“ರಂಜನಿ ಒಬ್ಬಾಕೆ ಅಸಾಮಾನ್ಯ ಪ್ರತಿಭೆ. ಆಕೆಯ ಸಂಗೀತ ಏಕೆ ಅನ್ಯಾದೃಶವಾದುದು ಎಂದರೆ ಕರ್ನಾಟಕ ಸಂಗೀತದ ವ್ಯಾಕರಣವನ್ನೂ ಸುಂದರತೆಯನ್ನೂ (ಏಸ್ತೆಟಿಕ್ಸ್) ಜತೆಜತೆಯಾಗಿ ಸರಿದೂಗಿಸಿಕೊಂಡು ಸೌಖ್ಯತೆಯನ್ನು ಮೆರೆದುದಕ್ಕಾಗಿ. ಅಲ್ಲಿ ವ್ಯಾಕರಣ ಶುದ್ಧತೆಯೂ ಇದೆ, ಕಣಕ್ಕು ಲೆಕ್ಕಾಚಾರಗಳೂ ಇವೆ, ಆದರೆ ಅವು ಯಾವುವೂ ರಾಗ, ಭಾವ, ತಾಳ, ಲಯಗಳಿಗೆ ಧಕ್ಕೆ ತರುವವುಗಳಲ್ಲ. ಇದನ್ನು ಈಗಿನ ಎಲ್ಲಾ ಕಲಾಕಾರರೂ ಅನುಕರಿಸಬೇಕಾಗಿದೆ. ಈ ದೃಷ್ಟಿಯಲ್ಲಿ ನಮ್ಮ ಜಿಲ್ಲೆ ರಂಜನಿಯ ಸಂಗೀತದಿಂದ ತುಂಬಾ ಪ್ರಭಾವಕ್ಕೊಳಗಾಗಿದೆ ಎನ್ನುವುದು ಸತ್ಯ” –

ಎಂದು ಮನತುಂಬಿ ಮನದಾಳದ ಅಭಿಪ್ರಾಯವನ್ನು ಮುಂದಿಟ್ಟವರು ಶ್ರೀ ಎ. ಈಶ್ವರಯ್ಯನವರು. ರಂಜನಿಯ ಹೆಸರಿನಲ್ಲಿ ಉಡುಪಿ, ಮಂಗಳೂರು ಮತ್ತು ಚೆನ್ನೈ ರಸಿಕರು ಪ್ರತಿವರ್ಷ ಯುವ ಸಂಗೀತ ಕಛೇರಿಗಳನ್ನು ನಡೆಯಿಸಿ ಸ್ಮರಿಸಿಕೊಳ್ಳುವುದು ನಿಜಕ್ಕೂ ಸಾರ್ಥಕ ಸಂಗೀತದ ಸಂಕೇತವೇ ಸರಿ.
ದಿನಾಂಕ ಸೆ. 4 ರಿಂದ 10ರವರೆಗೆ ಉಡುಪಿಯಲ್ಲಿ ರಂಜನಿ ಮೆಮೊರಿಯಲ್ ಟ್ರಸ್ಟ್ನನ ವತಿಯಿಂದ, 11ಕ್ಕೆ ಮಂಗಳೂರಿನಲ್ಲಿ ಮಣಿಕೃಷ್ಣಸ್ವಾಮಿ ಅಕಾಡೆಮಿಯ ವತಿಯಿಂದ ಹಾಗೂ 12ಕ್ಕೆ ಉಡುಪಿಯಲ್ಲಿ ರಾಗ ಧನದ ವತಿಯಿಂದ ರಂಜನಿ ಸಂಸ್ಮರಣಾ ಕಾರ್ಯಕ್ರಮಗಳು ನಡೆದವು.

ರಂಜನಿ ಮೆಮೊರಿಯಲ್ ಟ್ರಸ್ಟ್ ಕಾರ್ಯಕ್ರಮಗಳು (ಸೆ. 4 ರಿಂದ 10):
ಸೆ. 4 ರಿಂದ 7, ಲತಾಂಗಿಯಲ್ಲಿ:
ಲತಾಂಗಿಯಲ್ಲಿ ಒಂದು ತಿಂಗಳಿನಿಂದಲೂ ನಡೆದುಕೊಂಡು ಬಂದ ಚುರುಕಿನ ನಡೆ-ನುಡಿಗಳು ಪೂರ್ಣಗೊಂಡದ್ದು ಈ ದಿವಸಗಳಲ್ಲಿ. ಲತಾಂಗಿ ಮಹಡಿಯಲ್ಲಿ ಒಂದು ಪುಟ್ಟ ಕೆಂಪು ಹಾಸಿನ ವೇದಿಕೆ. 60-70 ಜನರಿಗೆ ಕುಳಿತು ಕೇಳುವ, ಹತ್ತಾರು ಜನರಿಗೆ ನಿಂತು ಕೇಳುವ ಅವಕಾಶ ಈ ಸಂಗೀತ ಗೃಹದೊಳಗೆ. ಎಲ್ಲವೂ ಸಮಯಕ್ಕೆ ಸರಿಯಾಗಿ, ಏಕೆ ಸಮಯಕ್ಕೆ ಮುಂಚಿತವಾಗಿಯೇ ಆರಂಭ. ಪ್ರತಿದಿನ ರಂಜನಿಯ ನೆನಪಿನ ಹಾಡುಗಳು ರಿಂಗಣಿಸುತ್ತಿದ್ದವು.

