–ರವಿಕಿರಣ್ ಮಣಿಪಾಲ್.
ಹಿಂದೂಸ್ಥಾನಿ ಸಂಗೀತ ಲೋಕ ಕಂಡ ಅಪ್ರತಿಮ ವಾಗ್ಗೇಯಕಾರ, ಅಪೂರ್ವ ದಾರ್ಶನಿಕ ಪಂ.ನಾರಾಯಣ ಪಂಡಿತ್(88ವರ್ಷ) ಮೊನ್ನೆ ಅಕ್ಟೋಬರ್ 13ರಂದು ಹೊನ್ನಾವರದ ಕಾಸರಕೋಡಿನ ಸ್ನೇಹಕುಂಜದಲ್ಲಿ ವಿಧಿವಶರಾದರು.
ಆರೇಳು ವರ್ಷಗಳ ಹಿಂದಿನ ಮಾತು. ಪಂಡಿತ್ ಮಾಧವ ಭಟ್ ಗುರೂಜಿ ಸ್ವರ್ಗಸ್ಥರಾದ ಬಳಿಕ ಸೂಕ್ತ ಗುರುವಿನ ಹುಡುಕಾಟದಲ್ಲಿದ್ದೆ. ಒಂದು ದಿನ ರಾಗಧನ ಉಡುಪಿಯ ಖ್ಯಾತ ಸಂಗೀತಜ್ಞ, ವಿಮರ್ಶಕ ಅರವಿಂದ ಹೆಬ್ಬಾರರ ಮನೆಯಲ್ಲಿ ಆಯೋಜಿಸಿದ್ದ ಪಂಡಿತ್ ನಾರಾಯಣ್ ಪಂಡಿತರ ಗಾಯನ- ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಹೋದೆ. ಸುಮಾರು 80 ವರ್ಷ ವಯಸ್ಸಿನ ವಯೋವೃಧ್ಧ , ಜ್ಞಾನವೃಧ್ಧ ಸಂಗೀತಗಾರರೋರ್ವರು ಹಾಡುತ್ತಿದ್ದರು.
“ರೇಶಮ್ ಕಿ ಡೋರ್ ಸುರ್ ಕೀ, ಸುರಂಗ್ ರಂಗ್ ಕೀ, ಮನ್ ಕೋ ಲುಭಾನಿ, ಚಲತ ರಹು ಸಂಗ್, ಸಾಧಕ್ ಮೈ ಸುರ್ ಕೀ, ಖೋಜತ್ ಸುರ್ ರಾಹ್ ಮೈ ಭೂಲಿ, ಬಂಧನ್ ಏ ಕೈಸಿ ಖೀಂಚ್ ಲೇ ಆಯಿ”
ಅದು ಅವರು ಸ್ವತ: ರಚಿಸಿದ ಬಂದಿಷ್. ಆ ಬಂದಿಷ್‍ನ ಅಪೂರ್ವ ಕಾವ್ಯ ಸೌಂದರ್ಯಕ್ಕೆ ಬೆರಗಾಗಿದ್ದೆ. ಹಿಂದೂಸ್ಥಾನಿ ಸಂಗೀತದಲ್ಲಿ ಇಂಥದ್ದೊಂದು ಬಂದಿಷ್ ಕೇಳಿದ್ದು ಅದೇ ಮೊದಲು. ಜಗತ್ತನ್ನೆ ಮರೆತ ತಾದಾತ್ಮ್ಯದಲ್ಲಿ ಸ್ವರ-ಭಾವಗಳ ಅಪೂರ್ವ ಸೌಂದರ್ಯ ಲೋಕಕ್ಕೆ ತೆರೆದುಕೊಳ್ಳುತ್ತ ನದಿಯಂತೆ ಶಾಂತವಾಗಿ ಹರಿಯುತ್ತಿದ್ದ ಅವರ ಗಾಯನ ನೇರವಾಗಿ ಎದೆಗೆ ಇಳಿದಿತ್ತು. ಅರ್ಧ ನಿಮೀಲಿತ ನೇತ್ರಗಳು, ಕಡೆದ ವಿಗ್ರಹದಂತಿದ್ದ ಮುಖ, ಬೆಳಕಿನ ಗೋಲಗಳಂತಿದ್ದ ತೇಜಸ್ವಿ ಕಣ್ಣುಗಳು, ಇಳಿವಯಸ್ಸಲ್ಲೂ ಕುಂದದ ಸ್ವರ ಮಾಧುರ್ಯ. ಯಾವುದೇ ಚಮತ್ಕಾರ, ದೊಂಬರಾಟಗಳಿಲ್ಲದ ಧ್ಯಾನಸ್ಥ ಗಾಯನ ಶೈಲಿ… ಈ ಕಲಾವಿದ ಇತರೆಲ್ಲರಿಗಿಂತ ಭಿನ್ನ ಅನಿಸಿತು.
