ಮಿನುಗಿ ಮರೆಯಾದ ರಂಜನಿ ಎನ್ನುವ ಒಂದು ನಕ್ಷತ್ರ

 

Hail to thee blithe Spirit

Bird thou never wert

That from Heaven or near it

Pourest thy full heart

In profuse strains of

Un premeditated art

Shellly

 

ರಂಜನಿ ಇಂದು ನಮ್ಮೊಂದಿಗಿಲ್ಲ. ನಕ್ಷತ್ರಗಳು ನೂರಾರು ಬೆಳಕಿನ ವರ್ಷಗಳಷ್ಟು ದೂರವಿದ್ದರೂ ಬಾನಿನತ್ತ ಮುಖವೆತ್ತಿದವನಿಗೆ ಅವುಗಳು ಮಿನುಗುವುದು ಕಾಣಿಸುತ್ತದೆ. ರಂಜನಿಯೂ ಅಷ್ಟೆ. ನಮ್ಮಿಂದ ಬಲು ದೂರ ಸರಿದಿದ್ದರೂ ಸಂಗೀತಾಗಸದತ್ತ ಕಣ್ಣು, ಕಿವಿ ತೆರೆದು ಕುಳಿತವರಿಗೆ ಆಕೆ ಸದಾ ಮಿನುಗುವ ನಕ್ಷತ್ರವಾಗಿ ಕಾಣಿಸುತ್ತಾಳೆ.ಆಕೆಯ ಗಾನದ ಇಂಪು ಮನೆ, ಮನಗಳಲ್ಲಿ ಮೈದಡವಿ ಸಂತೈಸುವ ತಂಗಾಳಿಯಾಗಿ ಸುಳಿದಾಡುತ್ತಿರುತ್ತದೆ.

ರಂಜನಿಯನ್ನು ಹತ್ತಿರದಿಂದ ಬಲ್ಲವರಿಗೆ ಆಕೆಯನ್ನು ಒಬ್ಬಾಕೆ ಸಂಗೀತ ಕಲಾವಿದೆಯಾಗಿ ಮಾತ್ರ ಗುರುತಿಸಲು ಪ್ರಾಯಶಃ ಸಾಧ್ಯವಾಗಲಾರದು. ಆಕೆ ನಮ್ಮ ಸುತ್ತ ಓಡಾಡುತ್ತ ಬೆಳೆದ ಮಗು. ಸಂಗೀತ ಕಾರ್ಯಕ್ರಮಗಳಲ್ಲಿ, ಲತಾಂಗಿಯಲ್ಲಿ ಮಾಮಾ ಮಾಮಾ ಎನ್ನುತ್ತ ಮಾತನಾಡಿಸುವ ಅವಳು ನನಗೆ ನನ್ನ ಮೊಮ್ಮಕ್ಕಳಲ್ಲಿ ಒಬ್ಬಳು. ಐದು ವರ್ಷದ ಪುಟ್ಟ ಬಾಲಕಿಯಾಗಿದ್ದ ಅವಳಿಗೆ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಕೊಟ್ಟಿದ್ದೆ. ಅವಳ ಅಸಾಧಾರಣ ಪ್ರತಿಭೆಯ ಕುರಿತು ಪತ್ರಿಕೆಯಲ್ಲಿ ಬರೆದಿದ್ದೆ. ಮದರಾಸಿಗೆ ಹೋಗುವ ಮೊದಲು ಮನೆಗೆ ಬಂದು ನಮಸ್ಕರಿಸಿ ಹೋಗಿದ್ದಳು. ಚೆನ್ನೈಯಿಂದ ಒಮ್ಮೆ ಊರಿಗೆ ಬಂದಾಗ ಶೆಮ್ಮಂಗುಡಿಯವರ ಕುರಿತ ಒಂದು ಸುಂದರ ಗ್ರಂಥವನ್ನು ನನಗಾಗಿ ತಂದಿದ್ದಳು. ನನ್ನ ಮನೆಯಲ್ಲಿ ಅವಳ ಕಛೇರಿ ಮಾಡಿಸಿದ್ದೆ. ನಮ್ಮ ಹಳ್ಳಿ ಮನೆಗೂ ಅವಳನ್ನು ಕರೆದುಕೊಂಡು ಹೋಗಿ ಹಾಡಿಸಿದ್ದೆ. ಅವಳ ಮದುವೆ ಸಂದರ್ಭದಲ್ಲಿ ನಾವೆಲ್ಲ ಸಂಭ್ರಮದಿಂದ ಓಡಾಡಿದ್ದೆವು. ಹೀಗೆ ನಮ್ಮ ಮನೆಯ ಮಗುವೇ ಆಗಿರುವ ರಂಜನಿಯ ಬಗ್ಗೆ ತಟಸ್ಥ ಮನಸ್ಥಿತಿಯಲ್ಲಿ ಮಾತನಾಡುವುದಾಗಲೀ,