ಸೆ. 4 ರಂದು ಹೊಸ ವೇದಿಕೆಯಲ್ಲಿ ಅರ್ಚನಾ-ಸಮನ್ವಿ-ಗಾರ್ಗಿಯವರ ಗುರು ನಮನ ಗಾಯನ – ನಿನ್ನಡಿಯ ಹುಡಿ ನನ್ನ ಮುಡಿಯ ಸಿಂಗರಿಸಿರಲಿ ಎಂಬ ಪ್ರಾರ್ಥನೆಯೊಂದಿಗೆ. ಬಳಿಕ 15 ನಿಮಿಷಗಳ ಕೊಳಲು ವಾದನದ ಸರಣಿ ಕು. ಮೇಧಾ ಮಂಗಳೂರು ಮತ್ತು ಮಾ. ಸುಷಮೀಂದ್ರ ಮಂಗಳೂರು ಇವರಿಂದ. ಇದರ ನಡುವೆ ಅರ್ಧ ತಾಸಿನ ಕು. ಶ್ರೇಯಾ ಎಸ್ ರಾವ್, ಉಡುಪಿ ಇವರ ಹಾಡುಗಾರಿಕೆ. ಸುಮುಖ ಕಾರಂತನ ಮೃದಂಗ ಸಾಥಿಯೊಂದಿಗೆ ನಡೆದ ಪುಟ್ಟ ಬಾಲಿಕೆ ಮೇಧಾ- ಸಾರಂಗ ವರ್ಣ, ಸರಸಿಜನಾಭ ಸೋದರಿ ಮತ್ತು ಮನವ್ಯಾಲಕಿಂಚರಾದಟೇಯೊಂದಿಗೆ ಅಚ್ಚರಿ ಹುಟ್ಟಿಸಿದರೆ 5ನೆ ತರಗತಿಯ ಸುಷಮೀಂದ್ರ ಕಾಂಬೋಧಿ ವರ್ಣ (ತರುಣಿ), ಪೂರ್ಣಷಡ್ಜ (ಗಣನಾಯಕಂ) ಮತ್ತು ಜಗನ್ಮೋಹಿನಿ (ಶೋಭಿಲ್ಲು) ಯನ್ನು ಲೀಲಾಜಾಲವಾಗಿ ನುಡಿಸಿ ದಿಗ್ಭ್ರಮೆಯೇ ಹುಟ್ಟಿಸಿಬಿಟ್ಟ. ಶ್ರೇಯಾಳ ಚೊಚ್ಚಲ ಕಛೇರಿಯಲ್ಲಿ ತುಸು ಸಭಾ ಕಂಪನದ ಜೊತೆ ಮೂಡಿ ಬಂದ ವೀರಿಬೋಣಿ, ಶೋಭಿಲ್ಲು, ಪಾಲಿಂಚು ಕಾಮಾಕ್ಷಿ ಮತ್ತು ನೀನ್ಯಾಕೋ (ಕರ್ಣರಂಜನಿ)ಗಳು ತನ್ನ ಶುದ್ಧ ಪಾಠಾಂತರದ ಗಟ್ಟಿತನವನ್ನು ಮತ್ತು ಸತತ ಅಭ್ಯಾಸವನ್ನು ಒತ್ತಿ ಹೇಳುತ್ತಿದ್ದವು. ವಯಲಿನ್ ಸಹವಾದನದಲ್ಲಿ ಸಹಕರಿಸಿದ ಮಾ. ಸುಮೇಧಾ ಅಮೈ ಇನ್ನೋರ್ವ ನಿರೀಕ್ಷೆಯ ಕಲಾವಿದನಾಗಿದ್ದನೆಂಬುದು ವಿದಿತವಾಗಿತ್ತು. ಸಂಜೆ 6.30ಕ್ಕೆ ಪ್ರಾರಂಭವಾದ ಬೋಸ್ಟನ್ ಬ್ರದರ್ಸ್ ಎಂದೇ ಪ್ರಖ್ಯಾತರಾದ ಬೆಂಗಳೂರು ವಾಸಿ ತೇಜಸ್ ಮಂಜುನಾಥ್ ಮತ್ತು ಪ್ರಣವ್ ಮಂಜುನಾಥ್ ಅವರ ದ್ವಂದ್ವ ವಯಲಿನ್ ಅತ್ಯುತ್ತಮ ಮಟ್ಟದ ಕಛೇರಿ ಎನಿಸಿತ್ತು. ರೇಶ್ಮೆಯ ನೂಲಿನಿಂದ ಎಳೆದ ದಾರದಂತೆ ಸೂಕ್ಷ್ಮ ಸ್ವರ ಲಾಲಿತ್ಯವನ್ನು ಸೂಸಬಲ್ಲ ಸಾಮಥ್ರ್ಯ ಈ ಇಬ್ಬರು ಕಲಾವಿದರಿಗಿದೆ. ಸಂಗೀತ ಸುಂದರತೆಯ ಮೇಲ್ಗೈಯೊಂದಿಗೆ ಹರಡುವ ಇವರ ರಾಗ ಚಪ್ಪರ ಅತಿ ಸುಂದರ. ಭೈರವಿಯ ಕಾಮಾಕ್ಷಿಗೆ ಸರಿಸಾಟಿಯೇ ಇಲ್ಲ ಎನ್ನುವಂತೆ ಧ್ಯಾನಸ್ಥವಾಗುವಂತೆ ಸ್ವರಜತಿಯನ್ನು ಹೆಣೆಯಲಾಗಿತ್ತು. ಬೇಗಡೆ ಮತ್ತು ಹಮೀರ್ ಕಲ್ಯಾಣಿಗಳು ಹೆಚ್ಚಿನ ಪೋಷಣೆಯನ್ನು ಬಯಸಿದ್ದವು. ಸೋದರರು ರಂಜನಿಗಾಗಿ ರಂಜನಿಮಾಲಾವನ್ನು ಸಮರ್ಪಿಸಿದ ಬಳಿಕ ನೀಡಿದ ರಾತಾಪ ಒಂದು ದೊಡ್ಡ ಸವಾಲೆನಿಸಿತ್ತು. ರಾಗ ಕಲ್ಯಾಣ ವಸಂತ ಮತ್ತು ರಾಗ ಬಹುದಾರಿ ಇವುಗಳೆರಡರ ಮಿಶ್ರಿತ ಪಲ್ಲವಿ. ಒಂದಕ್ಕೊಂದು ಸಂಬಂಧವೇ ಇಲ್ಲದ ರಾಗಗಳು. ಶುದ್ಧ ಮಧ್ಯಮದ ಸಾಮ್ಯತೆ ಬಿಟ್ಟರೆ ಉಳಿದಂತೆ ಅವುಗಳ ಗುಣ ಉತ್ತರ-ದಕ್ಷಿಣ. ಆದರೆ ತಮ್ಮ ಅಣ್ಣಂದಿರು ಕ್ರಮವಾಗಿ ಕಲ್ಯಾಣ ವಸಂತ ಮತ್ತು ಬಹುದಾರಿಯನ್ನು ನೇಯ್ದ ಬಗೆ ಅತ್ಯಂತ ಜಾಣ್ಮೆಯದು ಮತ್ತು ಹೃದ್ಯ. ಕಲ್ಯಾಣ ವಸಂತದ ನೇಯ್ಗೆಯಂತೂ ಪ್ರಶಂಸನೀಯ. ಕೃತಜ್ಞತೆಯನ್ನು ಸಲ್ಲಿಸಿದ ಅರವಿಂದ ಹೆಬ್ಬಾರರು ಪ್ರಸ್ತಾವಿಸಿದಂತೆ ಸಿಂಧೂ – ಬ್ರಹ್ಮಪುತ್ರ ನದಿಗಳ ಜೋಡಣೆ ಈ ಎರಡು ರಾಗಗಳ ಸಮಾಗಮ. ಅದು ಮಧ್ಯಮದಲ್ಲಿ. ಕಲ್ಪನಾ ಸ್ವರದ ಹೆಣೆಯುವಿಕೆಯಲ್ಲಿ ಈ ಎರಡು ರಾಗಗಳು ನಾಲ್ಕಾರು ಆವರ್ತಗಳಿಂದ ಅರ್ಧ, ಕಾಲು ಆವರ್ತಗಳಿಗೆ ಕಿರಿದಾಗುತ್ತಾ ಬೆರಗಾಗುವಂತೆ ಬೆಸೆದುಕೊಂಡದ್ದು ಸೋದರರಿಬ್ಬರ ಅವಿರತ ಪರಿಶ್ರಮದ ಫಲ ಎನ್ನುವುದನ್ನು ಮರೆಯಲಾಗದು. ಜಾಣ್ಮೆಯ ಮತ್ತು ಪ್ರೌಢಿಮೆಯ ಮೃದಂಗ ನುಡಿಸಾಣಿಕೆಯಲ್ಲಿ ಮಿಂಚಿದ ಅಕ್ಷಯ ಆನಂದ ಕೊಟ್ಟ ಅನೇಕ ವರಸೆಗಳು ಮನನೀಯ. ಕ್ಷಣ ಕ್ಷಣದಲ್ಲೂ ಸಂಗೀತವನ್ನು ಆಸ್ವಾದಿಸುತ್ತಾ, ಸಂತೋಷಪಡುತ್ತಾ ಖಂಜೀರ ಸಾಥಿಯನ್ನು ನೀಡಿದ ಅಪ್ರತಿಮ ಮುಖ ಸುಮುಖ. ತನ್ನ ಬೆರಳುಗಾರಿಕೆಯ ಓಟದಲ್ಲಿ ಸ್ಪಷ್ಟತೆಯನ್ನು ಮತ್ತು ನಿಖರತೆಯನ್ನು ದುಡಿಸಿಕೊಳ್ಳಬೇಕಾದ ಸುಮುಖ ಕಾರಂತನ ಪ್ರತಿಭೆಗೆ ಯಾರಾದರೂ ತಲೆದೂಗಲೇ ಬೇಕು. ನಾಲ್ಕೂ ಕಲಾವಿದರ ಫೋರ್ ಇನ್ ವನ್ ಕಛೇರಿ ಎಲ್ಲರ ಹೃನ್ಮನಗಳನ್ನು ಗೆದ್ದುದಂತೂ ಸತ್ಯದ ಮಾತು.