ಕಚೇರಿ ಮುಗಿದ ಬಳಿಕ ಅವರ ಶಿಷ್ಯನಾಗುವ ಬಯಕೆಯನ್ನು ವಿನೀತನಾಗಿ ವ್ಯಕ್ತಪಡಿಸಿದ್ದೆ. “ಏನಾದರೂ ಹಾಡು ನೋಡೋಣ” ಅಂದರು. ಅಂಜುತ್ತಂಜುತ್ತ ಮಧುವಂತಿ ರಾಗವನ್ನು ಹಾಡಿದೆ. ಶಾಂತವಾಗಿ ಕೇಳಿದ ಅವರು “ನಿನಗೆ ಕಲಿಯುವ ಯೋಗ್ಯತೆ ಇದೆ. ನಾನು ಹಾಗೆಲ್ಲ ಎಲ್ಲರಿಗೂ ಕಲಿಸಲ್ಲ, ನಾನು ಹಿಮಾಲಯದಲ್ಲಿ ನಿರ್ಮಲ, ದಿವ್ಯ ಸ್ವರೂಪದಲ್ಲಿರುವ ಗಂಗೆಯನ್ನು ಕಾಣಹೊರಟ ಸಾಧಕ. ಸಭೆ, ಗೆಲ್ಲುವ ಸಾಧನಗಳನ್ನು ಕಟ್ಟಿ ಬದಿಗಿಟ್ಟು ನನ್ನ ಜೊತೆ ಬರಬೇಕು, ಸಿಧ್ಧನಿದ್ದೀಯಾ” ಅಂದರು. ಹಿಂದೆಮುಂದೆ ನೋಡದೆ “ಆಯಿತು ಗುರೂಜಿ” ಅಂದೆ. ಮುಂದೆ ಆರೇಳು ವರ್ಷಗಳ ಅವರ ಶಿಷ್ಯತ್ವದಲ್ಲಿ ಅವರ ಸಂಗೀತಯಾನದ ಕ್ಷಣ ಕ್ಷಣವನ್ನು ಸವಿಯುವ ರಸಗಳಿಗೆ ನನ್ನದಾಯಿತು. ಜೊತೆಗೆ ಆ ಪ್ರವಾಸ ಅಗಮ್ಯ ಎಂಬ ವಾಸ್ತವದ ಅರಿವೂ ಆಯಿತು.
ಪಂಡಿತರು ಜನಿಸಿದ್ದು ಮುಂಬೈನಲ್ಲಿ 1930ರ ಜೂನ್ 23ರಂದು. ತಂದೆ ವಿಘ್ನೇಶ್ವರ ಪಂಡಿತ್ ಮೂಲತ: ಗೋಕರ್ಣದವರಾದರೂ ಬಹಳ ಹಿಂದೆಯೆ ಮುಂಬೈಗೆ ಬಂದು ಖ್ಯಾತ ದೇವಧರ್ ಸ್ಕೂಲ್‍ನಲ್ಲಿ ಪಿಟೀಲು ಶಿಕ್ಷಕರಾಗಿದ್ದರು. ಪಂಡಿತರ ಮನೆಮಾತು ಕನ್ನಡ. ಶಿಕ್ಷಣ ಪಡೆದದ್ದು ಮರಾಠಿಯಲ್ಲಿ. ಜೀವನದ 60 ವರ್ಷಗಳನ್ನು ಮುಂಬೈನಲ್ಲೆ ಕಳೆದರೂ ಪಂಡಿತರ ಕನ್ನಡ ಕನ್ನಡಿಗರನ್ನೇ ನಾಚಿಸುವಷ್ಟು ಸ್ಪಷ್ಟ, ಸಲಿಲ.
ಬಾಲ್ಯದಲ್ಲಿ ತಂದೆಯವರಿಂದ ಪಿಟೀಲು ವಾದನ ಕಲಿತ ಪಂಡಿತರು ಆಗ ದೇವಧರ್ ಸ್ಕೂಲಲ್ಲಿ ಶಿಕ್ಷಕರಾಗಿದ್ದ ಪಂ.ಕುಮಾರ ಗಂಧರ್ವರ ಮಾರ್ಗದರ್ಶನದಲ್ಲಿ ಗಾಯನವನ್ನು ಅಭ್ಯಸಿಸಿದರು.ಕುಮಾರ ಗಂಧರ್ವರು ಮುಂಬೈ ತೊರೆದು ದೇವಾಸ್ಯದಲ್ಲಿ ನೆಲೆಸಿದಾಗಲೂ ಅವರ ಆಪ್ತ ಶಿಷ್ಯರಲ್ಲಿ ಓರ್ವರಾಗಿದ್ದರು. ಗುರು ಕುಮಾರಗಂಧರ್ವರ ಪ್ರಖಂಡ ಸೃಜನಶೀಲ ವ್ಯಕ್ತಿತ್ವ ಪಂಡಿತರ ಮೇಲೆ ಗಾಢವಾದ ಪ್ರಭಾವ ಬೀರಿತು. ಪಂಡಿತರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ, ಸಾಹಿತ್ಯ, ಮೀಮಾಂಸೆ, ತತ್ವಜ್ನಾನ, ಶಿಲ್ಪ, ಚಿತ್ರಕಲೆ ಮೊದಲಾದವುಗಳ ಆಳವಾದ ಅಧ್ಯಯನ ನಡೆಸಿದ್ದರು. ಬಾಲ್ಯದಲ್ಲಿ ದೇವಧರ್ ಸ್ಕೂಲಲ್ಲಿ ಬೇರೆ ಬೇರೆ ಘರಾಣಗಳ ಸಂಗೀತ ದಿಗ್ಗಜರ ಸಂಗೀತ ಕೇಳುವ ಅವಕಾಶ ದೊರಕುತ್ತಿತ್ತು. ಇವೆಲ್ಲವು ಪಂಡಿತರಲ್ಲಿ ಸಂಗೀತದ ಕುರಿತು ತನ್ನದೇ ಆದ ಅನನ್ಯ ಸೌಂದರ್ಯ ದೃಷ್ಟಿ, ಸೃಜನಶೀಲ ಒಳನೋಟಗಳನ್ನು ಬೆಳೆಸಿದವು. ಆ ಕಾಲದ ಖ್ಯಾತ ಕಲಾವಿದ ಉಸ್ತಾದ್ ಬಡೇ ಗುಲಾಮ್ ಆಲಿ ಖಾನ್ ದೇವಧರ್ ಸ್ಕೂಲಲ್ಲಿ ಆಗಾಗ ತಂಗುತ್ತಿದ್ದರು. ಪಂಡಿತರು ಅವರ ಗಾಯನಕ್ಕೆ ಪಿಟೀಲು ಸಾಥ್ ನೀಡುತ್ತ ಠುಮ್ರಿ , ಗಾಯನದ ಸೂಕ್ಷಗಳನ್ನು ಅರಿತರು. ಮುಂದೆ ವಕೀಲಿ ವೃತ್ತಿ ಕೈಗೊಂಡಾಗಲೂ ಪಂಡಿತರ ಗಮನ ಸಂಗೀತದ ಮೇಲೆಯೆ ಇತ್ತು. ಸರಳ ಬದುಕಿಗೆ ಅಗತ್ಯವಾದಷ್ಟೆ ಸಂಪಾದನೆ; ಉಳಿದಂತೆ ಸಂಗೀತದ ಅಭ್ಯಾಸ, ದೇಶಾದ್ಯಂತ ಸುತ್ತಾಟ, ವಿವಿಧ ಪ್ರಾಂತ್ಯಗಳ ಶಾಸ್ತ್ರೀಯ,ಜನಪದ ಸಂಗೀತಗಳ ಅಧ್ಯಯನ;ಇವರ ಬದುಕಿನ ಉದ್ದೇಶಗಳಾದವು.