ಬರೆಯುವುದಾಗಲೀ ನನಗೆ ಸಾಧ್ಯವಿಲ್ಲ. ಯಾಕೆಂದರೆ ಪ್ರತಿಯೊಂದು ಶಬ್ದವೂ ನೆನಪಿನ ಸುರುಳಿಯನ್ನು ಬಿಚ್ಚಿ ತಲ್ಲಣಕ್ಕೆ ತಳ್ಳಿಬಿಡುತ್ತದೆ. ಯಾಕೆ ಹೀಗಾಗಿಹೋಯಿತು? ಇದಕ್ಕೇನು ಅರ್ಥ? ಎಂದು ಮುಂತಾದ ಪ್ರಶ್ನೆಗಳ ಸರಮಾಲೆಯೇ ಎದುರಾಗುತ್ತದೆ. ಇವಕ್ಕೆಲ್ಲ ಸರಳವಾದ, ತಾರ್ಕಿಕವಾದ ಉತ್ತರಗಳು ಇವೆಯೆಂದಾದಲ್ಲಿ ಅಧ್ಯಾತ್ಮ ಎನ್ನುವ ಜ್ಞಾನಶಾಖೆ ಹುಟ್ಟಿಕೊಳ್ಳುತ್ತಲೇ ಇರಲಿಲ್ಲವೇನೋ! ವಿಶ್ವಾಸವಿರಲಿ, ಇಲ್ಲದಿರಲಿ ‘ವಿಧಿ’, ‘ದೇವರ ಲೀಲೆ,’ ‘ಪ್ರಾಪ್ತಿ’, ಮುಂತಾದ ಪದಗಳಷ್ಟೆ ಇಲ್ಲಿ ನಮ್ಮ ನೆರವಿಗೆ ಬರುತ್ತವೆ. ‘ಅಲ್ಪಾಯುಷಿಗಳಿಗೆ ಪರಮಾತ್ಮ ವಿಶೇಷ ಪ್ರತಿಭೆಯನ್ನೂ ಸಾಮಥ್ರ್ಯವನ್ನೂ ಕರುಣಿಸುತ್ತಾನೆ. ಇತರರು ಪೂರ್ಣಾಯುಷ್ಯದಲ್ಲಿ ಮಾಡುವ ಸಾಧನೆಯನ್ನು ಇವರು ಬೇಗನೆ ಮಾಡಿಮುಗಿಸಿ ಭಗವಂತನಲ್ಲಿ ಐಕ್ಯರಾಗುತ್ತಾರೆ. ನೋಡಿ, ಶಂಕರಾಚಾರ್ಯರು, ವಿವೇಕಾನಂದರು, ರಾಮಾನುಜಂ, ಮೊಜಾರ್ಟ್, ಕೀಟ್ಸ್..’ ಹಿರಿಯರೊಬ್ಬರು ನನಗೆ ಸಾಂತ್ವನ ನೀಡಿದ್ದು ಹೀಗೆ.

