ದಿನಾಂಕ 9.9.2018 ರಂಜನಿ ಹುಟ್ಟಿದ ದಿನ. ಅಂದು ಶ್ರೀ ವಿಠ್ಠಲ ರಾಮಮೂರ್ತಿ ಮತ್ತು ಶ್ರೀ ವಿ.ವಿ.ಎಸ್. ಮುರಾರಿಯವರ ವಯೊಲಿನ್ – ವಯೊಲಾ ಕಚೇರಿ.
ಕಚೇರಿಯ ಬಳಿಕ ವಿದ್ವಾನ್ ವಿಠ್ಠಲ ರಾಮಮೂರ್ತಿಯವರು ಮಾಡಿದ ಭಾಷಣದ ಸಾರಾಂಶ-
ಇವತ್ತಿನ ಕಚೇರಿ ರಂಜನಿಯ ಹುಟ್ಟುಹಬ್ಬಕ್ಕೆ ನಮ್ಮ ಪ್ರೀತಿಯ ಕಾಣಿಕೆ. ರಂಜನಿಯ ಬಗೆಗೆ ನಿಮಗೆಲ್ಲ ಗೊತ್ತು. ತನ್ನ ತಂದೆ ತಾಯಿಯಿಂದ, ನಮ್ಮ ಕರಂಬಿತ್ತಿಲ್ ಮನೆಗೆ ಬಂದು ನಮ್ಮಿಂದ, ಮಡಂತ್ಯಾರಿನ ನನ್ನ ತಂಗಿಯ ಮನೆಗೆ ಹೋಗಿ ಅವಳಿಂದ, ಚೆನ್ನೈಯ ಎಸ್. ಸೌಮ್ಯ ಅವರ ಮನೆಯಲ್ಲಿ ಗುರುಕುಲವಾಸ ಮಾಡಿ ಮತ್ತು ಚೆಂಗಲ್ಪೆಟ್ ರಂಗನಾಥನ್ ಅವರಿಂದ ಸಂಗೀತ ಕಲಿತು, ಸಂಗೀತವೇ ಜೀವನ ಎಂದು 29 ವರ್ಷ ಬಾಳಿಬದುಕಿ ಒಬ್ಬ ಒಳ್ಳೆಯ ವಿದ್ಯಾರ್ಥಿ ಹೇಗಿರಬೇಕು, ಒಬ್ಬ ಒಳ್ಳೆಯ ವಿದ್ವಾಂಸ ಹೇಗಿರಬೇಕು ಅಂತ ರಂಜನಿ ಮಾದರಿಯಾಗಿದ್ದಾಳೆ.
ಪ್ರತಿಭೆ, ಗುರುಗಳ ಬಗೆಗೆ ಗೌರವ, ಸಹ ವಿದ್ಯಾರ್ಥಿಗಳ ಮೇಲೆ ಪ್ರೀತಿ, ದೊಡ್ಡವರ ಬಗೆಗೆ ಗೌರವ, ಎಲ್ಲ ಸಂಗೀತವನ್ನೂ ಕೇಳುವ ಮತ್ತು ಅದರಿಂದ ಒಳ್ಳೆಯ ಅಂಶಗಳನ್ನು ತೆಗೆದುಕೊಳ್ಳುವ ಸ್ವಭಾವ ಇವೆಲ್ಲ ಅವಳಲ್ಲಿದ್ದ ಗುಣಗಳು. ಯಾರ ಹತ್ತಿರ ಹೇಗೆ ನಡೆದುಕೊಳ್ಳಬೇಕು ಎನ್ನುವ ತಿಳುವಳಿಕೆ ಇತ್ತು ಅವಳಿಗೆ. ಆಧ್ಯಾತ್ಮಿಕ ಮನಸ್ಸಿನ ಅವಳದು ಒಂದು ಹೆಚ್ಚು ಮಾತಿಲ್ಲ, ಒಂದು ಕಡಿಮೆ ಇಲ್ಲ; ಎಷ್ಟು ಬೇಕೊ ಅಷ್ಟು.
