ಸರೋಜಾ ಆಚಾರ್ಯ
ತಮ್ಮ ಮಾಧುರ್ಯಪೂರ್ಣವಾದ ಸಂಗೀತಾಮೃತದಿಂದ ಜನತೆಯ ಮೆಚ್ಚುಗೆ ಮತ್ತು ಪ್ರೀತಿಪಾತ್ರರಾಗಿದ್ದ ಶ್ರೀಮತಿ ರಂಜನಿ ಅವರ ಸಂಸ್ಮರಣಾ ಕಾರ್ಯಕ್ರಮಗಳು ಮಣಿಪಾಲದ ಎಂಐಟಿ ವಾಚನಾಲಯದ ಸಭಾಂಗಣದಲ್ಲಿ ಸೆಪ್ಟೆಂಬರ್ 9 ರಿಂದ 12 ರವರೆಗೆ ನಡೆಯಿತು. ಇದನ್ನು ‘ರಂಜನಿ ಸಂಸ್ಮರಣಾ ಸಮಿತಿ’ಯು ಮಣಿಪಾಲ ವಿಶ್ವವಿದ್ಯಾಲಯ ಸಾಂಸ್ಕøತಿಕ ಸಮನ್ವಯ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಿತ್ತು. ಔಚಿತ್ಯಪೂರ್ಣವಾದ ಸಂಗೀತಮಯ ಶ್ರದ್ದಾಂಜಲಿಯಿದು ಎನಿಸಿತು. ಈ ಸರಣಿಯಲ್ಲಿ ನಾಲ್ಕು ದೊಡ್ಡ ಮತ್ತು ನಾಲ್ಕು ಸಣ್ಣ ಕಛೇರಿಗಳು ಸ್ಥಾನ ಪಡೆದವು. ಅಕ್ಕರೈ ಶುಭಲಕ್ಷ್ಮಿ – ಸ್ವರ್ಣಲತಾ ಅವರ ಶಾರೀರ ಸಾಧಾರಣ. ವಯಲಿನ್‍ನ ಸಾಧ್ಯತೆಗಳನ್ನು ಸಮನ್ವಯಗೊಳಿಸಿದಂತಹ ಗಮಕಯುಕ್ತವಾದ ನಿರೂಪಣಾ ಶೈಲಿ. ಅಂತ್ಯವಿಲ್ಲದ ಮನೋಧರ್ಮ. ಅಪರೂಪದ ಕೃತಿಗಳ ಆಯ್ಕೆ, ಸಾಹಿತ್ಯ ಸ್ಫುಟತೆ. ಶಹನ ರಾಗದ ಆಲಾಪನೆಯನ್ನು ಮಾಡಿದ ಸ್ವರ್ಣಲತಾ ಮುಂದೆ ‘ಮಾನಮು ಕಾವಲನು’ ಕೃತಿಯ ಸುಂದರ ಸಂಚಾರಗಳನ್ನು ತನ್ನ ಅಕ್ಕನೊಂದಿಗೆ ಚೆನ್ನಾಗಿ ಪೋಣಿಸಿದರು. ಕೃತಿಯ ನಿರೂಪಣೆ ಮತ್ತು ಅತೀತ ಎಡುಪ್ಪಿಗೆ ನೀಡಲಾದ ಸ್ವರ ವಿನಿಕೆಗಳೂ ಕೂಡಾ ಭಾವಪ್ರಧಾನವಾಗಿದ್ದುದು ವಿಶೇಷ. ಕುಮುದಕ್ರಿಯ ಮತ್ತು ಕಾಂತಾಮಣಿಯಲ್ಲಿ ನಿಖರವಾಗಿ ರಸಭಾವಗಳೊಂದಿಗೆ ಮೂಡಿಬಂದ ಜಂಟಿ ಮತ್ತು ತ್ರಿಪುಚ್ಛ ಅಕಾರಗಳ ವೈವಿಧ್ಯ ಹಾಗೂ ಸ್ಟಷ್ಟತೆ ತಲೆದೂಗುವಂತಿದ್ದವು. ವಿವಾದಿ ಸ್ವರಗಳ ಕ್ಷೇತ್ರದಲ್ಲೇ ಸಂಚರಿಸಿದ ಕಾಂತಾಮಣಿಯ ಸ್ವರಕಲ್ಪನೆಯ ಹೆಣಿಗೆ ಬೆರಗುಹುಟ್ಟಿಸಿದವು. ಆಂಜನೇಯ ರಘುರಾಮದಲ್ಲಿ ಸಾವೇರಿಯ ದೈವತವನ್ನು ಕೇಂದ್ರವಾಗಿ ಇರಿಸಿ ಹತ್ತಾರು ಮಗ್ಗಲುಗಳಿಂದ ಸ್ಪರ್ಶಿಸುತ್ತಾ ಸಾಗಿದ ಆಲಾಪನೆ, ಗತ್ತಿನಿಂದ ಕೂಡಿದ ಕೃತಿ ನಿರೂಪಣೆ, ಗಮಕಕ್ಕೆ ಪ್ರಾಧನ್ಯತೆ ನೀಡಿದ ವಿಳಂಬಕಾಲ ಕಲ್ಪನಾಸ್ವರಗಳು, ರಾಗಕ್ಕೆ ಹೊಸ ನೋಟವನ್ನು ಒದಗಿಸಿದ ಪಂಚಮ ವಜ್ರ್ಯ ಪ್ರಯೋಗಗಳು ಮತ್ತು ಸೊಗಸಾದ ಮುಕ್ತಾಯಗಳಿಂದ ಈ ಪ್ರಸ್ತುತಿ ಒಳ್ಳೆಯ ಪೋಷಣೆ ಪಡೆಯಿತು. ಗಾಯಕಿಯರಿಗೆ ಸರಿಸಾಟಿ ಎನಿಸುವ ರೀತಿಯಲ್ಲಿ ಪ್ರತಿಯೊಂದು ಪ್ರಸ್ತುತಿಯಲ್ಲೂ ಉತ್ತಮ ಬೆರಳುಗಾರಿಕೆಯನ್ನು ಪ್ರದರ್ಶಿಸಿದ ವಯಲಿನ್‍ನ ಮತ್ತೂರು ಶ್ರೀನಿಧಿಯವರು ಶ್ರೋತೃಗಳೆಲ್ಲರ ಪ್ರಶಂಸೆಗೆ ಪಾತ್ರರಾದರು. ಜಯಚಂದ್ರ ಮತ್ತು ಕೃಷ್ಣ ಕುಮಾರರ ನಾದ ಝೇಂಕಾರದ ನುಡಿಕಾರಗಳು ತನಿ ಆವರ್ತನದಲ್ಲೂ ಬೆಳಗಿ ಲಯಪ್ರಿಯರಿಗೆ ರಸದೌತಣವನ್ನು ನೀಡಿದವು.
10.9.2016
ಅಕ್ಕರೈ ಸೋದರಿಯರ ವಯಲಿನ್‍ಗಳಿಗೆ ನಾಗಸ್ವರದ ನಾದಸೌಖ್ಯ ಇದೆ. ಅಮೃತವರ್ಷಿಣಿಯ ವರ್ಣವನ್ನು ನಾಲ್ಕು ಕಾಲಗಳಲ್ಲಿ ಅಳವಡಿಸಿಕೊಂಡು ನಂತರ ನಾಟ ನುಡಿಸಿ ಮಂದಾರಿಯನ್ನು ಪ್ರಸ್ತುತ ಪಡಿಸಿದ್ದು ವಿಶೇಷ ಅಂಶ. ಮಂದಾರಿ, ಬಹುದಾರಿಗಳಲ್ಲಿ ಭಾವಪ್ರಧಾನವಾದ ಆಲಾಪನೆ, ವಿಪುಲವಾದ ಸಂಗತಿಗಳಿಂದ ಅಲಂಕೃತವಾದ ಕೃತಿ ನಿರೂಪಣೆ, ನಡೆ ಹಾಗು ಏಕಾವರ್ತ ವೈವಿಧ್ಯತೆಗಳಿಂದ ಮನಸೆಳೆದ ಸ್ವರ ಮಾಲಿಕೆಗಳು, ಆಕರ್ಷಕವಾದ ಕುರೈಪ್ಪುಗಳು ಮತ್ತು ಮುಕ್ತಾಯಗಳು ನಾವಿನ್ಯದಿಂದ ತುಂಬಿದ್ದವು. ಆನಂದಭೈರವಿಯ ಮೆರುಗಂತೂ ರಾಗ ಭಾವ ಮತ್ತು ಸಾಹಿತ್ಯಾರ್ಥದೊಂದಿಗೆ ಏಕರೂಪವಾಗಿ ಧ್ವನಿಸಿದ ನುಡಿಸಾಣಿಕೆಯಲ್ಲಿ ತಾದಾತ್ಮ್ಯವಿತ್ತು. ಜಯಚಂದ್ರರ ಅತಿನಾಜೂಕಾದ ಮಾಧುರ್ಯಪೂರ್ಣ ಮೃದಂಗ ಸಹಯೋಗ ಕೃತಿಗೆ ಹೆಚ್ಚಿನ ಮೆರುಗನ್ನು ನೀಡಿತ್ತು. ರಾಗಂ ತಾನಂ ಪಲ್ಲವಿಗಾಗಿ ಆಯ್ಕೆಯಾದದ್ದು ರಾಗ ಸರಸಾಂಗಿ. ಪರ್ಯಾಯವಾಗಿ ನುಡಿಸಲಾದ ವಿದ್ವತ್ಪೂರ್ಣವಾದ ಹಾಗೂ ಲಾಲಿತ್ಯದೊಂದಿಗೆ ಮೆಲ್ಲುತ್ತಿದ್ದ ಆಲಾಪನೆ ಮತ್ತು ಗ ಪ ನಿ ಸಾ ಮೆಟ್ಟಲುಗಳಲ್ಲಿ ನಿಂತು ವಿಸ್ತರಿಸಲಾದ ತಾನಂ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿತು. ತ್ರಿಪುಟ ತಾಳದಲ್ಲಿ ಕಂಡೆನಾ ಉಡುಪಿ ಕೃಷ್ಣನಾ ಪುರುಷೋತ್ತಮ|ನಾ ಹರೇ ಮಾಧವ ಎಂಬ ಪಲ್ಲವಿಯನ್ನು ಸೋದರಿಯರೀರ್ವರು ಕ್ರಮಬದ್ಧವಾಗಿ ನುಡಿಸಿ ಸ್ವರ ವಿನಿಕೆಗಳನ್ನು ನೀಡಿ ಕಲಾಸಕ್ತರಿಂದ ಮುಕ್ತ ಪ್ರಶಂಸೆ ಪಡೆದರು. ಶುದ್ಧ ಪಾರಂಪರಿಕ ಶೈಲಿಯೊಂದಿಗೆ ಹೊಸತನವನ್ನೂ ಮೆರೆದ ಇವರ ಕಛೇರಿಗಳಲ್ಲಿ ಎಲ್ಲೂ ಬೇಡವೆನಿಸಿದ ಕಸರತ್ತುಗಳಿರಲಿಲ್ಲ ಎನ್ನುವುದು ಸ್ತುತ್ಯರ್ಹ. ವಯಲಿನ್ ವಾದನದ ಉತ್ಕøಷ್ಟತೆಗೆ ಮಾದರಿ ಎನಿಸಿದ ಈ ಕಾರ್ಯಕ್ರಮ ಕೆಲಕಾಲ ಮನದಲ್ಲಿ ನಿಲ್ಲುತ್ತದೆ.