 

ಬೆನ್ನು ಸವರುವ ಮಾತಾಗಿ ಇದನ್ನು ಒಪ್ಪಿಕೊಳ್ಳಬಹುದು ನಿಜ. ರಂಜನಿ ಐದನೇ ವಯಸ್ಸಿನಲ್ಲಿ ಹಾಡಲಾರಂಬಿಸಿದಳು, ಹತ್ತನೇ ವಯಸ್ಸಿಗೇರಬೇಕಿದ್ದರೆ ಇದ್ದಬದ್ದ ಬಹುಮಾನಗಳೆಲ್ಲ ಅವಳನ್ನು ಅರಸಿಕೊಂಡು ಬಂದವು, ಅತ್ಯಂತ ಕಿರಿಯ ವಯಸ್ಸಿನಲ್ಲಿ ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದೆ ಎನಿಸಿಕೊಂಡಳು, ಹದಿ ಹರೆಯದಲ್ಲಿ ರಾಷ್ಟ್ರಮಟ್ಟದ ಪಲ್ಲವಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದಳು, ಯುವ ಗಾಯಕಿಯಾಗಿ ಚೆನ್ನೈ, ಬೆಂಗಳೂರು, ಮಧುರೈ, ಮಂಬಯಿ ಮುಂತಾಡೆಗಳ ಪ್ರತಿಷ್ಠಿತ ಸಭಾಗಳಲ್ಲಿ ಕಛೇರಿ ನೀಡಿ ಭೇಷ್ ಅನಿಸಿಕೊಂಡಳು, ಪ್ರಶಸ್ತಿಗಳ ಗರಿಗಳು ಅವಳ ಮುಡಿಗೇರಿದವು; ಎಲ್ಲವೂ ನಿಜ. ಆದರೆ ಅಸಾಧಾರಣ ಪ್ರತಿಭಾವಂತರಾಗಿದ್ದ ದೀರ್ಘಾಯುಷಿಗಳು ದೊಡ್ಡ ಸಂಖ್ಯೆಯಲ್ಲಿ ನಮ್ಮಲ್ಲಿಲ್ಲವೇ? ಉತ್ತರವಿಲ್ಲ.

 

ಯಾಕೋ ಪಿ.ಬಿ.ಶ್ರೀನಿವಾಸ್ ಹಾಡಿದ ಚಲಚಿತ್ರ ಹಾಡೊಂದರ ಚರಣದ ಸಾಲುಗಳು ನೆನಪಿಗೆ ಬರುತ್ತವೆ. ಇಂಥದ್ದೇ ಒಂದು ವಿಹ್ವಲ ಮನಸ್ಥಿಯಲ್ಲಿ ಈ ಸಾಲುಗಳು ಕವಿಮನದಲ್ಲಿ ಮೂಡಿರಬಹುದೆ?

‘ನೀ ಸಾಕಿ ಸಲಹೆ ಸ್ವಾರ್ಥವೇನೋ

ನೀ ಕಾಡಿ ಕನಲೆ ಆಂತರ್ಯವೇನೋ

ತಿಳಿಹೇಳೆಯಾ ಒಳ ಮರ್ಮ ತೋರೆಯಾ

ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯಾ’ ||ಗೊಂಬೆಯಾಟವಯ್ಯ||

 