ಸೌಮ್ಯ ಅವರಲ್ಲಿ ಸಿಕ್ಕಿದ ಪಾಠವನ್ನು ನೂರು ಪ್ರತಿಶತ ಸದುಪಯೋಗ ಮಾಡಿಕೊಂಡು ಅವಳು ಕಲಿತಿದ್ದಾಳೆ. ಅವಳ ಹಾಡಿನ ಧ್ವನಿಮುದ್ರಣಕ್ಕೆ ನಾನು ವಯೋಲಿನ್ ನುಡಿಸಿದ್ದೇನೆ; ಮೋಹನಕಲ್ಯಾಣಿಯ “ಸಿದ್ಧಿ ವಿನಾಯಕಂ……” ಹಾಡಿದ್ದಾಳೆ- ಒಂದೊಂದೂ ಅದು ಸೌಮ್ಯ ಅವರ ಸಂಗತಿಗಳು; ಅದರಲ್ಲಿ ರಂಜನಿಯದೇ ಆದ ಒಂದು ವಿಶೇಷತೆ! ಅದು ಅವಳ 25-26 ವಯಸ್ಸಿನಲ್ಲಿ ಹಾಡಿದ್ದು. ಅವಳು ಎಲ್ಲ ದೊಡ್ಡ ಸಂಗೀತಗಾರರಿಗೆ ಸರಿ ಸಮಾನವಾಗಿ ಹಾಡುತ್ತಾ ಇದ್ದಳು. ಮ್ಯೂಸಿಕ್ ಅಕಾಡೆಮಿಯಲ್ಲಿ ಸಾಯಂಕಾಲ ಹೊತ್ತು ಹಾಡುವ, ಕೃಷ್ಣಗಾನ ಸಭಾದಲ್ಲಿ ಹಾಡುವಂತಹ ಅದ್ಭುತ ಪ್ರತಿಭೆ ಇದ್ದವಳು ಅವಳು. ಅವಳ ಗುರುಗಳ ಹಾಗೆ ಯಾವ ರೀತಿಯ ಪಲ್ಲವಿಯನ್ನಾದರೂ, ಯಾವ ರಾಗವನ್ನಾದರೂ ಹಾಡಲು ಸಮರ್ಥಳಿದ್ದವಳು. ಅವಳು ಅವಳ ಗುರುಗಳ ಮರು ಅವತಾರ ಅಂತಲೇ ನಾವು ಅಂದುಕೊಂಡಿದ್ದೆವು. ಸುರುಟಿಯಂತಹ ಘನ ರಾಗ ಇರಬಹುದು, ದೇಶ್‍ನಂತಹ ಲಘು ರಾಗ ಇರಬಹುದು- ಅದಕ್ಕೆ ಆಗುವ ಹಾಗೆ ಹಾಡುವ ವಿಶೇಷ ಗುಣ ಅವಳಿಗೆ ಇತ್ತು. ಎಲ್ಲ ಸಿದ್ಧವಾಗಿ, ಸಂಗೀತ ಪ್ರಪಂಚಕ್ಕೆ ಅದನ್ನು ತೋರಿಸಬೇಕು ಅನ್ನುವಾಗ ಅವಳು ಹೊರಟುಹೋದಳು. ಬದುಕಿದರೆ ಹೇಗಿರಬೇಕು ಅಂತ 29 ವರ್ಷದಲ್ಲಿ ಮಾಡಿತೋರಿಸಿದ್ದಾಳೆ ಅವಳು. ಈಗ ರಂಜನಿ ಮೆಮೋರಿಯಲ್ ಟ್ರಸ್ಟ್ ಗೆ ದೊಡ್ಡ ದೊಡ್ಡ ಕಲಾವಿದರು ಬಂದು ಹಾಡಿ, ನುಡಿಸಿ ಹೋಗುತ್ತಾರೆ; ಅದು ರಂಜನಿಯ ಯೋಗ್ಯತೆಗೆ, ಗುಣಕ್ಕೆ ಅವರು ತೋರುವ ಗೌರವ.