ಸೆ. 5:
ಅಪ್ರತಿಮ ಬಾಲ ಪ್ರತಿಭೆಯಾಗಿ ಮೇಲೆ ಬಂದ ರಮಣ ಬಾಲಚಂದ್ರನಿಗೆ ರಮಣ ಮಹರ್ಷಿಗಳ ಪೂರ್ಣ ಅನುಗ್ರಹ ಒದಗಿ ಬಂದಂತಿದೆ. ಇದೊಂದು ಅಪೂರ್ವ ಹುಡುಗ. ‘ರಮಣ ವೀಣೆಯೊಳಗೋ, ವೀಣೆ ರಮಣನೊಳಗೋ’ ಹೇಳಲು ಬಾರದು. ಅಷ್ಟೊಂದು ತಾದಾತ್ಮ್ಯ. ಹೊರ ಪ್ರಪಂಚದ ಶಹಬ್ಬಾಸ್, ಭೇಷ್, ಕರತಾಡನಗಳ ಗೊಡವೆಗೆ ಆತ ಹೋಗಲೊಲ್ಲ. ಆತನು ಮುಳುಗಿ ಎದ್ದದ್ದು ಭೈರವಿಯ ಬಾಲ ಗೋಪಾಲದಲ್ಲಿ. ಭೈರವಿ ರಾಗವು ಈತನಿಗೆ ಸಿದ್ಧಿಸಿದಂತಿದೆ. ವೈಣಿಕ ಗಾಯಕ………….. ಎಂಬಲ್ಲಿ ಮನೋಜ್ಞವಾಗಿ ಮೂಡಿಸಿದ ನೆರವಲ್ ರಮಣ್ ಸಾಧಿಸಿದ ಸಿದ್ಧಿ. ಶಾಂತಮುಲೇಕ (ಸಾಮ) ಮತ್ತು ಸುರುಟಿ ರಾಗದ ವೇಗನೀವುರಾನಿ (ಸ್ವಾತಿ) ಪ್ರಸ್ತುತಿಗಳು ವೀಣಾ ವಾದನಕ್ಕೆ ಹೇಳಿ ಮಾಡಿಸಿಟ್ಟ ಮೆಟ್ಟಲುಗಳಂತಿದ್ದವು. ವೀಣೆಯ ಜತೆ ಮೃದಂಗ ನುಡಿಸಿದ ನಿಕ್ಷಿತನ ಪೂರಕವಾದ ನಾದ ಸಂವೇದನೆ ಮತ್ತು ನಿಶ್ಚಿತತೆಯನ್ನು ಕೊಂಡಾಡಲೇ ಬೇಕು. ವೀಣೆಯ ಕಛೇರಿಯ ಯಶಸ್ಸಿಗೆ ರಮಣ-ನಿಕ್ಷಿತರ ಸಮಾನ ಸಂವೇದನೆಯೇ ಮುಖ್ಯ ಕಾರಣ. ಸುಮುಖನ ಖಂಜೀರದಲ್ಲಿ ಆಗಾಗ ಹೊಂಚುತ್ತಾ ಮಿಂಚುತ್ತಿದ್ದ ಮೆಲು ನಡೆಗಳು ಹುಡುಗನ ಸಂವೇದನಾ ಸಾಮಥ್ರ್ಯವನ್ನು ಸಾರಿ ಹೇಳುತ್ತಿದ್ದವು. ರಂಜನಿಗಾಗಿ ಸಮರ್ಪಿಸಿದ್ದ ನುಡಿದರೆ ಮುತ್ತಿನ ಹಾರದಂತಿರಬೇಕು ಪ್ರಸ್ತುತಿಯು ಆಕೆ ಹಾಡುತ್ತಿದ್ದ ದಿನಗಳನ್ನು ಒಮ್ಮೆ ಎಲ್ಲರ ಮನಸ್ಸಿನಲ್ಲೂ ಅನುರಣಿಸುವಂತೆ ಮಾಡಿದ್ದು ನಿಜ.

ಸೆ. 6:
ಗಾರ್ಗಿಯದು ರಂಜನಿಯನ್ನು ನೆನಪಿಸಬಲ್ಲ ಶಾರೀರ. ಎ ಶ್ರುತಿಯಲ್ಲಿ ಮಧ್ಯ ಮತ್ತು ಮೇಲುಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಈಸಬಲ್ಲ ಗಾರ್ಗಿಯ ಧ್ವನಿ ಮಾಧುರ್ಯಕ್ಕೆ ಶಾಸ್ತ್ರೀಯತೆಯ ನಿಷ್ಠುರ ವ್ಯಾಕರಣಗಳು ಪೂರ್ಣವಾಗಿ ಶರಣಾಗವು. ಅವು ಸ್ವರ ಗಮಕಗಳ ಮಡಿಚುವಿಕೆಯಿಂದ ನೇರಾಗಿ ನೆಟ್ಟಗೆ ಹೊರನಿಂತು ಸ್ವರ ಪ್ರಕಾಶವನ್ನು ನೀಡಬಲ್ಲವು. ಅದು ಲಘು ಸಂಗೀತವಾಯಿತೋ ಎಂದು ಮೂಗು ಮುರಿಯುತ್ತಿರುವ ವೇಳೆಯಲ್ಲೇ ಶಾಸ್ತ್ರೀಯತೆಯ ಚೌಕಟ್ಟಿನೊಳಗಣ ವಿನ್ಯಾಸಗಳನ್ನು ತಪ್ಪಿಲ್ಲದೆ ಮೆರೆಯಿಸುತ್ತಿರುತ್ತವೆ. ಇದು ಆಕೆಯ ಹೆಚ್ಚುಗಾರಿಕೆ. ಕಛೇರಿಯ ಪೂರ್ವಾರ್ಧದಲ್ಲಿ ಮೂಡಿ ಬಂದ ಶಾಸ್ತ್ರಸಿದ್ಧ ರಾಗಗಳಾದ ಸಾರಂಗ, ಧನ್ಯಾಸಿ, ರಂಜನಿ ಮತ್ತು ಭೂಪಾಲಗಳು ಈ ಹಿಡಿತದಲ್ಲೇ ಸಾಗಿದವುಗಳು. ಭೂಪಾಲದ ಶಾಸ್ತ್ರೀಯ ಅಚ್ಚುಕಟ್ಟು ಸುಂದರತೆಯನ್ನು ನಿಶ್ಚಯವಾಗಿಯೂ ಕಾಪಾಡಿಕೊಂಡು ಬಂದಿದ್ದವು. ಶ್ರೋತೃಗಳನ್ನು ಬೆರಗಾಗಿಸಿದ, ಅರವಿಂದ ಹೆಬ್ಬಾರರ ನಿರ್ದೇಶನದ ಎರಡು ಪ್ರಸ್ತುತಿಗಳು – ಬೇಂದ್ರೆಯವರ ಬದುಕು ಮಾಯೆಯ ಮಾಟ ಮತ್ತು ಡಿವಿಜಿಯವರ ದೂರನದೇನ್ ತಂದಿಹಳೀ ಕೀರವಾಣಿ. ಕರ್ನಾಟಕ ಸಂಗೀತದ ಮನೋಧರ್ಮಕ್ಕೆ ಒಳಪಡುವ ಎಲ್ಲಾ ಪೋಷಾಕುಗಳೊಂದಿಗೆ ಹೊರಮೂಡಿದ ಇವೆರಡು ಹೊಸ ಪ್ರಯೋಗಗಳಾಗಿದ್ದವು. ತ್ಯಾಗರಾಜರ, ದೀಕ್ಷಿತರ ಕೃತಿ ರಚನೆಗಳ ಚಪ್ಪರದಡಿಯಲ್ಲೇ ಬೆಸೆಯಲಾದ ಈ ಪ್ರಯೋಗವನ್ನು ಅನುಭವಿಸಲು ಕೇಳುಗನು ಒಮ್ಮೆಗೆ deconstruction ಮಾಡಿ ಬಳಿಕ reconstruction ಮಾಡುವ ಅಗತ್ಯವಿತ್ತು (ಶ್ರೀ ಈಶ್ವರಯ್ಯ ಉವಾಚ). ನಾದಪ್ರಿಯ ಶಿವನೆಂಬರು ಎಂಬ ದರ್ಬಾರಿ ಕಾನಡದ ಪ್ರಸ್ತುತಿಯ ಜತೆಗೇ ಮೂಡಿಬಂದ ಘಜಲ್ ಅಪ್ನೀಮನ್ ಮೇ ರೆಹತಾ ಹೂಂ ವಿನ ಲಘು ದಾಟಿಯ ಪಲುಕುಗಳು ಒಮ್ಮಗೆ ಎಲ್ಲರಿಗೂ ಮಿಂಚಿನ ಅಚ್ಚರಿಯನ್ನು ಹರಿಸಿದವು. ಕಾರ್ಯಕ್ರಮದ ಕೊನೆಯಲ್ಲಿ ರಂಜನಿಯಿಂದ ಪ್ರಸಿದ್ಧಿಗೆ ಬಂದ ಸರಸಾಂಗಿ ರಾಗದ ‘ನಿನ್ನ ನಾಮದಲಿ’ ಎಂಬ ಸೇಡಿಯಾಪು ಅವರ ಕವನದ ಸಾಲುಗಳು ಗಾರ್ಗಿಯ ಧ್ವನಿಯಲ್ಲಿ ರಂಜನಿಯದೇ ಛಾಪಿನಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದದ್ದು ಮರೆಯುವಂತಹದಲ್ಲ. ಗಾರ್ಗಿಯ ಜೊತೆ ಸಹಕರಿಸಿದ ಮೈಸೂರಿನ ಪಿ. ಎಸ್. ಶ್ರೀಧರ್ ಮತ್ತು ಮಾಧವಾಚಾರ್ಯ ಅವರ ಸಾಥಿ ಕಛೇರಿಗೆ ಹೆಚ್ಚಿನ ಉಠಾವ್ ನೀಡಿತ್ತು. ಕಾರ್ತಿಕೇಯರ ಎಚ್ಚರದ ಮತ್ತು ಮೆಲು ನುಡಿಸಾಣಿಕೆ ಪೂರಕವಾಗಿತ್ತು. ಈಶ್ವರಯ್ಯನವರ ಹಿತವಚನ ಕೇಳುಗರಿಗೆ ಹೆಚ್ಚಿನ ಮನವರಿಕೆಯನ್ನು ನೀಡಿತ್ತು. ತುಂಬಿದ ಸಭಾಂಗಣವು ಕಛೇರಿಯ ಬಳಿಕ ತುಂಬಿದ ಹೃದಯದಿಂದ ನಿರ್ಗಮಿಸಿದ್ದು ಗಮನಾರ್ಹ.

ಸೆ. 7:
ಹರಿಕೃಷ್ಣನ್ ಅವರು ಇನ್ನೂ ಹೆಸರು ಮಾಡದೆ ಉಳಿದಿರುವ ಎರ್ನಾಕುಳಂನ ಗಟ್ಟಿಕುಳ. ಅನುರಣಿಸುವ ಗಂಡು ಶಾರೀರದಲ್ಲಿ ದಿಟ್ಟತೆಯಿಂದ ಹೊರಹೊಮ್ಮುವ ಅವರ ಪ್ರಸ್ತುತಿಗಳಲ್ಲಿ ಕರ್ನಾಟಕ ಸಂಗೀತಕ್ಕೆ ಬೇಕಾದ ಎಲ್ಲಾ ಸೌಕರ್ಯಗಳಿವೆ. ತ್ಯಾಗರಾಜ ಪಾಲಯಾಶುಮಾಂ (ಗೌಳ) ಕೃತಿಯನ್ನು ಪ್ರತಿ ಶಬ್ದಾಕ್ಷರಗಳು ವೇದ್ಯವಾಗುವಂತೆ ಅಷ್ಟೊಂದು ಸುಂದರವಾಗಿ ಹರಡಬಲ್ಲವರು ವಿರಳವಾಗಿದ್ದಾರೆ. ಗೌಳದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬಾರದಂತೆ ಅವರು ನಿರ್ವಹಿಸಿದ ಎಚ್ಚರ ಪ್ರಶಂಸನೀಯ. ರಾಮಪ್ರಿಯ ರಾಗವನ್ನು ಎತ್ತರಕ್ಕೆ ಏರಿಸಲು ಒಬ್ಬಾತನಿಗೆ ಎಂಟೆದೆ ಬೇಕು. ಈ ರಾಗವನ್ನು ತಲೆದೂಗುವಂತೆ ಮಾಡಿದವರನ್ನು ನಾನು ಈವರೆಗೆ ಕಂಡಿಲ್ಲ. ದೀಕ್ಷಿತರ ಮಾತಂಗಿ ಶ್ರೀ ರಾಜೇಶ್ವರಿಯನ್ನು ಆರಿಸಿಕೊಳ್ಳುವುದಕ್ಕೆ ಮೊದಲು ನೀಡಿದ ರಾಮಪ್ರಿಯದ ಆಲಾಪನೆ ಬಹುಕಾಲ ನಿಲ್ಲುವಂತಹದು. ಕೃತಿ ಪ್ರಸ್ತುತಿಯೂ ಅಷ್ಟೇ ನಿರ್ದುಷ್ಟವಾಗಿ ಗಂಭೀರವಾಗಿ ಹಾಗೂ ಹೃದಯಂಗಮವಾಗಿ ಮೂಡಿ ಬಂದದ್ದು ಹರಿಕೃಷ್ಣನ್ರನ ಸಾಧನೆಗೆ ಹಿಡಿದ ಕನ್ನಡಿ. ತೋಡಿಯ ಅಗಾಧತೆಯನ್ನು ಅಳೆದು ತೂಗಿ, ಬೇಕಾದುದನ್ನು ನಿಪುಣತೆಯಿಂದ ಸಮಯೋಚಿತವಾಗಿ ಜೋಡಿಸಿ, ಅಲೆತ್ತೂರು ಬಾಣಿಯ ಹಲವಾರು ವರಸೆಗಳನ್ನೂ ತೋರಿದ ಹರಿಕೃಷ್ಣನ್-ಗೋಕುಲ- ಸಜಿನ್ಲಾಯಲ್ ಬಳಗ ನಿಜಕ್ಕೂ ಅಭಿನಂದನಾರ್ಹರು. ಮಿಶ್ರಝಂಪೆಯ ‘ದಾಚುಕೋವಲೇನಾ’ದ ಬಳಿಕ ಮೂಡಿ ಬಂದ ಸಜಿನ್ಲಾವಲರ ತನಿ ಆವರ್ತನ ಮನನೀಯ.