ಪಿಟೀಲಿನಲ್ಲಿ ಗಾಯಕಿ ಶೈಲಿಯನ್ನು ವಿಕಸಿಸಿದ ಕೀರ್ತಿ ಪಂಡಿತರಿಗೆ ಸಲ್ಲುತ್ತದೆ. ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರಾಗಿದ್ದ ಅವರು ದೇಶಾದ್ಯಂತ ಕಚೇರಿಗಳನ್ನು ನೀಡಿದ್ದಲ್ಲದೆ ಗಣರಾಜ್ಯ ದಿನದಂದು ಅಂದಿನ ರಾಷ್ತ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ನಿವಾಸದಲ್ಲು ಕಚೇರಿ ನೀಡಿದ್ದರು.
55ನೇ ವಯಸ್ಸಿಗೆ ಲಘು ಪಾರ್ಶ್ವವಾಯುವಿಗೆ ತುತ್ತಾಗಿ ಎಡಗೈ, ಎಡಗಾಲುಗಳ ಸ್ವಾಧೀನ ಕಳಕೊಂಡ ಮೇಲೆ ಪಂಡಿತರು ಮುಂಬೈ ತ್ಯಜಿಸಿ ಪತ್ನಿಯೊಂದಿಗೆ ಹೂಟ್ಟೂರಾದ ಗೋಕರ್ಣಕ್ಕೆ ಬಂದು ನೆಲೆಸಿದರು. ಪಂಡಿತ ದಂಪತಿಗಳಿಗೆ ಮಕ್ಕಳಿರಲಿಲ್ಲ. ಪತ್ನಿ ತೀರಿಕೊಂಡ ಮೇಲೆ ಹೊನ್ನಾವರಕ್ಕೆ ಬಂದು ತಮ್ಮ ಸಂಬಂಧಿಕ ಮಹೇಶ ಪಂಡಿತರ “ಸ್ನೇಹಕುಂಜ”ದಲ್ಲಿ ಟ್ರಸ್ಟಿಯಾಗಿ ಅಲ್ಲೇ ನೆಲೆಸಿದರು.
ಗುರು ಕಮಾರಗಂಧರ್ವರ ಸೃಜನಶೀಲ ಪ್ರಯೋಗಗಳಿಂದ ಪ್ರೇರಣೆ ಪಡೆದ ಪಂಡಿತರು vಮ್ಮದೇ ಆದ ಗಾಯನ ಶೈಲಿಯನ್ನು ವಿಕಸಿಸಿ ಆಯ್ದ ವಿದ್ಯಾರ್ಥಿಗಳಿಗೆ ಪಾಠ ಹೇಳತೊಡಗಿದರು. ರಾಗಗಾಯನದ ಅಬ್ಬರದ ಕ್ಲೀಷೆಗಳಲ್ಲಿ ಕಾವ್ಯ ಸೊರಗಿದ್ದನ್ನು ಕಂಡ ಪಂದಿತರು ಗಾಯನದಲ್ಲಿ ಕಾವ್ಯಕ್ಕೊಂದು ನೆಲೆ, ಸಮಕಾಲೀನತೆ ಕಲ್ಪಿಸುವ ದೃಷ್ಟಿಯಿಂದ “ಅಭಿನವ ಖಯಾಲ್” ಹೆಸರಲ್ಲಿ “ನಾದಪಿಯಾ” ಎಂಬ ಕಾವ್ಯನಾಮದಿಂದ ಬಂದಿಷ್‍ಗಳನ್ನು ರಚಿಸತೊಡಗಿದರು. ತನ್ನ ಬಂದಿಷ್ ಗಳನ್ನು ದಾಟಿಸಲು ತಾನು ಅರಳಿಸಿದ ಗಾಯನ ಶೈಲಿಯನ್ನು ಪಂಡಿತರು “ಭಾವಸೌಂದರ್ಯವಾದ” ಅಂತ ಕರೆದುಕೊಂಡಿದ್ದಾರೆ. ಅವರ ಶಿಷ್ಯೆ ಧಾರವಾಡದ ಶ್ರಿಮತಿ ಶಾರದಾ ಭಟ್ ಸುಮಾರು ನೂರಕ್ಕು ಮಿಕ್ಕಿದ ರಾಗಗಳಲ್ಲಿನ ಅವರ ಬಂದಿಷ್‍ಗಳನ್ನು ಕನ್ನಡದಲ್ಲಿ ಸ್ವರಪ್ರಸ್ತಾರ ಹಾಕಿ ಪುಶ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಪುಸ್ತಕ ಧಾರವಾq ವಿಷ್ವವಿದ್ಯಾನಿಲಯದ ಸಂಗೀತದ ಸ್ನಾತಕ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.
“ಸಂಗೀತ ಅಂದರೆ ಸ್ಥೂಲದಿಂದ ಸೂಕ್ಷ್ಮಕ್ಕೆ ಏರುವ ಪ್ರವಾಸ”ಅನ್ನುತ್ತಿದ್ದರು ಗುರೂಜಿ. ಬದುಕಿನ ಸುತ್ತ ಆವರಿಸಿದ ಚೆಲುವಿನ ಅಮೂರ್ತ ನೆಲೆಗಳನ್ನು, ಸೆಲೆಗಳನ್ನು ಕಾಣುವ ಅಸೀಮ ಸೌಂದರ್ಯದ ಕಣ್ಣುಗಳನ್ನು ಸಂಗೀತ ಅವರಿಗೆ ನೀಡಿತ್ತು.ಅಧ್ಯಾತ್ಮದ ಜೊತೆಗೆ ಈ ನೆಲದ ಭಾವಗಳಾದ ಶೃಂಗಾರ, ವಿರಹ, ಪ್ರೇಮ, ವಾತ್ಸಲ್ಯ, ತಳಮಳ, ಅನುಕಂಪ ಎಲ್ಲವೂ ಅವರ ಬಂದಿಷ್‍ಗಳಿಗೆ ವಸ್ತುಗಳಾಗಿದ್ದವು. ಮಳೆ, ಋತುಗಳ ವರ್ಣನೆ, ಬೆಳದಿಂಗಳು, ಎಲ್ಲವೂ ಅವರ ಸ್ವರ- ಭಾವಗಳ ಕುಂಚಕ್ಕೆ ಬಣ್ಣಗಳಾಗುತ್ತಿದ್ದವು. ನಾದಗುಣ ಮತ್ತು ಕಾವ್ಯ ಸೌಂದರ್ಯ ಈ ಎರಡೂ ಸ್ತರಗಳಲ್ಲಿ ಪರಿಪೂರ್ಣ ಅಭಿವ್ಯಕ್ತಿ ಪಡೆದ ಅವರ ಬಂದಿಷ್‍ಗಳು ಇರುವುದರಲ್ಲೆ ಇರದುದನ್ನು ಕಾಣುವ ಅಸದೃಶ ಚೆಲುವನ್ನು, ಅನನ್ಯ ಕಾಣ್ಕೆಯನ್ನು ಹೊಂದಿವೆ. ಪಂಡಿತರನ್ನು ಅವು ಅಪ್ರತಿಮ ವಾಗ್ಗೇಯಕಾರರ ಸಾಲಿನಲ್ಲಿ ನಿಲ್ಲಿಸುತ್ತವೆ.
“ಕಲೆಗೆ ವ್ಯಾಕರಣ ಬೇಕು, ಆದರೆ ವ್ಯಾಕರಣವೇ ಕಲೆ ಅಲ್ಲ. ಕಲಾವಿದ ಶಾಸ್ತ್ರವನ್ನು ಮುರಿಯಬಾರದು. ಆದರೆ ಸೃಜನಶೀಲ ಒಳನೋಟದಿಂದ ಅದನ್ನು ಬಳ್ಳಿಯಂತೆ ಬೇಕಾದ ಆಕಾರಕ್ಕೆ ಬಗ್ಗಿಸಬಹುದು. ವಿವಾದಿ ಸ್ವರಗಳನ್ನು ದುಡಿಸಿಕೊಳ್ಳಬಲ್ಲವನೆ ಅಸಲಿ ಕಲಾವಿದ” ಅಂತಂದು ತುಂಟತನದಿಂದ ನಗುತ್ತಿದ್ದರು ಗುರೂಜಿ. ಅವರು ಅದನ್ನು ಬಂದಿಷ್‍ಗಳಲ್ಲಿ, ಗಾಯನದಲ್ಲಿ ಸಾಧಿಸಿದ್ದರು ಕೂಡ. ಉದಾಹರಣೆಗೆ ಬಿಹಾಗ್ ರಾಗದಲ್ಲಿ ಅಲ್ಪತ್ವ ಹೊಂದಿದ ರಿಷಭಕ್ಕೆ ವಿಶಿಷ್ಟ ಸ್ಥಾನವನ್ನು ಬಂದಿಷ್‍ನಲ್ಲಿ ಕಲ್ಪಿಸಿದ ರೀತಿ, ಜೋಗ್ ರಾಗದಲ್ಲಿ ಒಂದರ ಹಿಂದೆ ಒಂದು ಬರಬಾರದ ಶುಧ್ಧ , ಕೋಮ¯ ಗಂಧಾರಗಳನ್ನು ಚಾಕ್ಚಕ್ಯತೆಯಿಂದ ಅವರು ಒಂದರ ಪಕ್ಕ ಒಂದು ನಿಲ್ಲಿಸಿದ ಪರಿ ಬೆರಗು ಹುಟ್ಟಿಸುವಂತದ್ದು. ಹೀಗೆ ಪಂಡಿತರ ಅಸದೃಶ ಸೃಜನಶೀಲತೆಯ ಅಸಂಖ್ಯಾತ ಉದಾಹರಣೆಗಳಿವೆ.