ರಂಜನಿಯ ಕೊನೆಯ ದಿನಗಳಲ್ಲಿ ನಾನು ಮತ್ತು ಅವಳ ಗುರುಗಳಾದ ಎಸ್. ಸೌಮ್ಯ ರಂಜನಿಯನ್ನು ನೋಡಲು ಅವಳ ಯಜಮಾನರ ಸುಳ್ಯಪದವಿನ ಮನೆಗೆ ಹೋಗಿದ್ದೆವು. ಅವಳಿಗೆ ಎದ್ದು ಕುಳಿತುಕೊಳ್ಳಲೂ ಆಗುತ್ತಿರಲಿಲ್ಲ. ಅಲ್ಲಿ ಸೌಮ್ಯ ಅವರು ಒಂದು ಹಾಡು ಕಲಿಸಿದಾಗ ರಂಜನಿ ಅದನ್ನು ಕಲಿತುಕೊಂಡು ಸೌಮ್ಯ ಜೊತೆ ಹಾಗೆಯೇ ಹಾಡಿದಳು! ವಿಠಲಣ್ಣ ಬಂದಿದ್ದಾರೆ ಎಂದು ತಿಳಿಸಿದಾಗ, “ಹೌದು ನೋಡಿದೆ” ಅಂತ ನಕ್ಕು ನನ್ನನ್ನು ಮಾತನಾಡಿಸಿದಳು.
(ಕರುಂಬಿತ್ತಿಲ್‍ನ ವಿಠಲರಾಮಮೂರ್ತಿಯವರ ಮನೆಯಲ್ಲಿ ಆಗ ಸೌಮ್ಯ ಅವರ ಶಿಬಿರ ನಡೆಯುತ್ತಿತ್ತು. ಶಿಬಿರದಲ್ಲಿ ಸೌಮ್ಯ ಏನು ಕಲಿಸಿದರು ಅನ್ನುವ ಮಾತು ಬಂತು. ತೋಡಿ ರಾಗದ ಪದಂ ಕಲಿಸಿದರು ಅಂತ ಅಲ್ಲಿದ್ದವರು ಹೇಳಿದರು. ಆಗ ರಂಜನಿ “ನನಗೆ ನೀವು ಪದಂ ಕಲಿಸಿಯೇ ಇಲ್ಲ” ಅಂತ ಸೌಮ್ಯ ಅವರಲ್ಲಿ ಹೇಳಿದಳು. ಆಗ ಸೌಮ್ಯ ಅವಳಿಗೆ ಅಲ್ಲಿಯೇ ಬೇಗಡೆ ರಾಗದ ಪದಂ ಅನ್ನು ಕಲಿಸಿದರು. ರಂಜನಿ ಪಿಸುಗುಟ್ಟುತ್ತಾ ಅದನ್ನು ಹಾಡಿದ್ದಳು!)
ಅವಳು ಇನ್ನೊಮ್ಮೆ ಹುಟ್ಟಿ ಬಂದು ಅವಳು ಈ ಜನ್ಮದಲ್ಲಿ ಕಂಡ ಕನಸುಗಳನ್ನೆಲ್ಲ ನನಸು ಮಾಡಿ ಕರ್ನಾಟಕ ಸಂಗೀತದ ದೊಡ್ಡ ತಾರೆ ಆಗಿಯೇ ಆಗುತ್ತಾಳೆ. ಇದು ನಮ್ಮೆಲ್ಲರ ಆಶಯ ಕೂಡ. ನಮಗೆ ರಂಜನಿಯ ನೆನಪಿನಲ್ಲಿ ಈ ಕಚೇರಿ ನೀಡಲು ಒಂದು ಅವಕಾಶ ಕೊಟ್ಟದ್ದಕ್ಕೆ ನನಗೆ ಅಣ್ಣನ ಹಾಗೆ ಇರುವ ಹೆಬ್ಬಾರರಿಗೆ ಧನ್ಯವಾದಗಳು.