ಆರಂಭದಿಂದಲೂ ರಂಜನಿಯ ಗಾಯನವನ್ನು ಕೇಳುತ್ತ ಬಂದಿದ್ದ ನಾನು ಅದರಲ್ಲಿ ಕಂಡ ವಿಶೇಷತೆ ಎಂದರೆ ಸಂಗೀತದೊಂದಿಗಿನ ಆಕೆಯ ಪೂರ್ಣ ತಾದಾತ್ಮ್ಯ. ಆದೊಂದು ರೀತಿಯ ಭಾವಾನ್ವೇಷಣೆ ಎಂದರೂ ಸರಿಯೇ. ರಂಜನಿ ರಾಗದ ಹಾಗೂ ಸಾಹಿತ್ಯದ ಭಾವವನ್ನು ಸರಿಯಾಗಿ ಗುರುತಿಸಿ ಅದನ್ನು ಉತ್ಕಟವಾಗಿ ಪ್ರಕಟಿಸುವ ಕಾಯಕವನ್ನೇ ಸಂಗೀತವೆಂದು ಗುರುತಿಸಿಕೊಂಡಿದ್ದಾಳೆ. ಮಾಧುರ್ಯಕ್ಕೆ ಅಗ್ರಸ್ಥಾನ. ಕೃತಿ, ದೇವರನಾಮ, ಭಾವಗೀತೆ, ವಚನ ಹೀಗೆ ಯಾವುದೇ ಬಗೆಯ ರಚನೆ ಇರಲಿ ಅದಕ್ಕೆ ನ್ಯಾಯ ಒದಗಿಸಲು ರಂಜನಿಗೆ ನೆರವಾಗುವುದು ಆಕೆಯ ದೈವದತ್ತ ಶಾರೀರ. ಅದರಲ್ಲಿ ಶಕ್ತಿ, ಮಾರ್ದವತೆ, ಬಿರ್ಕಾ, ವ್ಯಾಪ್ತಿ, presence, throw dynamics ಎಲ್ಲವೂ ಇದೆ. ಸಾಹಿತ್ಯದ ಯಾವ ಭಾಗದಲ್ಲಿ ರಾಗದ ಮಾಧುರ್ಯವನ್ನು ಹೇಗೆ ಮೇಳೈಸಿಕೊಳ್ಳಬೇಕು ಎನ್ನುವ ಆಕೆಯ ಸೌಂದರ್ಯಪ್ರಜ್ಞೆಯ ಅರಿವಾಗಬೇಕಿದ್ದರೆ ಆಕೆಯಿಂದ ವಚನವನ್ನು ಕೇಳಬೇಕು. ಸಾಲು ಸಾಲುಗಳಲ್ಲೂ ಆಕೆ ಶಾರೀರದಲ್ಲಿ ತರುವ dynamics ಅನನ್ಯ.

 