11.9.2016
ಗಾರ್ಗಿಗೆ ಇಂಪಾದ ಶಾರೀರವಿದೆ. ಮಂದಹಾಸದ ಮುಖಮುದ್ರೆ. ಶುದ್ಧ ಧನ್ಯಾಸಿ ಮತ್ತು ಪೂರ್ವಿಕಲಯಾಣಿಯ ಪ್ರಸ್ತುತಿಗಳು ಪ್ರಧಾನವಾಗಿದ್ದು ಅಚ್ಚುಕಟ್ಟಾದ ರಾಗ ಸಂಚಾರ ಮತ್ತು ಕಲ್ಪನಾ ಸ್ವರಗಳಿಂದ ಅಂದಗೊಂಡವು. ಪ್ರಣವ್ ಮಂಜುನಾಥ್ ಅವರಿಗೆ ಒಳ್ಳೆಯ ಬಿಲ್ಲುಗಾರಿಕೆಯಿದೆ. ಬಹುಶಃ ಏರಿಕೆಯ ಶ್ರುತಿಯಾದ ಕಾರಣ ಪಿಟೀಲಿನಲ್ಲಿ ನಾದ ಸೌಖ್ಯದ ಕೊರತೆ ಕಂಡಿತೋ ಏನೋ. ಅಂತಃಪುರ ಗೀತೆಗಳಿಂದ ಆಯ್ದ ಕುಟಿಲ ಕುಂತಳೆ ಗೀತೆಯನ್ನು ಕಾಂಬೋಜಿ- ಯದುಕುಲ ಕಾಂಬೋಜಿ – ಹರಿಕಾಂಬೋಜಿ ರಾಗಗಳಲ್ಲಿ ಮಾಲಿಕೆಯಾಗಿ ಸಾಹಸ ಮೆರೆದ ಗಾರ್ಗಿ ಯಮುನಾ ಕಲ್ಯಾಣಿಯ ಅಷ್ಟಪದಿಯನ್ನು ಅಷ್ಟೇ ಮನೋಜ್ಞವಾಗಿ ಚಿತ್ರಿಸಿದರು.
ದೈವದತ್ತವಾದ ನುಣುಪಾದ ಕಂಠಸಿರಿ ಮತ್ತು ನಗುಮುಖ ಕು. ಸಹನಾ ಸಾಮ್ರಾಜ್ ಅವರದು. ವಸಂತ ರಾಗದ ಸೀತಮ್ಮ ಮಾತ್ರ ತ್ವರಿತ ಗತಿಯ ಏಕಮಾತ್ರ ಪ್ರಸ್ತುತಿ. ಈಕೆಗೆ ನಿಧಾನವೇ ಪ್ರಧಾನ. ತನ್ನ ಗಾಯನದಲ್ಲಿ ನೀಡಿದ ಅದೆಷ್ಟೋ ಸುಂದರ ಸಂಚಾರಗಳು ಉದ್ದ ಉಸಿರಿನ ಸೂಕ್ಷ್ಮವಾದ ಪಲುಕುಗಳು ಮತ್ತು ನಯವಾದ ಕಾರ್ವೆಗಳು ಚೂರೂ ಲೋಪವಿಲ್ಲದೆ “ಹೇಗಿದೆಯೋ ಹಾಗೆ” ರಸಿಕರನ್ನು ತಲುಪಿವೆ. ರಂಜನೀಯವಾದ ‘ಸಾಮಿಕ್ಕು ಸರಿ’ಯ ನಂತರ ಪ್ರಧಾನ ರಾಗವಾಗಿ ಮೈದುಂಬಿಕೊಂಡ ವರಾಳಿಯ ‘ಮಾಮವ ಮೀನಾಕ್ಷಿ’ ಉತ್ತಮ ರಾಗ ಹಂದರ ಮತ್ತು ಸ್ವರಗುಚ್ಛಗಳೊಂದಿಗೆ ಮೈದಳೆದವು. ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ನೀಡಿದ ನೀಲಾಂಬರಿ (ಎಂಥಾ ಪುಣ್ಯವೆ) ಮತ್ತು ಬೇಹಾಗ್ ಶ್ರೋತೃಗಳನ್ನು ಸುಷುಪ್ತಿಗೆ ತಲುಪಿಸಿದವು. ಹದವರಿತು ತೃಪ್ತಿಕರವಾದ ವಯಲಿನ್ ಸಹವಾದನವನ್ನು ಪ್ರಣವ್ ಅವರು ನೀಡಿದ್ದರೆ ಮೃದುತ್ವವೇ ಪ್ರಧಾನವಾಗಿ ಮೂಡಿಬಂದ ಮಹೇಶ್ ಕುಮಾರ್ ಅವರ ಮೃದಂಗ, ತನಿಯಾವರ್ತನಕ್ಕಾಗುವಾಗ ಬಿರುಸಾದ ನಡೆ ವೈವಿಧ್ಯತೆಗಳಿಂದ ಮೆರೆಯಿತು.
ವೈಭವ್ ರಮಣಿಯವರ ಭೈರವಿಯ ನಂತರ ಬಂದ ಹೊಸ ಪ್ರಯೋಗ ಹಂಸಧ್ವನಿ ರಾಗದ ತಿಶ್ರನಡೆಯ ವಾದ್ಯ ಸಂಗೀತಕ್ಕೆ ಸರಿಯೆನಿಸುವ ನೋಟ್‍ಸಂಗೀತ. ಶಾಸ್ತ್ರೀಯ ವಾತಾವರಣದಲ್ಲಿ ಈ ಪ್ರಯೋಗ ಪರಕೀಯ ಎನಿಸಿತು. ಉತ್ತಮ ರಾಗ, ಸ್ವರ ವಿಸ್ತಾರ, ಲೆಕ್ಕಾಚಾರದ ಮುಕ್ತಾಯಗಳನ್ನು ಒಳಗೊಂಡಿದ್ದ ‘ಏತಾಉನ್ನರಾ’ ರಸಿಕರ ಮೆಚ್ಚುಗೆಯನ್ನು ಪಡೆಯಿತು. ಉತ್ತಮ ವಾದಕರಾಗುವ ಎಲ್ಲಾ ಭರವಸೆಯನ್ನೂ ವೈಭವ್ ನೀಡಿದ್ದಾರೆ. ಎಂದಿನಂತೆ ಮೃದಂಗದ ಸುನಾದಕೃಷ್ಣನ ಚುರುಕಾದ ಲಯಗಾರಿಕೆ ಶ್ರೋತೃಗಳ ಶ್ಲಾಘನೆಗೆ ಪಾತ್ರವಾಯಿತು.
ವಸುಧಾ ರವಿಯವರು ಎತ್ತಿಕೊಂಡ ‘ಪಾಹಿ ಜಗಜ್ಜನನಿ’ ಯ ರಾಗ ವಿಸ್ತಾರ, ಕೃತಿನಿರೂಪಣೆ ಉತ್ತಮವಾಗಿಯೇ ಇದ್ದರೂ ಗಣಿತಾಧಾರವೇ ಪ್ರಧಾನವಾಗಿ ಮೆರೆಯುತ್ತಿದ್ದ ಕಲ್ಪನಾ ಸ್ವರಗಳ ಕುರೈಪ್ಪು ಮತ್ತು ಮುಕ್ತಾಯಗಳು ವಾಚಸ್ಪತಿಯ ರಾಗಭಾವಕ್ಕೆ ಎರವಾಯಿತೆಂದು ಎನಿಸಿತು. ಪಿಟೀಲಿನ ತಂತಿಗಳನ್ನು ಪರ್ಯಾಯವಾಗಿ ಬಳಸಿಕೊಂಡು ವೈವಿಧ್ಯ ತೋರಿದ ಶ್ರೀನಿವಾಸ ರಾವ್ ಹಾಗೂ ಮೃದಂಗ ಸಹವಾದಕ ರಾಘವೇಂದ್ರ ಅವರು ಕಚೇರಿಗೆ ಕಳೆಕಟ್ಟಿಸಿದರು. ರಾಗಮಾಲಿಕೆಯಲ್ಲಿದ್ದ ದೇವರನಾಮ ಭಾವಪೂರ್ಣವಾಗಿತ್ತು.