“ ರಾಗ ಸಂಗೀತದ ಶರೀರ; ಕಾವ್ಯ ಅದರ ಆತ್ಮ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಎರಡೂ ಜೊತೆಜೊತೆಯಾಗಿ ಸಾಗಿದಾಗ ಮಾತ್ರ ಸೌಂದರ್ಯದ ಪರಿಪೂರ್ಣ ಅಭಿವ್ಯಕ್ತಿ ಸಾಧ್ಯ” ಅನ್ನುತ್ತಿದ್ದ ಪಂಡಿತರ ಗಾಯನದಲ್ಲಿ ರಾಗ-ಕಾವ್ಯಗಳು ಒಂದನ್ನೊಂದು ಬಿಟ್ಟುಕೊಡದೆ ಒಂದು ಇನ್ನೊಂದರ ತೆಕ್ಕೆಯಲ್ಲಿ ಜೊತೆಜೊತೆಯಾಗಿ ಸಾಗುವ ಪರಿ ಅನನ್ಯ
“ಈಗಿನ ಗಾಯಕರು ರಾಗ ಹಾಡುವುದಿಲ್ಲ. ತಮ್ಮ ತಮ್ಮ ಘರಾಣೆ ಹಾಡುತ್ತಾರೆ. ಸ್ವರ ಅನುಭವಿಸಿ ಹಾಡಬೇಕು. ಮನೋಜ್ನವಾದ ಸಂಗೀಕಕ್ಕಿಂತಲೂ ಹೃದ್ಯವಾದ ಸಂಗೀತ ಶ್ರೇಷ್ಠ. ಚಪ್ಪಾಳೆ ಗಿಟ್ಟಿಸುವವನಿಗಿಂತ ಕಣ್ಣುಗಳು ಜಿನುಗುವಂತೆ ಹಾಡಬಲ್ಲವನು ನಿಜವಾದ ಕಲಾವಿದ. ಶ್ರುತಿ ಸೇರಿದ ಮಾತ್ರಕ್ಕೆ ಸ್ವರ ಆಗಲಿಲ್ಲ. ಸ್ವರದಲ್ಲಿ ಒಂದು ಜೀರು ಬೇಕು, ಎಣ್ಣೆಯಲ್ಲಿ ಅದ್ದಿದ ಬತ್ತಿಯಂತ ಆರ್ದ್ರತೆ ಬೇಕು” ಅನ್ನುತ್ತಿದ್ದರು ಗುರೂಜಿ. ಸದಾ ಜೀರಿಗಾಗಿ ಹಾತೊರೆಯುತ್ತಿದ್ದ ಅವರ ಮಾತಿನಲ್ಲೂಈ ಜೀರು ಝೇಂಕರಿಸುತ್ತಿತ್ತು.ಗಾಯನದಲ್ಲಂತೂ ಸದಾ ಈ ಜೀರು ಅನುರಣಿಸುತ್ತಿತ್ತು. ರಾಗತತ್ವ ಮತ್ತು ರಸ ಸಿದ್ಧಾಂತದ ಆಳವಾದ ಪಾಂಡಿತ್ಯ ಹೊಂದಿದ್ದ ಗುರೂಜಿ ಗಾಯನದಲ್ಲಿ ಪ್ರತಿ ರಾಗಕ್ಕೂ ತಮ್ಮದೆ ವಿಶಿಷ್ಟ ಸೊಗಡು ತರುತ್ತಿದ್ದರು. ಉದಾಹರಣೆಗೆ “ಭೀಮಪಲಾಸಿ ರಾಗದ ಮಧ್ಯಮ ಉಳಿದ ರಾಗಗಳ ಮಧ್ಯಮಕ್ಕಿಂತ ಒಂದು ಗುಲಗುಂಜಿ ಮೇಲೆ ಅನ್ನುತ್ತಿದ್ದ ಗುರೂಜಿ ಅತಿ ಧ್ರುತ ಲಯದಲ್ಲಿ ಹಾಡುವಾಗಲು ಈ ಸೂಕ್ಷ್ಮ ಸ್ವರಸ್ಥಾನವನ್ನು ಕರಾರುವಕ್ಕಾಗಿ ಸಾಧಿಸುತ್ತಿದ್ದ ಪರಿ ಒಂದು ವಿಸ್ಮಯ. ಕೇದಾರ ರಾಗದ ತೀವ್ರ ಮಧ್ಯಮದಿಂದ ಶುಧ್ಧ ಮಧ್ಯಮಕ್ಕೆ ಒಂದೇ ಸ್ವರಾಂತರವಿದ್ದರೂ ಅಲ್ಲೆ ಒಂದು ದೀರ್ಘ ಪ್ರವಾಸವೆಂಬಂತೆ ಮೀಂಡ್ ಎಳೆಯಲು ಯಾರಿಗೂ ಕಾಣದ ಜಾಗ ಅವರಿಗೆ ಮಾತ್ರ ಕಾಣುತ್ತಿತ್ತು. ಪ್ರತಿ ಸಲ ಅವರು ಹಾಡಿದಾಗಲು ನಾನು ಮತ್ತು ಜೊತೆಯ ಶ್ರೋತೃಗಳು ದು;ಖವೋ, ಪುಳಕವೋ, ಯಾವುದಾದರೊಂದು ಭಾವದ ತೀವ್ರ ಸೆಳೆತಕ್ಕೆ ಒಳಗಾಗಿ ಕಣ್ಣು ಒದ್ದೆ ಮಾಡಿಕೊಳ್ಳುತ್ತಿದ್ದುದು ಸಾಮಾನ್ಯವೆಂಬಂತೆ ಆಗಿತ್ತು. ಅವರು ಮಾತ್ರ ನಗುನಗುತ್ತ ಪ್ರಸನ್ನವದನರಾಗಿ ನಮ್ಮೆಲ್ಲರನ್ನು ಅಳಿಸುತ್ತಿದ್ದರು. “ಕಲಾವಿದ ಭಾವಾವೇಶಕ್ಕೆ ಒಳಗಾಗಬಾರದು. ಎಚ್ಚರದ ಸ್ಥಿತಿಯಲ್ಲಿ ಎಲ್ಲವನ್ನು ಅನುಭವಿಸುತ್ತ ತನ್ನ ಭಾವ-ಅನುಭಾವಗಳನ್ನು ದಾಟಿಸಬೇಕು. ಭಾವಾವೇಶಕ್ಕೆ ಒಳಗಾದರೆ ಸಂವಹನ ಸಾಧ್ಯವಾಗಲ್ಲ. ತಾನಳದೆ ಇತರರನ್ನು ಅಳಿಸುವವ ಕಲಾವಿದ” ಅನ್ನುತ್ತಿದ್ದರು.