ರಂಜನಿ ಮೆಮೊರಿಯಲ್ ಟ್ರಸ್ಟ್ನಕ ವತಿಯಿಂದ ಅಪ್ರತಿಮ ಸಾಧನೆ ತೋರಿದ ರಮಣ ಬಾಲಚಂದ್ರ, ನಿಕ್ಷಿತ್ ಮತ್ತು ಹರಿಕೃಷ್ಣನ್ ಅವರಿಗೆ ತಲಾ ರೂ. 5,000 ಗಳ ಪ್ರತಿಭಾ ವೇತನವನ್ನು ಕೊಟ್ಟದ್ದು ಆ ಕಲಾವಿದರ ಪರಿಶ್ರಮಕ್ಕೆ ನೀಡಿದ ಪುರಸ್ಕಾರವೇ ಸರಿ.
ಈ ಕಾರ್ಯಕ್ರಮದ ವೇಳೆಯಲ್ಲಿ ಡಾ. ಪದ್ಮಲತಾ, ಶ್ರೀಮತಿ ಶಶಿಕಲಾ ಮತ್ತು ಶ್ರೀ ನರಸಿಂಹ ಭಟ್, ಡಾ. ಸುಧಾ ಮತ್ತು ಡಾ. ವಿದ್ಯಾಸಾಗರ್ ದಂಪತಿಗಳು ಅಭ್ಯಾಗತರಾಗಿ ಬಂದು ರಂಜನಿಯ ನೆನಪನ್ನು ಮರುಕಳಿಸಿದ್ದು ಉಲ್ಲೇಖನೀಯ. ಪ್ರಸಿದ್ಧ ನಾಗಸ್ವರ ವಿದ್ವಾಂಸ ಶ್ರೀ ನಾಗೇಶ್ ಬಪ್ಪನಾಡು ಮತ್ತು ಶ್ರೀ ನಿತ್ಯಾನಂದ ರಾವ್ ಅವರ ಉಪಸ್ಥಿತಿಯು ಸಭೆಯ ಮೆರುಗನ್ನು ಹೆಚ್ಚಿಸಿತ್ತು ಎನ್ನುವುದಕ್ಕೆ ಎರಡು ಮಾತಿಲ್ಲ.

ಸೆ. 8, 9, 10ರ ಸಂಗೀತ ಕಛೇರಿಗಳು ಎಂ.ಜಿ.ಎಂ ಕಾಲೇಜಿನ ಸಹಯೋಗದೊಂದಿಗೆ ನೂತನ ರವೀಂದ್ರ ಮಂಟಪದಲ್ಲಿ ಸಂಜೆ 5.30 ರಿಂದ 8.30ರ ತನಕ ನಡೆದವು.

ಸೆ 8:

ಅರ್ಚನಾ ಮತ್ತು ಸಮನ್ವಿ ಅವರ ಹಾಡುಗಾರಿಕೆಯ ಬಗೆಗೆ ನನಗೆ ವಿಮರ್ಶೆ ಬರೆಯಲು ಎರಡು ಆತಂಕಗಳಿವೆ. ಒಂದು, ಅವರು ಇಬ್ಬರು ನಮ್ಮ ಲತಾಂಗಿ ಗರಡಿಯಲ್ಲೇ ಪಳಗಿದವರು. ಎರಡನೆಯದು, ನನಗೆ ಬರೆಯುವ ಧೈರ್ಯವಿದ್ದರೂ ಜನವರ್ಗ ನನ್ನನ್ನು ಸ್ವೀಕರಿಸಲಾರರು. ನನಗೆ ಮುಂದೆ ಒದಗಿ ಬರುವ ಈ ನಿಟ್ಟಿನ ಮೌನವೇ ಇದಕ್ಕೆ ಸಾಕ್ಷಿಯಾಗಿ ನಿಲ್ಲಬಲ್ಲುದು ಎಂದು ಗೊತ್ತಿದ್ದೇ ನಾಲ್ಕು ಸಾಲನ್ನು ಗೀಚುವೆ.
ಅವರಿಬ್ಬರ ಧ್ವನಿ ಪರಿಣಾಮದಲ್ಲಿ ಭೇದ ಕಾಣಿಸದ ಹೊಂದಾಣಿಕೆಯಿದೆ. ಚಿತ್ರವೀಣಾ ಶ್ರೀ ರವಿಕಿರಣ್ ಅವರ ಪಾಠ ಬೋಧನೆಯಿಂದ ಒದಗಿ ಬಂದ ವ್ಯಾಕರಣ ಶುದ್ಧತೆಯಿದೆ. ಶಾಂತಲಾ ಅವರ ಕಣಕ್ಕು ಇದೆ. ಅದನ್ನು ಪ್ರಸ್ತುತ ಪಡಿಸಲು ವಯಸ್ಸಿಗೆ ಮೀರಿದ ಸಂಗೀತ ಸುಂದರತೆಯ ಛಾಪು ಅವರಿಗೆ ಒದಗಿ ಬಂದಿದೆ. ಪ್ರತಿ ಪ್ರಸ್ತುತಿಯ ಹಿಂದೆ, ಕೈಗೊಂಡ ಒಲವಿನ ಪರಿಶ್ರಮ ಅಚ್ಚೊತ್ತಿದೆ. ಹೀಗಾಗಿ ಕರ್ನಾಟಕ ಸಂಗೀತದ ಪೂರ್ಣ ಪ್ರಮಾಣದ ಹಿಡಿತವನ್ನು ಬೊಗಸೆಯಲ್ಲಿ ಇಟ್ಟುಕೊಂಡು ಕುಣಿಸುವ ಬಾಲಲೀಲೆಯ ವರಸೆಯಿದೆ. ಇದರಿಂದಾಗಿ ಕೇಳುಗರಲ್ಲಿ ಹುರುಪು ಮತ್ತು ಮುಂದೇನು ಬರುತ್ತದೆ ಎಂಬ ನಿರೀಕ್ಷೆಯ ನಿರೀಕ್ಷಣೆ ತಾನಾಗಿ ಬರುತ್ತದೆ. ಗಂಭೀರನಾಟದ ಬಾಲಮುರಳಿ ಕೃಷ್ಣ ಅವರ ರಚನೆಯಲ್ಲೇ ಈ ವರ್ಣಾನಂದವನ್ನು ಉತ್ಸಾಹದಿಂದ ಪ್ರಕಟಿಸಿದ ಈ ಬಾಲಿಕೆಯರು ನೀಡಿದ ಪ್ರತಿಯೊಂದು ಪ್ರಸ್ತುತಿಯಲ್ಲೂ ಮೇಲೆ ಹೇಳಿದ ಅಂಶಗಳನ್ನು ವಸ್ತುಶಃ ಪ್ರಕಟಿಸಿದ್ದಾರೆ. ವಾಗಧೀಶ್ವರಿ, ಪೂರ್ವಿಕಲ್ಯಾಣಿ, ತೋಡಿ, ಕಾಪಿ ರಾಗಗಳಲ್ಲಿ ಕೆತ್ತಿದ ಕನ್ನಡ ರಚನೆಗಳ ರಾಗ, ಭಾವ, ತಾಳ ಮತ್ತು ವಾಗ್ವಿಲಾಸವನ್ನು ಎಲ್ಲರೂ ಗಮನಿಸುವಂತಿತ್ತು. ಕಾವೇರಿ ರಂಗನ ಮತ್ತು ಕಸ್ತೂರಿ ರಂಗನ ನೋಡದ ಎಂಬೆಡೆಗಳಲ್ಲಿ ಮೊಗೆದು ತೋಡಿದ ಮೋಹನ, ಹಿಂದೋಳ ಗ್ರಹಭೇದಗಳು ಕರಾರುವಾಕ್ಕಾಗಿ ಉತ್ತಮ ಕಾಲಪ್ರಮಾಣದಲ್ಲಿ ಸಹಜವಾಗಿ ಮೂಡಿಬಂದದ್ದನ್ನು ಗಮನಿಸಬಹುದಾಗಿದೆ. ಹದಿನಾರು ರಾಗಗಳ ಸಾರಂಗ ಮುರುಗನೈ ರಾಗಮಾಲಿಕೆಗೆ ಅರ್ಧಾವರ್ತದ ಸ್ವರ ಜೋಡಣೆಯ ಜಾಣ್ಮೆ ಮತ್ತು ಕುಸುರಿ ಮನನೀಯ. ಪಹಾಡಿ ರಾಗದ ತಿಲ್ಲಾಣದ ತಿರುವು ಮುರುವುಗಳ, ಓರೆಕೋರೆಗಳ ಸ್ವಾದಿಷ್ಟ ರಹದಾರಿ ಅನುಭವಿಸಿದವರಿಗೇ ವೇದ್ಯ. ಶ್ರುತಿ ಶುದ್ಧವಾದ ಶೋಭಾನೆಯವರೆಗೂ ಕಟ್ಟೆಚ್ಚರದಿಂದ ಶೇಷನಂತೆ ಹಿಂಬಾಲಿಸಿಕೊಂಡು ಬಂದು ತಾಳ, ಲಯ, ರಾಗಗಳು ಮಿಳಿತವಾಗುವಂತೆ ಸಹಕರಿಸಿದ ಸುನಾದಕೃಷ್ಣನ ಮೃದಂಗ ನಿರ್ವಹಣೆ ನಿಜಕ್ಕೂ ಶ್ಲಾಘನೀಯ. ಕ್ಷಣಕ್ಷಣಕ್ಕೂ ಬಾಲಕರ ಹೆಚ್ಚುಗಾರಿಕೆಯನ್ನು ಆನಂದದಿಂದ ಸವಿಯುತ್ತಾ ಹಿತಮಿತವಾದ ಸಾಥಿಯನ್ನೂ ನೀಡಿ ಪುರಸ್ಕರಿಸುತ್ತಿದ್ದ ಕೇರಳ ಕಲಾಮಂಡಲಂನ ಹಿರಿಯ ವಯಲಿನ್ ಕಲಾವಿದ ವಯಲಾ ರಾಜೇಂದ್ರನ್ ಅವರ ಉಪಸ್ಥಿತಿ ಕಛೇರಿಗೆ ಹೆಚ್ಚಿನ ಮೆರುಗನ್ನು ನೀಡಿತ್ತು. ‘ಅಮೂಲ್ಯವಾದ ವಜ್ರಗಳನ್ನು ರಕ್ಷಿಸಿ ಇಟ್ಟುಕೊಳ್ಳುವುದಕ್ಕೆ ಚಿಕ್ಕ ಪೆಟ್ಟಿಗೆಯೇ ಬೇಕಲ್ಲದೆ ದೊಡ್ಡ ಪೆಟಾರಿಯೇನೂ ಬೇಕಾಗಿಲ್ಲ’ ಹಾಗೆಯೇ ಈ ಮುತ್ತು ರತ್ನಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳುವ ಅವಶ್ಯಕತೆಯನ್ನೂ ಒತ್ತಿ ಹೇಳಿ ಕೃತಜ್ಞತೆಯ ಆಶೀರ್ವಾದವನ್ನು ನೀಡಿದವರು ಶ್ರೀ ಈಶ್ವರಯ್ಯನವರು.
ಸೆ. 9:
ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಕಟ್ಟುನಿಟ್ಟಾದ ಶಿಸ್ತಿನ ವ್ಯಾಕರಣವಿದೆ. ಸ್ವರ, ಮೂರ್ಛನೆ, ಸಂಚಾರ, ಗಮಕ, ತಾಳ, ಲಯ, ಕಾರ್ವೆ, ನ್ಯಾಸ, ಕೋರ್ವೆ, ಕುರೈಪ್ಪು ಮುಂತಾದವುಗಳ ಬೃಹತ್ ನಿಘಂಟೇ ನಮ್ಮ ಮುಂದಿದೆ. ಇದರ ಬಿಗಿ ಇರುವುದರಿಂದಲೇ ನಮ್ಮ ಸಂಗೀತ ಅಷ್ಟೋ ಇಷ್ಟೋ ಹಳೆಯದನ್ನು ಅನೂಚಾನವಾಗಿ ಇಟ್ಟುಕೊಂಡು ಉಳಿಸಿಕೊಂಡು ಬಂದಿದೆ. ಹಾಗೆಂದು ವ್ಯಾಕರಣವೇ ಸಂಗೀತವಾಗಲಾರದು. ನಿಘಂಟೇ ಸಂಗೀತವಾಗಲಾರದು. ಅಲ್ಲಿ ನಿಯಮ ನೇಮಾವಳಿಗಳ ಭಂಡಾರವಿದೆ. ಅಲ್ಲಿ ಅಂದ-ಚೆಂದದ ಕುಸುರಿಗಳ ನೇವರಿಕೆ ಸುಳಿಯದು. ಸಂಗೀತ ಕಲಾವಿದನೊಬ್ಬ ಅದನ್ನು ಅನುಭವವೇದ್ಯವನ್ನಾಗಿ ಮಾಡಿಕೊಂಡು ನಿಘಂಟು-ವ್ಯಾಕರಣಗಳ ಗಂಟುಗಳೊಳಗೆ ನೆಂಟಾಗಿಸಿಕೊಳ್ಳಬೇಕು. ಆಗಲೇ ಸಂಗೀತಕ್ಕೆ ಸಮಗ್ರ ವ್ಯಾಪ್ತಿಯ ಸುಂದರತೆ ವ್ಯಾಪಿಸುವುದು. ಇದಿಲ್ಲದೆ ಹೋದಲ್ಲಿ ಸಂಗೀತವು ‘ನಹಿ ನಹಿ ರಕ್ಷತಿ ಡೃಕಂಕರಣೆ’ ಯಾದೀತು. ಆ ಸಂಗೀತ ಒಂದು ಗೋಳಾಟ.