ರಂಜನಿಗೆ ಸಂಗೀತ ಕಛೇರಿ ಎಂದರೆ ರಸಾನುಭೂತಿಯನ್ನು ಸೃಷ್ಟಿಸುವ ಗಂಭೀರ ಕಾಯಕ. ವೇದಿಕೆಯಲ್ಲಿ ಕಣ್ಣು ತುಂಬುವ ಆಕರ್ಷಕ ವ್ಯಕ್ತಿತ್ವ. ಪ್ರಸನ್ನ ಮುಖಮುದ್ರೆ. ಒಳ್ಳೆಯ ಒಂದು ನಿರ್ವಹಣೆ ಪಕ್ಕವಾದ್ಯಗಾರರಿಂದ ಬಂದಾಗ ತಕ್ಷಣ ನಸುನಗುವಿನಿಂದ ಅದನ್ನು ಗುರುತಿಸುವ ಸೌಹಾರ್ದ. ಅಚ್ಚುಕಟ್ಟಾದ ಪೂರ್ವತಯಾರಿ. ಯಾವುದೇ ಸ್ಥಾಯಿ, ಕಾಲದಲ್ಲಿ ವ್ಯವಹರಿಸಿದಾಗಲೂ ಕಾಣಿಸಿಕೊಳ್ಳದ ಮುಖವಿಕಾರ ಆಕೆಯನ್ನು ಮಾದರಿ ವೇದಿಕೆಯ ಕಲಾವಿದೆಯನ್ನಾಗಿಸುತ್ತದೆ. ಆಲಾಪನೆ, ಕೃತಿ ನಿರೂಪಣೆ, ನೆರವಲ್, ಸ್ವರಪ್ರಸ್ತಾರ ಸಂದರ್ಭ ಯಾವುದೇ ಇರಲಿ, ರಂಜನಿಯ ವಿನಿಕೆಯಲ್ಲಿ ಒಂದೇ ಒಂದು ಚಿಲ್ಲರೆ ಸಂಗತಿ ಕಾಣಿಸಿಕೊಳ್ಳುವುದಿಲ್ಲ. ಎಲ್ಲವೂ ನಿಸ್ಸಂದಿಗ್ಧ, ಶುಭ್ರ, ಧೃಢ, ಸ್ಪಷ್ಟ. ಆಕೆಗೆ ಮೇಲುಪದರದ ಹೊಳಪಿನಲ್ಲಾಗಲೀ, ಚಿಕ್ಕಪುಟ್ಟ ಚಮತ್ಕಾರಗಳಲ್ಲಾಗಲೀ ವಿóಶ್ವಾಸವಿಲ್ಲ. ತೋಡಿ, ಭೈರವಿ, ಶಂಕರಾಭರಣ, ಕಾಂಭೋಜಿ ಹೀಗೆ ಯಾವುದಾದರೊಂದು ದೊಡ್ಡ ರಾಗವನ್ನು ಎತ್ತಿಕೊಂಡರೆ ಅದರ ಆಳಕ್ಕಿಳಿದು ರಸಗಟ್ಟಿಗಳನ್ನು ಎತ್ತಿ ತೋರುವ ಹಂಬಲ ಅವಳಿಗೆ. ಎಷ್ಟು ಸಂಚರಿಸಿದರೂ ಬತ್ತಿಹೋಗದ ಮನೋಧರ್ಮ. ಅದೇ ಮಾಧುರ್ಯವನ್ನು ಉಳಿಸಿಕೊಂಡು ಆಕೆ ಕ್ಲಿಷ್ಟಕರವಾದ ಪಲ್ಲವಿಯನ್ನೂ ನಿರ್ವಹಿಸಬಲ್ಲಳು ಎನ್ನುವುದಕ್ಕೆ ದಶಕದ ಹಿಂದೆ ಮಂಗಳೂರಲ್ಲಿ ನಡೆದ ರಾಷ್ಟ್ರಮಟ್ಟದ ಪಲ್ಲವಿಗಾಯನ ಸ್ಪಧರ್Éಯಲ್ಲಿ ಕೊನೆಯ ಸ್ಪರ್ಧಿಯಾಗಿ ಭಾಗವಹಿಸಿ ಪ್ರಗಲ್ಭ ಪಲ್ಲವಿ ಪ್ರಸ್ತುತಿಯ ಮೂಲಕ ಪ್ರಥಮ ಬಹುಮಾನ ಗಳಿಸಿಕೊಂಡದ್ದು ಸಾಕ್ಷಿ.