12.9.2016
ಅರ್ಚನಾ ಮತ್ತು ಸಮನ್ವಿಯವರು ‘ಲತಾಂಗಿ ಸೋದರಿ’ಯರೆಂದೇ ಈಗ ಪ್ರಸಿದ್ಧಿ. ತುಸು ಹಸ್ಕಿ ಎನಿಸುವ ಶಾರೀರದ ಅರ್ಚನಾ ಮತ್ತು ಮುಕ್ತವಾಗಿ ಅನುರಣಿಸುವ ಕಂಠದ ಸಮನ್ವಿ, ಜೊತೆ ಜೊತೆಯಾಗಿ ಏಕ ಕಂಠದಂತೆ ಕಛೇರಿ ನೀಡಬಲ್ಲರು. ಇದರಲ್ಲಿ ಶೀಘ್ರಗತಿಯ ಪ್ರಸ್ತುತಿಯೇ ಇರಲಿಲ್ಲವಾಗಿ ಆತುರಾತಂಕಗಳಿಲ್ಲದೆ ಸೌಖ್ಯವಾಗಿ ಕೇಳಿಸಿಕೊಂಡ ಗಾಯನ. ಒಂದನೇ ಕಾಲದಲ್ಲಿ ಮಾತ್ರ ಹಾಡಲಾದ ಬೇಹಾಗ್ ವರ್ಣ ತೂಕದಿಂದ ಕೂಡಿತ್ತು. ರೀತಿಗೌಳದ ‘ತಾಂಬೂಲವ ಕೊಳ್ಳೋ’ ಅನ್ನು ಹಿತವಾಗಿ ಬೆಳೆಸಿ ರಾಗ ಮತ್ತು ಸಾಹಿತ್ಯ ಭಾವವನ್ನು ಎತ್ತಿ ಹಿಡಿದರು ಈ ಎಳೆಯರು. ಆನಂತರ ಪರ್ಯಾಯವಾಗಿ ವಿಸ್ತರಿಸಿದ ಬೃಂದಾವನ ಸಾರಂಗದ ಆಲಾಪನೆಯಲ್ಲಿ ಎಲ್ಲೂ ಮಧ್ಯಮಾವತಿಯ ಛಾಯೆಯೂ ಇಣುಕದೆ ಹೃದ್ಯವಾಗಿ ಮೂಡಿಬಂತು. ಶಾಮತವಾದ ನಿರೂಪಣೆ ಮತ್ತು ಕುಸುರಿ ಕೆಲಸಗಳಿಂದ ಕೂಡಿದ ಪೊರುತ್ತಂ ಸ್ವರ ಕಲ್ಪನೆಗಳು ಮನವನ್ನು ಸೆರೆಹಿಡಿದವು. ಗಾಯಕಿಯರಷ್ಟೇ ಎಚ್ಚರಿಕೆಯಿಂದ ರಾಗಶುದ್ಧತೆಯನ್ನು ವೈಭವ್ ರಮಣಿಯವರೂ ನಿರ್ವಹಿಸಿದ್ದರು. ಪ್ರಧಾನ ರಾಗ ವರಾಳಿ, ಅನಗತ್ಯವಾದ ಸ್ವರಕಸರತ್ತುಗಳಿಲ್ಲದ ರಾಗ ವಿಸ್ತಾರ ಸಾಹಿತ್ಯಾರ್ಥಕ್ಕೆ ಇಂಬು ನೀಡದ ಕೃತಿ ಪ್ರಸ್ತುತಿ. ಪ್ರಬುದ್ಧವಾದ ಸ್ವರ ಕಲ್ಪನೆಗಳಿಂದ ‘ಏಟೀ ಜನ್ಮ’ ಸ್ವಯಂಪೂರ್ಣವೆನಿಸಿತು. ಹಂಸಧ್ವನಿಯ ಸಂಕೀರ್ಣ ಜಾತಿ ಝಂಪೆ ತಾಳದ (12 ಮಾತ್ರೆ, 2 ಕಳೆಗೆ 96 ಅಕ್ಷರ) 8 ಕಳೆ ಮತ್ತು 4 ಕಳೆಗಳಲ್ಲಿ ಅಳವಡಿಸಲಾದ ಪಲ್ಲವಿ ವಿನಾಯಕಂ ಪಂಚಮುಖಂ ಸುಮುಖಂ ಭಾವ | ಯೇ ವಲ್ಲಭ ನಾಯಕಂ (14 ಅಕ್ಷರದ ಅರುದಿ). ಜೆ. ವೆಂಕಟ್ರಾಮ್ ಅವರ ರಚನೆ. ರಾಗಸೌಂರ್ಯವನ್ನೂ, ತಾಳಗಣಿತವನ್ನೂ ಕಾಯ್ದುಕೊಂಡು ಪಲ್ಲವಿಯನ್ನು ಯಶಸ್ವಿಯಾಗಿ ನಿರೂಪಿಸಿದ ಗಾಯಕಿಯರು ರಾಗಮಾಲಿಕೆಯಲ್ಲಿ ಸ್ವರವಿನಿಕೆಯನ್ನೂ ಮಾಡಿ ಸಭಿಕರ ಪ್ರಶಂಸೆಗೆ ಪಾತ್ರರಾದರು. ‘ಇಷ್ಟೊಂದು ಕ್ಲಿಷ್ಟವಾದ ಪಲ್ಲವಿ ಈ ಬಾಲಕಿಯರಿಗೆ ಅತಿ ಭಾರವಾಯಿತೇನೋ’ ಎಂದು ಸಭೆಯಲ್ಲಿದ್ದ ಹಿರಿಯರು ಕಳಕಳಿಸಿದ್ದಂತೂ ನಿಜ. ಮೆಲು ನುಡಿಯ ಮೃದಂಗದ ಮಹೇಶ್ ಕುಮಾರರರು ಮುಖ್ಯ ಕಲಾವಿದರನ್ನು ಸೂಕ್ಷ್ಮವಾದ ಪಲುಕುಗಳಿಂದ ಅತಿಕ್ರಮಿಸದೆ ಅನುಸರಿಸಿದುದು ಅಭಿನಂದನೀಯ. ಹಾಗೆಯೇ ವೈಭವ್ ರಮಣಿಯವರೂ ಕೂಡಾ.
ಧಾರವಾಡದ ಶಾರದಾ ಭಟ್ ಅವರದು ತುಸು ಘನವೆನಿಸುವ ಕಂಠ. ಸಾಂಪ್ರದಾಯಿಕ ಶೈಲಿಯ ಗಾಯನ. ಸೀಮಿತಾವಧಿಯ ಕಛೇರಿಯಾದ ಕಾರಣ ಅತಿ ವಿಸ್ತಾರದ ಆಲಾಪ್‍ಗಳಿರಲಿಲ್ಲ. ‘ತಮಬಿನ್ ತರನ್ ರಹೀ ಹೂಂ’ ಝಪ್ ತಾಲದಲ್ಲಿ ನಿಬದ್ಧವಾಗಿದ್ದ ಮಧುವಂತಿ ಪ್ರಸ್ತುತಿಯನ್ನು ಮೂರು ಲಯಗಳಲ್ಲೂ ಬೆಳೆಸಿದ ಗಾಯಕಿ, ಆ ನಂತರ ಧಾನಿ ರಾಗವನ್ನು ಪರಣಾಮಕಾರಿಯಾಗಿ ಉಯ್ಯಾಲೆಯ ಓಲಾಟದ ಅನುಭವದೊಂದಿಗೆ ರಸಿಕರಿಗೆ ನಿರೂಪಿಸಿದರು. ಗೌಡಮಲ್ಹಾರ್ ಮತ್ತು ಕಬೀರ್ ಭಜನ್ ಕೇಳುಗರನ್ನು ಸೆರೆ ಹಿಡಿದವು. ಚಿಕ್ಕ ಹಾಗೂ ಚಿಕ್ಕವಾದ ಈ ಗಾಯನಕ್ಕೆ ಶಶಿಕಿರಣ್ ಅವರು ಹಾರ್ಮೋನಿಯಂನಲ್ಲೂ ದಿನೇಶ್ ಶೆಣೈ ತಬಲಾದಲ್ಲೂ ಸಮರ್ಪಕ ಸಾಥಿ ನೀಡಿದ್ದಾರೆ.
17.9.2016
ರಾಗಧನದಲ್ಲಿ ಎಂ.ಜೆ ನಂದಿನಿ
ಸುಶ್ರಾವ್ಯವಾದ ಮೃದು ಶಾರೀರ, ನಗುಮೊಗ, ಶ್ರೋತೃಗಳೊಂದಿಗೆ ಸಂವಹನ, ನಿರ್ವಿಕಾರ ಮುಖಚರ್ಯೆ, ಸುಲಲಿತವಾದ ತ್ರಿಸ್ಥಾಯಿ ಸಂಚಾರ, ಪಕ್ಕವಾದ್ಯಗಳೊಂದಿಗೆ ಅನುಸರಣೆ…. ಎಲ್ಲಾ ಸಭಾ ಗಾಯನದ ಲಕ್ಷಣಗಳನ್ನೂ ಮೈಗೂಡಿಸಿಕೊಂಡ ಕಲಾವಿದೆ! ಉತ್ಸಾಹ ಪೂರ್ಣವಾದ ಕಲ್ಯಾಣಿ ವರ್ಣ, ಚುರಕಾದ ಸ್ವರಕಲ್ಪನೆಗಳ ಮೇರು ಸಮಾನ, ಅಂದವಾದ ಸಂಗತಿಗಳಿಂದ ಕೂಡಿದ ಬಿಲಹರಿಯ ತ್ವರಿತ ಗತಿಯ ಚಿಟ್ಟೆ ಸ್ವರಗಳು ರಸಿಕರಲ್ಲಿ ಲವಲವಿಕೆಯನ್ನುಂಟುಮಾಡಿದವು. ನಾಟಕಪ್ರಿಯದ ಕೃತಿಯನ್ನು ಪ್ರಬುದ್ಧವಾಗಿ ಪೋಷಿಸಿದ ಗಾಯಕಿ ನೆರವಲ್ ನಂತರ ಸ್ವರವಿನಿಕೆಗಳಲ್ಲಿ ಮಾಡಿದ ಗ್ರಹಭೇದ (ಚಾರುಕೇಶಿ) ಗುಣಗ್ರಾಹೀ ಶ್ರೋತೃಗಳಿಗೆ ಸಂತಸ ನೀಡಿತು. (ನಾಟಕಪ್ರಿಯದ ಗಾಂಧಾರವು ತೋಡಿ ರಾಗದಂತೆ ಆಂದೋಲಿತ ಗಮಕದಲ್ಲಿ ಕೇಳಿಬಂದ್ದು ವಿಶೇಷ.)
ಶೀಘ್ರ ಗತಿಯಲ್ಲಿ ನಿರೂಪಿಸಲಾದ ರಾಗ ‘ನಿರೋಷ್ಟ’ (ರಾಜರಾಜ). ಸೀಮಿತ ಸ್ವರಗಳ ಈ ರಾಗದಲ್ಲಿ ಸುದೀರ್ಘವಾದ ಸ್ವರವಿನ್ಯಾಸಗಳನ್ನು ಮತ್ತು ಮುಕ್ತಾಯಗಳನ್ನು ನೀಡಿದ ಕಲಾವಿದೆ ಸ್ವರಸ್ಥಾನಗಳನ್ನು ಎಚ್ಚರಿಕೆಯಿಂದ ನಿಖರವಾಗಿ ಕಾಯ್ದುಕೊಂಡು ತಮ್ಮ ಸಾಧನೆಯ ಪರಿಚಯ ಮಾಡಿಸಿದರು.
ಪ್ರಧಾನ ರಾಗ ‘ಕಾಂಭೋಜಿ’ಯ (ಶ್ರೀ ಸುಬ್ರಹ್ಮಣ್ಯಾಯ) ಸವಿಸ್ತಾರವಾದ ಆಲಾಪನೆ, ಹಲವಾರು ತೊರೆಗಳನ್ನು ಸೇರಿಸಿಕೊಂಡು ಸಾಗುವ ನದಿಯಂತೆ ಸ್ವಚ್ಛಂದವಾಗಿ ಸಾಗಿತು. ವಿದ್ವತ್ಪೂರ್ಣವಾದ ನೆರವಲ್, ಕ್ಲಿಷ್ಟ ಲೆಕ್ಕಾಚಾರದ ಮುಕ್ತಾಯಗಳು ಈ ಪ್ರಸ್ತುತಿಗೆ ನ್ಯಾಯ ಒದಗಿಸಿದವು.
‘ಆಹಿರಿ’ ರಾಗದ (ಪಣಿಮದಿ ಬಾಲೇ) ವಿಳಂಬ ಕಾಲ ಪ್ರಸ್ತುತಿ ಗಮಕಯುಕ್ತವಾಗಿದ್ದು ಸಾಹಿತ್ಯದ (ಬಿನ್ನಹ) ಭಾವವನ್ನು ಎತ್ತಿಹಿಡಿಯಿತು.
ತುಸು ಉದ್ದವೆನಿಸುವ ತನಿ ಆವರ್ತನದಲ್ಲಿ ಶ್ರೀ ವಿನೋದ್ ಶ್ಯಾಂ (ಮೃದಂಗ) ಮತ್ತು ಶ್ರೀ ರಾಜೇಶ್ (ಘಟ) ತಮ್ಮ ಚುರುಕು ಬೆರಳುಗಳ ಕುಶಲತೆಯನ್ನು ಪ್ರದರ್ಶಿಸಿದ್ದಾರೆ. ಅಂತೆಯೇ ಒಳ್ಳೆ ತಿಳುವಳಿಕೆಯಿಂದ ಕೂಡಿದ ವಯಲಿನ್ ಸಹವಾದವನ್ನು ನೀಡಿದ್ದಾರೆ ಶ್ರೀ ಶ್ರೀಜಿತ್.
ಪೀಲು ರಾಗದ ಭಜನ್ (ರಘುಪತಿ ರಾಘವ) ಮತ್ತು ರಾಗಮಾಲಿಕೆಯಲ್ಲಿ ದೇವರನಾಮ (ಯಾದವರಾಯ) ಕೊನೆಯ ಪ್ರಸ್ತುತಿಗಳಾಗಿದ್ದವು.
ಲಲಿತಾಂಬಾ
ಕಲಾತಪಸ್ವಿ ರಂಜನಿ ಹೆಬ್ಬಾರ್–ಇಂದು ಇತಿಹಾಸ ಪುಟಕ್ಕೆ ಸೇರಿದರೂ, ಸಂಗೀತ ಪ್ರಪಂಚಕ್ಕೆ ಮರೆಯಲಾರದ ಸ್ಮøತಿರಂಜನಿ. ರಂಜನಿ ಮೆಮೊರಿಯಲ್ ಟ್ರಸ್ಟ್‍ನ ಮೂರನೇ ವರ್ಷದ ಸಂಗೀತ ಕಾರ್ಯಕ್ರಮಗಳು 2016 ಸೆಪ್ಟೆಂಬರ್ 9 ಶುಕ್ರವಾರವಾರದಿಂದ ಪ್ರಾರಂಭಗೊಂಡವು.
ಪ್ರಾರ್ಥನೆಯ ರೂಪವಾಗಿ ರಂಜನಿಯೇ ಹಾಡಿದ್ದ ಭಕ್ತಿಪೂರ್ವಕವಾದ ರಾಗಮಾಲಿಕಾ ಶ್ಲೋಕದ ಮೂಲಕ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲನೆಯ ದಿನ ಅಕ್ಕರೈ ಸಹೋದರಿಯರಾದ ಶುಭಲಕ್ಷ್ಮಿ-ಸ್ವರ್ಣಲತಾ ದ್ವಂದ್ವಗಾಯನದ ಮೂಲಕ ಪ್ರೌಢ ಕಾರ್ಯ ಕ್ರಮವನ್ನು ನೀಡಿದರು. ಸಾರಂಗ ರಾಗದ ವರ್ಣದಿಂದ ಪ್ರಾರಂಭಿಸಿ ಮಾಯಾಮಾಳವಗೌಳ, ಶಹನ, ಕುಮುದಕ್ರಿಯ, ಕಾಂತಾಮಣಿ, ಸಾವೇರಿ ಮೊದಲಾದ ರಾಗಗಳ ಕ್ಷಿಪ್ರ, ದೀರ್ಘ ಆಲಾಪನೆ, ಕೃತಿ ನಿರೂಪಣೆ, ಕಲ್ಪನಾ ಸ್ವರಗಳ ಪ್ರಸ್ತುತಿಯನ್ನೂ ಔಚಿತ್ಯ ಪೂರ್ಣವಾಗಿ ಮಾಡಿ ತುಂಬು ಹೊಂದಾಣಿಕೆಯೊಂದಿಗೆ ಸಭಿಕರಿಗೆ ಉಣಬಡಿಸಿದರು.ಮಧುರವಾದ ಕಂಠದ ಕೊರತೆ ಇದ್ದರೂ ಶ್ರುತಿ ಲೀನತೆಯಲ್ಲಿ ದೀರ್ಘವಾಗಿ ನಿಲ್ಲುವ ಕ್ಷಮತೆಗೆ ಸೈ ಎನ್ನಲೇ ಬೇಕು. ವಯಲಿನ್ ನುಡಿಸಿದ ಮತ್ತೂರು ಆರ್ ಶ್ರೀನಿಧಿ, ಮೃದಂಗ ಹಾಗೂ ಘಟದಲ್ಲಿ ಶ್ರೀ ಜಯಚಂದ್ರರಾವ್ ಮತ್ತು ವಾಳ್ಳಪಳ್ಳಿ ಕೃಷ್ಣಕುಮಾರ್ ಕಛೇರಿಯ ಯಶಸ್ಸಗೆ ಸಹಕರಿಸಿದರು.