“ಹಿಂದೂಸ್ಥಾನಿ ಸಂಗೀತದಲ್ಲಿ ಲಯ ಅಂತರ್ಗಾಮಿ. ಅದು ಸಾಂಕೇತಿಕ. ಅದರ ಉಪಯೋಗ ಸ್ವರ-ಶಬ್ದಗಳ ಹರಿವಿಗೊಂದು ಬೆಡಗು ತರುವುದು. ಲಯದ ಕುಣಿತದಿಂದ ಸ್ವರಕ್ಕೆ ಎಲ್ಲೂ ಪೆಟ್ಟಾಗಬಾರದು. ಭಾವಕ್ಕೆ ಚಲನೆ, ಚಲನೆಗೆ ಗತಿ ನೀಡುವುದಷ್ಟೆ ಲಯದ ಕೆಲಸ” ಅನ್ನುತ್ತಿದ್ದ ಪಂಡಿತರ ಗಾಯನದಲ್ಲಿ ಅತ್ಯಂತ ಸಂಕೀರ್ಣ ಲಯ ಚಿತ್ರಗಳು ಎಲ್ಲೂ ಸ್ವರಭಾವಕ್ಕೆ ಪೆಟ್ಟಾಗದ ರೀತಿಯಲ್ಲಿ ಹೆಣೆದುಕೊಡಿವೆ.
“ಗಾಯನ ಅಂದರೆ ಬರೀ ಸಭೆ ಗೆಲ್ಲುವ ಸೊತ್ತುಗ¼ ರಾಶಿ ರಾಶಿ ಪೇರಿಕೆ ಅಲ್ಲ. ಉದಾತ್ತ, ಭವ್ಯ, ದಿವ್ಯ ಸೌಂದರ್ಯ ಲೋಕವೊಂದು ಸೃಷ್ಟಿಯಾಗಬೇಕು. ಅದಕ್ಕಾಗಿ ಚಿಂತನ , ಮಂಥನ ನಡೆಸಬೇಕು.ಪ್ರತಿ ಸ್ವರದ ಗೆರೆಯನ್ನೂ ಅತ್ಯಂತ ಕರಾರುವಕ್ಕಾಗಿ, ಸುಂದರವಾಗಿ ಎಳೆದಾಗ ಮಾತ್ರ ಅತ್ಯಂತ ಕಡಿಮೆ ವ್ಯಾಕರಣದ ಬಳಕೆಯಿಂದ ಅತ್ಯಂತ ಭವ್ಯವಾದ ರಸಲೋಕಕ್ಕೆ ಏರಲು ಸಾಧ್ಯ. ಮೈಕೆಲೆ ಏಂಜೆಲೆನೋನ ತಾದತ್ಮ್ಯದಲ್ಲಿ ಸ್ವರಗಳನ್ನು ಕಡೆದರೆ ರಾಗದ ಬೋಳು ಶಿಲ್ಪವೆ ರೇಖೆ- ರೇಖೆಗಳಲ್ಲೂ ಚೆಲುವು ಹೊಮ್ಮಿಸಬಲ್ಲುದು; ಬಾಹ್ಯ ಅಲಂಕಾರದ ಅವಶ್ಯಕತೆ ಇರಲಾರದು” ಅನ್ನುತ್ತಿದ್ದರು ಗುರೂಜಿ. ಕೆಲವೊಮ್ಮೆ ಅವರು ಒಂದೇ ಒಂದು ತಾನ್ ಇಲ್ಲದೆ ಹಾಡಿದರೂ ರಾಗ ಎಂದೂ ನೀರಸ ಅನಿಸಿದ್ದಿಲ್ಲ.
ಕುಮಾರಗಂಧರ್ವರ ಕಟ್ಟಾ ಅನುಯಾಯಿಯಾದರೂ ಪಂಡಿತರ ದಾರಿ ತನ್ನ ಗುರುವಿಗಿಂತ ಭಿನ್ನವಾಗಿತ್ತು. “ಪ್ರತಿ ಕಲಾವಿದನೂ ತನ್ನ ಹೆಜ್ಜೆ ಗುರುತುಗಳನ್ನು ತಾನೇ ಮೂಡಿಸಬೇಕು, ಗುರು ಕೇವಲ ದಾರಿ ತೋರಿಸಬಲ್ಲ” ಅನ್ನುವುದು ಅವರ ಸಿಧ್ಧಾಂತವಾಗಿತ್ತು. ಇದನ್ನೇ ಅವರು ಶಿಷ್ಯರಿಗೂ ಬೋಧಿಸಿದರು. ಅರ್ಪಿತ್ ಶಾನುಭಾಗ್, ಲಲಿತ, ಅನ್ನಪೂರ್ಣ ಶಾನುಭಾಗ್, ಶಾರದಾ ಭಟ್, ರವಿಕಿರಣ್ ಮಣಿಪಾಲ್, ಶ್ರೀಮತಿದೇವಿ, ಗಜಾನನ ಹೆಬ್ಬಾರ್ ಮೊದಲಾದವರು ಪಂಡಿತರ ನೆಚ್ಚಿನ ಶಿಷ್ಯರು.
