2015 ರ ಸಾಲಿನಲ್ಲಿ ರಂಜನಿ ಸಂಸ್ಮರಣಾ ಸಂಗೀತ ಕಛೇರಿಗಳು ಚೆನ್ನೈ, ಉಡುಪಿ ಮತ್ತು ಮಂಗಳೂರಿನಲ್ಲಿ ನಡೆದಿವೆ. ರಂಜನಿ ಗತಿಸಿ ಹೋದ ದಿನ ಜೂನ್ 9ಕ್ಕೆ ಇನ್ನು ಪ್ರತಿ ವರ್ಷ ಚೆನ್ನೈನಲ್ಲಿ, ಮೈಲಾಪುರದ ರಾಗಸುಧಾ ಹಾಲ್‍ನಲ್ಲಿ ರಂಜನಿ ಸಂಸ್ಮರಣಾ ಕಛೇರಿ ನಡೆಯಲಿದೆ. ಇದರ ಪ್ರಾಯೋಜಕರು ಡಾ. ಎನ್. ರಾಜಗೋಪಾಲನ್, ಚೆನ್ನೈ ಇವರು. ರಂಜನಿಯ ಪರಮ ಅಭಿಮಾನಿ. 85 ವರ್ಷದ ಈ ಹಿರಿಯರು ತಮ್ಮ ತಂದೆ-ತಾಯಿಯರ ಹೆಸರಿನಲ್ಲಿ ರಂಜನಿಯ ನೆನಪಿಗಾಗಿ 1 ಲಕ್ಷ ರೂಪಾಯಿ ದತ್ತಿ ನಿಧಿಯನ್ನು ಸ್ಥಾಪಿಸಿ ಪ್ರತಿ ವರ್ಷ ಯುವ ಕಲಾವಿದರೊಬ್ಬರ ಕಛೇರಿಯನ್ನು ನಡೆಸುವ ಕೈಂಕರ್ಯ ಕೈಗೊಂಡಿದ್ದಾರೆ. ಈ ವರ್ಷ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಕಛೇರಿಯನ್ನು ಏರ್ಪಡಿಸಿದ್ದರು. ಲತಾಂಗಿ ಕುಟುಂಬದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕು. ಅರ್ಚನಾ, ಕು. ಸಮನ್ವಿ ಮತ್ತು ಕು. ಗಾರ್ಗಿ ಅವರು ಮೊದಲಿಗೆ ರಂಜನಿ ರಾಗದ ಸಾರಂಗ ನಯನೇ ಕೃತಿಯನ್ನು ಪ್ರಾರ್ಥನಾ ರೂಪವಾಗಿ ಹಾಡಿದ್ದು ವಿಶೇಷವಾಗಿತ್ತು. ಪ್ರಾರ್ಥನಾ ಸಾಯಿ ನರಸಿಂಹನ್ ಮತ್ತು ಬಳಗದವರಿಂದ 2 ಗಂಟೆಗಳ ಕಾಲ ಒಂದು ಪ್ರೌಢ ಕಛೇರಿ ಪ್ರಸ್ತುತಗೊಂಡಿತು. ಡಾ. ವಿ. ರಾಮನಾರಾಯಣ್, ಮಧುರೈ ಜಿ. ಎಸ್. ಮಣಿ, ಕ್ಲೀವ್ ಲ್ಯಾಂಡ್ ಸುಂದರಂ, ಡಾ. ಎಂ. ಶ್ರೀನಿವಾಸನ್ (ಎಸ್. ಸೌಮ್ಯ ಅವರ ತಂದೆ), ಕೆ. ಎ. ಕಾಳಿದಾಸ್ ಮುಂತಾದ ಗಣ್ಯಾತಿ ಗಣ್ಯರು ಈ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದನ್ನು ಕಂಡರೆ ರಂಜನಿ ತನ್ನ ಜೀವಿತ ಕಾಲದಲ್ಲಿ ಸಂಪಾದಿಸಿದ ಗೌರವಾದರಗಳ ಬಗ್ಗೆ ಅಭಿಮಾನವೆನಿಸುತ್ತದೆ. ಎಸ್. ಸೌಮ್ಯ ಅವರು ಸಭೆಗೆ ಬಾರದೇ ಇದ್ದರೂ ತನ್ನ ಭಾಷಣದ ಅವತರಿಣಿಕೆಯನ್ನು ಸಿಡಿಯೊಂದರಲ್ಲಿ ಮುದ್ರಿಸಿ ಕಳುಹಿಸಿಕೊಟ್ಟದ್ದು ಮತ್ತು ಅದನ್ನು ಸಭೆಗೆ ಕೇಳಿಸಿದ್ದು ಆ ದಿನದ ವಿಶೇಷ. ಚೆನ್ನೈ ಜನರ ರಂಜನಿಯ ಸಂಗೀತದ ಬಗೆಗಿನ ಅಭಿಮಾನದ ಸೆಲೆಯನ್ನು ಅಂದಿನ ಸಭೆಯಲ್ಲಿ ನೋಡಬಹುದಾಗಿತ್ತು.