ಎರಡನೇ ದಿನದ ಕಾರ್ಯಕ್ರಮದ ಪ್ರಾರಂಭದಲ್ಲಿ ರಂಜನಿ ಹಾಡಿದ್ದ ವಂದೇ ಮಾತರಂ ವೀಡಿಯೋವನ್ನು ಪ್ರದರ್ಶಿಸಲಾಗಿತ್ತು. ಮನ ಕಲಕುವ ಈ ದೃಶ್ಯ ಮಾಧ್ಯಮಕ್ಕೆ ಪ್ರೇಕ್ಷಕರು ಮೂಕಸಾಕ್ಷಿಗಳಾದರು. ಎರಡನೇ ದಿನವೂ ಇದೇ ವೇದಿಕೆಯಲ್ಲಿ ಅಕ್ಕರೈ ಸಹೋದರಿಯರಿಂದ ದ್ವಂದ್ವ ವಯಲಿನ್ ವಾದನ ಕಛೇರಿ ನಡೆಯಿತು.ನಿರೀಕ್ಷಣೆಯಂತೆ ತುಂಬಿದ ಸಭಾಂಗಣದಲ್ಲಿ ಅದ್ಭುತವಾದ ಸಂಗೀತ ಲೋಕ ಸೃಷ್ಟಿಯಾಯಿತು. ಅಕ್ಕರೈ ಶುಭಲಕ್ಷ್ಮಿಯವರ ಬೆರಳಿನಿಂದ ಚಿಮ್ಮಿದ ಆನಂದ ಭೈರವಿ ದಯಾದ್ರ್ರತೆಯ ಭಾವವನ್ನು ಸ್ಫುರಿಸಿದರೆ, ಸ್ವರ್ಣಲತಾ ಕೂಡಾ ತಾನು ಅಕ್ಕನಿಗಿಂತ ಕಡಿಮೆಯಿಲ್ಲವೆಂಬಂತೆ ಮಂದಾರಿ ರಾಗದೊಡನೆ ಸಂಚರಿಸಿ ಶ್ರುತಪಡಿಸಿದರು.
ತಾನಂ ಪಲ್ಲವಿಗೆ ಆಯ್ದುಕೊಂಡ ಸರಸಾಂಗಿ ರಾಗ, ಒಬ್ಬರಿಗೊಬ್ಬರು ಹಂಚಿಕೊಂಡು, ನೀಡಿದ ದೀರ್ಘ ಆಲಾಪನೆ, ಲಯಬದ್ಧವಾಗಿ ಮಿಂಚಿನಂತೆ ಮಿಡಿಯುವ ತಾನಗಳು, ನಿಖರವಾದ ಚಮತ್ಕಾರಗಳಿಂದ ಕೂಡಿದ ಕಲ್ಪನಾ ಸ್ವರಗಳು, ರಾಗಮಾಲಿಕೆಯಲ್ಲಿ ಸ್ಫುರಿಸಿದ ಸೊಗಸಾದ ರಾಗಗಳು, ಪಲ್ಲವಿಯ ತ್ರಿಕಾಲ ಭೇದಗಳು, ನೆರವಲ್, ಸಹವಾದಕರೊಂದಿಗೆ, ಶ್ರೋತೃಗಳೊಂದಿಗೆ ಸಂವಹನ, ಲಯಪ್ರಿಯರಿಗೆ, ಭಾವಪ್ರಿಯರಿಗೆ, ತುಂಬಿದ ಕಲಾರಸಿಕರಿಗೆ ತುಂಬು ಆತ್ಮಾನಂದವನ್ನು ಕೊಟ್ಟ ಈ ಸಹೋದರಿಯರಿಬ್ಬರ ಕಛೇರಿ ಮರೆಯಲಾರದ ಸುಖಾನುಭವ!. ಈ ಕಛೇರಿಗೆ ತುಂಬು ಬೆಂಬಲ ನೀಡಿ, ಯಶಸ್ಸಿಗೆ ಕಾರಣರಾದ ಮೃದಂಗ ವಾದಕ ಶ್ರೀ ಜಯಚಂದ್ರರಾವ್, ತಮ್ಮ ಕೈಚಳಕದಿಂದ ತಾವೊಬ್ಬ ಮೃದಂಗ ದಿಗ್ಗಜಗಳ ಸಾಲಿಗೆ ಸೇರಿದವನೆಂಬುದನ್ನು ಶ್ರುತಪಡಿಸಿದರು. ವಾಳ್ಳಪಳ್ಳಿ ಆರ್‍ಕೃಷ್ಣಕುಮಾರ್ ಅವರ ಘಟವಾದನವೂ ಕಛೇರಿಗೆ ಪೂರಕವಾಗಿತ್ತು.
ತಾ. 11 ರಂದು ಭಾನುವಾರ ಬೆಳಗ್ಗೆ 9.30 ರಿಂದ ಗಾರ್ಗಿ ಶಬರಾಯ ಅವರ ಲವಲವಿಕೆಯ ತೋಡಿ ವರ್ಣದೊಂದಿಗೆ ಕಾರ್ಯಕ್ರಮದ ಆರಂಭ. ಸಾಂಪ್ರದಾಯಿಕವಾಗಿ ಶಿಸ್ತಿನಿಂದ ಕೂಡಿದ ಪಾಠಾಂತರಕ್ಕೆ ಹೆಚ್ಚು ಆದ್ಯತೆ ನೀಡಿದ ಗಾಯಕಿಯ, ಪೂರ್ವಿಕಲ್ಯಾಣಿ ರಾಗಾಲಾಪನೆಯಲ್ಲಿ ಪ್ರೌಢಿಮೆ, ಕೃತಿ, ನೆರವಲ್‍ನಲ್ಲಿ ಸುಂದರ ಸಂಚಾರ, ಕಲ್ಪನಾ ಸ್ವರಗಳ ವೈವಿಧ್ಯತೆಯೊಂದಿಗೆ ವಯಲಿನ್, ಮೃದಂಗ ವಾದಕರ ಹಿತಮಿತ ಸಹಕಾರ ಎಲ್ಲವೂ ಸೇರಿ ಕಛೇರಿ ಕಳೆಗಟ್ಟಿತು.
11.30 ರಿಂದ 1.15ರ ಮಧ್ಯಾಹ್ನದ ಕಾರ್ಯಕ್ರಮ ನೀಡಿದವರು ಚೆನ್ನೈಯ ಸಹನಾ ಸಾಮ್ರಾಜ್. ಭಾವಪೂರ್ಣವಾದ ಹೃದಯ ಸ್ಪರ್ಶಿಸುವ ಗಾಯನ ಇವರದು. ರಂಜನಿ ಮಾಲಾ (ರಾಗಮಾಲಿಕೆ) ದಿಂದಲೇ ಕಛೇರಿ ಪ್ರಾರಂಭ. ಇಂಪಾದಕಂಠ, ಶ್ರುತಿ ಶುದ್ಧತೆ ಸಾಹಿತ್ಯದ ಅರ್ಥಕ್ಕೆ ಆದ್ಯತೆ ನೀಡುವ ಪರಿ, ಮಾಧುರ್ಯದೊಂದಿಗೆ ಭಾವೋತ್ಕಟತೆ ಇದ್ದರೂ ಸಮತೋಲನವನ್ನು ಕಾಯ್ದುಕೊಳ್ಳುವ ಗಾಯಕಿಯ ಗಾಯನ ಅತ್ಯಂತ ಮನೋಜ್ಞವಾಗಿತ್ತು. ವೀರರಸಕ್ಕೆ ಹೊಂದುವಂತಹ ಕೇದಾರಗೌಳವನ್ನು ಮೃದುವಾದ ಬಿಗುತನದೊಂದಿಗೆ ಸಂಚರಿಸಿದ್ದು ಆಪ್ಯಾಯಮಾನ ವಾಗಿತ್ತು. ಕಲ್ಪನಾ ಸ್ವರಗಳು ಮೃದು, ಬಿಗುವಿನೊಂದಿಗೆ ಅಚ್ಚುಕಟ್ಟಾಗಿ ಮೂಡಿ ಬಂತು. ‘ಸೀತಮ್ಮ ಮಾಯಮ್ಮ’ ಕೃತಿಯೊಂದು ಬಿಟ್ಟರೆ ಮಿಕ್ಕೆಲ್ಲವೂ ವಿಳಂಬ ಗತಿಯಲ್ಲೇ ಸಾಗಿದವು. ವರಾಳಿಯ ವಿಸ್ತಾರ ಆಲಾಪನೆ, ಮಾಮವ ಮೀನಾಕ್ಷಿ ಕೃತಿ ನಿರೂಪಣೆ, ನೆರವಲ್‍ನಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ರಾಗ, ಭಾವ, ಜೀವಸ್ವರಗಳ ಸಂಚಾರದೊಂದಿಗೆ ಕಲ್ಪನಾಸ್ವರ ಅತ್ಯುತ್ತಮವಾಗಿತ್ತು. ನೀಲಾಂಬರಿ ರಾಗದಲ್ಲಿ ಮಿಶ್ರಛಾಪಿನಲ್ಲಿ ನಿಧಾನಗತಿಯ ಪುರಂದರದಾಸರ ‘ಎಂಥಾ ಪುಣ್ಯವೇ ಗೋಪಿ’ರಚನೆಯನ್ನೂ ಹಾಡಿ, ಶ್ರೋತೃಗಳನ್ನೆಲ್ಲಾ ಮಂತ್ರಮುಗ್ಧಗೊಳಿಸಿದರು. ವಯಲಿನ್ ವಾದಕ ಶ್ರೀ ಪ್ರಣವ್ ಮಂಜುನಾಥ್ ಉತ್ತಮ ಸಾಥಿ ನೀಡಿದರು.ಪಾಲ್ಘಾಟ್ ಮಹೇಶ್‍ಕುಮಾರ್ ಅವರು ಮೃದಂಗವನ್ನು ಮೃದುವಾಗಿ, ನವಿರಾಗಿ ನೇವರಿಸುತ್ತಿದ್ದರೋ ಎಂಬಂತಿತ್ತು. ಮೃದಂಗವನ್ನು ಹೀಗೂ ನುಡಿಸಬಹುದೇ? ಜ್ಞಾನವಂತರನ್ನೂ ಅಳೆಯಲು ಸಾಧ್ಯವಿಲ್ಲ. ಅವರನ್ನು ಅಳೆದು ನೋಡುವವರಿಗೂ ಜ್ಞಾನದ ದೃಷ್ಟಿ ಬೇಕೇ ಬೇಕಾಗುತ್ತದೆ. ಇದು ಅವರವರ ಜ್ಞಾನಕ್ಕೆ ಬಿಟ್ಟದ್ದು.