ಅನಾಹಿತಾ-ಅಪೂರ್ವ ರವೀಂದ್ರನ್ ಅವರ ಕಛೇರಿಯುದ್ದಕ್ಕೂ ಮೆರೆದದ್ದು ಸಂಗೀತದ ವ್ಯಾಕರಣ. ರಾಗ ತಾಳಗಳ ವರಸೆಗಳು ಎನ್ ಸಿ ಸಿ ಕವಾಯತಿನ ಶಿಸ್ತಿನ ಸಿಪಾಯಿಯ ನಡಿಗೆಯಂತೆ ನಿಷ್ಠುರವಾಗಿದ್ದವು. ಅವುಗಳಲ್ಲಿ ತಪ್ಪು ಕಾಣಸಿಗದು. ರಾಗ-ತಾಳ ಸ್ಪಷ್ಟತೆಗೆ ಏನೇನೂ ಕುಂದಿಲ್ಲ. ಆದರೆ ನಗುಮುಖವೇ ಇಲ್ಲದ ಶಿಸ್ತಿನ ಸಿಪಾಯಿಗಳ ಕರಾರುವಾಕ್ಕಿನ ನಡಿಗೆಯಲ್ಲಿ ವಸಂತ ಬಂದರೇನು, ರೀತಿಗೌಳವಾದರೇನು? ಕಲ್ಯಾಣಿ, ಕೀರವಾಣಿ, ಕಾನಡವಾದರೇನು? ಎಲ್ಲವೂ ಅನೂಹ್ಯ. ವಯಲಾ ರಾಜೇಂದ್ರನ್ ಮತ್ತು ಸುನಾದಕೃಷ್ಣ ಅವರ ಸಾಥಿಯೊಂದಿಗೆ ಈ ಸೋದರಿಯರ ಒಂದು ಶುದ್ಧ ಕಛೇರಿ ಕೇಳಿದ ಅನುಭವ ಎಲ್ಲರದು.
ಸೆ. 10:
ಸಂಜೆ 3.45ಕ್ಕೆ ನೂತನ ರವೀಂದ್ರ ಮಂಟಪದ ಅರ್ಧಾಂಶ ಭರ್ತಿಯಾಗಿತ್ತು. ಅದು ಹಿಂದುಸ್ಥಾನೀ ಗಾಯಕಿ ಶ್ರೀಮತಿದೇವಿ ಅವರ ಗಾಯನವನ್ನು ಕೇಳುವುದಕ್ಕಾಗಿ ಕುತೂಹಲದಿಂದ ಕಾದಿದ್ದ ಶ್ರೋತೃವರ್ಗ. ಮಾರುಬೆಹಾಗ್ 12 ಮಾತ್ರೆಗಳ ವಿಲಂಬಿತ್ ಖ್ಯಾಲ್ನಗಲ್ಲಿ ನಾರಾಯಣ ಪಂಡಿತ್ಜೀಾ ಅವರ ಬಂಧಿಶ್, ಬಳಿಕ ದ್ರುತ್ ತೀನ್ತಾಗಳದಲ್ಲಿ ದಿನಕರ ಕಾಯ್ಕಿಣಿಯವರ ಬಂಧಿಶ್. ಇಂಪಾದ ಶಾರೀರದೊಂದಿಗೆ ಮಾರುಬೆಹಾಗ್ನ್ ಸುಂದರ ಹರವನ್ನು ಬಿಡಿಸಲು ಹೆಚ್ಚು ಸಮರ್ಥವಾದದ್ದು ಕಾಯ್ಕಿಣಿಯವರ ಬಂಧಿಶ್ದೊಂದದಿಗೆ. ಕಲಾವತಿಯ ಝಪ್ತಾ ಲದ ಪಾರಂಪರಿಕ ಬಂಧಿಶ್ನಾಲ್ಲಿ ಮತ್ತು ಏಕ್ತಾನಲದ ಕಾಯ್ಕಿಣಿಯವರ ಮತ್ತೊಂದು ಬಂಧಿಶ್ನಧಲ್ಲಿ ಶ್ರೀಮತಿ ತಮ್ಮ ರಾಗ ಲಾಲಿತ್ಯವನ್ನು ಮೆರೆದರು. ಅವರ ಧ್ವನಿಯ ಜೀರು ಅನುರಣಿಸಿದ್ದು ನಿರ್ಗುಣಿ ಭಜನ್ನಲ ಗುರೂಜೀಯಲ್ಲಿ. ಮತ್ತೆ ಮತ್ತೆ ಗುನುಗುಣಿಸಲು ಸಾಧ್ಯವಾಗುವ ಈ ನಿರ್ಗುಣಿ ಭಜನ್ನೆಲ್ಲಿ ಶ್ರೀಮತಿ ಗೆದ್ದರು. ಪ್ರಸಾದ್ ಕಾಮತ್ ಮತ್ತು ಭಾರವಿ ದೇರಾಜೆಯವರ ಪೂರಕವಾದ ನಡೆಗಳು ಶ್ರೀಮತಿಗೆ ಹೆಚ್ಚಿನ ರಾಗ ಸಾಂದ್ರತೆಯನ್ನು ನೀಡಿದ್ದವು.
ಶ್ರೀಮತಿ ಶಾಂತಲಾ ಸುಬ್ರಹ್ಮಣ್ಯಂ:
ಶ್ರೀಮತಿ ಶಾಂತಲಾ ಸುಬ್ರಹ್ಮಣ್ಯಂ ಅವರ ಕೊಳಲು ವಾದನದಲ್ಲಿ ಸೌಖ್ಯವಿದೆ, ನವಿರಿದೆ, ಪ್ರೌಢಿಮೆಯಿದೆ ಮತ್ತು ಕಣಕ್ಕು ಸಹಿತವಾದ ಸ್ವರರಾಶಿ ಪೇರಿದೆ. ಎವರೂರಾದಲ್ಲಿ ಶಾಂತಲಾ ಅವರು ಮೂಡಿಸಿದ ಮೋಹನದ ಮೋಡಿ ಬೆಟ್ಟು ಮಾಡಿ ತೋರುವಂತಹದು. ನಾಜೂಕಾದ ಚಂದ್ರಜ್ಯೋತಿಯ ಪ್ರಸ್ತುತಿಯ ಬಳಿಕ ಕೀರವಾಣಿಯನ್ನು ಪೋಷಿಸಿದ ಬಗೆ ಚೆನ್ನಾಗಿತ್ತು. ಟ್ರಿವೆಂಡ್ರಂ ಸಂಪತ್ ಅವರ ವಯಲಿನ್ನ ನುಣುಪು ಮತ್ತು ಬಿಲ್ಲುಗಾರಿಕೆ ಅತ್ಯಂತ ಮೋಹಕ. ಅವರು ನೀಡುವ ಉತ್ತಮ ಕಾಲಪ್ರಮಾಣದ ಕಾರ್ವೆಗಳು ಅವರಿಗೆ ಭೂಷಣಪ್ರಾಯ. ತುಸು ಸದ್ದಾಯಿತೇನೋ ಎನ್ನುವಷ್ಟು ದುಡಿಯಿಸಿಕೊಂಡ ಪಾಲ್ಘಾಟ್ ಮಹೇಶ್ ಕುಮಾರ್ ಅವರ ಮೃದಂಗದ ವರಸೆಗಳಲ್ಲಿ ಶಾಂತಲಾ ಅವರ ಲೆಕ್ಕಾಚಾರಗಳ ಕಣಕ್ಕುಗಳೇ ತುಂಬಿದ್ದವು. ಪಯ್ಯನೂರು ಗೋವಿಂದ ಪ್ರಸಾದ್ ಅವರ ಮೋರ್ಸಿಂಗ್ ವಾದನದಲ್ಲಿ ಲೆಕ್ಕಾಚಾರದ ಗುಮ್ಕಿಗಳು ಅಡಗಿದ್ದರೂ ಅನಗತ್ಯವಾದ ಗೂಂಕಾರಗಳ ಸುರುಳಿಗಳು ಧ್ವನಿವರ್ಧಕದಲ್ಲಿ ವಿಕಾರವಾಗಿ ಫೂತ್ಕರಿಸುತ್ತಿದ್ದವು.