ಖ್ಯಾತ ಕರ್ನಾಟಕಿ ಗಾಯಿಕೆ ದಿವಂಗತ ರಂಜನಿ ಹೆಬ್ಬಾರ್ ಕೂಡ ಗುರೂಜಿ ಅವರ ನೆಚ್ಚಿನ ಶಿಷ್ಯೆ. ಅವರ ಭಾವಸೌಂದರ್ಯವಾದದ ಕಲ್ಪನೆಗಳನ್ನು ತನ್ನ ಗಾಯನದಲ್ಲಿ ತನ್ನದೇ ಪ್ರಬುಧ್ಧ ಚಿಂತನೆಗಳಿಂದ ಅರಳಿಸಿದ ಪ್ರತಿಭಾವಂತೆ. ಅಲ್ಲದೆ ಗುರೂಜಿ ಪದೇ ಪದೇ ಹೆಳುತ್ತಿದ್ದ ಜೀರನ್ನು ತನ್ನ ಕಂಠದಲ್ಲಿ ಯಥಾವತ್ತಾಗಿ ಮಾರ್ಮೋಳಗಿಸಿದ ಅಪ್ರತಿಮ ಸಾಧಕಿ. ಗುರೂಜಿ ಮಾರ್ಗದರ್ಶನದಲ್ಲಿ ಕರ್ನಾಟಕಿ ಗಾಯನದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಪಡಿಮೂಡಿಸುತ್ತ ಯಶಸ್ಸಿನ ಶೃಂಗದಲ್ಲಿ ವಿಹಸುತ್ತಿದ್ದಾಗಲೆ ವಿಧಿವಶರಾದದ್ದು ವಿಪರ್ಯಾಸ.
ಹೀಗೆ ನಾರಾಯಣ ಪಂಡಿತರು ಕಲೆಗೊಂದು ಹೊಸ ಸೌಂದರ್ಯ ನೀತಿ, ಸಂವಹನ ಸಾಧ್ಯತೆಯನ್ನು ತೋರಿಸಿಕೊಟ್ಟ ಪ್ರಗಲ್ಭ ಪಂಡಿತ. ಕಾಡುತ್ತಿದ್ದ ಅನಾರೋಗ್ಯವನ್ನೂ ಲೆಕ್ಕಿಸದೆ ಅನವರತ ಸಂಗೀತದ ಸಂಶೋಧನೆ, ಚಿಂತನೆಯಲ್ಲಿ ತೊಡಗಿಸಿಕೊಂಡು ಬದುಕನ್ನು ತುಂಬಿಸಿಕೊಂಡ ಸಾಧಕ. ಸಂಗೀತದಲ್ಲಿ ಕಾವ್ಯದ ಮಾಧುರ್ಯ, ಕಾವ್ಯದಲ್ಲಿ ಸಂಗೀತದ ನಾದಗುಣ ತಂದವರು. ಹೆಂಡತಿ ತೀರಿಹೋಗಿ, ಮಕ್ಕಳಿಲ್ಲದೆ ಒಂಟಿಬಾಳು ನಡೆಸಬೇಕಾಗಿ ಬಂದರೂ ಒಂಟಿಯಾಗದೆ ಸಂಗೀತವನ್ನೇ ಒಡನಾಡಿಯಾಗಿಸಿ ಬದುಕಿದ ಧೀಮಂತ. ಅಪೂರ್ವ ಗಾಂಭೀರ್ಯ, ಅದ್ಭುತ ಚಿಂತನೆ, ತುಂಬಿ ತುಳುಕುವ ಜೀವನಪ್ರೀತಿ, ಹಾಸ್ಯಪ್ರಜ್ನೆ ಎಲ್ಲವೂ ಅವರ ವ್ಯಕ್ತಿತ್ವದಲ್ಲಿ ಒಂದು ಹೃದ್ಯವಾದ ಹದದಲ್ಲಿ ಮಿಳಿತವಾಗಿದ್ದವು. ಸಂಗೀತಗಾರರಿಗೇ ನಿಜವಾದ ಸಂಗೀತ ಹೇಳಿಕೊಟ್ಟ ಮಹಾನುಭಾವ. ಪ್ರಶಸ್ತಿ, ಪುರಸ್ಕಾರಗಳಿಗೆ ತಲೆಕೆಡಿಸಿಕೊಳ್ಳದೆ ಎಲೆಮರೆಯಲ್ಲೆ ಬದುಕಿದ ಹಣ್ಣು. “ನನಗೆ ಯಾರೂ ಪಂಡಿತ್ ಬಿರುದು ಕೊಡಬೇಕಿಲ್ಲ, ನನ್ನ ಹೆಸರಲ್ಲೆ ಅದು ಇದೆ” ಅನ್ನುತ್ತ ತುಂಟತನದಿಂದ ಅವರು ನಗುತ್ತಿದ್ದುದು ಈಗಲೂ ಕಣ್ಣಮುಂದೆ ಕಟ್ಟಿದಂತಿದೆ.