ತಾ. 12ನೇ ಸೋಮವಾರ ಸಂಜೆ 6.30 ರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟವರು ‘ಸಂಗೀತ ಸಾಮ್ರಾಜ್ಞಿ’ಗಳೆಂದು ಗುರುತಿಸಿಕೊಂಡಿರುವ ಉಡುಪಿಯ ಹೆಮ್ಮೆಯ ಮಕ್ಕಳಾದ ಕು.ಅರ್ಚನಾ, ಕು. ಸಮನ್ವಿ. ಶ್ರೀಯುತ ಅರವಿಂದ ಹೆಬ್ಬಾರ್ ದಂಪತಿಗಳ ಗರಡಿಯಲ್ಲಿ ಬೆಳೆಯುತ್ತಿರುವ ಈ ಮಕ್ಕಳು ತಮ್ಮ ಬಾಲ್ಯದಿಂದಲೇ ಸಂಗೀತವನ್ನೇ ಆರಾಧಿಸುತ್ತಾ, ಶಿಸ್ತಿನ ಗುರುಕುಲ ಪರಂಪರೆಯಲ್ಲಿ ಸಂಗೀತದ ವಿದ್ವತ್ಪೂರ್ಣವಾದ ಶಿಕ್ಷಣವನ್ನು ಪಡೆಯುವುದರೊಂದಿಗೆ, ನಿರಂತರ ಪರಿಶ್ರಮ, ಸಾಧನೆಗಳಿಂದ ಸಂಗೀತಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ. ಈ ವಾಮನ ಮೂರ್ತಿಗಳ ವಿದ್ವತ್ಪೂರ್ಣವಾದ ಕಛೇರಿಯನ್ನು ಅರಗಿಸಿಕೊಳ್ಳಲು ಶ್ರೋತೃಗಳಿಗೂ ಸಂಗೀತದ ಜ್ಞಾನ ಸಾಮಥ್ರ್ಯವಿರಬೇಕು!
ಮುದ್ದುಮದ್ದಾಗಿ ನಗುತ್ತಾ ಆತ್ಮ ವಿಶ್ವಾಸದೊಂದಿಗೆ ಹಾಡುವ ಈ ಮಕ್ಕಳ ಪರಿ ಬೆರಗುಗೊಳಿಸುವಂಥದ್ದು. ಎರಡು ಗಂಟೆಗಳ ಕಛೇರಿಯಲ್ಲಿ ಬೇಹಾಗ್ ರಾಗದ ವರ್ಣ ಚುರುಕಾಗಿ ಸಾಗಿತು. ರೀತಿಗೌಳ ರಾಗದಲ್ಲಿ ಆಲಾಪನೆಯ ವೈಖರಿ, ವಿದ್ವತ್ಪೂರ್ಣವಾಗಿ ಹಂಚಿಕೊಂಡು ಬಿರ್ಕಾಗಳೊಂದಿಗೆ ಪ್ರಸ್ತುತ ಪಡಿಸುವ ರೀತಿ, ‘ತಾಂಬೂಲ ಮಡಚಿ’ಕೃತಿಯ ನೆರವಲ್, ಕಲ್ಪನಾಸ್ವರಎಲ್ಲವನ್ನೂಅರ್ಥಗರ್ಭಿತವಾಗಿ ಹಂಚಿಕೊಂಡು ಹಾಡುವ ನೈಪುಣ್ಯತೆ ಈ ಮಕ್ಕಳ ಪ್ರತಿಭೆಗೆ ಸಾಕ್ಷಿ.! ಬೃಂದಾವನ ಸಾರಂಗದ ‘ಸೌಂದರರಾಜಂ’ನ ಗಾಂಭೀರ್ಯಪೂರಿತ ರಾಗಾಲಾಪನೆ ಅತ್ಯಂತ ಹೃದ್ಯ. ಹಂಸಧ್ವನಿ ರಾಗದ ತಾನಂ ಪಲ್ಲವಿಯಲ್ಲಿ ತೋರಿದ ಬಹು ಕಷ್ಟವಾದ ಕ್ಲಿಷ್ಟ ನಡೆಗಳು (ಸಂಕೀರ್ಣಜಾತಿ ಝಂಪೆತಾಳ) ಸಂಚಾರ, ತ್ರಿಕಾಲ ಭೇದಗಳು,ತ್ರಿಶ್ರ,ಕೀಳ್ಕಾಲ, ನಾಲ್ಕು ಕಳೆಯಲ್ಲಿ ನೆರವಲ್, ಎರಡು ಕಳೆಯಲ್ಲಿ ಕಲ್ಪನಾ ಸ್ವರಗಳು, ಸ್ವರರಾಗಮಾಲಿಕಾದ ಬಿಗುತನ, ಹಂಚಿಕೊಂಡು ಹಾಡುವರೀತಿ ಎಲ್ಲವೂ ಸ್ತುತ್ಯರ್ಹ. ವೈಭವ್‍ರಮಣಿಯವರ ವಯಲಿನ್ ಕಛೇರಿಗೆ ಪೂರಕವಾಗಿತ್ತು. ಪಾಲ್ಘಾಟ್ ಮಹೇಶ್‍ಕುಮಾರ್ ಕಛೇರಿಯುದ್ದಕ್ಕೂ ತಮ್ಮ ಪಾಂಡಿತ್ಯದ ನುಡಿಸಾಣಿಕೆಯಲ್ಲಿ ಕೃತಿಗೆ ಅನುಸಾರಾಣೆಯಾಗಬಲ್ಲ ನಡೆಗಳನ್ನು ನೀಡಿ, ತನಿಯಲ್ಲಿ ತನ್ನ ಅದ್ಭುತ ಕೌಶಲವನ್ನು ಮೆರೆದು, ತಮ್ಮ ದೊಡ್ಡತನವನ್ನು ಮೆರೆದಿದ್ದಾರೆ. ನಮ್ಮ ನಾಡಿನ ಮಕ್ಕಳಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಹೊರಹೊಮ್ಮಿಸಿ, ಸಂಗೀತಕ್ಷೇತ್ರಕ್ಕೆ ಅವರದೇ ಆದ ಕೊಡುಗೆಗಳನ್ನು ನೀಡುತ್ತಿರುವ ಶ್ರೀಯುತ ಅರವಿಂದ ಹೆಬ್ಬಾರ್, ಶ್ರೀಮತಿ ವಸಂತಲಕ್ಷ್ಮಿ ಹೆಬ್ಬಾರ್ ಅವರಿಗೆ ಅಭಿನಂದನೆಗಳು. ಇನ್ನಷ್ಟು ಅನಘ್ರ್ಯ ರತ್ನಗಳು ಸಂಗೀತಕ್ಷೇತ್ರಕ್ಕೆ ಅವರಿಂದ ಲಭಿಸಲಿ ಎಂದು ಹಾರೈಕೆ.
ತಾ. 17 ರಂದು ಶನಿವಾರ ಪರ್ಕಳದ ಶ್ರೀ ಉದಯಶಂಕರ್ ಹಾಗೂ ಉಮಾಶಂಕರಿ ಅವರ ನಿವಾಸ ‘ಸರಿಗಮ ಭಾರತಿ’ಯಲ್ಲಿರಾಗಧನದ ವತಿಯಿಂದ ರಂಜನಿ ಸಂಸ್ಮರಣೆ ಪ್ರಯುಕ್ತ ನಡೆದ ಎನ್.ಜೆ.ನಂದಿನಿ ಅವರ ಸಂಗೀತಕಛೇರಿ ಒಂದು ಮರೆಯಲಾರದ ಮಧುರ ಅನುಭವ. ಜೇನಿನಂತೆ ಸಿಹಿಯಾದ ಶಾರೀರ ಕಂಠ ಸುಖ!. ದೇವರುಕೊಟ್ಟ ಈ ಉಡುಗೊರೆಯನ್ನು ಅತ್ಯಂತ ಜಾಗರೂಕತೆಯಿಂದ ದುಡಿಸಿಕೊಂಡಿರುವ ಗಾಯಕಿ ಸಂಗೀತದ ಪ್ರತಿಕೋನಗಳಿಂದಲೂ ಶೋಭಿಸುತ್ತಿದ್ದರು. ಕಲ್ಯಾಣಿ ವನಾಜಾಕ್ಷಿವರ್ಣದಿಂದ ಹಿಡಿದು, ಬಿಲಹರಿಯಲ್ಲಿ ‘ಮಾ ಮಯೂರ ಮಿದಿಲೇರಿ ವಾ’ ತಮಿಳು ಕೃತಿ ಮಯೂರ ನೃತ್ಯದ ವೈಯಾರದಂತಿತ್ತು.ನಿರೋಷ್ಠ ರಾಗದ ‘ರಾಜರಾಜರಾಜಿತೇ’, ನಾಟಕಪ್ರಿಯದಲ್ಲಿ ಕಲ್ಪನಾಸ್ವರದಲ್ಲಿ ಮಧ್ಯಮವನ್ನು ಆಧಾರಷಡ್ಜ ಮಾಡಿ (ಶ್ರುತಿಬೇಧ) ಹಾಡಿದ ಸ್ವರವಿನ್ಯಾಸ ದಿಗ್ಭ್ರಮೆಗೊಳಿಸಿತು. ಕಾಂಭೋಜಿ ರಾಗಾಲಾಪನೆ, ಶ್ರೀ ಸುಬ್ರಹ್ಮಣ್ಯಾಯ ನಮಸ್ತೇ, ನೆರವಲ್, ಕಲ್ಪನಾಸ್ವರಗಳಲ್ಲಿ ಚುರುಕುತನ ಸರ್ವಲಘುವಿನ ಸೊಗಸು, ಸ್ವರಸಂಚಾರ ಎಲ್ಲವೂ ಒಂದಕ್ಕೊಂದು ಮಿಗಿಲು. ಕೊನೆಗೆ ಹಾಡಿದ ಆಹಿರಿ ರಾಗದ ಕೃತಿ ವಿಳಂಬದಿಂದ ಶಾಂತವಾಗಿ ವಿಶ್ರಾಂತ ಸ್ಥಿತಿಗೆ ತಂದಂತಿತ್ತು. ರಘುಪತಿ ರಾಘವ ದೇಶಭಕ್ತಿಯನ್ನು ಜಾಗೃತಗೊಳಿಸಿತು. ವಯಲಿನ್ ನುಡಿಸಿದ ಶ್ರೀಜಿತ್, ಮೃದಂಗದಲ್ಲಿಆನೂರು ವಿನೋದ ಶ್ಯಾಮ್, ಘಟದಲ್ಲಿರಾಜೇಶ್ ಸಹಕರಿಸಿ ಕಚೇರಿಯ ಯಶಸ್ಸಿಗೆ ಕಾರಣರಾದರು.