ಸಮಾರೋಪ:
ಸಂಜೆ 5.30ರಿಂದ 6.30ರ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡವರು ಕರ್ನಾಟಕ ಸ್ಟೇಟ್ ಫೈನ್ ಆಟ್ರ್ಸ್ ಕೌನ್ಸಿಲ್ ಬೆಂಗಳೂರು ಇದರ ಕಾರ್ಯದರ್ಶಿಗಳಾದ ಶ್ರೀ ಅರವಿಂದ ಬ್ರಹ್ಮಕಲ್ ಅವರು. ಪೂರ್ವ ನಿಯೋಜಿತರಾಗಿದ್ದ ಶ್ರೀ ಆರ್ ಆರ್ ರವಿಶಂಕರ್ ಅವರು ಅನಿವಾರ್ಯ ಕಾರಣಗಳಿಂದಾಗಿ ಬಂದಿರಲಿಲ್ಲ. ಎಂಜಿಎಂ ಕಾಲೇಜಿನ ಪ್ರಾಂಶುಪಾಲರು ಶ್ರೀಮತಿ ಪ್ರೊ. ಕುಸುಮಾ ಕಾಮತ್ ಅವರು ರಂಜನಿಯನ್ನು ಸ್ಮರಿಸಿ ಟ್ರಸ್ಟ್ಗೆದ ಶುಭಾಶಂಸನೆಗೈದರು. ಬ್ರಹ್ಮಕಲ್ ಅವರು ನಮ್ಮ ಜಿಲ್ಲೆಯ ಸಂಗೀತದ ಕುರಿತಾದ ವಿಸ್ತøತವಾದ ಪ್ರಾಸ್ತಾವಿಕ ಭಾಷಣವನ್ನು ಅರವಿಂದ ಹೆಬ್ಬಾರ್ ಅವರಿಂದ ಆಲಿಸಿ ಪ್ರೇರಣೆಗೊಂಡು ನಮ್ಮ ಜಿಲ್ಲೆಯ ಓರ್ವ ಕಲಾವಿದನ ಸಂಗೀತಾಭಿವೃದ್ಧಿಗಾಗಿ ಪ್ರಾಯೋಜನಗೈಯ್ಯುವೆನೆಂಬ ಆಶ್ವಾಸನೆಯಿತ್ತರು. ಹಾಗೂ ಜಿಲ್ಲೆಯ ಸಂಗೀತದ ಬೆಳವಣಿಗೆಗೆ ತಾನು ಸಹಾಯಹಸ್ತವನ್ನು ಚಾಚುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ವೇಳೆ ಅರ್ಚನಾ ಸಮನ್ವಿ ಹಾಗೂ ಸುನಾದ ಕೃಷ್ಣ ಅವರಿಗೆ ತಲಾ ರೂ. 5,000ದ ಪ್ರತಿಭಾ ವೇತನವನ್ನೂ ವಿತರಿಸಲಾಯಿತು. ಅಧ್ಯಕ್ಷೀಯ ನೆಲೆಯಲ್ಲಿ ಶ್ರೀ ಈಶ್ವರಯ್ಯನವರು ಟ್ರಸ್ಟಿನ ಆಶೋತ್ತರಗಳನ್ನು ಪ್ರಶಂಸಿಸಿ ಬ್ರಹ್ಮಕಲ್ ಅವರ ಆಶ್ವಾಸನೆಗಳನ್ನು ಶ್ಲಾಘಿಸಿದರು. ಸಾರಂಗ ಹೆಬ್ಬಾರ್ ರಂಜನಿ ಸಂಸ್ಮರಣೆಯ ನಾಲ್ಕು ಮಾತುಗಳನ್ನು ಆಡಿದರು. ಶ್ರೀಮತಿ ದೇವಿ ಕಾರ್ಯಕ್ರಮ ನಿರೂಪಿಸಿದರು. ವಸಂತಲಕ್ಷ್ಮೀ ಹೆಬ್ಬಾರ್ ಸಭೆಗೆ ಸ್ವಾಗತವನ್ನು ಬಯಸಿದರೆ ಶಾರದಾ ಉಪಾಧ್ಯಾಯ ಅವರು ಧನ್ಯವಾದ ನೀಡಿದರು. ಸಭಾ ಕಾರ್ಯಕ್ರಮವು ಅರ್ಚನಾ – ಸಮನ್ವಿಯವರ ಪ್ರಾರ್ಥನಾ ಉಗಾಭೋಗದೊಂದಿಗೆ ಪ್ರಾರಂಭಗೊಂಡಿತ್ತು. ಬಳಿಕ ರಂಜನಿಯ ವಂದೇ ಮಾತರಂ ವೀಡಿಯೋ ಚಿತ್ರವನ್ನು ವೀಕ್ಷಿಸಲಾಯಿತು.
ಸೆ.10ರ ಮುಂಜಾನೆ 9.30 ಯಿಂದ 10.15ರ ವರೆಗೆ ಲತಾಂಗಿಯಲ್ಲಿ ಕಡೈನಲ್ಲೂರಿನ ಸುಬ್ಬಲಕ್ಷ್ಮೀ ರಘುನಾಥ್ ದಾಸ್ಜೀ್ ಅವರ ಸುಶ್ರಾವ್ಯವಾದ ಭಕ್ತಿ ಸಂಗೀತ ನಡೆಯಿತು. ಬಳಿಕ ಅರವಿಂದ ಹೆಬ್ಬಾರ್ ಮತ್ತು ಬಳಗದವರಿಂದ ಸತ್ಸಂಗ ಭಜನಾ ಕಾರ್ಯಕ್ರಮವು ನಡೆಯಿತು – ಕೆ. ಮುರಳೀಧರ್ ಅವರ ಕೊಳಲು ಮತ್ತು ಕೀಬೋರ್ಡ್ ಹಾಗೂ ಮಾಧವ ಆಚಾರ್ಯರ ತಬಲಾ ವಾದನದ ಸಾಥಿಯೊಂದಿಗೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ಭೋಜನದ ವ್ಯವಸ್ಥೆಯಿತ್ತು.

Leave a Reply

Your email address will not be published. Required fields are marked *