ಒಮ್ಮೆ ಕೇಳಿದ್ದೆ “ ಇಷ್ಟೊಂದು ಅಗಾಧ ಪ್ರತಿಭೆ , ಪಾಂಡಿತ್ಯ ಇರುವ ನೀವು ಯಾಕೆ ಜನಪ್ರಿಯತೆಯ ಬೆನ್ನು ಹತ್ತಲಿಲ್ಲ ಗುರೂಜಿ?”
ನಕ್ಕು ನುಡಿದಿದ್ದರು. “ನಾನೊಂದು ಕಾಡು ಹೂ, ಕಾಡು ಹೂವಾಗಿಯೆ ಇರಬಯಸುವೆ”
ಆ ಮಾತಿನ ಅರ್ಥ ಸಾಧ್ಯತೆಗೆ ಬೆರಗಾಗಿದ್ದೆ. ಹೌದು! ಪಂಡಿತರ ಗಾಯನ ಕಾವ್ಯದಲ್ಲಿ ಬರುವ “ಕಾಡು” ಪ್ರತಿಮೆಯಂತೆ ಗಹನ, ಗಂಭೀರ, ಅಗಮ್ಯ, ಅಪರಂಪಾರ. ಅವರ ಸಂಗೀತ ಪೇಟೆಯ ಮನೆಗಳ ಕೈದೋಟದಲ್ಲಿ ನೋಡುವವರ ಅಭಿರುಚಿಗೆ ತಕ್ಕಂತೆ ಬೆಳೆದ ಹೂ ಅಲ್ಲ. ಕಾಡಲ್ಲಿ ತಾನೇ ತಾನಾಗಿ ಅರಳಿದ ಕಾಡು ಹೂ. ಕಾಣುವ ಹುಚ್ಚಿದ್ದವರಿಗೆ ಮಾತ್ರ ಕಾಣಲು ಸಾಧ್ಯ. ನಮ್ಮ ನಡುವೆ ಇಲ್ಲವಾದರೂ ಪಂಡಿತರು ತಮ್ಮ ಸಂಗೀತದಿಂದ ನಮ್ಮನ್ನೆಲ್ಲ ಕಾಡುತ್ತಲೇ ಇರುತ್ತಾರೆ.
ಇಂಥ ಮಹಾನ್ ಸಂಗೀತ ತಪಸ್ವಿಗೆ ಈ ಕವನದ ಮೂಲಕ ಅಂತಿಮ ನಮನ.
ಪ್ರೀತಿಯ ಗುರುಗಳಿಗೆ-
ನಾನೂ ನೀವೂ ಜೊತೆಯಾಗಿಯೆ ಬಂದಿದ್ದೆವು
ಕಚೇರಿಗೆ
ಸಭಾಂಗಣ ಕಿಕ್ಕಿರಿದಿತ್ತು
ನಿಮಗಿಷ್ಟವಾದ ರಾಗ ಎತ್ತಿಕೊಂಡಿದ್ದೆ
ಮುತ್ತಾತನ ಬೆಳಕ ತಕ್ಕಡಿಯಲ್ಲಿ
ತೂಗಿ
ಅಳೆದು
ಹೊಳೆವ ರೇಷಿಮೆ ಎಳೆಗಳಿಂದ
ನಾದ ತೇರ ಸಿಂಗರಿಸಿದ್ದೆ
ಹೊರಗೇ ನಿಂತು ನಸುನಕ್ಕಿರಿ ನೀವು
ಒಳಬರದೆ
ಧಿಮಾಕಿನಿಂದ ನಾನೊಬ್ಬನೆ ತೇರೆಳೆದಿದ್ದೆ
ಸುಡುಮದ್ದು, ಜಯಘೋಷ ಪಟಾಕಿಗಳಿಗೇನೂ ಕಡಿಮೆಯಿರಲಿಲ್ಲ
ಆದರೂ
ನಿಮ್ಮ ಜೀವ ಸ್ಪರ್ಶವಿಲ್ಲದ ತೇರು ಚಿಗುರಲಿಲ್ಲ
ಮಣ್ಣಲ್ಲಿ ಹೂತ
ತೇರಿಗೆ ಅತೀತದ ರೆಕ್ಕೆಗಳು ಮೊಳೆಯಲಿಲ್ಲ
ಸೋತ ಕಣ್ಣುಗಳು ನಿಮ್ಮನ್ನರಸಿದ್ದವು
ನೀವಿರಲಿಲ್ಲ ಅಲ್ಲೆಲ್ಲೂ
ಹೆಜ್ಜೆಗಳು ಯಾಂತ್ರಿಕ
ನಡೆದವು ಮನೆಯ ಕಡೆಗೆ
ಹೊರಗೆ ಅಂಗಳದಲ್ಲಿ
ಮನೆಬಿಟ್ಟಾಗ ಹಾಡುತ್ತಿದ್ದ ಹಕ್ಕಿ
ಇನ್ನೂ ಅದೇ ಕೊಂಬೆಯ ಮೇಲೆ ಕೂತು
ಲೋಕದ ಪರಿವೆಯಿಲ್ಲದೆ ಹಾಡುತ್ತಿದೆ
ತನ್ನ ಪಾಡಿಗೆ ತಾನು
ಹೃದಯವನ್ನೆ ಹಾಡಾಗಿಸಿ
ಹಾಡನ್ನೆ ಉಯ್ಯಾಲೆಯಾಗಿಸಿ
ಸರಾಗ
ಜೀಕುತ್ತಿದ್ದೀರಿ ನೀವು
ಇಲ್ಲಿಂದಲ್ಲಿಗೆ
ಅಲ್ಲಿಂದಿಲ್ಲಿಗೆ.