ಪ್ರತಿ ಸಂಗೀತಕಾರ್ಯಕ್ರಮ ನಡೆದಾಗಲೂ ಆತ್ಮ ಸಂತೋಷದೊಂದಿಗೆ ಉದರ ಸಂತೋಷವನ್ನೂ ಉಣಬಡಿಸುವ, ಸರಿಗಮ ಬಾರತಿಯ ಉದಯಶಂಕರ್, ಉಮಾಶಂಕರಿ ದಂಪತಿಗಳಿಗೆ ಶ್ರೀ ಶಾರದಾ ಮಾತೆಯ ಕೃಪೆ ಇರಲಿ ಎಂದು ಹಾರೈಸೋಣ.
ಶಾರದಾ ಉಪಾಧ್ಯಾಯ
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಮೂಡಿಸಲು, ಹೆಚ್ಚು ಹೆಚ್ಚು ಮಕ್ಕಳು ಶಾಸ್ತ್ರೀಯ ಸಂಗೀತವನ್ನೇ ತಮ್ಮ ಗುರಿಯಾಗಿಸಿ ಅಭ್ಯಾಸ ನಡೆಸಲು ಪ್ರೋತ್ಸಾಹಿಸುವುದನ್ನೇ ಧ್ಯೇಯವಾಗಿರಿಸಿ ರಂಜನಿಯ ನೆನಪಿಗಾಗಿ ಹುಟ್ಟಿಕೊಂಡ ರಂಜನಿ ಮೆಮೊರಿಯಲ್ ಟ್ರಸ್ಟ್ ಮೂರನೇ ವರ್ಷದ ವಾರ್ಷಿಕ ಕಾರ್ಯಕ್ರಮ ಮಣಿಪಾಲದ ಎಂ.ಐ.ಟಿ. ಯ ಲೈಬ್ರೆರಿ ಆಡಿಟೋರಿಯಂನಲ್ಲಿ ಸಾಂಸ್ಕøತಿಕ ಸಮನ್ವಯ ಸಮಿತಿ (ಸಿಸಿಸಿ) ಯ ಸಹಯೋಗದೊಂದಿಗೆ 9.9.2016ರಿಂದ 12.9.2016ರ ವರೆಗೆ ನಡೆಯಿತು. ದೇಶವಿದೇಶಗಳಲ್ಲೆಲ್ಲಾ ಅತ್ಯಂತ ಬೇಡಿಕೆಯ ಕಲಾವಿದೆಯರಾದ ಅಕ್ಕರೈ ಸಹೋದರಿಯರೇ ಮುಂತಾದವರು ಕಾರ್ಯಕ್ರಮ ನೀಡಿ ನಾಲ್ಕು ದಿನಗಳ ಈ ಸಂಗೀತ ಉತ್ಸವ ವಿದ್ಯಾರ್ಥಿಗಳಿಗೆ ಬೋಧಪ್ರದವೂ, ರಸಿಕರಿಗೆ ರಸದೌತಣವೂ, ಸಂಘಟಕರಿಗೆ ಧನ್ಯತಾ ಭಾವವೂ ಉಂಟಾಗುವಂತೆ ಮಾಡಿದರು.
ಎಂ.ಐ.ಟಿ. ಯ ಹವಾನಿಯಂತ್ರಿತ ಸಭಾಂಗಣ, ಉತ್ತಮ ಧ್ವನಿವರ್ಧಕ – ಇವುಏಕಾಗ್ರತೆಯಿಂದ ಕೇಳುವುದಕ್ಕೆ, ಆನಂದಿಸುವುದಕ್ಕೆ ಪೂರಕವಾಗಿದ್ದವು.
ಮೊದಲ ದಿನದ (9.9.16) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಶೋಭಾ ಕಾಮತ್ (ಮಣಿಪಾಲ ವಿಶ್ವವಿದ್ಯಾಲಯ ‘ಸಿಸಿಸಿ’ ಯ ನಿರ್ವಾಹಕಿ) ಮತ್ತು ದ್ವಿತೀಯ ದಿನದ ಮುಖ್ಯ ಅತಿಥಿಯಾಗಿ ಮಣಿಪಾಲ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆದ ಡಾ. ನಾರಾಯಣ ಸಭಾಹಿತ್ ಉಪಸ್ಥಿತರಿದ್ದು ಸಂಸ್ಥೆಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ಆಶ್ವಾಸನೆ ನೀಡಿ ಶುಭ ಹಾರೈಸಿದರು. ಹಿರಿಯ ಕಲಾವಿದೆ ನೀಲಾ ರಾಂಗೋಪಾಲ್ ದಿನಾಂಕ 11 ರಂದು ನಡೆದ ವಸುಧಾ ರವಿಯವರ ಕಛೇರಿಯನ್ನು ಪ್ರಾಯೋಜನ ಮಾಡಿದ್ದಲ್ಲದೆ ಟ್ರಸ್ಟ್ ನಿಂದಾಗುವ ಉಪಕಾರೀ ಚಟುವಟಿಕೆಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ನೀಲಾ ಮಾಮಿಯವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಕಳೆನೀಡಿದ್ದಂತೂ ನಿಜ. ನೀಲಾ ಮಾಮಿಯವರು ಮುಂದಿನ ವರ್ಷದ ರಂಜನಿ ಸಂಸ್ಮರಣಾ ಕಾರ್ಯಕ್ರಮಕ್ಕೆ ಸ್ಥಳದಲ್ಲಿಯೇ ದೇಣಿಗೆ ನೀಡಿದ್ದಕ್ಕೆ ರಂಜನಿಯ ಮೇಲಿನ ಅವರ ಅಪಾರ ಪ್ರೇಮವೇ ಸಾಕ್ಷಿ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದವರು ಶ್ರೀ ಎ. ಈಶ್ವರಯ್ಯನವರು ಹಾಗೂ ಪ್ರಸಿದ್ಧ ಕೊಳಲು ವಾದಕಿ ಶಾಂತಲಾ ಸುಬ್ರಹ್ಮಣ್ಯಂ ಅವರು. ಅನಿವಾರ್ಯ ಕಾರಣಗಳಿಂದಾಗಿ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಕಣ್ಣನ್ ದಂಪತಿ ಬಂದಿರಲಿಲ್ಲ. ರಂಜನಿ ಮೆಮೊರಿಯಲ್ ಟ್ರಸ್ಟ್‍ನ ಆಶೋತ್ತರಗಳನ್ನು ಶ್ರೀ ಅರವಿಂದ ಹೆಬ್ಬಾರರು ವಿಷದವಾಗಿ ನಿರೂಪಿಸಿ ಪ್ರಸಕ್ತ ವರ್ಷದ ಪ್ರೋತ್ಸಾಹಕರ ಸ್ಕಾಲರ್‍ಶಿಪ್ ಅನ್ನು ಸಂಗೀತ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿರುವ ಅರ್ಚನಾ, ಸಮನ್ವಿ, ಅಂಜಲಿ ಮಧ್ಯಸ್ಥ, ಮೇಧಾ, ಸುಷಮೀಂದ್ರ, ಸುನಾದಕೃಷ್ಣ ಇವರಿಗೆ ಶಾಂತಲಾ ಸುಬ್ರಹ್ಮಣ್ಯಂ ಅವರ ಮೂಲಕ ವಿತರಿಸಿದರು. ಸಂಸ್ಮರಣಾ ಕಾರ್ಯಕ್ರಮಗಳನ್ನು ಒಳಗಿನಿಂದಲೂ ಹೊರಗಿನಿಂದಲೂ ಸೂಕ್ಷ್ಮವಾಗಿ ಗಮನಿಸಿದ ಶಾಂತಲಾ ಅವರು ಚೆನ್ನುಡಿಯ ನಾಲ್ಕು ಮಾತುಗಳನ್ನಾಡಿ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹೆಚ್ಚಿನ ಜವಾಬ್ದಾರಿ ಇರುವುದನ್ನು ಎಚ್ಚರಿಸಿ ಶುಭ ಹಾರೈಸಿದರು.
