸಂಗೀತ ಕಲಾಗಾರರು ಈಗಾಗಲೇ ಇನ್ನೇನು ಮಾಡಲು ಬಾಕಿಯಿದೆ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಸದ್ದು, ಗದ್ದಲ, ಕೈಕಾಟ, ಅವಧಾನ ,ಕುಲುಕಾಟ, ಯೋಗಾಸನ, ಕಣಕ್ಕು ಲೆಕ್ಕಾಚಾರಗಳನ್ನು ನೀಡುತ್ತಿರುವ ನಮ್ಮ ಯುವಕರು "ಹರೀಶ್ ಪರಿಣಾಮ"ಕ್ಕೆ ತುತ್ತಾಗುವ ಗಂಭೀರತೆ ನನ್ನ ಮನಸ್ಸಿಗೆ ತಲ್ಲಣ ತಂದಿದೆ. ಈಗಿನ ಯುವಕರಂತೂ ತಲೆಯನ್ನು ನುಣ್ಣಗೆ ಬೋಳಿಸಿಕೊಂಡೋ, ಅಥವಾ ನಿಡಿದಾಗಿ ಇಳಿಬಿಟ್ಟು ಹೆಣ್ಣೋ ಗಂಡೋ ಎಂದು ಗುರುತಿಸಿಕೊಳ್ಳದ ಹಾಗೆ ಮಾಡಿಕೊಳ್ಳುವ ಪಾಶ್ಚಿಮಾತ್ಯರ ವೇಷಗಳನ್ನಂತೂ ಯಶಸ್ವೀಯಾಗಿ ಅನುಕರಿಸಿ ಮಾಡರ್ನ್ ಆಗಿದ್ದಾರೆ. ಇನ್ನು ನಿಂತು ಹಾಡಲು ಉಪಕ್ರಮಿಸುವುದು ; ತಿರುಗಣೆ ಸ್ಟೂಲಿನಲ್ಲಿ ಕುಳಿತು ಹಾಡುವುದು; ಮೈಕೈ ಬಿಟ್ಟು, ಸಾಧ್ಯವಾದರೆ ತುಸು ಡ್ಯಾನ್ಸೇ ಮಾಡಿ ಹಾವ ಭಾವತೋರಿ ಹಾಡುವುದನ್ನು ಕಲಿತರೆ ಅಲ್ಲಿಗೆ ನಮ್ಮ ಸಂಕರ (ಬೆರಕೆಯಾದ) ಸಂಗೀತದ ಅಧ್ಯಾಯ ಪ್ರಾರಂಭವಾದಂತೆ. ಶಾಸ್ತ್ರೀಯ ಸಂಗೀತದ ಮಡಿವಂತ ಶಾಸ್ತ್ರಿಗಳಿಗೆ ಇದೊಂದು ಸವಾಲೇ ಸರಿ. ಶಾಸ್ತ್ರೀಯತೆಯು ಇಂತಹಾ ಸಂಕರ ಸಂಗೀತದ ಮಾಯೆಗೆ ಸಿಲುಕಿ ನಲುಗುವ ಕೆಂಪು ದೀಪ ಉರಿಯುತ್ತಲಿದೆ. ಸಂಗೀತ ಶಾಸ್ತ್ರಿಗಳು ಪೆಟ್ಟಿಗೆ ಕಟ್ಟಿ ಗುಳೇ ಹೋಗುವ ದಿನ ಬಂದೊದಗುವ ಅಪಾಯದ ಗಂಟೆ ಬಾರಿಸುತ್ತಲಿದೆ. ನಮ್ಮ ಶಾಸ್ತ್ರೀಯತೆಯನ್ನು ಉಳಿಸುವಲ್ಲಿ ನಾವೇನು ಮಾಡಬಲ್ಲೆವು ಎಂಬುದನ್ನು ಗಂಭೀರವಾಗಿ ಚಿಂತಿಸಿ ಚರ್ಚಿಸಬೇಕಾದ ತುರ್ತು ಕರೆ ಬಂದೊದಗಿದೆ.