ಕುಟುಂಬದಲ್ಲೊಂದು ಬಾಲಪ್ರತಿಭೆ ಕಾಣಸಿಕೊಂಡಿತು ಎಂದರೆ ಹೆತ್ತವರಿಗೆ ಸಂತಸದೊಂದಿಗೆ ಆತಂಕಕ್ಕೆ ಕಾರಣವಾಗುವುದೂ ಇದೆ. ಆ ಮಗುವನ್ನು ಹೇಗೆ ಪೋಷಿಸಿಕೊಂಡು ಬರಬೇಕೆನ್ನುವುದೇ ಸಮಸ್ಯೆಯಾಗಿಬಿಡುತ್ತದೆ. ಕುಟುಂಬದ ಅಪ್ರಬುದ್ಧ ನಡೆವಳಿಕೆಯಿಂದ ಆ ಮಗು ಪ್ರದರ್ಶನ ವಸ್ತುವಾಗಿಯೋ, ಗಳಿಕೆಯ ಸಾಧನವಾಗಿಯೋ, ಉತ್ಪ್ರೇಕ್ಷಿತ ಪ್ರಚಾರದಿಂದಾಗಿ ವಿಕ್ಷಿಪ್ತ ಮನಸ್ಥಿಯ ವ್ಯಕ್ತಿಯಾಗಿಯೋ ಬೆಳೆಯುವ ಸಾಧ್ಯತೆ ಇದೆ. ರಂಜನಿಯ ಹೆತ್ತವರಿಗೆ ಇಂಥ ಯಾವ ಗೊಂದಲವೂ ಇರಲಿಲ್ಲ. ಸಂಗೀತವನ್ನು ಆಳಕ್ಕಿಳಿದು ಕಂಡಿರುವ ಅರವಿಂದ ಹೆಬ್ಬಾರರಿಗೆ ಸಂಗೀತ ಏನನ್ನು ಮಾಡಬೇಕು, ಸಂಗೀತದಿಂದ ನಾವೇನನ್ನು ಪಡೆಯಬೇಕು ಎನ್ನುವುದರ ಕುರಿತು ಖಚಿತವಾದ ನಿಲುವಿದೆ. ತಾಯಿ ವಸಂತಲಕ್ಷ್ಮೀ ಹಲವು ಪ್ರಕಾರಗಳ ಏಸ್ತೆಟಿಕ್ಸ್ ನ್ನು ಅರಗಿಸಿಕೊಂಡವರು. ಹಾಗಾಗಿ ಮಗಳಿಗೆ ಸಂಗೀತದ ಕುರಿತಾದ ವಿಶೇಷ ಸಾಮಥ್ರ್ಯ ಇರುವುದನ್ನು ಗಮನಿಸಿದೊಡನೆ ಸದ್ದುಗದ್ದಲವಿಲ್ಲದೆ ಆಕೆಯನ್ನು ಸರಿದಾರಿಗೆ ಹಚ್ಚಿದರು. ಬೆಳೆಯುತ್ತಿದ್ದಂತೆ ಮಗಳಲ್ಲಿ ಸಂಗೀತದ ಮೂಲಭೂತ ವಿಚಾರಗಳು ಗಟ್ಟಿಯಾಗಿ ಬೇರೂರುವಂತೆ ನೋಡಿಕೊಂಡರು. ಆಕೆಯ ಸಾಧನೆಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಸದಾ ಆಕೆಗೆ ಬೆಂಗಾವಲಾಗಿ ನಿಂತರು. ಸೌಮ್ಯ, ಸೌಖ್ಯ, ಆಳ, ಆನಂದ ರಂಜನಿಯ ಸಂಗೀತದ ಮೂಲಧಾತು ಅನಿಸಿಕೊಂಡರೆ ಅದಕ್ಕೆ ಕಾರಣ ಆಕೆಯ ಹೆತ್ತವರು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ಮೃದು ಮಾತಿನ, ಸರಳ ಸ್ವಭಾವದ ರಂಜನಿಗೆ ಸಂಗೀತ ಬಿಟ್ಟು ಬೇರೊಂದು ಪ್ರಪಂಚವಿರಲಿಲ್ಲ. ಅಹಮಿಕೆ, ನಖರಾ ಯಾವುದೂ ಅವಳ ಹತ್ತಿರ ಸುಳಿಯಲಿಲ್ಲ. ನನ್ನ ಮನೆಯಲ್ಲಿ ಪಕ್ಕವಾದ್ಯ ಏನೊಂದೂ ಇಲ್ಲದೆ ಕುಳಿತು ಸಂತೋಷದಿಂದ ಹಾಡಿದ್ದಳು. ಸಂಗೀತದ ವರ್ಣಮಯ ಆಗಸದಲ್ಲಿ ಗರಿಬಿಚ್ಚಿ ಹಾರಾಡಿದ್ದ ಬಾನಾಡಿ ಅವಳು. ಹೇಗೆ ಮರೆಯಲು ಸಾಧ್ಯ ಆ ಹಾಡುಗಳನ್ನು?

Thou wast not born for

death immortal Bird

No hungry generations

treat thee down

The voice I hear this

passing night were heard

In ancient days by

Emperor and clown

– Keats

 

Leave a Reply

Your email address will not be published. Required fields are marked *