“ಇಂದಿನ ಸಂಗೀತ ಕಛೇರಿಗಳು ವಿಸ್ಮಯವನ್ನು ಹುಟ್ಟಿಸುವುದರಲ್ಲಿಯೇ ನಿರತವಾಗಿವೆ. ಸೌಖ್ಯವಾದ ಆನಂದವನ್ನು ನೀಡುವ ಸಂಗೀತ ನಮಗೆಲ್ಲರಿಗೆ ಬೇಕಾದುದಾಗಿದೆ.”ಎಂದು ಸಮಾರೋಪ ಭಾಷಣವನ್ನಿತ್ತ ಹಿರಿಯ ಪರ್ತಕರ್ತರಾದ ಶ್ರೀ ಎ. ಈಶ್ವರಯ್ಯನವರು ಸಂಸ್ಥೆಯ ಚಟುವಟಿಕೆಗಳನ್ನು ಕೊಂಡಾಡಿ ಶುಭಾಶಂಸನೆಗೈದರು.
ರವಿಶಂಕರ್ ಗುರೂಜಿಯವರು ಹುಟ್ಟು ಹಾಕಿದ ಆರ್ಟ್ ಆಫ್ ಲಿವಿಂಗ್‍ನ ಪ್ರಾಮಾಣಿಕ ಅನುಯಾಯಿ – ರಂಜನಿ. ಗುರೂಜಿಯವರ ಶಿಷ್ಯ ಛಾಯಾಪತಿ ಗುರೂಜಿಯವರು ಇವಳಿಗೆ ಗುರು ಮತ್ತು ಮಾರ್ಗದರ್ಶಕರಾಗಿದ್ದವರು. ಇವರ ಜೊತೆಗಿನ ಸತ್ಸಂಗ ಭಜನಾ ಕಾರ್ಯಕ್ರಮ ರಂಜನಿಗೆ ಅತ್ಯಂತ ಪ್ರಿಯವಾಗಿದ್ದಿತು. ಆದ್ದರಿಂದ ರಂಜನಿ ಮೆಮೋರಿಯಲ್ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಸತ್ಸಂಗ ಭಜನಾ ಕಾರ್ಯಕ್ರಮವನ್ನು ಕೊನೆಯ ದಿನ (12.9.16) ಲತಾಂಗಿಯಲ್ಲಿ ಏರ್ಪಡಿಸಿತ್ತು.
ಮೊದಲೆರಡು ದಿನ ಪ್ರಾರ್ಥನಾ ರೂಪವಾಗಿ ರಂಜನಿ ಹಾಡಿದ ‘ದೀನ ನಾನು’ ಎಂಬ ಉಗಾಭೋಗ ಮತ್ತು ‘ವಂದೇ ಮಾತರಂ’ ಹಾಡಿನ ಧ್ವನಿಮುದ್ರಿಕೆಗಳನ್ನು ಪ್ರದರ್ಶಿಸಲಾಗಿತ್ತು. ಆಗ ಉಪಸ್ಥಿತರಿದ್ದ ಅಕ್ಕರೈ ಸಹೋದರಿಯರು ಮತ್ತು ಅವರ ತಂದೆ ಅಕ್ಕರೈ ಸ್ವಾಮಿನಾಥನ್ ಇವರನ್ನೂ ಕೂಡ ರಂಜನಿಯ ಹಾಡು ತಟ್ಟಿದ್ದಲ್ಲದೆ ಲತಾಂಗಿ ಮನೆಯಲ್ಲೇ ಉಳಿದುಕೊಂಡಿದ್ದ ಅವರು ಪುನಃ ಮನೆಯಲ್ಲಿ ರಂಜನಿಯ ಸರಸಾಂಗಿ ಮೊದಲಾದ ಹಲವಾರು ಧ್ವನಿಮುದ್ರಿಕೆಗಳನ್ನೂ ಹಾಕಿಸಿ ಕೇಳಿ ರೋಮಾಂಚಿತರಾಗಿ ರಂಜನಿಗಾಗಿ ಕಣ್ಣೀರು ಸುರಿಸಿದ್ದನ್ನು ಇಲ್ಲಿ ನೆನೆಯಬಹುದು. ರಂಜನಿಯ ಹೆಸರಿನಲ್ಲಿ ನಡೆಸಿದ ತಮ್ಮ ಎರಡೂ ಕಛೇರಿಗಳಿಗೂ ಕಿಂಚಿತ್ ಸಂಭಾವನೆಯನ್ನೂ ಪಡೆಯದೆ ತಮ್ಮ ಕಛೇರಿಗಳನ್ನು ರಂಜನಿಗಾಗಿ ಸಮರ್ಪಿಸಿದರು. ಶ್ರೀಮತಿ ವಸಂತಲಕ್ಷ್ಮೀ ಹೆಬ್ಬಾರರು ರಚಿಸಿದ ಬಾಷ್ಪವಾರಿ ಆಂಜನೇಯನ ವರ್ಣಚಿತ್ರವನ್ನು ಈ ಕಲಾವಿದೆಯರಿಗೆ ಕೊಡುಗೆಯಾಗಿ ಸಮರ್ಪಿಸಿದ್ದು ಸಕಾಲಿಕವಾಗಿತ್ತು.
ಟ್ರಸ್ಟ್‍ನ ಸದಸ್ಯರು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಕಲಾವಿದರನ್ನು ತಮ್ಮ ಮನೆಗಳಲ್ಲಿಯೇ ಉಳಿಸಿಕೊಂಡದ್ದು ಮತ್ತು ಸ್ವಂತ ವಾಹನಗಳನ್ನೇ ಕಲಾವಿದರ ಓಡಾಟಕ್ಕೆ ಬಳಸಿಕೊಂಡದ್ದು ಆತ್ಮೀಯತೆಯ ಸಂಕೇತವಾಗಿ ಉಳಿಯಿತು. ಆದ್ದರಿಂದ ಕಲಾವಿದರೆಲ್ಲಾ ಲತಾಂಗಿ, ಶಂಕರಾಭರಣ, ಸರಿಗಮ ಭಾರತಿ,ಪಯಸ್ವಿನಿ, ಸೌರಭ, ರಂಗಸ್ಥಳ ಮುಂತಾದ ನಿವಾಸಗಳಲ್ಲಿ ಸಂತೋಷವಾಗಿ ಉಳಿದುಕೊಂಡಿದ್ದರು. ಎಲ್ಲರಿಗೂ ಲತಾಂಗಿ ನಿವಾಸದಲ್ಲಿಯೇ ಭೋಜನ, ಉಪಾಹಾರ ವ್ಯವಸ್ಥೆ. ಹೆಬ್ಬಾರ್ ಸರ್ ಮಾತಿನಲ್ಲಿ ಹೇಳುವುದಾದರೆ “Accommodation decentralized, food centralized” ಸಭಾಂಗಣದಲ್ಲಿಯೂ ಹಾಗೆಯೇ. ನಡೆದ ಎಲ್ಲಾ ಕಾರ್ಯಕಲಾಪಗಳೂ ಯಾವುದೇ ಗೊಂದಲಗಳಿಲ್ಲದೆ ಅತ್ಯಂತ ಸುವ್ಯವಸ್ಥಿತವಾಗಿ ನಡೆದದ್ದು ಸಂಘಟನೆಯ ಯಶಸ್ಸನ್ನು ಸಾರಿ ಹೇಳುತ್ತಿತ್ತು.
ಭಾನುವಾರದ (ಸೆ.11) ಇಡೀ ದಿನದ ಕಾರ್ಯಕಲಾಪಗಳ ನಡುವೆ ಮಧ್ಯಾಹ್ನ ಸುಮಾರು 75 ಜನರಿಗೆ ಭೋಜನ ವ್ಯವಸ್ಥೆಯನ್ನೂ, ಸೋಮವಾರದ ಉಪಾಹಾರದ ವ್ಯವಸ್ಥೆಯನ್ನೂ ಸಿಸಿಸಿ ಯವರು ನಿರ್ವಹಿಸಿದ್ದರು. ಹಾಗೆಯೇ ಭಾನುವಾರದ ಚಹಾ ತಿಂಡಿಯ ನಿರ್ವಹಣೆಯನ್ನು ರಂಜನಿಮೆಮೊರಿಯಲ್ ಟ್ರಸ್ಟ್‍ನ ಅಭಿಮಾನಿಗಳಲ್ಲೊಬ್ಬರಾದ ಡಾ. ಪದ್ಮಲತಾ ನಿರ್ವಹಿಸಿದ್ದರು. ಎಲ್ಲಾ ಅಭಿಮಾನಿ ಸ್ನೇಹಿತರ ಮತ್ತು ಸಹೃದಯ ಕಲಾವಿದರೆಲ್ಲರ ಸಹಕಾರದಿಂದ ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು. ಎಲ್ಲಾ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸಿದ ಶ್ರೋತೃವರ್ಗ ನಿರಾಶಾದಾಯಕವಲ್ಲದಿದ್ದರೂ ತೃಪ್ತಿಕರ. ಕೊನೆಯ ದಿನದ ಅರ್ಚನಾ-ಸಮನ್ವಿಯವರ ಕಾರ್ಯಕ್ರಮದ ದಿನ ಸಭಾಂಗಣ ತುಂಬಿತ್ತು ಎನ್ನುವುದು ಸಮಾಧಾನಕರ ಅಂಶ.